AAP MPs join BJP | ಬಿಜೆಪಿ ಜೊತೆ 7 ಆಪ್‌ ಸಂಸದರ ವಿಲೀನ: ರಾಜ್ಯಸಭೆಯಲ್ಲಿ ಎನ್‌ಡಿಎ ಬಲ 148ಕ್ಕೆ ಏರಿಕೆ
x
ಬಿಜೆಪಿ ಸೇರ್ಪಡೆಗೊಂಡ ಏಳು ಆಪ್‌ ಸಂಸದರು (ಸಂಗ್ರಹ ಚಿತ್ರ)

AAP MPs join BJP | ಬಿಜೆಪಿ ಜೊತೆ 7 ಆಪ್‌ ಸಂಸದರ ವಿಲೀನ: ರಾಜ್ಯಸಭೆಯಲ್ಲಿ ಎನ್‌ಡಿಎ ಬಲ 148ಕ್ಕೆ ಏರಿಕೆ

ಆಮ್ ಆದ್ಮಿ ಪಕ್ಷದ 7 ಸಂಸದರು ಬಿಜೆಪಿ ಜೊತೆ ವಿಲೀನವಾಗಲು ಉಪರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ. ರಾಘವ್ ಚಡ್ಡಾ ಸೇರಿದಂತೆ ಪ್ರಮುಖ ನಾಯಕರು ಈಗ ಬಿಜೆಪಿ ಪಾಲಾಗಿದ್ದು, ಎನ್‌ಡಿಎ ಬಲ 148ಕ್ಕೆ ಏರಿದೆ.


ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಆಮ್ ಆದ್ಮಿ ಪಕ್ಷದ (AAP) ಏಳು ಸಂಸದರು ಬಿಜೆಪಿ ಜೊತೆ ವಿಲೀನಗೊಳ್ಳಲು ಅನುಮೋದನೆ ನೀಡಿದ್ದಾರೆ. ಇದರೊಂದಿಗೆ ರಾಜ್ಯಸಭೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಒಟ್ಟು ಬಲವು 148ಕ್ಕೆ ಏರಿಕೆಯಾಗಿದೆ.

ಬಿಜೆಪಿ ಸೇರಿದ ಸಂಸದರು

ರಾಘವ್ ಚಡ್ಡಾ, ಅಶೋಕ್ ಕುಮಾರ್ ಮಿತ್ತಲ್, ಹರ್ಭಜನ್ ಸಿಂಗ್, ಸಂದೀಪ್ ಕುಮಾರ್ ಪಾಠಕ್, ಡಾ. ವಿಕ್ರಮಜಿತ್ ಸಿಂಗ್ ಸಾಹ್ನಿ, ಸ್ವಾತಿ ಮಲಿವಾಲ್ ಮತ್ತು ಕಳೆದ ವಾರ ಎಎಪಿ ತೊರೆದಿದ್ದ ರಾಜಿಂದರ್ ಗುಪ್ತಾ ಈಗ ಬಿಜೆಪಿಯ 113 ರಾಜ್ಯಸಭಾ ಸಂಸದರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪಕ್ಷಾಂತರ ತಡೆ ಕಾಯ್ದೆ ಹೇಳೋದೇನು?

ಈ ಏಳು ಸಂಸದರು ಎಎಪಿಯ ಒಟ್ಟು ಸಂಸದರ ಸಂಖ್ಯೆಯ ಮೂರನೇ ಎರಡಕ್ಕಿಂತ (2/3) ಹೆಚ್ಚು ಭಾಗವಾಗಿದ್ದಾರೆ. ಹೀಗಾಗಿ, ಸಂವಿಧಾನದ 10ನೇ ಶೆಡ್ಯೂಲ್ ಅಡಿಯಲ್ಲಿ ಇವರು ವಿಲೀನಗೊಂಡಿರುವುದರಿಂದ, ಇವರ ಸಂಸತ್ ಸದಸ್ಯತ್ವಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ.

