
Today's news Feb 17: ಇಂದು 2026ರ ಮೊದಲ ಸೂರ್ಯ ಗ್ರಹಣ; ಭಾರತದಲ್ಲಿ ಗೋಚರಿಸುತ್ತದೆಯೇ?
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಮಂಗಳವಾರ ಫೆಬ್ರುವರಿ 17, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 17 Feb 2026 4:53 PM IST
ಬಾಂಗ್ಲಾದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ
ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಪ್ರಬಲ ಗೆಲುವಿನತ್ತ ಮುನ್ನಡೆಸಿದ್ದ ತಾರಿಕ್ ರೆಹಮಾನ್ ಮಂಗಳವಾರ(ಫೆ.17) ಬಾಂಗ್ಲಾದೇಶದ ಹೊಸ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಂಗಾಭಬನ್ ಬದಲಿಗೆ ಜತಿಯಾ ಸಂಸಾದ್‌ನ ದಕ್ಷಿಣ ಪ್ಲಾಜಾದಲ್ಲಿ 60 ವರ್ಷದ ರೆಹಮಾನ್ ಅವರಿಗೆ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಪ್ರಮಾಣವಚನ ಬೋಧಿಸಿದರು, ಇದು ದೀರ್ಘಕಾಲದ ಸಂಪ್ರದಾಯದಿಂದ ಹೊರಹೋಗುವಂತಿತ್ತು.
ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಶಾಸಕರು ರೆಹಮಾನ್ ಅವರನ್ನು ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದರು.
13 ನೇ ಸಂಸತ್ ಚುನಾವಣೆಯಲ್ಲಿ ರೆಹಮಾನ್ ಅವರ ಬಿಎನ್‌ಪಿ 297 ಸ್ಥಾನಗಳಲ್ಲಿ 209 ಸ್ಥಾನಗಳನ್ನು ಗೆದ್ದಿದ್ದರೆ, ಬಲಪಂಥೀಯ ಜಮಾತ್-ಇ-ಇಸ್ಲಾಮಿ 68 ಸ್ಥಾನಗಳನ್ನು ಗಳಿಸಿದೆ. ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಗಿತ್ತು.
- 17 Feb 2026 4:43 PM IST
ಶಾಸಕರ ವಿದೇಶಿ ಪ್ರವಾಸದ ಬಗ್ಗೆ ರಾಜ್ಯ ನಾಯಕರೇ ತೀರ್ಮಾನ ಮಾಡಲಿ: ಮಲ್ಲಿಕಾರ್ಜುನ ಖರ್ಗೆ
ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಯಲ್ಲಿರುವ ಶಾಸಕರ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಶಾಸಕರ ವಿದೇಶ ಪ್ರವಾಸ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಇವರೆಲ್ಲರ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಅವಕಾಶವಿದೆ. ವಿದೇಶ ಪ್ರವಾದ ಬಗ್ಗೆ ನಾನು ಮಾತನಾಡುವುದು ಸೂಕ್ತವಲ್ಲ. ಸ್ಥಳೀಯ ನಾಯಕರು ಈ ವಿಷಯದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ" ಎಂದರು.
- 17 Feb 2026 4:38 PM IST
ಕುಟುಂಬ ಸಮೇತ ವಿದೇಶಿ ಪ್ರವಾಸ, ವಿಶೇಷ ಅರ್ಥ ಬೇಡ: ಶಾಸಕ ಎಚ್.ಡಿ. ತಮ್ಮಯ್ಯ
ನಾನು ಒಬ್ಬ ರೈತರ ಮಗ, ಕೃಷಿಕ. ಮೊದಲಿನಿಂದಲೂ ವಿದೇಶ ಪ್ರವಾಸಕ್ಕೆ ಹೋಗುತ್ತಿರುತ್ತೇನೆ. ಬೇರೆ ಬೇರೆ ದೇಶದಲ್ಲಿ ಕೃಷಿ ಹೇಗಿದೆ ಎಂದು ನೋಡಬೇಕು ಎಂಬ ಉದ್ದೇಶದಿಂದ ಪ್ರಯಾಣ ಮಾಡುತ್ತೇನೆ ಇದಕ್ಕೆ ವಿಶೇಷ ಅರ್ಥವೇನಿಲ್ಲ ಎಂದು ಕಾಂಗ್ರೆಸ್ ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.
