ಎನ್‌ಡಿಎ ಮೈತ್ರಿಕೂಟಕ್ಕೆ ಭರ್ಜರಿ ಜಯ: ಅಭೂತಪೂರ್ವ ಗೆಲುವಿಗೆ ಪ್ರಧಾನಿ ಮೋದಿ ಹರ್ಷ
x

ಎನ್‌ಡಿಎ ಮೈತ್ರಿಕೂಟಕ್ಕೆ ಭರ್ಜರಿ ಜಯ: ಅಭೂತಪೂರ್ವ ಗೆಲುವಿಗೆ ಪ್ರಧಾನಿ ಮೋದಿ ಹರ್ಷ

ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ


ಇಂದು ಗುರುವಾರ, ಜನವರಿ 16, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.

Live Updates

  • 16 Jan 2026 10:01 AM IST

    ಬಾಂಗ್ಲಾದಲ್ಲಿ ಹಿಂದೂ ಶಿಕ್ಷಕನ ಮನೆಗೆ ಬೆಂಕಿ, ಹೆಚ್ಚಿದ ಆತಂಕ!

    ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಮುಂದುವರಿದಿದೆ. ಸಿಲ್ಹೆಟ್‌ನ ಗೋವೈನ್ ಘಾಟ್ ಉಪಜಿಲಾದಲ್ಲಿರುವ ಖ್ಯಾತ ಶಿಕ್ಷಕ ಬೀರೇಂದ್ರ ಕುಮಾರ್ ಡೇ (ಝುನು ಸರ್) ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ವರದಿಯಾಗಿದೆ.

    ಸ್ಥಳೀಯವಾಗಿ 'ಝುನು ಸರ್' ಎಂದೇ ಚಿರಪರಿಚಿತರಾಗಿರುವ ಬೀರೇಂದ್ರ ಕುಮಾರ್ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಕುಟುಂಬ ಸದಸ್ಯರು ದಿಕ್ಕೆಟ್ಟಿದ್ದು, ಸ್ಥಳೀಯ ಹಿಂದೂ ಸಮುದಾಯದಲ್ಲಿ ತೀವ್ರ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.

  • 16 Jan 2026 9:57 AM IST

    ಮೆಟ್ರೋ ನಿಲ್ದಾಣದ ಬಳಿಯೇ ಮಹಿಳೆಯ ಅಪಹರಣ, ಧಾಬಾದಲ್ಲಿ ಗ್ಯಾಂಗ್ ರೇಪ್!

    ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತೊಮ್ಮೆ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಜನವರಿ 12ರಂದು ನಸುಕಿನ ಜಾವ ಮೆಟ್ರೋ ನಿಲ್ದಾಣದ ಕೂಗಳತೆ ದೂರದಲ್ಲೇ ಮಹಿಳೆಯೊಬ್ಬರನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.

    ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ಜನವರಿ 12ರಂದು ನಸುಕಿನ ಜಾವ ಸುಮಾರು 2 ಗಂಟೆಯ ಸಮಯದಲ್ಲಿ ದೆಹಲಿ ಮೆಟ್ರೋದ ಗ್ರೀನ್ ಲೈನ್‌ನಲ್ಲಿರುವ 'ಪಂಡಿತ್ ಶ್ರೀರಾಮ್ ಶರ್ಮಾ' ಮೆಟ್ರೋ ನಿಲ್ದಾಣದ ಬಳಿ ಆಕೆ ತನ್ನ ಚಿಕ್ಕಪ್ಪನೊಂದಿಗೆ ಬಸ್ಸಿನಿಂದ ಇಳಿದಿದ್ದರು. ಅವರನ್ನು ಮನೆಗೆ ಕರೆದೊಯ್ಯಲು ಆಕೆಯ ಸೋದರಸಂಬಂಧಿ ಕೂಡ ಅಲ್ಲಿಗೆ ಬಂದಿದ್ದರು. ಈ ವೇಳೆ ಐವರು ಅಪರಿಚಿತ ವ್ಯಕ್ತಿಗಳು ತಮ್ಮನ್ನು ಹಿಂಬಾಲಿಸುತ್ತಿರುವುದನ್ನು ಅವರು ಗಮನಿಸಿದ್ದಾರೆ.

