
ಮಲೇರಿಯಾ ತಡೆ ಕಾರ್ಯಕ್ರಮದ ವೇಳೆ ನೀಡಲಾಗಿದ್ದ ಕ್ಲೋರೋಕ್ವಿನ್ ಮಾತ್ರೆ ಸೇವಿಸಿದ 7 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಆಂಧ್ರ ಪ್ರದೇಶ| ಮಲೇರಿಯಾ ಮಾತ್ರೆ ಸೇವಿಸಿದ್ದ 7 ವರ್ಷದ ಬಾಲಕಿ ಸಾವು; 53 ಮಂದಿ ಅಸ್ವಸ್ಥ
ಗೊಳ್ಳಗುಪ್ಪ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಲೇರಿಯಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜ್ವರ ತಪಾಸಣೆ ಮತ್ತು ವೈದ್ಯಕೀಯ ಶಿಬಿರ ನಡೆಸಿತ್ತು. ಗ್ರಾಮಸ್ಥರಿಗೆ ಕ್ಲೋರೋಕ್ವಿನ್ ಮಾತ್ರೆಗಳನ್ನು ವಿತರಿಸಲಾಗಿತ್ತು. ಮಕ್ಕಳಿಗೆ ಶಾಲೆಗಳಲ್ಲೇ ಮಾತ್ರೆ ನೀಡಲಾಗಿತ್ತು ಎಂದು ಪೊಲವರಂ ಜಿಲ್ಲಾಧಿಕಾರಿ ಕೆ. ದಿನೇಶ್ ಕುಮಾರ್ ತಿಳಿಸಿದ್ದಾರೆ.
ಮಲೇರಿಯಾ ತಡೆ ಕಾರ್ಯಕ್ರಮದ ವೇಳೆ ನೀಡಲಾಗಿದ್ದ ಕ್ಲೋರೋಕ್ವಿನ್ ಮಾತ್ರೆ ಸೇವಿಸಿದ 7 ವರ್ಷದ ಬಾಲಕಿ ಮೃತಪಟ್ಟು, 53 ಮಂದಿ ಅಸ್ವಸ್ಥರಾಗಿರುವ ಘಟನೆ ಆಂಧ್ರಪ್ರದೇಶದ ಪೊಲವರಂ ಜಿಲ್ಲೆಯ ಯೇಟಪಾಕ ಮಂಡಲದ ಗೊಳ್ಳಗುಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಲೇರಿಯಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜ್ವರ ತಪಾಸಣೆ ಮತ್ತು ವೈದ್ಯಕೀಯ ಶಿಬಿರ ನಡೆಸಿತ್ತು. ಇದರ ಭಾಗವಾಗಿ ವಯಸ್ಸಿಗೆ ಅನುಗುಣವಾಗಿ ನಿಗದಿಪಡಿಸಿದ ಪ್ರಮಾಣದಲ್ಲಿ ಗ್ರಾಮಸ್ಥರಿಗೆ ಕ್ಲೋರೋಕ್ವಿನ್ ಮಾತ್ರೆಗಳನ್ನು ವಿತರಿಸಲಾಗಿತ್ತು. ಶಾಲಾ ಮಕ್ಕಳಿಗೂ ಶಾಲೆಗಳಲ್ಲೇ ಮಾತ್ರೆ ನೀಡಲಾಗಿತ್ತು ಎಂದು ಪೊಲವರಂ ಜಿಲ್ಲಾಧಿಕಾರಿ ಕೆ. ದಿನೇಶ್ ಕುಮಾರ್ ತಿಳಿಸಿದ್ದಾರೆ.
