Jan 18 news LIVE: ಸಂಗೀತ ಮಾಂತ್ರಿಕನ ವಿವಾದಿತ ಹೇಳಿಕೆ; ಎ.ಆರ್‌. ರೆಹಮಾನ್‌ ಕೊಟ್ಟ ಸ್ಪಷ್ಟನೆ ಏನು?
x

Jan 18 news LIVE: ಸಂಗೀತ ಮಾಂತ್ರಿಕನ ವಿವಾದಿತ ಹೇಳಿಕೆ; ಎ.ಆರ್‌. ರೆಹಮಾನ್‌ ಕೊಟ್ಟ ಸ್ಪಷ್ಟನೆ ಏನು?

ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ


Click the Play button to hear this message in audio format

ಇಂದು ಭಾನುವಾರ, ಜನವರಿ 18, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.

Live Updates

  • 18 Jan 2026 6:39 PM IST

    ಬಿಗ್‌ಬಾಸ್‌ ಫಿನಾಲೆ| ವಿಜಯಲಕ್ಷ್ಮಿ ಯಾರಿಗೆ, ಸಾಮಾಜಿಕ ಜಾಲತಾಣದಲ್ಲಿದೆ ಅಭಿಮಾನಿಗಳ ಉತ್ತರ

    ಬಿಗ್‌ಬಾಸ್‌ ಕನ್ನಡ ಸೀಸನ್‌-12ನಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ಅಭ್ಯರ್ಥಿ 37 ಕೋಟಿ ಮತಗಳನ್ನು ಪಡೆದಿರುವುದು ರಿವೀಲ್‌ ಆದ ಕೂಡಲೇ ಗೆಲ್ಲುವ ಅಭ್ಯರ್ಥಿ ಯಾರೆಂಬುದು ತೀವ್ರ ಕುತೂಹಲ ಮೂಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಜೋರಾಗಿದ್ದು, ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿನ ಕುರಿತು ಅಭಿಮಾನಿಗಳು ವಿಶ್ಲೇಷಣೆ ಮಾಡುತ್ತಿದ್ದಾರೆ.

    ಪ್ರತಿ ಬಾರಿಗಿಂತ ಈ ಬಾರಿ ಬಿಗ್‌ಬಾಸ್‌ ಸ್ಫರ್ಧಿಗಳ ಪರವಾಗಿ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಿ, ಮತ ಹಾಕುವಂತೆ ಮನವಿ ಮಾಡಿದ್ದಾರೆ. ಭಾನುವಾರ(ಜ.18) ಸಂಜೆಯಿಂದ ಆರಂಭವಾಗಿರುವ ಫಿನಾಲೆಗೂ ಮುನ್ನವೇ ಅಭಿಮಾನಿಗಳಲ್ಲಿ ಬಿಗ್‌ಬಾಸ್‌ ವಿನ್ನರ್‌ ಯಾರಾಗಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ.

    ಪ್ರಸಕ್ತ ಸೀಸನ್‌ನಲ್ಲಿ ಅತಿ ಹೆಚ್ಚು ಜನಮನ್ನಣೆ ಗಳಿಸಿರುವ ವಿಭಿನ್ನ ವ್ಯಕ್ತಿತ್ವ, ನೇರ ನಿಲುವು ಹಾಗೂ ಸ್ಪಷ್ಟ ಅಭಿಪ್ರಾಯಗಳಿಂದ ಪ್ರೇಕ್ಷಕರ ಗಮನ ಸೆಳೆದಿದ್ದ ಗಿಲ್ಲಿ ನಟನೇ ಗೆಲುವು ಸಾಧಿಸಲಿದ್ದು, 37 ಕೋಟಿ ಮತಗಳು ಗಿಲ್ಲಿಗೆ ಬಂದಿವೆ ಎಂದು ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಅಶ್ವಿನಿಗೌಡ ಅವರೇ ಈ ಬಾರಿ ಗೆಲುವು ಸಾಧಿಸಲಿದ್ದಾರೆ ಎನ್ನುತ್ತಿದ್ದಾರೆ. ಮಂಗಳೂರಿನ ರಕ್ಷಿತಾ ಶೆಟ್ಟಿ ಅವರು ಪ್ರಥಮ ರನ್ನರ್‌ಅಪ್‌ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ.   

