Bullet train gift to South India; Boost to Bengaluru-Chennai-Hyderabad economic zone!
x

ಬುಲೆಟ್‌ ರೈಲು (ಸಾಂದರ್ಭಿಕ ಚಿತ್ರ)

ದಕ್ಷಿಣ ಭಾರತಕ್ಕೆ ಬುಲೆಟ್ ಟ್ರೈನ್ ಗಿಫ್ಟ್; ಬೆಂಗಳೂರು-ಚೆನ್ನೈ-ಹೈದರಾಬಾದ್‌ ಆರ್ಥಿಕ ವಲಯಕ್ಕೆ ಬೂಸ್ಟ್!

ಬೆಂಗಳೂರು ಹಾಗೂ ಚೆನ್ನೈ ನಡುವೆ ಪ್ರಸ್ತುತ 5 ರಿಂದ 6 ಗಂಟೆ ತೆಗೆದುಕೊಳ್ಳುವ ಪ್ರಯಾಣದ ಅವಧಿ ಬುಲೆಟ್ ಟ್ರೈನ್ ಮೂಲಕ ಕೇವಲ 1 ಗಂಟೆ 13 ನಿಮಿಷಕ್ಕೆ ಇಳಿಕೆಯಾಗಲಿದೆ.


Click the Play button to hear this message in audio format

ಭಾರತದ ಸಾರಿಗೆ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೈಲಿಗಲ್ಲಿಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಬರೋಬ್ಬರಿ 7 ಹೊಸ ಬುಲೇಟ್‌ ರೈಲು ಕಾರಿಡಾರ್‌ಗಳಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಸಾರ್ವಜನಿಕರು ತಮ್ಮ ಸ್ಥಳಗಳಿಗೆ ತಲುಪಬಹುದಾಗಿದೆ.

ದಕ್ಷಿಣ ಭಾರತಕ್ಕೆ ಬಂಪರ್ ಗಿಫ್ಟ್

ಹೊಸ ಯೋಜನೆಯಡಿ ದಕ್ಷಿಣ ಭಾರತದ ಹೆಬ್ಬಾಗಿಲುಗಳಾದ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಗರಗಳ ನಡುವೆ ಬುಲೆಟ್‌ ರೈಲುಗಳು ಸಂಚರಿಸಲಿವೆ. ಬೆಂಗಳೂರು ಹಾಗೂ ಚೆನ್ನೈ ನಡುವೆ ಪ್ರಸ್ತುತ 5 ರಿಂದ 6 ಗಂಟೆ ತೆಗೆದುಕೊಳ್ಳುವ ಪ್ರಯಾಣದ ಅವಧಿ ಬುಲೆಟ್ ಟ್ರೈನ್ ಮೂಲಕ ಕೇವಲ 1 ಗಂಟೆ 13 ನಿಮಿಷಕ್ಕೆ ಇಳಿಕೆಯಾಗಲಿದೆ. ಐಟಿ ಹಬ್‌ಗಳಾದ ಹೈದರಾಬಾದ್ ಹಾಗೂ ಬೆಂಗಳೂರು ನಡುವಿನ ಪ್ರಯಾಣದ ಸಮಯ ಇನ್ನುಮುಂದೆ ಕೇವಲ 2 ಗಂಟೆ 10 ನಿಮಿಷಕ್ಕೆ ಇಳಿಯಲಿದೆ.

ವಾಣಿಜ್ಯ ನಗರಿಗಳಾದ ಮುಂಬೈ ಹಾಗೂ ಪುಣೆ ನಡುವೆ ಇನ್ನು ಕೇವಲ 48 ನಿಮಿಷಗಳಲ್ಲಿ ಸಂಚರಿಸಬಹುದು. ಪುಣೆ ಹಾಗೂ ಹೈದರಾಬಾದ್ ಮಾರ್ಗದ ಪ್ರಯಾಣದ ಅವಧಿ 2 ಗಂಟೆ 8 ನಿಮಿಷಗಳಿಗೆ ಸೀಮಿತವಾಗಲಿದೆ. ದೆಹಲಿ ಹಾಗೂ ಧಾರ್ಮಿಕ ಕೇಂದ್ರವಾದ ವಾರಣಾಸಿಗೆ ಕೇವಲ 3 ಗಂಟೆ 15 ನಿಮಿಷಗಳಲ್ಲಿ ತಲುಪಬಹುದು. ದೆಹಲಿ ಹಾಗೂ ಪಾಟ್ನಾಗೆ ಕೇವಲ 4 ಗಂಟೆ 41 ನಿಮಿಷಗಳಲ್ಲಿ ಪ್ರಯಾಣಿಸಬಹುದು.

