Todays news Feb 18: ಲೀಲಾವತಿ ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್‌ ಖಾನ್‌
x

Today's news Feb 18: ಲೀಲಾವತಿ ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್‌ ಖಾನ್‌

ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.


Click the Play button to hear this message in audio format

ಇಂದು ಬುಧವಾರ ಫೆಬ್ರುವರಿ 18, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.

Live Updates

  • 18 Feb 2026 6:34 PM IST

    ಮಾಧ್ಯಮಗಳಿಗೆ ನಿರ್ಬಂಧ ಹೇರುವ ಆದೇಶ ಪ್ರಜಾಪ್ರಭುತ್ವ ವಿರೋಧಿ ನಡೆ: ಬಿ.ವೈ. ವಿಜಯೇಂದ್ರ

    ರಾಜ್ಯ ಕಾಂಗ್ರೆಸ್ ಸರ್ಕಾರವು ವಿಧಾನಸೌಧದ ಒಳಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು, ಸಿಎಂ ಸಿದ್ದರಾಮಯ್ಯ ಕೂಡಲೇ ಆದೇಶವನ್ನು ವಾಪಸ್‌ ಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.

    ಬುಧವಾರ(ಫೆ.18) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಏಕಿಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆಂದು ಅರ್ಥವಾಗುತ್ತಿಲ್ಲ. ಕಳೆದ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲಿ ದ್ವೇಷ ಭಾಷಣ ಸಂಬಂಧ ಕಾಯ್ದೆ ತಂದಿದ್ದರು. ಈ ಸರ್ಕಾರದ ಒಂದೊಂದು ನಿರ್ಣಯವೂ ಪ್ರಜಾಪ್ರಭುತ್ವವನ್ನು ಅಣಕಿಸುವ ರೀತಿಯಲ್ಲಿದೆ. ಇದು ಖಂಡಿತ ಸರಿಯಲ್ಲ ಎಂದರು. 

    ಈ ಹಿಂದೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿದರೂ ಪುರಾವೆಗಳಿಲ್ಲವೆಂದು ತಿಳಿಸಿದ್ದರು. ದೇಶದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ.  ಈಗ ಸಚಿವರ ಕಚೇರಿಯಲ್ಲಿ ಕಳ್ಳತನದ ನೆಪವೊಡ್ಡಿ ಈ ರೀತಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು, ತಕ್ಷಣ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.


  • 18 Feb 2026 1:58 PM IST

    ಆರ್‌ಎಸ್‌ಎಸ್‌ ದೇಣಿಗೆ ಮೂಲ ಪ್ರಶ್ನಿಸಿದರೆ ಬಿಜೆಪಿ ಸಂಘಪ್ಪಗಳಿಂದ ಪ್ರತಿಕ್ರಿಯೆ ಏಕೆ: ಸಚಿವ ಪ್ರಿಯಾಂಕ್‌ ಪ್ರಶ್ನೆ

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದಾಯ ಮೂಲದ ಬಗ್ಗೆ ಪ್ರಶ್ನೆ ಎತ್ತಿದರೆ ಬಿಜೆಪಿಯ ಸಂಘಪ್ಪಗಳು ಆರ್‌ಎಸ್‌ಎಸ್‌ ಪರವಾಗಿ ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಆರ್‌ಎಸ್‌ಎಸ್‌ ಸಮರ್ಥಿಸುವುದು ಅನಿವಾರ್ಯವಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

    ಬಿಜೆಪಿ ನಾಯಕರ ಟೀಕೆಗೆ ಬುಧವಾರ(ಫೆ.18) ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ನಾಯಕರು ತಾವು ಮಾಡಿದ ಟೀಕೆ, ತಾವು ನೀಡಿದ ಹೇಳಿಕೆಗಳೆಲ್ಲದರ ರಿಪೋರ್ಟ್ ಕಾರ್ಡನ್ನು ನಾಗಪುರಕ್ಕೆ ಕಳಿಸಿಕೊಡಬೇಕು, ಯಾರು ಹೆಚ್ಚು ತೀವ್ರವಾಗಿ ನನ್ನನ್ನು ನಿಂದಿಸಿರುತ್ತಾರೋ ಅವರಿಗೆ ಪ್ರಮೋಷನ್ ದೊರಕಲಿದೆ! ಈ ಮೂಲಕ “ಆರ್‌ಎಸ್‌ಎಸ್‌ ಹಾಗು ಬಿಜೆಪಿಗೆ ಸಂಬಂಧವಿಲ್ಲ“ ಎಂಬ ಮೋಹನ್ ಭಾಗವತರ ಹೇಳಿಕೆ ಶತಮಾನದ ಸುಳ್ಳು ಎಂಬುದನ್ನು ಬಿಜೆಪಿಯವರೇ ನಿರೂಪಿಸುತ್ತಿದ್ದಾರೆ. ಆರ್‌ಎಸ್‌ಎಸ್‌ ಚಿವುಟಿದರೆ, ಬಿಜೆಪಿ ಅಳುವುದೇಕೆ ಎಂದು ಪ್ರಶ್ನಿಸಿದ್ದಾರೆ.

