ಗ್ರೇಟರ್ ನೋಯ್ಡಾದಲ್ಲಿ ಸ್ಲೀಪರ್‌ ಬಸ್‌ ಬೆಂಕಿಗಾಹುತಿ; 9 ಮಂದಿ ಸಾವು
x

ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಸ್ಲೀಪರ್ ಪ್ರವಾಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 9 ಮಂದಿ ಮೃತಪಟ್ಟಿದ್ದಾರೆ. 

ಗ್ರೇಟರ್ ನೋಯ್ಡಾದಲ್ಲಿ ಸ್ಲೀಪರ್‌ ಬಸ್‌ ಬೆಂಕಿಗಾಹುತಿ; 9 ಮಂದಿ ಸಾವು

ಬಸ್‌ ನೋಯ್ಡಾದಿಂದ ಉತ್ತರ ಪ್ರದೇಶದ ಮಹೋಬಾಗೆ ಯಮುನಾ ಎಕ್ಸ್‌ಪ್ರೆಸ್‌ವೇ ಮೂಲಕ ತೆರಳುತ್ತಿತ್ತು. ಬೆಂಕಿ ಕಾಣಿಸಿಕೊಂಡಾಗ ಬಹುತೇಕ ಪ್ರಯಾಣಿಕರು ನಿದ್ದೆಯಲ್ಲಿದ್ದರು.


Click the Play button to hear this message in audio format

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಭೀಕರ ದುರಂತ ಸಂಭವಿಸಿದೆ. ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುತ್ತಿದ್ದ ಸ್ಲೀಪರ್ ಪ್ರವಾಸಿ ಬಸ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 9 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಘಟನೆ ನಡೆದಾಗ ಬಸ್‌ನಲ್ಲಿದ್ದ ಬಹುತೇಕ ಪ್ರಯಾಣಿಕರು ನಿದ್ದೆಯಲ್ಲಿದ್ದರು ಎನ್ನಲಾಗಿದೆ. ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಬಸ್‌ನ್ನು ಆವರಿಸಿದೆ. ದಟ್ಟ ಹೊಗೆ ಆವರಿಸಿದ್ದರಿಂದ ಪ್ರಯಾಣಿಕರು ಆತಂಕಗೊಂಡಿದ್ದು, ಜೀವ ಉಳಿಸಿಕೊಳ್ಳಲು ಕೆಲವರು ಕಿಟಕಿಗಳ ಮೂಲಕ ಹೊರಬರಲು ಪ್ರಯತ್ನಿಸಿದ್ದಾರೆ.

ಬೆಂಕಿಯಿಂದ ತಪ್ಪಿಸಿಕೊಳ್ಳುವ ವೇಳೆ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ.

ಬೆಂಕಿಗೆ ಕಾರಣವೇನು?

ಬಸ್ ದೆಹಲಿಯಿಂದ ಉತ್ತರ ಪ್ರದೇಶದ ಮಹೋಬಾ ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ. ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ತನಿಖೆ ಬಳಿಕವೇ ಬೆಂಕಿಗೆ ನಿಖರ ಕಾರಣ ತಿಳಿದುಬರಲಿದೆ. ಘಟನೆ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಹಾಗೂ ಘಟನೆಯ ಕುರಿತು ತನಿಖೆ ಮುಂದುವರಿದಿದೆ.

Read More
Next Story