    ಕೆಲವೇ ನಿಮಿಷಗಳಲ್ಲಿ ಕಿರಾತಕರು ಏಕಾಏಕಿ ದಾಳಿ ನಡೆಸಿ, ಮಹಿಳೆಯನ್ನು ಆಕೆಯ ಚಿಕ್ಕಪ್ಪ ಮತ್ತು ಸೋದರಸಂಬಂಧಿಯಿಂದ ಬಲವಂತವಾಗಿ ಬೇರ್ಪಡಿಸಿ ಎಳೆದೊಯ್ದಿದ್ದಾರೆ. ಮೆಟ್ರೋ ನಿಲ್ದಾಣದಿಂದ ಕೇವಲ 100 ಮೀಟರ್ ದೂರದಲ್ಲಿರುವ ದೆಹಲಿ-ರೋಹ್ಟಕ್ ರಸ್ತೆಯ ನಿರ್ಜನ ಧಾಬಾಕ್ಕೆ ಆಕೆಯನ್ನು ಎಳೆದುಕೊಂಡು ಹೋಗಿ ಐವರು ನರಹಂತಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

  • 16 Jan 2026 9:45 AM IST

    PNB ಹಗರಣಕ್ಕೆ ಸ್ಫೋಟಕ ತಿರುವು- ಮೆಹುಲ್ ಚೋಕ್ಸಿ ಮಗನ ವಿರುದ್ಧ ಇಡಿ ಗಂಭೀರ ಆರೋಪ!

    ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧದ ತನಿಖೆಯಲ್ಲಿ ಈಗ ಒಂದು ಸ್ಫೋಟಕ ತಿರುವು ಸಿಕ್ಕಿದೆ. ಕಳೆದ ಎಂಟು ವರ್ಷಗಳಿಂದ ನಡೆಯುತ್ತಿರುವ ಈ ಬೃಹತ್ ಹಗರಣದ ತನಿಖೆಯಲ್ಲಿ ಜಾರಿ ನಿರ್ದೇಶನಾಲಯವು ಮೊದಲ ಬಾರಿಗೆ ಮೆಹುಲ್ ಚೋಕ್ಸಿಯ ಮಗ ರೋಹನ್ ಚೋಕ್ಸಿ ಹೆಸರನ್ನು ಅಧಿಕೃತವಾಗಿ ಪ್ರಸ್ತಾಪಿಸಿದೆ. ಅಕ್ರಮ ಹಣ ವರ್ಗಾವಣೆ ದಂಧೆಯಲ್ಲಿ ರೋಹನ್ ಕೂಡ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ದೆಹಲಿಯ ಮೇಲ್ಮನವಿ ನ್ಯಾಯಮಂಡಳಿಯ ಮುಂದೆ ಲಿಖಿತವಾಗಿ ತಿಳಿಸಿದೆ. ಇದುವರೆಗೆ ರೋಹನ್ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ ಅಥವಾ ಅವರನ್ನು ಈ ಹಗರಣದ ಆರೋಪಿಯನ್ನಾಗಿ ಮಾಡಿರಲಿಲ್ಲ, ಆದರೆ ಈಗ ಇಡಿ ನೀಡಿರುವ ಈ ಹೇಳಿಕೆ ಚೋಕ್ಸಿ ಕುಟುಂಬಕ್ಕೆ ಹೊಸ ಕಾನೂನು ಸಂಕಷ್ಟವನ್ನು ತಂದೊಡ್ಡಿದೆ.