  • 18 Jan 2026 4:02 PM IST

    ಬಿಜೆಪಿಯವರು ಎಷ್ಟು ಕೇಸ್‌ ಸಿಬಿಐಗೆ ಕೊಟ್ಟಿದ್ದರು: ಸಿದ್ದರಾಮಯ್ಯ ಪ್ರಶ್ನೆ

    ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ. ನಮ್ಮನ್ನು ಪ್ರಶ್ನೆ ಮಾಡಲು ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

    ಮೈಸೂರಿನ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರದಲ್ಲಿ ಇದ್ದಾಗ ಯಾವುದಾದರೂ ಒಂದು ಪ್ರಕರಣವನ್ನಾದರೂ ಕೊಟ್ಟಿದ್ದರೆ ನಮ್ಮನ್ನು ಕೇಳಬಹುದು. ನಾವು ಅಧಿಕಾರದಲ್ಲಿ ಇದ್ದಾಗ ಸುಮಾರು ಏಳೆಂಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು ಪಟ್ಟಿ ಮುಂದಿಟ್ಟರು.

    ಬಳ್ಳಾರಿ ಪ್ರಕರಣದ ಬಗ್ಗೆ ಬಿಜೆಪಿ ಜನಾಂದೋಲನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದಲ್ಲಿರುವಾಗ ಯಾವ ಆಂದೋಲನ, ಪ್ರತಿಭಟನೆ ಮಾಡುತ್ತಾರೆ ಎನ್ನುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅದಕ್ಕೆ ನಾವೂ ಕೂಡ ತಕ್ಕ ಉತ್ತರ ಕೊಡುತ್ತೇವೆ ಎಂದರು.

  • 18 Jan 2026 2:23 PM IST

    ವಿವಾದಾತ್ಮಕ ಹೇಳಿಕೆ: ಸಂಗೀತ ಮಾಂತ್ರಿಕ ಎ.ಆರ್‌. ರೆಹಮಾನ್‌ ಸ್ಪಷ್ಟನೆ ಏನು ?

    ಬಾಲಿವುಡ್ ಚಿತ್ರರಂಗದಲ್ಲಿನ ಬದಲಾದ ಪರಿಸ್ಥಿತಿ ಹಾಗೂ ತಮಗೆ ಸಿಗುತ್ತಿರುವ ಅವಕಾಶಗಳ ಕುರಿತು ಇತ್ತೀಚೆಗೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದದ ಕುರಿತು ಮೌನ ಮುರಿದಿರುವ ರೆಹಮಾನ್, ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಉದ್ದೇಶಗಳು ಕೆಲವೊಮ್ಮೆ ತಪ್ಪಾಗಿ ಅರ್ಥೈಸಲ್ಪಡುತ್ತವೆ, ಆದರೆ ಯಾರ ಭಾವನೆಗಳಿಗೂ ನೋವುಂಟು ಮಾಡುವ ಆಲೋಚನೆ ತಮಗಿಲ್ಲ ಎಂದು ಅವರು ಹೇಳಿದ್ದಾರೆ.

    ವಿವಾದಕ್ಕೆ ಕಾರಣವಾದ ಆ ಒಂದು ಹೇಳಿಕೆ

    ಕೆಲವು ದಿನಗಳ ಹಿಂದೆ 'ಬಿಬಿಸಿ ಏಷ್ಯನ್ ನೆಟ್‌ವರ್ಕ್'ಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್ ಅವರು ಬಾಲಿವುಡ್‌ನಲ್ಲಿ ನಡೆಯುತ್ತಿರುವ 'ಪವರ್ ಶಿಫ್ಟ್' ಬಗ್ಗೆ ಮಾತನಾಡಿದ್ದರು. "ಹಿಂದಿ ಚಿತ್ರರಂಗದಲ್ಲಿ ಈಗ ಸೃಜನಶೀಲರಲ್ಲದವರ ಕೈಯಲ್ಲಿ ಅಧಿಕಾರವಿದೆ. ನನಗೆ ಬರಬೇಕಾದ ಕೆಲಸಗಳನ್ನು ತಡೆಯಲಾಗುತ್ತಿದೆ. ಇದು ಒಂದು ರೀತಿಯ 'ಕೋಮು' (Communal) ವಿಚಾರವೂ ಆಗಿರಬಹುದು. ಆದರೆ ಇದು ನನ್ನ ಮುಖದ ಮೇಲೆ ನೇರವಾಗಿ ನಡೆಯುತ್ತಿಲ್ಲ, ಬದಲಾಗಿ ಪಿಸುಮಾತುಗಳಂತೆ ನನಗೆ ಕೇಳಿಬರುತ್ತಿದೆ. ಒಂದು ಚಿತ್ರಕ್ಕೆ ನನ್ನನ್ನು ಅಂತಿಮಗೊಳಿಸಿದ ನಂತರವೂ, ಸಂಗೀತ ಸಂಸ್ಥೆಗಳು ಬೇರೆ ಐವರು ಸಂಗೀತ ನಿರ್ದೇಶಕರನ್ನು ನೇಮಿಸಿಕೊಂಡ ಉದಾಹರಣೆಗಳಿವೆ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ಈ 'ಕೋಮು' ಎಂಬ ಪದದ ಬಳಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿತ್ತು.