ಮೂರು ಮಾತ್ರೆ ಸೇವಿಸಿದ್ದ ಬಾಲಕಿ
ಏಳು ವರ್ಷದ ಬಾಲಕಿ ಮೂರು ಕ್ಲೋರೋಕ್ವಿನ್ ಮಾತ್ರೆಗಳನ್ನು ಸೇವಿಸಿದ್ದಾಳೆ ಎನ್ನಲಾಗಿದೆ. ಮಂಗಳವಾರ ಸಂಜೆ ಮನೆಗೆ ಮರಳಿದ ಬಳಿಕ ಆಕೆಗೆ ವಾಂತಿ ಕಾಣಿಸಿಕೊಂಡಿದ್ದು, ನಂತರ ಪ್ರಜ್ಞಾಹೀನಳಾಗಿದ್ದಾಳೆ. ಕೂಡಲೇ ಲಕ್ಷ್ಮೀಪುರಂ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಭದ್ರಾಚಲಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆ ಶಂಕೆ
ಬಾಲಕಿಗೆ ಮೊದಲೇ ಹೃದಯ ಸಂಬಂಧಿ ಸಮಸ್ಯೆ ಇದ್ದಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಇಂತಹ ಮೊದಲೇ ಅಸ್ತಿತ್ವದಲ್ಲಿದ್ದ ಹೃದಯ ಸಮಸ್ಯೆಯಿರುವ ವ್ಯಕ್ತಿಯಲ್ಲಿ ಕ್ಲೋರೋಕ್ವಿನ್ ಹೃದಯದ ಬಡಿತದ ಅಸಹಜತೆ ಅಥವಾ ಕಾರ್ಡಿಯಾಕ್ ಅರಿಥ್ಮಿಯಾಗೆ ಕಾರಣವಾಗಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ.
ಬಾಲಕಿಯ ಕುಟುಂಬದಲ್ಲಿ ಈ ಹಿಂದೆ ಒಂದು ವರ್ಷದೊಳಗಿನ ಇಬ್ಬರು ಮಕ್ಕಳು ಕೂಡ ಗುರುತಿಸಲಾಗದ ಕಾರಣಗಳಿಂದ ಮೃತಪಟ್ಟಿರುವುದು ವೈದ್ಯರ ಗಮನಕ್ಕೆ ಬಂದಿದೆ. ಹೀಗಾಗಿ ಕುಟುಂಬದಲ್ಲಿ ಅನುವಂಶಿಕ ಕಾಯಿಲೆ ಇರುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ.
ಮಾತ್ರೆಯ ಗುಣಮಟ್ಟದ ಪರೀಕ್ಷೆ
ಮಾತ್ರೆಗಳನ್ನು ಆರೋಗ್ಯ ಇಲಾಖೆಯ ಮಲೇರಿಯಾ ನಿಯಂತ್ರಣ ನಿಯಮದಂತೆ ವಯಸ್ಸಿಗೆ ಅನುಗುಣವಾಗಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಔಷಧದ ಗುಣಮಟ್ಟಕ್ಕೆ ಸಂಬಂಧಿಸಿದ ಪರೀಕ್ಷೆಗಳಲ್ಲೂ ತೃಪ್ತಿಕರ ಫಲಿತಾಂಶ ಬಂದಿದೆ ಎಂದು ಅವರು ಹೇಳಿದ್ದಾರೆ. ಆದರೂ ಶಿಬಿರದಲ್ಲಿ ಬಳಸಿದ ಕ್ಲೋರೋಕ್ವಿನ್ ಮಾತ್ರೆಗಳ ಬ್ಯಾಚ್ ಅನ್ನು ಹೆಚ್ಚಿನ ಪರೀಕ್ಷೆಗಾಗಿ ವಿಶಾಖಪಟ್ಟಣಂನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
53 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಮಾತ್ರೆ ಸೇವಿಸಿದ ಬಳಿಕ ವಾಂತಿ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಒಟ್ಟು 54 ಮಂದಿಯನ್ನು ಭದ್ರಾಚಲಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ 53 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಮತ್ತೊಬ್ಬರು ಮೃತಪಟ್ಟಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರಲ್ಲಿ 48 ಮಕ್ಕಳು ಮತ್ತು ಐವರು ವಯಸ್ಕರು ಇದ್ದಾರೆ. ಎಲ್ಲರೂ ಸ್ಥಿರ ಸ್ಥಿತಿಯಲ್ಲಿದ್ದು, ಚೇತರಿಸಿಕೊಂಡವರನ್ನು ಬುಧವಾರವೇ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಗ್ರಾಮದಲ್ಲಿರುವ ಮತ್ತೂ 17 ಮಂದಿಯನ್ನು ವಿಶೇಷ ವೈದ್ಯಕೀಯ ಶಿಬಿರದ ಮೂಲಕ ನಿಗಾದಲ್ಲಿ ಇರಿಸಲಾಗಿದೆ. ಮಲೇರಿಯಾ ಪಾಸಿಟಿವ್ ಬಂದವರಿಗೆ ಹೆಚ್ಚುವರಿಯಾಗಿ 24 ಗಂಟೆಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆ ನೀಡಲಾಗುತ್ತಿದೆ.
