LIVE Todays news Feb 24: ಅಮೆರಿಕದಲ್ಲಿ ಭೀಕರ ಹಿಮಪಾತ: 5,600ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು
x

Today's news Feb 24: ಅಮೆರಿಕದಲ್ಲಿ ಭೀಕರ ಹಿಮಪಾತ: 5,600ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.


Click the Play button to hear this message in audio format

ಇಂದು ಮಂಗಳವಾರ ಫೆಬ್ರುವರಿ 24, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.


Live Updates

  • ಅಂಡಮಾನ್ ಸಮುದ್ರಕ್ಕೆ ಬಿದ್ದ ಹೆಲಿಕಾಪ್ಟರ್: ಏಳು ಮಂದಿ ಪ್ರಾಣಾಪಾಯದಿಂದ ಪಾರು
    24 Feb 2026 1:56 PM IST

    ಅಂಡಮಾನ್ ಸಮುದ್ರಕ್ಕೆ ಬಿದ್ದ ಹೆಲಿಕಾಪ್ಟರ್: ಏಳು ಮಂದಿ ಪ್ರಾಣಾಪಾಯದಿಂದ ಪಾರು

    ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ಮಾಯಾಬಂದರ್ ಸಮೀಪ ಮಂಗಳವಾರ ಬೆಳಿಗ್ಗೆ ಪವನ್ ಹನ್ಸ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಸಮುದ್ರಕ್ಕೆ ಬಿದ್ದಿದೆ. ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಪೈಲಟ್‌ಗಳು ಹಾಗೂ ಮಗು ಸೇರಿದಂತೆ ಐವರು ಪ್ರಯಾಣಿಕರು ಪವಾಡ ಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶ್ರೀ ವಿಜಯ ಪುರಂನಿಂದ ಬೆಳಿಗ್ಗೆ 8:45ಕ್ಕೆ ಹೊರಟಿದ್ದ ಹೆಲಿಕಾಪ್ಟರ್, ಮಾಯಾಬಂದರ್‌ನ ಹೆಲಿಪ್ಯಾಡ್‌ನಲ್ಲಿ ಇಳಿಯಲು ಕೆಲವೇ ಮೀಟರ್‌ಗಳ ಅಂತರವಿರುವಾಗ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ಪರಿಸ್ಥಿತಿಯನ್ನು ಅರಿತ ಪೈಲಟ್‌ಗಳು ಕೂಡಲೇ ಸಮಯಪ್ರಜ್ಞೆ ಮೆರೆದು ಹೆಲಿಕಾಪ್ಟರ್ ಅನ್ನು ಸಮುದ್ರದ ಮೇಲೆ 'ಡಿಚಿಂಗ್' (ತುರ್ತು ಭೂಸ್ಪರ್ಶ) ಮಾಡಿದ್ದಾರೆ. ಬೆಳಿಗ್ಗೆ ಸುಮಾರು 9:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ನಾಗರಿಕ ವಿಮಾನಯಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

  • 24 Feb 2026 12:57 PM IST

    ಪಾಲಿಕೆ ನೌಕರರಿಗೆ ಸಂಬಳ ನೀಡಿ, ಇಲ್ಲವೇ ಅಧಿಕಾರ ಬಿಡಿ: ಡಿಕೆಶಿ ವಿರುದ್ದ ಆರ್‌.ಅಶೋಕ್‌ ಕಿಡಿ

    ರಾಜ್ಯ ಸರ್ಕಾರ ಮಾತೆತ್ತಿದರೆ ಟನಲ್ ರಸ್ತೆ, ಸ್ಕೈ ಡೆಕ್‌, ಬ್ರ್ಯಾಂಡ್ ಬೆಂಗಳೂರು ಎಂದು ದೊಡ್ಡ ದೊಡ್ಡ ಮಾತುಗಳಾಡಿ ಬೊಗಳೆ ಬಿಡುವುದಲ್ಲ ಸ್ವಾಮಿ, ಮೊದಲು ಪಾಲಿಕೆ ನೌಕರರಿಗೆ ಸರಿಯಾಗಿ ಸಂಬಳ ಕೊಡಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