    ತನಿಖಾ ಸಂಸ್ಥೆಯ ವರದಿಯ ಪ್ರಕಾರ, ಮೆಹುಲ್ ಚೋಕ್ಸಿ ಕೇವಲ ಕಾಗದದ ಮೇಲೆ ಇರುವ ಹಲವಾರು ನಕಲಿ ಅಂದರೆ 'ಶೆಲ್' ಕಂಪನಿಗಳಲ್ಲಿ ನಿರ್ದೇಶಕರಾಗಿದ್ದರು. ಈ ಕಂಪನಿಗಳ ಮೂಲಕ ಯಾವುದೇ ನೈಜ ವ್ಯಾಪಾರ ನಡೆಯುತ್ತಿರಲಿಲ್ಲ, ಬದಲಿಗೆ ಕೇವಲ ನಕಲಿ ವಹಿವಾಟುಗಳನ್ನು ಸೃಷ್ಟಿಸಿ ಬ್ಯಾಂಕ್‌ನ ಹಣವನ್ನು ಹಂತ ಹಂತವಾಗಿ ವಿದೇಶಕ್ಕೆ ಸಾಗಿಸಲಾಗುತ್ತಿತ್ತು. ರೋಹನ್ ಚೋಕ್ಸಿ ಅವರು 'ಲಸ್ಟರ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್' ಎಂಬ ಕಂಪನಿಯಲ್ಲಿ ಸುಮಾರು ಶೇಕಡಾ 99.99 ರಷ್ಟು ಪಾಲುದಾರಿಕೆ ಹೊಂದಿದ್ದಾರೆ ಮತ್ತು ಇದೇ ಕಂಪನಿಯಲ್ಲಿ ತಂದೆ ಮೆಹುಲ್ ಚೋಕ್ಸಿ ನಿರ್ದೇಶಕರಾಗಿದ್ದಾರೆ. ಈ ನಿರ್ದಿಷ್ಟ ಕಂಪನಿಯನ್ನು ಅಕ್ರಮವಾಗಿ ಹಣವನ್ನು ವಿದೇಶಕ್ಕೆ ವರ್ಗಾಯಿಸಲು ಅಥವಾ ಡೈವರ್ಟ್ ಮಾಡಲು ಬಳಸಲಾಗಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.

    ಸುಮಾರು 13,000 ಕೋಟಿ ರೂಪಾಯಿಗಳ ಈ ಬೃಹತ್ ಬ್ಯಾಂಕ್ ಹಗರಣದಲ್ಲಿ ಈಗ ಚೋಕ್ಸಿ ಮಗನ ಕಂಪನಿ ಮತ್ತು ಅವರ ಪಾತ್ರದ ಬಗ್ಗೆ ಇಡಿ ಸ್ಪಷ್ಟವಾದ ಸಾಕ್ಷ್ಯಗಳನ್ನು ನ್ಯಾಯಮಂಡಳಿಗೆ ನೀಡಿದೆ. ಇದುವರೆಗೆ ಕೇವಲ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಸುತ್ತ ಸುತ್ತುತ್ತಿದ್ದ ಈ ಪ್ರಕರಣ, ಈಗ ಮುಂದಿನ ತಲೆಮಾರಿನ ಸದಸ್ಯರನ್ನೂ ಒಳಗೊಳ್ಳುತ್ತಿರುವುದು ತನಿಖೆಯ ಗಂಭೀರತೆಯನ್ನು ಹೆಚ್ಚಿಸಿದೆ.

  • 16 Jan 2026 8:53 AM IST

    ಟ್ರಂಪ್‌ ಎಚ್ಚರಿಕೆಗೆ ಬೆದರಿದ ಇರಾನ್: 800 ಮರಣದಂಡನೆ ಶಿಕ್ಷೆ ಸ್ಥಗಿತ!