  • 18 Feb 2026 1:40 PM IST

    ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಭ್ರಷ್ಟ ಕಾಂಗ್ರೆಸ್‌ ಸರ್ಕಾರಕ್ಕೆ ಭಯವೇ: ಜೆಡಿಎಸ್‌ ಟೀಕೆ

    ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ಸರ್ಕಾರ ನಿರ್ಬಂಧ ಹೇರಿರುವುದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಹೇಡಿತನಕ್ಕೆ ಸಾಕ್ಷಿ, ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಭ್ರಷ್ಟ ಕಾಂಗ್ರೆಸ್‌ ಸರ್ಕಾರಕ್ಕೆ ಇಷ್ಟೊಂದು ನಡುಕವೇಕೆ ಎಂದು ಜೆಡಿಎಸ್‌ ಪ್ರಶ್ನಿಸಿದೆ.

    ಬುಧವಾರ (ಫೆ.18) ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್‌, ಸಚಿವರು, ಶಾಸಕರ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ಭಯವೇಕೆ? ಮಾಧ್ಯಮಗಳ ಧ್ವನಿ ಅಡಗಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆಯಲ್ಲವೇ ಸಿದ್ದರಾಮಯ್ಯ ಅವರೇ? ಸಂವಿಧಾನ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಸಮಾಜವಾದಿ ಮುಖವಾಡ ತೊಟ್ಟ ಮಜವಾದಿಗೆ ಇಂದು ನಡುಕ ಶುರುವಾಗಿದೆ. ಸರ್ಕಾರದ ಹಗರಣಗಳು, ಕಮಿಷನ್‌, ವರ್ಗಾವಣೆ ದಂಧೆ, ಅಕ್ರಮಗಳು ಬಯಲಾಗುತ್ತವೆ ಎಂಬ ಆತಂಕದಿಂದ ಮಾಧ್ಯಮಗಳ ಸ್ವಾತಂತ್ರ್ಯ ಕಸಿಯಲು ಮುಂದಾಗಿದೆ ಎಂದು ಹೇಳಿದೆ.

    ಇದು ಪ್ರಜಾಪ್ರಭುತ್ವದ ಆಶಯದ ಮೇಲೆ ಪ್ರಹಾರವಾಗಿದೆ. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಮುಖ್ಯಮಂತ್ರಿಗಳೇ, ಸತ್ಯವನ್ನು ಮುಚ್ಚಿಡಲು ಗೋಡೆಗಳನ್ನು ಕಟ್ಟುವುದು ಬಿಟ್ಟು, ಪಾರದರ್ಶಕ ಆಡಳಿತ ನೀಡಿ ಎಂದು ತನ್ನ ಸಂದೇಶದಲ್ಲಿ ತಿಳಿಸಿದೆ.

  • 18 Feb 2026 1:31 PM IST

    ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಭತ್ಯೆ ನೀಡಲು ಆಗ್ರಹ

    ರೈತರ ಮಕ್ಕಳನ್ನನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರ ಕಾನೂನಾತ್ಮಕವಾಗಿ ಭತ್ಯೆ ನೀಡಬೇಕು ಎಂದು ಕುಣಿಗಲ್‌ ಶಾಸಕ ಡಾ.ರಂಗನಾಥ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ರೈತರ ಮನೆಗೆ ಯಾರು ಹೆಣ್ಣನ್ನು ಕೊಡುತ್ತಿಲ್ಲ. ಆದ್ದರಿಂದ ಸೊಸೆ ಆಗುವವರಿಗೆ ಭತ್ಯೆ ಕೊಡಬೇಕು ಎಂದರು. ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂದು ನಾವೆಲ್ಲರೂ ನಂಬಿದ್ದೇವೆ. ಅದೇ ವಿಶ್ವಾಸದಲ್ಲಿ ನಾವಿದ್ದೇವೆ. ಸೂಕ್ತ ಸಂದರ್ಭದಲ್ಲಿ ಅವರೇ ರಾಜ್ಯದ ಜನತೆಗೆ ಉತ್ತರ ಕೊಡುತ್ತಾರೆ. ಅದಕ್ಕಾಗಿ ನಾವು ಭರವಸೆಯಿಂದ ಕಾಯುತ್ತಿದ್ದೇವೆ ಎಂದರು.

  • 18 Feb 2026 7:35 AM IST

    ಲೀಲಾವತಿ ಆಸ್ಪತ್ರೆಗೆ ದೌಡಾಯಿಸಿದ ಸಲ್ಮಾನ್‌ ಖಾನ್‌

    ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಅವರು ಅನಾರೋಗ್ಯದ ಕಾರಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ಭೇಟಿ ಮಾಡಲು ನಟ ಸಲ್ಮಾನ್ ಖಾನ್ ಬಿಗಿ ಭದ್ರತೆಯೊಂದಿಗೆ ಆಸ್ಪತ್ರೆಗೆ ಆಗಮಿಸಿದರು. ಹಲವಾರು ಬೆಂಗಾವಲು ವಾಹನಗಳು ಮತ್ತು ಪೊಲೀಸ್ ವ್ಯಾನುಗಳ ರಕ್ಷಣೆಯೊಂದಿಗೆ ಆಸ್ಪತ್ರೆಗೆ ತಲುಪಿದ ಸಲ್ಮಾನ್, ಹೊರಗಡೆ ನೆರೆದಿದ್ದ ಛಾಯಾಗ್ರಾಹಕರೊಂದಿಗೆ ಸಂವಹನ ನಡೆಸಲು ನಿಲ್ಲದೆ, ತಮ್ಮ ವಾಹನದಲ್ಲೇ ನೇರವಾಗಿ ಆಸ್ಪತ್ರೆಯ ಒಳಗಡೆ ತೆರಳಿದರು.

Read More
Next Story