    ಮಂಗಳವಾರ (ಫೆ.24) ತಮ್ಮ ಸಾಮಾಜಿಕ ಜಾಲತಾಣ (ಎಕ್ಸ್‌) ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ದು ಹರಿಹಾಯ್ದಿರುವ ಅವರು, "ಜಿಬಿಎ ಪಾಲಿಕೆ ವ್ಯಾಪ್ತಿಯ ಕಾರ್ಪೊರೇಷನ್ ಶಾಲಾ-ಕಾಲೇಜುಗಳ ಅಥಿತಿ ಉಪನ್ಯಾಸಕರಿಗೆ 3 ತಿಂಗಳಿಂದ ಗೌರವಧನ ಕೊಟ್ಟಿಲ್ಲ. ಕಳೆದ ವರ್ಷ ಪಾಲಿಕೆಯ ಸ್ಮಶಾನ ಸಿಬ್ಬಂದಿಗೆ 8 ತಿಂಗಳಿಂದ ಸಂಬಳ ಕೊಟ್ಟಿರಲಿಲ್ಲ. ಪಾಲಿಕೆಯ ಕಿರಿಯ ಆರೋಗ್ಯಾಧಿಕರಿಗಳಿಗೆ (JHO) 8 ತಿಂಗಳಿಂದ ಸಂಬಳ ಕೊಟ್ಟಿರಲಿಲ್ಲ. ನಿಮ್ಮ ಘನಂದಾರಿ ಆಡಳಿತದಲ್ಲಿ ದಿನಬೆಳಗಾದರೆ ಮಾಧ್ಯಮಗಳಲ್ಲಿ ಬೆಂಗಳೂರಿನ ಎಡವಟ್ಟುಗಳ ಬಗ್ಗೆ ಒಂದಲ್ಲ ಒಂದು ನಕಾರಾತ್ಮಕ ಸುದ್ದಿ ಬಂದು ಉದ್ಯಾನನಗರಿ ಹೆಸರು ಹಾಳಾಗುತ್ತಿದೆ. ಒಳ್ಳೆಯ ಆಡಳಿತ ಕೊಡಲು ನಿಮ್ಮ ಕೈಲಾದರೆ ಮುಂದುವರೆಯಿರಿ, ಇಲ್ಲವಾದರೆ ಯಾರಾದರೂ ಸಮರ್ಥರಿಗೆ ದಾರಿ ಮಾಡಿಕೊಡಿ" ಎಂದು ಹೇಳಿದ್ದಾರೆ. 

  • 24 Feb 2026 12:35 PM IST

    ಸಂಗೀತ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಕೆ. ರಾಮಕೃಷ್ಣಯ್ಯ ನೇಮಕ

    ನಾಡಿನ ಖ್ಯಾತ ರಂಗಕರ್ಮಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಪರ್ಫಾರ್ಮಿಂಗ್ ಆರ್ಟ್ಸ್ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಕೆ. ರಾಮಕೃಷ್ಣಯ್ಯ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೋಮವಾರ (ಫೆ.23) ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನವರಾದ ಇವರು, ಬೆಂಗಳೂರು ನೀನಾಸಂ ಪದವಿದರರು, ಪ್ರದರ್ಶನ ಕಲಾ ವಿಭಾಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ.ಡ್ರಾಮ ಪದವಿ, ಪಿಹೆಚ್.ಡಿ ಪದವಿಯನ್ನು ಪಡೆದು. ಪ್ರಧ್ಯಾಪಕರಾಗಿ ವಿಶ್ವವಿದ್ಯಾಲಯದಲ್ಲಿ 25 ವರ್ಷಗಳ ಸುದೀರ್ಘ ಬೋಧನಾ ಅನುಭವ ಹೊಂದಿದ್ದಾರೆ. ಇವರ ಮಾರ್ಗದರ್ಶನದಲ್ಲಿ 16 ಸಂಶೋಧಕರು ಪಿಎಚ್‌ಡಿ ಪದವಿ ಪಡೆದಿದ್ದು, ರಂಗಭೂಮಿ ಕುರಿತಾದ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.  