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಒತ್ತಡಕ್ಕೆ ಮಣಿದಿರುವ ಇರಾನ್, ಸುಮಾರು 800 ಮರಣದಂಡನೆ ಶಿಕ್ಷೆಗಳನ್ನು ಜಾರಿಗೊಳಿಸುವ ತನ್ನ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ತಂಡವು ಇರಾನ್ ಅಧಿಕಾರಿಗಳಿಗೆ ನೇರ ಎಚ್ಚರಿಕೆಯನ್ನು ನೀಡಿದ್ದು, ಪ್ರತಿಭಟನಾಕಾರರ ಮೇಲಿನ ಹಿಂಸಾತ್ಮಕ ದಮನಕಾರಿ ನೀತಿ ಮತ್ತು ಯೋಜಿತ ಮರಣದಂಡನೆಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಸೂಚಿಸಿತ್ತು. ಒಂದು ವೇಳೆ ಇರಾನ್ ಸರ್ಕಾರ ತನ್ನ ದರ್ಪವನ್ನು ಮುಂದುವರಿಸಿದರೆ, ಅಮೆರಿಕವು ಮಿಲಿಟರಿ ಕ್ರಮ ಕೈಗೊಳ್ಳುವ ಆಯ್ಕೆಯನ್ನು ಮುಕ್ತವಾಗಿರಿಸಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸ್ಪಷ್ಟಪಡಿಸಿದ್ದಾರೆ.

    ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳಲ್ಲಿ ಮಾನವ ಹಕ್ಕುಗಳ ಸಂಸ್ಥೆಗಳ ವರದಿಯ ಪ್ರಕಾರ ಇದುವರೆಗೆ 2,600ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಈ ರಕ್ತಪಾತವನ್ನು ಗಂಭೀರವಾಗಿ ಪರಿಗಣಿಸಿರುವ ಟ್ರಂಪ್ ಆಡಳಿತವು, ಇರಾನ್ ಅಧಿಕಾರಿಗಳೊಂದಿಗೆ ನೇರ ಸಂವಹನ ನಡೆಸಿ "ಗಂಭೀರ ಪರಿಣಾಮ" ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು. ಈ ರಾಜತಾಂತ್ರಿಕ ಒತ್ತಡಕ್ಕೆ ಮಣಿದಿರುವ ಇರಾನ್, ಬುಧವಾರದಂದು ಜಾರಿಗೊಳಿಸಬೇಕಿದ್ದ 800 ಮರಣದಂಡನೆ ಶಿಕ್ಷೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ ಎಂದು ತಿಳಿದುಬಂದಿದೆ.

  • 16 Jan 2026 7:00 AM IST

    ಇರಾನ್‌ಗೆ ಅಮೆರಿಕದ ಅಂತಿಮ ಎಚ್ಚರಿಕೆ

    ಇರಾನ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ನಡೆಯುತ್ತಿರುವ ಭೀಕರ ದಮನಕಾಂಡದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಅಮೆರಿಕವು ಇರಾನ್ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕನಿಷ್ಠ 2,637 ಜನರು ಈ ಹಿಂಸಾಚಾರದಲ್ಲಿ ಬಲಿಯಾಗಿದ್ದಾರೆ ಎಂದು ವರದಿಯಾಗಿದ್ದು, ಅಮೆರಿಕವು ಇರಾನ್ ವಿರುದ್ಧ ಮಿಲಿಟರಿ ಕ್ರಮದ ಸುಳಿವು ನೀಡಿದೆ.

    ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ಮೈಕ್ ವಾಲ್ಟ್ಜ್ ಮಾತನಾಡಿ, "ಅಧ್ಯಕ್ಷ ಟ್ರಂಪ್ ಅವರು ಕೇವಲ ಮಾತುಗಳನ್ನಾಡುವ ವ್ಯಕ್ತಿಯಲ್ಲ, ಅವರು ಕ್ರಿಯೆಯಲ್ಲಿ ನಂಬಿಕೆ ಇರುವವರು. ಹತ್ಯಾಕಾಂಡವನ್ನು ತಡೆಯಲು ನಮ್ಮ ಮುಂದೆ ಎಲ್ಲಾ ಆಯ್ಕೆಗಳು (ಮಿಲಿಟರಿ ಕ್ರಮ ಸೇರಿದಂತೆ) ಮುಕ್ತವಾಗಿವೆ," ಎಂದು ಎಚ್ಚರಿಸಿದ್ದಾರೆ.

Read More
Next Story