  • 18 Jan 2026 2:18 PM IST

    ʼಕಾಜಿರಂಗ ಎಲಿವೇಟೆಡ್ ಕಾರಿಡಾರ್' ಯೋಜನೆಗೆ ಪ್ರಧಾನಿ ಮೋದಿ ಶಂಕು ಸ್ಥಾಪನೆ

    ಈಶಾನ್ಯ ಭಾರತದ ಸಂಪರ್ಕ ವ್ಯವಸ್ಥೆಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಜ.18) ಅಸ್ಸಾಂನಲ್ಲಿ ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದರು. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿಗಳ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸಲಾಗುತ್ತಿರುವ 6,957 ಕೋಟಿ ರೂಪಾಯಿ ವೆಚ್ಚದ 'ಕಾಜಿರಂಗ ಎಲಿವೇಟೆಡ್ ಕಾರಿಡಾರ್' (Kaziranga Elevated Corridor) ಯೋಜನೆಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

    ಜತೆಗೆ, ಅಸ್ಸಾಂನ ನಾಗಾಂವ್ ಜಿಲ್ಲೆಯ ಕಲಿಯಾಬೋರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಎರಡು ನೂತನ 'ಅಮೃತ್ ಭಾರತ್ ಎಕ್ಸ್‌ಪ್ರೆಸ್' (Amrit Bharat Express) ರೈಲುಗಳಿಗೂ ಹಸಿರು ನಿಶಾನೆ ತೋರಿದರು.

  • 18 Jan 2026 2:10 PM IST

    ಬಾಂಗ್ಲಾದಲ್ಲಿ ಮುಂದುವರಿದ ಸರಣಿ ಹತ್ಯೆ

    ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದೌರ್ಜನ್ಯ ಮತ್ತು ಸರಣಿ ಹತ್ಯೆಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಢಾಕಾದ ಕಾಲಿಗಂಜ್ ಪ್ರದೇಶದಲ್ಲಿ ಕೇವಲ ಕ್ಷುಲ್ಲಕ ಕಾರಣಕ್ಕಾಗಿ ನಡೆದ ವಾಗ್ವಾದವು ವಿಕೋಪಕ್ಕೆ ಹೋಗಿ, ಉದ್ರಿಕ್ತ ಗುಂಪೊಂದು 60 ವರ್ಷದ ಹಿಂದೂ ಉದ್ಯಮಿ ಲಿಟನ್ ಚಂದ್ರ ದಾಸ್ ಅವರನ್ನು ಮಾರಕಾಸ್ತ್ರಗಳಿಂದ ಹೊಡೆದು ಅಮಾನವೀಯವಾಗಿ ಹತ್ಯೆಗೈದಿದೆ.

    ಲಿಟನ್ ಚಂದ್ರ ದಾಸ್ ಅವರು ಸ್ಥಳೀಯವಾಗಿ ಹೋಟೆಲ್ ಮತ್ತು ಸಿಹಿ ತಿಂಡಿ ಅಂಗಡಿಯನ್ನು ನಡೆಸುತ್ತಿದ್ದರು. ಶನಿವಾರ ಬೆಳಿಗ್ಗೆ ಅವರ ಅಂಗಡಿಯ ಉದ್ಯೋಗಿ ಅನಂತ ದಾಸ್ ಮತ್ತು ಗ್ರಾಹಕರೊಬ್ಬರ ನಡುವೆ ಸಣ್ಣ ವಿಷಯಕ್ಕೆ ಜಗಳ ಆರಂಭವಾಗಿತ್ತು. ಈ ವೇಳೆ ತಮ್ಮ ಉದ್ಯೋಗಿಯನ್ನು ರಕ್ಷಿಸಲು ಲಿಟನ್ ಮಧ್ಯಪ್ರವೇಶಿಸಿದ್ದಾರೆ. ಇದರಿಂದ ಕುಪಿತಗೊಂಡ ದುಷ್ಕರ್ಮಿಗಳ ಗುಂಪು, ಲಿಟನ್ ಅವರ ಮೇಲೆ ಮುಗಿಬಿದ್ದಿದೆ. ಮೊದಲು ಥಳಿಸಿ, ನಂತರ ಕಬ್ಬಿಣದ ರಾಡ್‌ಗಳಿಂದ ಬಲವಾಗಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಲಿಟನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