ವಿದೇಶ ಪ್ರವಾಸ ಮಾಡುತ್ತಿರುವ ಶಾಸಕರು ಸಿಎಂ ಸಿದ್ದರಾಮಯ್ಯನ ಆಪ್ತರು ಎಂಬುದಿಲ್ಲ. ನಾವು ಕುಟುಂಬ ಸಮೇತರಾಗಿ ಹೋಗುತ್ತಿದ್ದೇವೆ. ರಾಜ್ಯದಲ್ಲಿ ನಾಯಕತ್ವ ಜಟಾಪಟಿ ಚರ್ಚೆ ಇರಬಹುದು. ಆದರೆ ನಾನು ನನ್ನ ಖಾತೆಯಿಂದ ಟೂರ್ ಅಂಡ್ ಟ್ರಾವೆಲ್‌ಗೆ ಹಣ ವರ್ಗಾವಣೆ ಮಾಡಿದ್ದೇನೆ. ಹಾಗಾಗಿ ಇದು ನನ್ನ ಸ್ವಂತ ಖರ್ಚಿನಲ್ಲಿ ಹೋಗುತ್ತಿರುವ ವಿದೇಶಿ ಪ್ರವಾಸ. ಬೇರೆ ಯಾರು ಬರುತ್ತಾರೋ ನೋಡೋಣ ಎಂದರು.
- 17 Feb 2026 4:31 PM IST
ಕರಾವಳಿಯಲ್ಲಿ ಶಾಂತಿ ಕಾಪಾಡಲು ಸೂಕ್ತ ಕ್ರಮ
ಕಾಂಗ್ರೆಸ್ ಕರಾವಳಿ ಭಾಗಕ್ಕೆ ಕೋಮುವಾದ ಪಟ್ಟ ಕಟ್ಟುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಮಂಗಳವಾರ(ಫೆ.17) ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಹಿಂದೆ ಕರಾವಳಿ ಭಾಗದಲ್ಲಿ ಅನೇಕ ಕೋಮುಘರ್ಷಣೆ ನಡೆದಿವೆ. ಶಾಂತಿಯನ್ನು ಕಾಪಾಡಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಕಟ್ಟುನಿಟ್ಟಿನ ಕ್ರಮಗಳಿಂದ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುತ್ತಿದ್ದೇವೆ. ಕಾನೂನುಬಾಹಿರ ಚಟುವಟಿಕೆಗಳಿಗೂ ಇತಿಶ್ರೀ ಹಾಡಲಾಗುತ್ತಿದೆ ಎಂದು ತಿಳಿಸಿದರು.
ದ್ವೇಷದ ಹೇಳಿಕೆ ಹಾಗೂ ಭಾಷಣ ಸಂಬಂಧ ಕ್ರಮಕೈಗೊಳ್ಳಲಾಗಿದೆ. ಹೆಚ್ಚು ಬಂಡವಾಳ ಹೂಡಿಕೆ ಮೂಲಕ ಐಟಿ ಹಾಗೂ ಪ್ರವಾಸಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಹಿಂಸಾತ್ಮಕ ಘಟನೆಗಳು ನಡೆಯದಂತೆ ಕೆಲಸ ಮಾಡಲಾಗುತ್ತಿದೆ ಎಂದರು.
ಶಾಸಕರು ವಿದೇಶ ಪ್ರವಾಸಕ್ಕೆ ಹೋಗಬಾರದು ಎಂದು ಎಲ್ಲಿಯೂ ಇಲ್ಲ. ಖಾಸಗಿಯಾಗಿ ಹೋಗುತ್ತಿದ್ದರೆ ಯಾವಾಗ ಬೇಕಾದರೂ ಹೋಗಬಹುದು. ಅಧಿಕೃತವಾಗಿ ಹೋಗುತ್ತಿದ್ದಾರೋ ಅಥವಾ ಖಾಸಗಿಯಾಗಿ ಹೋಗುತ್ತಿದ್ದಾರೋ ತಿಳಿದಿಲ್ಲ. ಶಾಸಕರು ವಿದೇಶಕ್ಕೆ ಹೋಗೋವುದು ಹೊಸದೇನು ಇಲ್ಲ. ಅದರ ಬಗ್ಗೆ ಚರ್ಚೆ ನಡೆಯುವಂತಹದ್ದು ಏನಿದೆ ಎಂದು ಪ್ರವಾಸವನ್ನು ಸಮರ್ಥಿಸಿಕೊಂಡರು.