7 ಹೊಸ ಕಾರಿಡಾರ್‌ಗಳು ಯಾವುವು?

ದೇಶದ ಪ್ರಮುಖ ಆರ್ಥಿಕ, ಕೈಗಾರಿಕಾ ಮತ್ತು ತಾಂತ್ರಿಕ ಹಬ್‌ಗಳನ್ನು ಬೆಸೆಯಲು ಕೇಂದ್ರ ಸರ್ಕಾರ ಈ ಕೆಳಗಿನ 7 ಮಾರ್ಗಗಳನ್ನು ಗುರುತಿಸಿದೆ. ಮುಂಬೈ - ಪುಣೆ, ಪುಣೆ - ಹೈದರಾಬಾದ್, ಹೈದರಾಬಾದ್ - ಬೆಂಗಳೂರು, ಹೈದರಾಬಾದ್ - ಚೆನ್ನೈ, ಚೆನ್ನೈ - ಬೆಂಗಳೂರು, ದೆಹಲಿ - ವಾರಣಾಸಿ, ವಾರಣಾಸಿ - ಸಿಲಿಗುರಿಗೆ ಹೊಸ ಮಾರ್ಗಗಳನ್ನು ಹೆಸರಿಸಿದೆ.

ಎಐ ಆಧಾರಿತ ಚಿತ್ರ

ಬಿಹಾರಕ್ಕೆ ಬೃಹತ್ ಕೊಡುಗೆ

ದೆಹಲಿ-ವಾರಣಾಸಿ-ಪಾಟ್ನಾ ಬುಲೆಟ್ ರೈಲು ಕಾರಿಡಾರ್‌ಗೆ ಅನುಮೋದನೆ ಸಿಕ್ಕಿರುವುದರಿಂದ ಬಿಹಾರ ರಾಜ್ಯಕ್ಕೆ ದೊಡ್ಡ ಲಾಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದು ದೆಹಲಿ ಮತ್ತು ಪಾಟ್ನಾ ನಡುವಿನ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿತಗೊಳಿಸಲಿದೆ. ಇದರೊಂದಿಗೆ ಮುಂದಿನ 7-8 ವರ್ಷಗಳಲ್ಲಿ ಬಿಹಾರದಲ್ಲಿ 200ಕ್ಕೂ ಹೆಚ್ಚು ಹೊಸ ರೈಲು ಸೇವೆಗಳನ್ನು ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಯೋಜನೆಯ ಸಿದ್ಧತೆ ಹೇಗಿದೆ?

ಸದ್ಯ ಭಾರತದ ಮೊದಲ ಬುಲೆಟ್ ಟ್ರೈನ್ ಯೋಜನೆಯಾದ ಮುಂಬೈ-ಅಹಮದಾಬಾದ್ (508 ಕಿ.ಮೀ) ಮಾರ್ಗದ ಕೆಲಸಗಳು ಜಪಾನ್‌ನ ಅತ್ಯಾಧುನಿಕ 'ಶಿಂಕನ್‌ಸೆನ್' ತಂತ್ರಜ್ಞಾನದೊಂದಿಗೆ ಭರದಿಂದ ಸಾಗುತ್ತಿವೆ. ಇದರ ಬೆನ್ನಲ್ಲೇ, ಈಗ ಅನುಮೋದನೆ ಪಡೆದಿರುವ 7 ಹೊಸ ಕಾರಿಡಾರ್‌ಗಳಿಗೆ ಶೀಘ್ರದಲ್ಲೇ ಕಾರ್ಯಸಾಧ್ಯತಾ ವರದಿ, ಭೂಸ್ವಾಧೀನ ಪ್ರಕ್ರಿಯೆ ಮತ್ತು ಆರ್ಥಿಕ ನೆರವುಗಳ ಕುರಿತು ಹಂತ-ಹಂತವಾಗಿ ಪ್ರಕ್ರಿಯೆಗಳು ಆರಂಭವಾಗಲಿವೆ. ಈ ಯೋಜನೆಗಳು ರಸ್ತೆ ಮತ್ತು ವಾಯು ಸಾರಿಗೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ದೇಶದ ಆರ್ಥಿಕತೆಗೆ ವೇಗ ನೀಡಲಿವೆ.