  • ಯೂರೋಪಿಯನ್‌ ಎಂಟು ರಾಷ್ಟ್ರಗಳಿಗೆ ಟ್ರಂಪ್‌ ಸುಂಕದ ಬರೆ
    18 Jan 2026 12:00 PM IST

    ಯೂರೋಪಿಯನ್‌ ಎಂಟು ರಾಷ್ಟ್ರಗಳಿಗೆ ಟ್ರಂಪ್‌ ಸುಂಕದ ಬರೆ

    ಗ್ರೀನ್‌ಲ್ಯಾಂಡ್ ದ್ವೀಪದ ಮೇಲೆ ಅಮೆರಿಕದ ನಿಯಂತ್ರಣ ಸಾಧಿಸುವ ತಮ್ಮ ಇಚ್ಛೆಗೆ ಅಡ್ಡಬಂದ ಯುರೋಪಿನ ಎಂಟು ಪ್ರಮುಖ ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಟ್ಟಿಗೆದ್ದಿದ್ದಾರೆ. ಈ ದೇಶಗಳಿಂದ ಆಮದಾಗುವ ಸರಕುಗಳ ಮೇಲೆ ಫೆಬ್ರವರಿಯಿಂದ ಶೇ. 10ರಷ್ಟು ಸುಂಕ ವಿಧಿಸುವುದಾಗಿ ಘೋಷಿಸುವ ಮೂಲಕ ಮಿತ್ರರಾಷ್ಟ್ರಗಳಿಗೇ ಬಿಸಿ ಮುಟ್ಟಿಸಿದ್ದಾರೆ.

    ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ತಮ್ಮ ಗಾಲ್ಫ್ ಕ್ಲಬ್‌ನಲ್ಲಿದ್ದ ಟ್ರಂಪ್, ಶನಿವಾರ (ಜ.17) ತಮ್ಮದೇ ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ನಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಬ್ರಿಟನ್, ನೆದರ್ಲ್ಯಾಂಡ್ಸ್ ಮತ್ತು ಫಿನ್ಲ್ಯಾಂಡ್ ದೇಶಗಳು ಟ್ರಂಪ್ ಅವರ ಸುಂಕದ ಬರೆಗೆ ಗುರಿಯಾಗಲಿವೆ.

    ಅಷ್ಟೇ ಅಲ್ಲದೆ, ಜೂನ್ 1ರ ಒಳಗೆ ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕಕ್ಕೆ ಸಂಪೂರ್ಣವಾಗಿ ಹಸ್ತಾಂತರಿಸುವ ಒಪ್ಪಂದವಾಗದಿದ್ದರೆ, ಈ ಆಮದು ಸುಂಕವನ್ನು ಶೇ. 25ಕ್ಕೆ ಏರಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದು ಯುರೋಪ್ ಒಕ್ಕೂಟ ಮತ್ತು ಅಮೆರಿಕದ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ತೀವ್ರ ಬಿರುಕು ಮೂಡಿಸುವ ಸಾಧ್ಯತೆಯಿದೆ.

  • ದೆಹಲಿಯಲ್ಲಿ ದಟ್ಟ ಮಂಜು, ಗೋಚರತೆ ಪ್ರಮಾಣ ಶೂನ್ಯ
    18 Jan 2026 11:51 AM IST

    ದೆಹಲಿಯಲ್ಲಿ ದಟ್ಟ ಮಂಜು, ಗೋಚರತೆ ಪ್ರಮಾಣ ಶೂನ್ಯ

    ದೇಶದ ರಾಜಧಾನಿ ನವದೆಹಲಿ ಹಾಗೂ ಎನ್​​ಸಿಆರ್​​​ ಪ್ರದೇಶ ದಟ್ಟ ಮಂಜಿನಿಂದ ಆವೃತವಾಗಿದ್ದು, ಭಾನುವಾರ ಬೆಳಿಗ್ಗೆ ಗೋಚರತೆ ಪ್ರಮಾಣ ಶೂನ್ಯಕ್ಕೆ ಕುಸಿದಿದೆ. ಮೈ ಕೊರೆಯುವ ಚಳಿಯ ನಡುವೆಯೇ ವಾಯುಮಾಲಿನ್ಯದ ಪ್ರಮಾಣವೂ ಮಿತಿಮೀರಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

