
Today's news Feb 16: ರೋಹಿತ್ ಶೆಟ್ಟಿ ಮನೆ ಮೇಲೆ ಶೂಟೌಟ್ ಪ್ರಕರಣ: ಶೂಟರ್ ಸೇರಿದಂತೆ 6 ಆರೋಪಿಗಳ ಬಂಧನ
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಸೋಮವಾರ ಫೆಬ್ರುವರಿ 16, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 16 Feb 2026 3:13 PM IST
ಆಂಧ್ರಪ್ರದೇಶಕ್ಕೆ ಬಿಲ್ ಗೇಟ್ಸ್ ಭೇಟಿ: ಸಿಎಂ ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಜೊತೆ ಮಹತ್ವದ ಚರ್ಚೆ
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಸೋಮವಾರ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದು, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಗೇಟ್ಸ್ ಫೌಂಡೇಶನ್ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವಿನ ಸಹಕಾರವನ್ನು ವಿಸ್ತರಿಸುವ ಉದ್ದೇಶದಿಂದ ಈ ಭೇಟಿ ನಡೆದಿದ್ದು, ಮುಖ್ಯವಾಗಿ ಆರೋಗ್ಯ, ಕೃಷಿ, ಶಿಕ್ಷಣ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತದಂತಹ ಪ್ರಮುಖ ಕ್ಷೇತ್ರಗಳ ಕುರಿತು ಚರ್ಚೆಗಳು ನಡೆಯಲಿವೆ. ಸಚಿವಾಲಯಕ್ಕೆ ಆಗಮಿಸಿದ ಬಿಲ್ ಗೇಟ್ಸ್ ಅವರನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಐಟಿ ಸಚಿವ ನಾರಾ ಲೋಕೇಶ್ ಆತ್ಮೀಯವಾಗಿ ಸ್ವಾಗತಿಸಿದರು. ರಾಜ್ಯದಲ್ಲಿ ಆಯಕಟ್ಟಿನ ಪಾಲುದಾರಿಕೆಯನ್ನು ನಿರ್ಮಿಸುವ ಉದ್ದೇಶದಿಂದ ದಿನವಿಡೀ ವಿವಿಧ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲು ನಿರ್ಧರಿಸಲಾಗಿದೆ.

- 16 Feb 2026 3:01 PM IST
ರೋಹಿತ್ ಶೆಟ್ಟಿ ಮನೆ ಮೇಲೆ ಶೂಟೌಟ್ ಪ್ರಕರಣ: ಶೂಟರ್ ಸೇರಿದಂತೆ 6 ಆರೋಪಿಗಳ ಬಂಧನ
ಮುಂಬೈ ಪೊಲೀಸರು ಚಿತ್ರನಿರ್ಮಾಪಕ ರೋಹಿತ್ ಶೆಟ್ಟಿ ಅವರ ಜುಹು ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೂಟರ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮುಂಬೈ ಪೊಲೀಸರ ಸುಲಿಗೆ ವಿರೋಧಿ ದಳವು ಹರಿಯಾಣ ಮತ್ತು ರಾಜಸ್ಥಾನದಲ್ಲಿ ಕಾರ್ಯಾಚರಣೆ ನಡೆಸಿ ಶೂಟರ್ ದೀಪಕ್ ಶರ್ಮಾ ಮತ್ತು ಆತನ ಐವರು ಸಹಚರರನ್ನು ಭಾನುವಾರ ರಾತ್ರಿ ಸೆರೆಹಿಡಿದು ಮುಂಬೈಗೆ ಕರೆತಂದಿದೆ. ಫೆಬ್ರವರಿ 1 ರಂದು ಮಧ್ಯರಾತ್ರಿ ಜುಹುನಲ್ಲಿರುವ ಶೆಟ್ಟಿ ಅವರ ಒಂಬತ್ತು ಅಂತಸ್ತಿನ ಕಟ್ಟಡದ ಮೇಲೆ ಐದು ಸುತ್ತು ಗುಂಡು ಹಾರಿಸಲಾಗಿತ್ತು, ಇದರಲ್ಲಿ ಒಂದು ಬುಲೆಟ್ ಜಿಮ್‌ನ ಗಾಜಿಗೆ ತಗುಲಿತ್ತು. ಈ ಪ್ರಕರಣದಲ್ಲಿ ಲಾಜಿಸ್ಟಿಕ್ ಬೆಂಬಲ ಮತ್ತು ಶಸ್ತ್ರಾಸ್ತ್ರ ಒದಗಿಸಿದ್ದ ಐವರನ್ನು ಈ ಹಿಂದೆಯೇ ಬಂಧಿಸಲಾಗಿದ್ದು, ಈ ಹೊಸ ಬಂಧನಗಳೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಆರೋಪಿಗಳನ್ನು ಪೊಲೀಸರು ಈವರೆಗೆ ವಶಕ್ಕೆ ಪಡೆದಂತಾಗಿದೆ.