ಹೊಸ ಮಾರ್ಗಗಳಿಂದ ಕರ್ನಾಟಕಕ್ಕೇನು ಲಾಭ?

ಭಾರತದ ಮೂರು ಪ್ರಮುಖ ಐಟಿ ಮತ್ತು ತಾಂತ್ರಿಕ ನಗರಗಳಾದ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಅತ್ಯಂತ ವೇಗವಾಗಿ ಪರಸ್ಪರ ಸಂಪರ್ಕ ಹೊಂದಲಿವೆ. ಇದರಿಂದಾಗಿ ಉದ್ಯಮಿಗಳು, ಟೆಕ್ಕಿಗಳು ಮತ್ತು ಹೂಡಿಕೆದಾರರು ಒಂದೇ ದಿನದಲ್ಲಿ ಈ ಮೂರು ನಗರಗಳ ನಡುವೆ ಪ್ರಯಾಣಿಸಬಹುದಾಗಿದೆ. ಮೂರೂ ನಗರಗಳನ್ನು ಒಳಗೊಂಡ ಒಂದು ಬೃಹತ್ ಆರ್ಥಿಕ ವಲಯ ಸೃಷ್ಟಿಗೆ ಕಾರಣವಾಗಲಿದೆ.

ರಿಯಲ್ ಎಸ್ಟೇಟ್ ಮತ್ತು ಉಪನಗರಗಳ ಬೆಳವಣಿಗೆ

ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರದಂತಹ ಪ್ರದೇಶಗಳಿಗೆ ಇದು ವರದಾನವಾಗಲಿದೆ. ಹೈಸ್ಪೀಡ್‌ ರೈಲು ನಿಲ್ದಾಣಗಳು ಬರುವ ಜಾಗಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಚುರುಕುಗೊಳ್ಳಲಿದ್ದು, ಬೆಂಗಳೂರಿನ ಮೇಲಿರುವ ಜನಸಂಖ್ಯೆಯ ಒತ್ತಡ ಕಡಿಮೆಯಾಗಿ ಉಪನಗರಗಳು ವೇಗವಾಗಿ ಅಭಿವೃದ್ಧಿ ಹೊಂದಲಿವೆ.

ಉದ್ಯೋಗಾವಕಾಶಗಳ ಸೃಷ್ಟಿ

ಈ ಕಾರಿಡಾರ್‌ಗಳ ನಿರ್ಮಾಣ ಹಂತದಲ್ಲಿ ಲಕ್ಷಾಂತರ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸಿಗಲಿವೆ. ಯೋಜನೆ ಪೂರ್ಣಗೊಂಡ ನಂತರ ಸ್ಟೇಷನ್ ಮ್ಯಾನೇಜ್‌ಮೆಂಟ್, ನಿರ್ವಹಣೆ, ಹಾಸ್ಪಿಟಾಲಿಟಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಕರ್ನಾಟಕದ ಯುವಕರಿಗೆ ದೊಡ್ಡ ಮಟ್ಟದ ಉದ್ಯೋಗಗಳು ಲಭ್ಯವಾಗಲಿವೆ.

ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ

ಚೆನ್ನೈ ಮತ್ತು ಹೈದರಾಬಾದ್‌ನಿಂದ ಕರ್ನಾಟಕಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ. ಬೆಂಗಳೂರು ಮಾತ್ರವಲ್ಲದೆ, ಇಲ್ಲಿಂದ ಸುಲಭವಾಗಿ ತಲುಪಬಹುದಾದ ಮೈಸೂರು, ಹಂಪಿ, ಕರಾವಳಿ ಭಾಗ ಹಾಗೂ ಚಿಕ್ಕಮಗಳೂರಿನಂತಹ ಪ್ರವಾಸಿ ತಾಣಗಳಿಗೂ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರ ಹರಿವು ಹೆಚ್ಚಾಗಿ ರಾಜ್ಯದ ಪ್ರವಾಸೋದ್ಯಮ ಆದಾಯ ವೃದ್ಧಿಸಲಿದೆ.

Read More
Next Story