ಮೂರು ರ್ಯಾಪಿಡ್ ರೆಸ್ಪಾನ್ಸ್ ತಂಡಗಳ ನಿಯೋಜನೆ
ಪರಿಸ್ಥಿತಿ ನಿಭಾಯಿಸಲು ಕಾಕಿನಾಡ, ರಾಜಮಹೇಂದ್ರವರಂ ಮತ್ತು ವಿಜಯವಾಡದಿಂದ ಮೂರು ವಿಶೇಷ ರ್ಯಾಪಿಡ್ ರೆಸ್ಪಾನ್ಸ್ ವೈದ್ಯಕೀಯ ತಂಡಗಳು ಭದ್ರಾಚಲಂಗೆ ಆಗಮಿಸಿವೆ. ಸಹಾಯಕ ಪ್ರಾಧ್ಯಾಪಕರು, ಸ್ನಾತಕೋತ್ತರ ವೈದ್ಯರು, ಸಾಮಾನ್ಯ ವೈದ್ಯರು ಹಾಗೂ ಇತರ ತಜ್ಞರು ತಂಡದಲ್ಲಿದ್ದಾರೆ.
270 ಗ್ರಾಮಸ್ಥರ ಆರೋಗ್ಯ ತಪಾಸಣೆ
ಗೊಳ್ಳಗುಪ್ಪ ಗ್ರಾಮದ ಸುಮಾರು 270 ನಿವಾಸಿಗಳ ಸಮಗ್ರ ಆರೋಗ್ಯ ವಿವರ ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ. ವೈದ್ಯಕೀಯ ತಂಡಗಳು ರಕ್ತ ಪರೀಕ್ಷೆ ನಡೆಸುತ್ತಿದ್ದು, ಸಿಕಲ್ ಸೆಲ್ ಅನೀಮಿಯಾ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಮತ್ತು ಇತರ ಸಹರೋಗಗಳ ಕುರಿತು ತಪಾಸಣೆ ನಡೆಸುತ್ತಿವೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮಂಗಳವಾರ ರಾತ್ರಿ ಹಿರಿಯ ಅಧಿಕಾರಿಗಳೊಂದಿಗೆ ಘಟನೆ ಕುರಿತು ಪರಿಶೀಲನೆ ನಡೆಸಿ, ಅಗತ್ಯ ವೈದ್ಯಕೀಯ ಹಾಗೂ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಯೂ ಬುಧವಾರ ಭದ್ರಾಚಲಂ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಬಾಲಕಿಯ ಮರಣದ ನಿಖರ ಕಾರಣವನ್ನು ತಿಳಿಯಲು ವೈದ್ಯಕೀಯ ಪರೀಕ್ಷೆ ಹಾಗೂ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ವರದಿಗಳು ಬಂದ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಗ್ರಾಮದಲ್ಲಿ ಯಾವುದೇ ಹೊಸ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳದಂತೆ ವೈದ್ಯಕೀಯ ತಂಡಗಳು ನಿರಂತರ ನಿಗಾ ವಹಿಸಿವೆ.