     ಪ್ರೊ. ಕೆ. ರಾಮಕೃಷ್ಣಯ್ಯ

     ಪ್ರೊ. ಕೆ. ರಾಮಕೃಷ್ಣಯ್ಯ

     

  • ಛಲವಾದಿ ನಾರಾಯಣಸ್ವಾಮಿ ಬಿಜೆಪಿ ತೆಗಳುಭಟರ ಅಧ್ಯಕ್ಷ
    24 Feb 2026 12:29 PM IST

    ಛಲವಾದಿ ನಾರಾಯಣಸ್ವಾಮಿ ಬಿಜೆಪಿ "ತೆಗಳುಭಟ"ರ ಅಧ್ಯಕ್ಷ

    ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನಡುವಿನ ವಾಕ್ಸಮರ ಮತ್ತಷ್ಟು ತಾರಕಕ್ಕೇರುತ್ತಿದೆ. 

    ಸಚಿವ ಖರ್ಗೆ ಮಂಗಳವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್‌) ನಲ್ಲಿ ಪ್ರತಿಕ್ರಿಯಿಸಿ," ಸೂರ್ಯ, ಚಂದ್ರ ಮತ್ತು ಸತ್ಯ ಈ ಮೂರು ವಿಷಯಗಳನ್ನು ಯಾರೂ ಸಹ ದೀರ್ಘಕಾಲ ಮುಚ್ಚಿಡಲು ಸಾಧ್ಯವಿಲ್ಲ.  ಬುದ್ಧನ ಈ ಮಾತು ಛಲವಾದಿ ನಾರಾಯಣಸ್ವಾಮಿಯವರ ವಿಷಯದಲ್ಲಿ ಹೆಚ್ಚು ಪ್ರಸ್ತುತ ಎನಿಸಿಕೊಳ್ಳುತ್ತದೆ. ಅವರು ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ದಿನವೇ ಅವರ ರಾಜಕೀಯ ಜೀವನ ಅಂತ್ಯವಾಗುತ್ತದೆ, ಇದೇ ಆ ಸತ್ಯ! ಹಿಂದೆ ರಾಜಮಹಾರಾಜರು ಹೋಗಳುಭಟರನ್ನು ನೇಮಿಸಿಕೊಂಡಿರುತ್ತಿದ್ದರಂತೆ, ಈಗ ಬಿಜೆಪಿ "ತೆಗಳುಭಟ"ರನ್ನು ನೇಮಿಸಿಕೊಂಡಿದೆ, ಛಲವಾದಿ ನಾರಾಯಣಸ್ವಾಮಿ ಆ ತೆಗಳುಭಟ್ಟರ ಪಡೆಯ ಅಧ್ಯಕ್ಷರಾಗಿದ್ದಾರೆ" ಎಂದಿದ್ದಾರೆ.

    ನಾರಾಯಣಸ್ವಾಮಿಯವರು ದಲಿತತ್ವವನ್ನು ಸಿಂಪಥಿ ಕಾರ್ಡ್ ಆಗಿ ಬಳಸಿಕೊಂಡರೆ, ನಾವು ದಲಿತತ್ವವನ್ನು ಸ್ವಾಭಿಮಾನವಾಗಿ, ಹೋರಾಟವಾಗಿ ಕಾಣುತ್ತೇವೆ, ಬಾಬಾ ಸಾಹೇಬರು ಇದನ್ನೇ ನಮಗೆ ಹೇಳಿಕೊಟ್ಟಿದ್ದು. ನಾನು ಶೋಷಣೆಯನ್ನು ಅನುಭವಿಸಿದ್ದೇನೆ ಎನ್ನುವ ನಾರಾಯಣಸ್ವಾಮಿಯವರು ಇಂದು ಆ ಶೋಷಣೆಗೆ ಕಾರಣವಾದ ಆರ್‌ಎಸ್‌ಎಸ್‌ ಸಿದ್ದಾಂತದವರ ಜೊತೆಯೇ ನಿಂತಿರುವುದು ಅವರ ಡೋಂಗಿತನವನ್ನು ಸಾರುತ್ತದೆ ಎಂದು ತಿಳಿಸಿದ್ದಾರೆ. 

    ಹಿಂದೆ ಕಾಂಗ್ರೆಸ್ ನಲ್ಲಿ "ಛಲವಾದಿ ನಾರಾಯಣಸ್ವಾಮಿ"ಯಾಗಿದ್ದವರು, ಬಿಜೆಪಿಗೆ ಹೋಗಿ "ಅವಕಾಶವಾದಿ ನಾರಾಯಣಸ್ವಾಮಿ"ಯಾಗಿ ನಮ್ಮ ನಿಂದನೆಯನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಅವರ ಅಸ್ತಿತ್ವವು ನನ್ನ ಅಸ್ತಿತ್ವದ ಮೇಲೆ ಅವಲಂಬನೆಯಾಗಿದೆ, ನಾನು ಮುಗಿದುಹೋದರೆ ನಾರಾಯಣಸ್ವಾಮಿಯವರೂ ಮುಗಿದು ಹೋಗುತ್ತಾರೆ ಎಂದು ಹೇಳಿದ್ದಾರೆ.