- 16 Feb 2026 2:22 PM IST
ಅಸ್ಸಾಂ ಸಿಎಂ ವಿರುದ್ಧದ ದ್ವೇಷ ಭಾಷಣದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧದ ದ್ವೇಷ ಭಾಷಣದ ಆರೋಪಗಳಿಗೆ ಸಂಬಂಧಿಸಿದಂತೆ ಪೊಲೀಸ್ ಕೇಸ್ ದಾಖಲಿಸಲು ಮತ್ತು ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಅರ್ಜಿದಾರರು ಮೊದಲು ಗುವಾಹಟಿ ಹೈಕೋರ್ಟ್ ಅನ್ನು ಸಂಪರ್ಕಿಸಬೇಕೆಂದು ನಿರ್ದೇಶನ ನೀಡಿದೆ. ಅದರಲ್ಲೂ ವಿಶೇಷವಾಗಿ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಸಣ್ಣಪುಟ್ಟ ವಿವಾದಗಳಿಗೂ ಸುಪ್ರೀಂ ಕೋರ್ಟ್ ಅನ್ನೇ ಮೊದಲ ತಾಣವನ್ನಾಗಿ ಮಾಡಿಕೊಳ್ಳುತ್ತಿರುವ ಇತ್ತೀಚಿನ ಪ್ರವೃತ್ತಿಯ ಬಗ್ಗೆ ಪೀಠವು ವಿಷಾದ ವ್ಯಕ್ತಪಡಿಸಿದೆ. ಅಸ್ಸಾಂನಲ್ಲಿ ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇರುವುದು ಇಲ್ಲಿ ಗಮನಾರ್ಹ.
- 16 Feb 2026 1:46 PM IST
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಂಗಳೂರಿಗೆ ಸಚಿವ ರಾಜನಾಥ್ ಸಿಂಗ್ ಆಗಮನ
ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಉತ್ಪಾದನಾ ಘಟಕದ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ(ಫೆ.16) ಬೆಂಗಳೂರಿಗೆ ಆಗಮಿಸಿದರು.