    ಭಾನುವಾರ ಬೆಳಿಗ್ಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 5.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 2.3 ಡಿಗ್ರಿಯಷ್ಟು ಕಡಿಮೆ. ಸಫ್ದರ್‌ಜಂಗ್ ಪ್ರದೇಶದಲ್ಲಿ ಗೋಚರತೆ ಶೂನ್ಯವಾಗಿದ್ದರೆ, ಪಾಲಂನಲ್ಲಿ ಕೇವಲ 100 ಮೀಟರ್‌ಗಳಷ್ಟಿತ್ತು ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

  • ಪ್ರತಿಭಟನೆ ಹಿಂದೆ ಅಮೆರಿಕ ಕೈವಾಡ: ಇರಾನ್‌ ಆರೋಪ
    18 Jan 2026 11:40 AM IST

    ಪ್ರತಿಭಟನೆ ಹಿಂದೆ ಅಮೆರಿಕ ಕೈವಾಡ: ಇರಾನ್‌ ಆರೋಪ

    ಇರಾನ್‌ನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಮತ್ತು ಹಿಂಸಾಚಾರದ ವೇಳೆ ಸಂಭವಿಸಿದ ಸಾವಿರಾರು ಸಾವು-ನೋವುಗಳಿಗೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ನೇರ ಹೊಣೆ ಎಂದು ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಆರೋಪ ಮಾಡಿದ್ದಾರೆ. ಈ ಕೃತ್ಯಗಳಿಗಾಗಿ ಟ್ರಂಪ್ ಅವರನ್ನು 'ಅಪರಾಧಿ' ಎಂದು ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

    ದೇಶದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ದೇಶವಿರೋಧಿ ಸ್ವರೂಪ ಪಡೆದುಕೊಂಡಿದ್ದು, ಇದರ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಖಮೇನಿ, "ನಾವು ದೇಶವನ್ನು ಅನಗತ್ಯವಾಗಿ ಯುದ್ಧಕ್ಕೆ ತಳ್ಳುವುದಿಲ್ಲ. ಆದರೆ, ಇರಾನ್ ವಿರುದ್ಧ ಸಂಚು ರೂಪಿಸಿದ ದೇಶೀಯ ಅಥವಾ ಅಂತಾರಾಷ್ಟ್ರೀಯ ಅಪರಾಧಿಗಳನ್ನು ಶಿಕ್ಷಿಸದೇ ಬಿಡುವುದಿಲ್ಲ," ಎಂದು ಗುಡುಗಿದ್ದಾರೆ. ಇರಾನ್‌ನ ಸೇನೆ, ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ನಿಯಂತ್ರಣ ಸಾಧಿಸುವುದು ಅಮೆರಿಕದ ಹುನ್ನಾರವಾಗಿದೆ ಎಂದು ಅವರು ದೂರಿದ್ದಾರೆ.

  • ವಿಮಾನಗಳ ರದ್ದು, ವಿಳಂಬ: ಇಂಡಿಗೋಗೆ ಭಾರೀ ದಂಡ
    18 Jan 2026 11:25 AM IST

    ವಿಮಾನಗಳ ರದ್ದು, ವಿಳಂಬ: ಇಂಡಿಗೋಗೆ ಭಾರೀ ದಂಡ

    ಡಿಸೆಂಬರ್ ತಿಂಗಳಲ್ಲಿ ಸಂಭವಿಸಿದ ಭಾರೀ ಪ್ರಮಾಣದ ವಿಮಾನಗಳ ರದ್ದು ಮತ್ತು ವಿಳಂಬದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ದೇಶದ ಪ್ರಮುಖ ವಿಮಾನಯಾನ ಸಂಸ್ಥೆ 'ಇಂಡಿಗೋ'ಗೆ ಬಿಸಿ ಮುಟ್ಟಿಸಿದೆ. ಸಂಸ್ಥೆಗೆ ಬರೋಬ್ಬರಿ 22.20 ಕೋಟಿ ರೂಪಾಯಿ ದಂಡ ವಿಧಿಸಿರುವುದಲ್ಲದೆ, ಸಿಇಒ ಪೀಟರ್ ಎಲ್ಬರ್ಸ್ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದೆ.

     

Read More
Next Story