  • 24 Feb 2026 8:55 AM IST

    ಸುಪ್ರೀಂ ಕೋರ್ಟ್ ತೀರ್ಪಿನ ನಡುವೆಯೇ ಸುಂಕ ಹೆಚ್ಚಳದ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

    ಅಮೆರಿಕದ ಸುಪ್ರೀಂ ಕೋರ್ಟ್ ಆಮದು ತೆರಿಗೆಗಳ (Tariffs) ಮೇಲೆ ಟ್ರಂಪ್ ವಿಧಿಸಿದ್ದ ನಿರ್ಬಂಧಗಳನ್ನು ರದ್ದುಗೊಳಿಸಿದ ಹೊರತಾಗಿಯೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ರಾಷ್ಟ್ರಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಕೋರ್ಟ್ ತೀರ್ಪನ್ನು "ಹಾಸ್ಯಾಸ್ಪದ" ಎಂದು ಕರೆದಿರುವ ಅವರು, ಜಾಗತಿಕ ಸುಂಕವನ್ನು ಶೇಕಡಾ 10 ರಿಂದ 15 ಕ್ಕೆ ಏರಿಸಲು ಬಯಸುವುದಾಗಿ ಘೋಷಿಸಿದ್ದಾರೆ.

    ಸೋಮವಾರ ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, "ವರ್ಷಗಳಿಂದ ಅಮೆರಿಕವನ್ನು ಲೂಟಿ ಮಾಡುತ್ತಿರುವ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ನೆಪದಲ್ಲಿ ಆಟವಾಡಲು ಯತ್ನಿಸುವ ದೇಶಗಳಿಗೆ ಈ ಹಿಂದೆ ಒಪ್ಪಿಕೊಂಡಿದ್ದಕ್ಕಿಂತಲೂ ಹೆಚ್ಚಿನ ಸುಂಕವನ್ನು ವಿಧಿಸಲಾಗುವುದು," ಎಂದು ಗುಡುಗಿದ್ದಾರೆ. ತುರ್ತು ಅಧಿಕಾರ ಬಳಸಿ ಟ್ರಂಪ್ ವಿಧಿಸಿದ್ದ ತೆರಿಗೆಗಳನ್ನು ಕೋರ್ಟ್ ಶುಕ್ರವಾರ ರದ್ದುಗೊಳಿಸಿತ್ತು. ಆದರೂ, ಕಾಂಗ್ರೆಸ್ ಅನುಮತಿ ಇಲ್ಲದೆಯೇ ಮಂಗಳವಾರದಿಂದ ಜಾರಿಗೆ ಬರುವಂತೆ ಶೇಕಡಾ 10 ರಷ್ಟು ಆಮದು ತೆರಿಗೆ ವಿಧಿಸಲು ಟ್ರಂಪ್ ಕಾರ್ಯಕಾರಿ ಆದೇಶ ಸಿದ್ಧಪಡಿಸಿದ್ದಾರೆ.

  • 24 Feb 2026 8:52 AM IST

    ಅಮೆರಿಕದಲ್ಲಿ ಭೀಕರ ಹಿಮಪಾತ: 5,600ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

    ಅಮೆರಿಕದ ಮೇರಿಲ್ಯಾಂಡ್‌ನಿಂದ ಮೇನ್‌ವರೆಗಿನ ಈಶಾನ್ಯ ಭಾಗಗಳಲ್ಲಿ ಸಂಭವಿಸಿದ ಭೀಕರ ಹಿಮಪಾತವು ಜನಜೀವನವನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಿದೆ. ಕಳೆದ ಒಂದು ದಶಕದಲ್ಲೇ ಅತ್ಯಂತ ಶಕ್ತಿಶಾಲಿ ಎಂದು ಹೇಳಲಾದ ಈ ಚಂಡಮಾರುತವು ಹಲವು ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ಸುಮಾರು ಎರಡು ಅಡಿಗಳಿಗೂ (60 ಸೆಂಟಿಮೀಟರ್) ಹೆಚ್ಚು ಹಿಮವನ್ನು ಸುರಿಸುವ ಮೂಲಕ ಹಳೆಯ ದಾಖಲೆಗಳನ್ನು ಅಳಿಸಿಹಾಕಿದೆ. ಭಾರಿ ಗಾಳಿ ಮತ್ತು ಹಿಮಪಾತದ ಮುನ್ನೆಚ್ಚರಿಕೆಯಿಂದಾಗಿ ಲಕ್ಷಾಂತರ ಜನರು ಮನೆಗಳಲ್ಲೇ ಉಳಿಯುವಂತಾಗಿದ್ದು, ಸಾರಿಗೆ ಸಂಪರ್ಕ, ಶಾಲೆಗಳು ಮತ್ತು ವ್ಯವಹಾರಗಳು ಸಂಪೂರ್ಣ ಬಂದ್ ಆಗಿವೆ.

    ನ್ಯೂಯಾರ್ಕ್ ನಗರವು ಆರು ವರ್ಷಗಳ ನಂತರ ಮೊದಲ ಬಾರಿಗೆ ಅಧಿಕೃತ "ಸ್ನೋ ಡೇ" (ಹಿಮದ ರಜೆ) ಘೋಷಿಸಿದ್ದರೆ, ವಿಶ್ವಸಂಸ್ಥೆಯು ತನ್ನ ಭದ್ರತಾ ಮಂಡಳಿಯ ಸಭೆಯನ್ನೇ ಮುಂದೂಡಬೇಕಾಯಿತು. ಹಿಮಪಾತವು ಉತ್ತರಕ್ಕೆ ಸರಿಯುತ್ತಿದ್ದಂತೆ ಕೆಲವು ಕಡೆ ಪರಿಸ್ಥಿತಿ ಸುಧಾರಿಸುತ್ತಿದ್ದರೂ, ಪ್ರಾದೇಶಿಕವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಇದೇ ವಾರದ ಅಂತ್ಯಕ್ಕೆ ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

  • 24 Feb 2026 8:05 AM IST

    ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಸ್ಥಾನದಿಂದ ಕೆಳಗಿಳಿದ ಮೊಹಮ್ಮದ್ ಯೂನಸ್

    ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ 18 ತಿಂಗಳುಗಳ ಕಾಲ ಸೇವೆ ಸಲ್ಲಿಸಿದ ನಂತರ, ಇದೀಗ ಮೀರ್‌ಪುರದಲ್ಲಿರುವ ತಮ್ಮ 'ಯೂನಸ್ ಸೆಂಟರ್' ಲಾಭರಹಿತ ಸಂಸ್ಥೆಗೆ ಮರಳಿದ್ದಾರೆ. 85 ವರ್ಷದ ಯೂನಸ್ ಅವರು ಭಾನುವಾರ ಬೆಳಿಗ್ಗೆ ಕಚೇರಿಗೆ ಆಗಮಿಸಿದಾಗ ಸಹೋದ್ಯೋಗಿಗಳು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ಕುರಿತು ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಸರ್ಕಾರದ ಜವಾಬ್ದಾರಿಯ ಕಾರಣದಿಂದ ಉಂಟಾಗಿದ್ದ 18 ತಿಂಗಳ ವಿರಾಮದ ನಂತರ ಅವರು ತಮ್ಮ ಹಳೆಯ ಕರ್ತವ್ಯಕ್ಕೆ ಮರಳಿದ್ದಾರೆ ಎಂದು ತಿಳಿಸಲಾಗಿದೆ. ಕಚೇರಿಗೆ ಮರಳಿದ ಮೊದಲ ದಿನವೇ ಅವರು ಗ್ರಾಮೀಣ ಸಂಸ್ಥೆಗಳು ಮತ್ತು ಯೂನುಸ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಲಹೆಗಾರರೊಂದಿಗೆ ಸಭೆ ನಡೆಸಿ, ಸ್ಥಗಿತಗೊಂಡಿದ್ದ ಯೋಜನೆಗಳ ಪರಾಮರ್ಶೆ ನಡೆಸಿದರು ಮತ್ತು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿದರು.

Read More
Next Story