ವಾಯು ಸೇನೆಯ ವಿಶೇಷ ವಿಮಾನದಲ್ಲಿ ಆಗಮಿಸಿದ ಅವರನ್ನು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
ನಾಳೆ ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಉತ್ಪಾದನಾ ಘಟಕ ಕೋಲಾರದಲ್ಲಿ ಆರಂಭವಾಗುತ್ತಿದ್ದು, ಟಾಟಾ ಸಂಸ್ಥೆಯಿಂದ ಹೆಲಿಕಾಪ್ಟರ್ ಉತ್ಪಾದನೆ ಘಟಕ ಕಾರ್ಯಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಕೇಂದ್ರ ಸರ್ಕಾರದ ಮೇಡ್ ಇನ್ ಇಂಡಿಯಾ ಯೋಜನೆಯಡಿ ಎಚ್-125 ಹೆಲಿಕಾಪ್ಟರ್‌ನ ಅಂತಿಮ ಜೋಡಣಾ ಘಟಕ ಸ್ಥಾಪಿಸಲಾಗುತ್ತಿದ್ದು, ಫ್ರಾನ್ಸ್, ಅಮೆರಿಕ ಮತ್ತು ಬ್ರೆಜಿಲ್ ಬಳಿಕ ಭಾರತದಲ್ಲಿ ಎಚ್-125 ಹೆಲಿಕಾಪ್ಟರ್ ಉತ್ಪಾದನಾ ಘಟಕ ಸ್ಥಾಪನೆಯಾಗುತ್ತಿದೆ. ಈ ಘಟಕದಿಂದ ಸಾವಿರಾರು ಮಂದಿಗೆ ಉದ್ಯೋಗ ದೊರೆಯವ ನಿರೀಕ್ಷೆ ಇದೆ.
- 16 Feb 2026 8:18 AM IST
ಬಾಂಗ್ಲಾದೇಶ ಚುನಾವಣೆ: ಇಬ್ಬರು ಹಿಂದೂಗಳು ಸೇರಿ ನಾಲ್ವರು ಅಲ್ಪಸಂಖ್ಯಾತ ಪ್ರತಿನಿಧಿಗಳು ಆಯ್ಕೆ
ಬಾಂಗ್ಲಾದೇಶದ ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಇಬ್ಬರು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ನಾಲ್ವರು ಅಭ್ಯರ್ಥಿಗಳು ಜಯಗಳಿಸಿ ಗಮನ ಸೆಳೆದಿದ್ದಾರೆ. ಮಂಗಳವಾರ (ಫೆಬ್ರವರಿ 17) ಸರ್ಕಾರ ರಚಿಸಲಿರುವ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಪರವಾಗಿ ಸ್ಪರ್ಧಿಸಿದ್ದ ಹಿಂದೂ ನಾಯಕರಾದ ಗೋಯೇಶ್ವರ್ ಚಂದ್ರ ರಾಯ್ ಮತ್ತು ನಿತಾಯಿ ರಾಯ್ ಚೌಧರಿ ಅವರು ಕ್ರಮವಾಗಿ ಢಾಕಾ ಮತ್ತು ಪಶ್ಚಿಮ ಮಗುರಾ ಕ್ಷೇತ್ರಗಳಲ್ಲಿ ಜಮಾತ್-ಎ-ಇಸ್ಲಾಮಿ ಅಭ್ಯರ್ಥಿಗಳನ್ನು ಸೋಲಿಸಿ ಜಯಭೇರಿ ಬಾರಿಸಿದ್ದಾರೆ. ಇವರ ಜೊತೆಗೆ ಬೌದ್ಧ ಧರ್ಮದ ಅನುಯಾಯಿಗಳಾದ ಸಚಿಂಗ್ ಪ್ರು ಮತ್ತು ದೀಪನ್ ದಿವಾನ್ ಕೂಡ ಆಗ್ನೇಯ ಗುಡ್ಡಗಾಡು ಜಿಲ್ಲೆಗಳಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಸುಮಾರು 17 ಕೋಟಿ ಜನಸಂಖ್ಯೆಯ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರದಲ್ಲಿ ಶೇ. 8 ರಷ್ಟಿರುವ ಹಿಂದೂ ಸಮುದಾಯಕ್ಕೆ ಈ ಬಾರಿಯ ಬಿಎನ್‌ಪಿ ವಿಜಯದಲ್ಲಿ ಪ್ರಾತಿನಿಧ್ಯ ದೊರೆತಿರುವುದು ಮಹತ್ವದ ಬೆಳವಣಿಗೆಯಾಗಿದೆ.
