ರಾಘವ್ ಚಡ್ಡಾ, ಸ್ವಾತಿ ಮಾಲಿವಾಲ್ ಸೇರಿದಂತೆ 7 ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರ್ಪಡೆಗೆ ಒಪ್ಪಿಗೆ
x

 ಎಎಪಿಯ ಹಿರಿಯ ನಾಯಕ ರಾಘವ್ ಚಡ್ಡಾ ಹಾಗೂ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ಸೇರಿದಂತೆ 7 ಸಂಸದರು ಭಾರತೀಯ ಜನತಾ ಪಾರ್ಟಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. 

ರಾಘವ್ ಚಡ್ಡಾ, ಸ್ವಾತಿ ಮಾಲಿವಾಲ್ ಸೇರಿದಂತೆ 7 ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರ್ಪಡೆಗೆ ಒಪ್ಪಿಗೆ

ರಾಜ್ಯಸಭೆಯಲ್ಲಿ ಎಎಪಿ ಒಟ್ಟು 10 ಸಂಸದರನ್ನು ಹೊಂದಿತ್ತು. ಪಕ್ಷಾಂತರ ನಿಷೇಧ ಕಾಯ್ದೆಯ ನಿಯಮಗಳ ಪ್ರಕಾರ, ಒಟ್ಟು ಸದಸ್ಯ ಬಲದ ಮೂರನೇ ಎರಡರಷ್ಟು (2/3) ಎಂದರೆ ಕನಿಷ್ಠ 7 ಸಂಸದರು ಒಟ್ಟಾಗಿ ಪಕ್ಷ ತೊರೆದರೆ ಅವರ ಸಂಸತ್ ಸದಸ್ಯತ್ವ ರದ್ದಾಗುವುದಿಲ್ಲ.


Click the Play button to hear this message in audio format

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ರಾಜ್ಯಸಭೆಯಲ್ಲಿ ಬಹುದೊಡ್ಡ ಹೊಡೆತ ಬಿದ್ದಿದೆ. ಎಎಪಿಯ ಹಿರಿಯ ನಾಯಕ ರಾಘವ್ ಚಡ್ಡಾ ಹಾಗೂ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ಸೇರಿದಂತೆ 7 ಸಂಸದರು ಭಾರತೀಯ ಜನತಾ ಪಾರ್ಟಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಈ ವಿಲೀನ ಪ್ರಕ್ರಿಯೆಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.

ರಾಘವ್ ಚಡ್ಡಾ, ಸ್ವಾತಿ ಮಾಲಿವಾಲ್, ಕ್ರಿಕೆಟಿಗ ಹರಭಜನ್ ಸಿಂಗ್, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ವಿಕ್ರಮ್‌ಜಿತ್ ಸಾಹ್ನಿ ಮತ್ತು ರಾಜಿಂದರ್ ಗುಪ್ತಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜ್ಯಸಭಾ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಈಗ ಈ ಏಳೂ ಸಂಸದರನ್ನು 'ಬಿಜೆಪಿ ಸದಸ್ಯರು' ಎಂದು ನಮೂದಿಸಲಾಗಿದೆ. ಇದರೊಂದಿಗೆ ಮೇಲ್ಮನೆಯಲ್ಲಿ ಎಎಪಿ ಬಲ ಕೇವಲ 3ಕ್ಕೆ ಕುಸಿದಿದ್ದರೆ, ಬಿಜೆಪಿ ಸಂಸದರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ.

ಪಕ್ಷಾಂತರ ಕಾಯ್ದೆಯಿಂದ ಪಾರಾಗಿದ್ದೇಗೆ?

ರಾಜ್ಯಸಭೆಯಲ್ಲಿ ಎಎಪಿ ಒಟ್ಟು 10 ಸಂಸದರನ್ನು ಹೊಂದಿತ್ತು. ಪಕ್ಷಾಂತರ ನಿಷೇಧ ಕಾಯ್ದೆಯ ನಿಯಮಗಳ ಪ್ರಕಾರ, ಒಟ್ಟು ಸದಸ್ಯ ಬಲದ ಮೂರನೇ ಎರಡರಷ್ಟು (2/3) ಎಂದರೆ ಕನಿಷ್ಠ 7 ಸಂಸದರು ಒಟ್ಟಾಗಿ ಪಕ್ಷ ತೊರೆದರೆ ಅವರ ಸಂಸತ್ ಸದಸ್ಯತ್ವ ರದ್ದಾಗುವುದಿಲ್ಲ. ಈ ಕಾನೂನಿನ ಅನ್ವಯ 7 ಸಂಸದರು ಒಟ್ಟಾಗಿ ಬಿಜೆಪಿಯೊಂದಿಗೆ ವಿಲೀನಗೊಂಡಿರುವುದರಿಂದ, ಇವರ ಸದಸ್ಯತ್ವಕ್ಕೆ ಯಾವುದೇ ಕುತ್ತು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಎಎಪಿಯಲ್ಲಿ 'ವಿಷಮಯ' ವಾತಾವರಣ: ರಾಘವ್ ಚಡ್ಡಾ ಆರೋಪ