ಕಿರಣ್ ರಿಜಿಜು ಪ್ರತಿಕ್ರಿಯೆ

ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ಕ್ರಮವನ್ನು ಸ್ವಾಗತಿಸುತ್ತಾ, "ಈ ಏಳು ಸಂಸದರು ಎಂದಿಗೂ ಅಸಂಸದೀಯ ವರ್ತನೆ ಅಥವಾ ಶಿಸ್ತು ಉಲ್ಲಂಘನೆ ಮಾಡಿಲ್ಲ. ತುಕ್ಡೆ-ತುಕ್ಡೆ ಇಂಡಿ (INDI) ಮೈತ್ರಿಕೂಟಕ್ಕೆ ಗುಡ್-ಬೈ" ಎಂದು ಹೇಳಿದ್ದಾರೆ.

ರಾಘವ್ ಚಡ್ಡಾ ಹೇಳಿಕೆ

ತಮ್ಮ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ರಾಘವ್ ಚಡ್ಡಾ, "ನಾನು ರಾಜಕೀಯಕ್ಕೆ ಬಂದಿದ್ದು ವೃತ್ತಿಜೀವನ ರೂಪಿಸಿಕೊಳ್ಳುವುದಕ್ಕಲ್ಲ, ಬದಲಾಗಿ ವೃತ್ತಿಜೀವನವನ್ನೇ ಬಿಟ್ಟು ಬಂದಿದ್ದೇನೆ. ಎಎಪಿ ಈಗ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುವವರ ಕೈಗೆ ಸಿಲುಕಿದೆ. ಜನರ ಸಮಸ್ಯೆಗಳನ್ನು ಇನ್ನು ಮುಂದೆ ಮತ್ತಷ್ಟು ದೃಢವಾಗಿ ಸರ್ಕಾರದ ಮುಂದಿಡಲು ಮತ್ತು ಪರಿಹಾರ ಒದಗಿಸಲು ಈ ನಿರ್ಧಾರ ಮಾಡಿದ್ದೇವೆ," ಎಂದಿದ್ದಾರೆ.

ಎನ್‌ಡಿಎ ಮೈತ್ರಿಕೂಟಕ್ಕೆ ಲಾಭ

ಬಿಜೆಪಿಯು ರಾಜ್ಯಸಭೆಯಲ್ಲಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿದೆ. ಈ ವರ್ಷಾಂತ್ಯಕ್ಕೆ ಸುಮಾರು 30ಕ್ಕೂ ಹೆಚ್ಚು ಸೀಟುಗಳು ಖಾಲಿಯಾಗಲಿದ್ದು, ಬಿಜೆಪಿ ಕನಿಷ್ಠ ಐದು ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇದು ಎನ್‌ಡಿಎ ಮೈತ್ರಿಕೂಟವನ್ನು ಸಂವಿಧಾನ ತಿದ್ದುಪಡಿಗೆ ಅಗತ್ಯವಿರುವ 163ರ ಮ್ಯಾಜಿಕ್ ಸಂಖ್ಯೆಯ (ಮೂರನೇ ಎರಡರಷ್ಟು ಬಹುಮತ) ಹತ್ತಿರಕ್ಕೆ ಕೊಂಡೊಯ್ಯಲಿದೆ.

ಈ ಹಿಂದೆ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆಯಂತಹ ಪ್ರಮುಖ ವಿಧೇಯಕಗಳ ಸಂದರ್ಭದಲ್ಲಿ ಈ ಬಹುಮತದ ಕೊರತೆ ಎದ್ದು ಕಾಣುತ್ತಿತ್ತು. ಈಗಿನ ಬೆಳವಣಿಗೆಯಿಂದಾಗಿ ಸರ್ಕಾರದ ಹಾದಿ ಸುಗಮವಾಗುವ ಸಾಧ್ಯತೆಯಿದೆ.

Read More
Next Story