- 16 Feb 2026 8:16 AM IST
ಉಕ್ರೇನ್ ಯುದ್ಧದಲ್ಲಿ ಮಡಿದ ಯೋಧರ ಕುಟುಂಬಗಳಿಗೆ ವಿಶೇಷ ವಸತಿ ಸೌಲಭ್ಯ
ಉಕ್ರೇನ್‌ನಲ್ಲಿ ರಷ್ಯಾದ ಪರವಾಗಿ ಹೋರಾಡಿ ಮಡಿದ ಉತ್ತರ ಕೊರಿಯಾದ ಸೈನಿಕರ ಕುಟುಂಬಗಳಿಗಾಗಿ ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ನಿರ್ಮಿಸಲಾದ ನೂತನ 'ಸೇಪ್ಯೋಲ್ ಸ್ಟ್ರೀಟ್' ವಸತಿ ಜಿಲ್ಲೆಯನ್ನು ಅಧ್ಯಕ್ಷ ಕಿಮ್ ಜೊಂಗ್ ಉನ್ ಉದ್ಘಾಟಿಸಿದ್ದಾರೆ. ತಮ್ಮ ಪುತ್ರಿ ಕಿಮ್ ಜೂ ಏ ಅವರೊಂದಿಗೆ ಈ ಹೊಸ ಬಡಾವಣೆಗೆ ಭೇಟಿ ನೀಡಿದ ಕಿಮ್, ಹುತಾತ್ಮ ಯೋಧರ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯುವ ಯೋಧರ ಋಣ ತೀರಿಸುವುದಾಗಿ ಪ್ರತಿಜ್ಞೆ ಮಾಡಿದರು. ಇತ್ತೀಚಿನ ತಿಂಗಳುಗಳಲ್ಲಿ ಉಕ್ರೇನ್ ಯುದ್ಧಕ್ಕೆ ಸಾವಿರಾರು ಸೈನಿಕರು ಮತ್ತು ಕ್ಷಿಪಣಿ ಸೇರಿದಂತೆ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ರಷ್ಯಾಕ್ಕೆ ಪೂರೈಸುತ್ತಿರುವ ಉತ್ತರ ಕೊರಿಯಾ, ಯುದ್ಧದಲ್ಲಿ ಮಡಿದ ಯೋಧರ ಸ್ಮರಣಾರ್ಥ ಸ್ಮಾರಕ ಗೋಡೆ ಮತ್ತು ವಸ್ತುಸಂಗ್ರಹಾಲಯಗಳನ್ನು ನಿರ್ಮಿಸುವ ಮೂಲಕ ಮಿಲಿಟರಿ ಪ್ರಚಾರವನ್ನು (propaganda) ತೀವ್ರಗೊಳಿಸಿದೆ.
- 16 Feb 2026 8:14 AM IST
ಭಾರತವು ಸಾಮರಸ್ಯದ ಕೇಂದ್ರ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಆರ್‌ಎಸ್‌ಎಸ್‌ನ ಶತಾಬ್ದಿ ವರ್ಷದ ಅಂಗವಾಗಿ ಗೋರಖ್‌ಪುರದಲ್ಲಿ ಆಯೋಜಿಸಲಾಗಿದ್ದ ಸಾಮಾಜಿಕ ಸದ್ಭಾವ ಸಭೆಯಲ್ಲಿ ಮಾತನಾಡಿದ ಸರಸಂಘಚಾಲಕ ಮೋಹನ್ ಭಾಗವತ್ ಅವರು, ಭಾರತವು ಜಾಗತಿಕ ಮಟ್ಟದಲ್ಲಿ ಸದ್ಭಾವನೆ ಮತ್ತು ಸಾಮಾಜಿಕ ಸಾಮರಸ್ಯದ ಕೇಂದ್ರವಾಗಿದೆ ಎಂದು ಬಣ್ಣಿಸಿದರು. ಭಾರತದ ನಾಗರಿಕತೆಯು ಕೇವಲ ವ್ಯವಹಾರಿಕ ಸಂಬಂಧಗಳ ಮೇಲೆ ನಿಂತಿಲ್ಲ, ಬದಲಾಗಿ ಅದು ಆತ್ಮೀಯತೆ ಮತ್ತು ಬಾಂಧವ್ಯದ ಮೇಲೆ ಆಧಾರಿತವಾಗಿದೆ ಎಂದು ಪ್ರತಿಪಾದಿಸಿದ ಅವರು, ಉಡುಗೆ-ತೊಡುಗೆ ಮತ್ತು ಸಂಪ್ರದಾಯಗಳಲ್ಲಿ ವೈವಿಧ್ಯತೆ ಇದ್ದರೂ ಸಾಂಸ್ಕೃತಿಕ ಏಕತೆ ನಮ್ಮನ್ನು ಭಾರತ ಮಾತೆಯ ಮಕ್ಕಳಾಗಿ ಒಟ್ಟಾಗಿ ಇರಿಸಿದೆ ಎಂದು ತಿಳಿಸಿದರು. ಇದೇ ವೇಳೆ ಸಂಘವು ನೂರು ವರ್ಷ ಪೂರೈಸುತ್ತಿರುವುದು ಕೇವಲ ಸಂಭ್ರಮಕ್ಕೆ ಮಾತ್ರವಲ್ಲದೆ ಆತ್ಮಾವಲೋಕನಕ್ಕೂ ಸೂಕ್ತ ಸಮಯ ಎಂದ ಅವರು, ಜಾತಿ ಹಿತಾಸಕ್ತಿಗಳನ್ನು ಬದಿಗಿಟ್ಟು ವಿಶಾಲವಾದ ಹಿಂದೂ ಸಮಾಜ ಮತ್ತು ಸಾಮಾಜಿಕ ಒಗ್ಗಟ್ಟನ್ನು ಬಲಪಡಿಸಲು ಬ್ಲಾಕ್ ಮಟ್ಟದ ಸಭೆಗಳನ್ನು ನಡೆಸುವಂತೆ ಕರೆ ನೀಡಿದರು.
- 16 Feb 2026 8:11 AM IST
ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಲ್ಲು ತೂರಾಟ, 9 ಮಂದಿಗೆ ಗಾಯ
ಛತ್ರಪತಿ ಶಿವಾಜಿ ಮಹಾರಾಜ್ ಅವರನ್ನು ಟಿಪ್ಪು ಸುಲ್ತಾನನಿಗೆ ಹೋಲಿಸಿ ಕಾಂಗ್ರೆಸ್ ನಾಯಕ ಹರ್ಷವರ್ಧನ್ ಸಪ್ಕಾಲ್ ನೀಡಿದ್ದಾರೆನ್ನಲಾದ ಹೇಳಿಕೆಯನ್ನು ವಿರೋಧಿಸಿ ಭಾನುವಾರ (ಫೆಬ್ರವರಿ 15) ಪುಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವೇಳೆ ಉಭಯ ಪಕ್ಷಗಳ ನಡುವೆ ಭೀಕರ ಸಂಘರ್ಷ ನಡೆದಿದೆ. ಇಲ್ಲಿನ ಕಾಂಗ್ರೆಸ್ ಭವನದ ಸಮೀಪ ನಡೆದ ಪ್ರತಿಭಟನೆಯು ವಿಕೋಪಕ್ಕೆ ತಿರುಗಿ, ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು, ಇಬ್ಬರು ಬಿಜೆಪಿ ಕಾರ್ಯಕರ್ತರು, ಇಬ್ಬರು ಪೊಲೀಸರು ಹಾಗೂ ಇಬ್ಬರು ಪತ್ರಕರ್ತರು ಸೇರಿದಂತೆ ಒಟ್ಟು ಒಂಬತ್ತು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎಂದು ಜಂಟಿ ಪೊಲೀಸ್ ಕಮಿಷನರ್ ರಂಜನ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.