ಬಿಜೆಪಿ ಸೇರ್ಪಡೆಯಾದ ಬಳಿಕ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ರಾಘವ್ ಚಡ್ಡಾ, ಆಮ್ ಆದ್ಮಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಎಎಪಿಯಲ್ಲಿ ಕೆಲಸದ ವಾತಾವರಣ ಸಂಪೂರ್ಣವಾಗಿ ವಿಷಕಾರಿಯಾಗಿದೆ. ಪಕ್ಷವು ಕೆಲವು ಭ್ರಷ್ಟರು ಹಾಗೂ ರಾಜಿ ಮಾಡಿಕೊಂಡ ವ್ಯಕ್ತಿಗಳ ಕೈವಶವಾಗಿದೆ. ಅವರೆಲ್ಲರೂ ದೇಶಕ್ಕಾಗಿ ಅಲ್ಲ, ತಮ್ಮ ಸ್ವಂತ ಲಾಭಕ್ಕಾಗಿ ಕೆಲಸ ಮಾಡುತ್ತಿದ್ದಾರೆ," ಎಂದು ಗಂಭೀರ ಆರೋಪ ಮಾಡಿದ್ದಾರೆ.

"ನಾನು ಯಶಸ್ವಿ ಚಾರ್ಟೆಡ್ ಅಕೌಂಟೆಂಟ್ ವೃತ್ತಿ ಬಿಟ್ಟು ರಾಜಕೀಯಕ್ಕೆ ಬಂದವನು. 15 ವರ್ಷಗಳ ನನ್ನ ತಾರುಣ್ಯವನ್ನು ಪಕ್ಷ ಕಟ್ಟಲು ಮುಡಿಪಾಗಿಟ್ಟಿದ್ದೆ. ಆದರೆ ಪ್ರಸ್ತುತ ಎಎಪಿಯಲ್ಲಿರುವ ವಾತಾವರಣದಿಂದ ಬೇಸತ್ತು, ನನ್ನ ಶಕ್ತಿ-ಅನುಭವವನ್ನು ಮತ್ತೊಂದು ವೇದಿಕೆಯಲ್ಲಿ ಸಕಾರಾತ್ಮಕ ರಾಜಕೀಯಕ್ಕಾಗಿ ಬಳಸಲು ಈ ನಿರ್ಧಾರ ಕೈಗೊಂಡಿದ್ದೇನೆ. ಒಬ್ಬರು ಅಥವಾ ಇಬ್ಬರು ತಪ್ಪು ಮಾಡಬಹುದು, ಆದರೆ ನಾವೆಲ್ಲ ಏಳೂ ಮಂದಿ ತಪ್ಪು ಮಾಡಲು ಸಾಧ್ಯವೇ?" ಎಂದು ಚಡ್ಡಾ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಎಎಪಿ ಮತ್ತು ಕಾಂಗ್ರೆಸ್ ಆಕ್ರೋಶ

ಈ ವಿಲೀನ ಪ್ರಕ್ರಿಯೆಯನ್ನು 'ಅಸಾಂವಿಧಾನಿಕ' ಎಂದು ಕರೆದಿರುವ ಎಎಪಿ, ಈ 7 ಸಂಸದರನ್ನು ಅನರ್ಹಗೊಳಿಸುವಂತೆ ರಾಜ್ಯಸಭಾ ಸಭಾಪತಿಗಳಿಗೆ ದೂರು ನೀಡಿತ್ತು. ಎಎಪಿ ನಾಯಕ ಸೌರಭ್ ಭಾರದ್ವಾಜ್, ರಾಘವ್ ಚಡ್ಡಾ ಅವರ ನಡೆಗೆ ಕಿಡಿಕಾರಿದ್ದಾರೆ. ಇತ್ತ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, "ಇ.ಡಿ ದಾಳಿಗಳಿಂದ ಪಾರಾಗಲು ಈ ಆಪರೇಷನ್ ಕಮಲ ನಡೆದಿದೆ. ಇದೊಂದು 'ಲೂಟಸ್' (ಲೂಟಿಕೋರರ) ಕಾರ್ಯಾಚರಣೆ" ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಅಜಯ್ ಮಾಕನ್, "ನಾವು ಮೊದಲಿನಿಂದಲೂ ಹೇಳುತ್ತಿದ್ದೆವು, ಎಎಪಿ ಬಿಜೆಪಿಯ ಬಿ-ಟೀಮ್ ಎಂದು. ಈಗ ಅದು ಸಾಬೀತಾಗಿದೆ" ಎಂದಿದ್ದಾರೆ.

ಎನ್‌ಡಿಎಗೆ ಬಲ, ಸ್ವಾಗತಿಸಿದ ರಿಜಿಜು

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ಏಳೂ ಸಂಸದರನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಸ್ವಾಗತಿಸಿದ್ದಾರೆ. "ತುಕ್ಡೆ-ತುಕ್ಡೆ 'ಇಂಡಿಯಾ' ಮೈತ್ರಿಕೂಟಕ್ಕೆ ವಿದಾಯ ಹೇಳಿ, ನಮ್ಮೊಂದಿಗೆ ಕೈಜೋಡಿಸಿರುವ ಈ ಸಂಸದರ ವಿಲೀನಕ್ಕೆ ರಾಜ್ಯಸಭಾ ಸಭಾಪತಿಗಳು ಸಮ್ಮತಿಸಿದ್ದಾರೆ," ಎಂದು ಅವರು ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಈಗ ಎನ್‌ಡಿಎ 149 ಸ್ಥಾನಗಳನ್ನು ಹೊಂದಿದೆ.

Read More
Next Story