ಆರ್‌ಎಸ್‌ಎಸ್ ಅತಿದೊಡ್ಡ ಸಂಘಟನೆ. ಸಂಗ್ರಹವಾಗುತ್ತಿರುವ ಹಣ ಏನಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ನಮ್ಮದು ಇಡೀ ವಿಶ್ವಕ್ಕೆ ದೊಡ್ಡ ಸಂಘಟನೆ ಎಂದು ಹೇಳಿಕೊಳ್ಳುತ್ತಾರೆ, ಹಾಗಾದರೆ ಆ ಸಂಘಟನೆಯ ಸದಸ್ಯರು ಯಾರು ? ಆರ್‌ಎಸ್‌ಎಸ್ ನೋಂದಣಿಯೇ ಆಗಿಲ್ಲ. ಯಾಕೆ ಆಗಿಲ್ಲ ಎಂಬುದರ ನಿಜಾಂಶ ತಿಳಿದುಕೊಳ್ಳಬೇಕಿದೆ. ಹೆಚ್ಚು ಅಂಗ ಸಂಸ್ಥೆಗಳು ಇವೆ ಎಂದು ಹೇಳುತ್ತಾರೆ. ಇದನ್ನೆಲ್ಲಾ ಹೇಗೆ ನಡೆಸುತ್ತಿದ್ದಾರೆ, ಇದಕ್ಕೆಲ್ಲಾ ಹಣ ಎಲ್ಲಿ ಬರುತ್ತದೆ. ಪಾರದರ್ಶಕತೆ ಎಲ್ಲರಿಗೂ ಅನ್ವಯಿಸುತ್ತೆ ಅಲ್ಲವೇ ಎಂದು ಪ್ರಶ್ನಿಸಿದ ಅವರು, ಎಷ್ಟು ಖರ್ಚು, ಆದಾಯ ಎಲ್ಲವನ್ನೂ ತಿಳಿದುಕೊಳ್ಳಬೇಕು. ಸಾರ್ವಜನಿಕವಾಗಿ ಎಲ್ಲರಿಗೂ ಇದು ಗೊತ್ತಾಗಬೇಕು. ಇಷ್ಟೊಂದು ಗೌಪ್ಯತೆಯನ್ನ ಯಾಕೆ ಕಾಪಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
- 17 Feb 2026 8:25 AM IST
ಇಂದು 2026ರ ಮೊದಲ ಸೂರ್ಯ ಗ್ರಹಣ; ಭಾರತದಲ್ಲಿ ಗೋಚರಿಸುತ್ತದೆಯೇ?
ಇಂದು (ಫೆಬ್ರವರಿ 17, 2026) ಸಂಭವಿಸುತ್ತಿರುವ ವರ್ಷದ ಮೊದಲ ಪಾರ್ಶ್ವ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದು ಪ್ರಮುಖವಾಗಿ ಅಂಟಾರ್ಕ್ಟಿಕಾ, ದಕ್ಷಿಣ ಆಫ್ರಿಕಾ ಮತ್ತು ಹಿಂದೂ ಮಹಾಸಾಗರದ ಭಾಗಗಳಲ್ಲಿ ಮಾತ್ರ ಕಂಡುಬರಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:45ಕ್ಕೆ ಆರಂಭವಾಗಿ ಸಂಜೆ 5:43ಕ್ಕೆ ಗರಿಷ್ಠ ಮಟ್ಟ ತಲುಪಿ ರಾತ್ರಿ 7:41ಕ್ಕೆ ಮುಕ್ತಾಯವಾಗಲಿದೆ. ಭಾರತದಲ್ಲಿ ಈ ಗ್ರಹಣ ಗೋಚರಿಸದ ಹಿನ್ನೆಲೆಯಲ್ಲಿ ಯಾವುದೇ ಧಾರ್ಮಿಕ ನಿಯಮಗಳು ಅಥವಾ ಸೂತಕ ಅನ್ವಯಿಸುವುದಿಲ್ಲ ಎಂದು ಶಾಸ್ತ್ರಜ್ಞರು ತಿಳಿಸಿದ್ದಾರೆ. ವೈಜ್ಞಾನಿಕವಾಗಿ ಇದು ಪಾರ್ಶ್ವ ಗ್ರಹಣವಾಗಿದ್ದು, ಚಂದ್ರನು ಸೂರ್ಯನ ಒಂದು ಭಾಗವನ್ನು ಮಾತ್ರ ಮರೆಮಾಡುತ್ತಾನೆ.
- 17 Feb 2026 7:17 AM IST
ನ್ಯೂಸ್‌ಕ್ಲಿಕ್ ಪೋರ್ಟಲ್ ಮತ್ತು ಎಡಿಟರ್ 184 ಕೋಟಿ ರೂ. ದಂಡ ವಿಧಿಸಿದ ಇಡಿ
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಯ ಆರೋಪದ ಮೇಲೆ ಸುದ್ದಿ ಜಾಲತಾಣ 'ನ್ಯೂಸ್‌ಕ್ಲಿಕ್' (NewsClick) ಮತ್ತು ಅದರ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರಿಗೆ ಜಾರಿ ನಿರ್ದೇಶನಾಲಯವು ಒಟ್ಟು 184 ಕೋಟಿ ರೂ. ದಂಡ ವಿಧಿಸಿದೆ. ಈ ಪೈಕಿ ಸುದ್ದಿ ಪೋರ್ಟಲ್ ಮಾಲೀಕತ್ವ ಹೊಂದಿರುವ 'ಪಿಪಿಕೆ ನ್ಯೂಸ್‌ಕ್ಲಿಕ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್'ಗೆ 120 ಕೋಟಿ ರೂ. ಮತ್ತು ಪ್ರಬೀರ್ ಪುರ್ಕಾಯಸ್ಥ ಅವರಿಗೆ ₹64 ಕೋಟಿ ದಂಡ ವಿಧಿಸಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
- 17 Feb 2026 7:15 AM IST
ವಿದ್ಯಾರ್ಥಿನಿಯ ಭೀಕರ ಕೊಲೆ ಮಾಡಿ ‘ಆತ್ಮ’ ಕರೆಯಲು ಯೂಟ್ಯೂಬ್ ನೋಡಿದ್ದ ಆರೋಪಿ!
ಇಂದೋರ್‌ನ ದ್ವಾರಕಾಪುರಿ ಪ್ರದೇಶದಲ್ಲಿ ಎಂ.ಬಿ.ಎ ವಿದ್ಯಾರ್ಥಿನಿಯ ಭೀಕರ ಕೊಲೆ ಪ್ರಕರಣದ ಆರೋಪಿ ಪಿಯೂಷ್ ಧಮ್ನೋಟಿಯಾ ವಿಚಾರಣೆಯ ವೇಳೆ ಬೆಚ್ಚಿಬೀಳಿಸುವ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. ಫೆಬ್ರವರಿ 10 ರಂದು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಂತರ, ಆಕೆಗೆ "ಉಡುಗೊರೆ" ನೀಡುವ ನೆಪದಲ್ಲಿ ಕೈಕಾಲುಗಳನ್ನು ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ ಬರ್ಬರವಾಗಿ ಹತ್ಯೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕೃತ್ಯದ ನಂತರ ಮುಂಬೈ ಸಮೀಪದ ಪನ್ವೇಲ್‌ನ ನಿರ್ಜನ ಪ್ರದೇಶಕ್ಕೆ ಪರಾರಿಯಾಗಿದ್ದ ಈತ, ಅಲ್ಲಿ ತಾನು ಕೊಂದ ಹುಡುಗಿಯ ಆತ್ಮದೊಂದಿಗೆ ಮಾತನಾಡಲು ಯೂಟ್ಯೂಬ್‌ನಲ್ಲಿ "ಆತ್ಮಗಳನ್ನು ಕರೆಯುವುದು ಹೇಗೆ" ಎಂಬ ವಿಡಿಯೋಗಳನ್ನು ನೋಡಿ, ಅಗರಬತ್ತಿ ಹಚ್ಚಿ ಕತ್ತಲಿನಲ್ಲಿ ಕ್ಷಮೆಯಾಚಿಸುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಮೂರು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಈತನ ಕ್ರೌರ್ಯ ಮತ್ತು ಕೊಲೆಯ ನಂತರದ ಈ ವಿಲಕ್ಷಣ ನಡವಳಿಕೆ ನಗರದಾದ್ಯಂತ ತೀವ್ರ ಸಂಚಲನ ಮೂಡಿಸಿದೆ.


