Assembly Session begins, condolences to departed dignitaries
x

ವಿಧಾನಸಭೆ ಅಧಿವೇಶನ

Assembly Session live| ಕಲಾಪ ಮಂಗಳವಾರ ಬೆಳಗ್ಗೆ 9ಕ್ಕೆ ಮುಂದೂಡಿಕೆ

ಪ್ರತಿಪಕ್ಷಗಳು ಸರ್ಕಾರವನ್ನು ಕಟ್ಟಿಹಾಕಲು ಒಳಮೀಸಲಾತಿ ಹಾಗೂ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಹಂತ -ಹಂತವಾಗಿ ಭರ್ತಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟ ಸದಸ್ಯರನ್ನು ಒತ್ತಾಯಿಸಲಿದ್ದಾರೆ.


Click the Play button to hear this message in audio format

ಕರ್ನಾಟಕ ರಾಜ್ಯ ಸರ್ಕಾರದ 16ನೇ ವಿಧಾನಸಭೆಯ 9ನೇ ಅಧಿವೇಶನದ ಎರಡನೇ ದಿನವಾದ ಇಂದು (ಸೋಮವಾರ, ಮಾರ್ಚ್ 9) ಕಲಾಪವು ಅತ್ಯಂತ ಬಿರುಸಿನ ಚರ್ಚೆಗಳಿಗೆ ಸಾಕ್ಷಿಯಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಪರಿಷತ್ ಮಾಜಿ ಸದಸ್ಯ ಬಸ್ರೂರು ಅಪ್ಪಣ್ಣ ಹೆಗಡೆ, ಹಿರಿಯ ರಾಜಕಾರಣಿ ವೈ.ಎಂ. ವೀರಣ್ಣಗೆ ಸದನದಲ್ಲಿ ಸಂತಾಪ ಸೂಚಿಸಲಾಯಿತು.

ಅಧಿವೇಶನದ ಎರಡನೇ ದಿನವಾದ ಇಂದು ವಿಧಾನಸಭೆ ಹಾಗೂ ವಿಧಾನಪರಿಷತ್‌ ಎರಡೂ ಸದನಗಳಲ್ಲಿ ವಿರೋಧ ಪಕ್ಷಗಳು ಬಜೆಟ್‌ ಕುರಿತು ಸಮಗ್ರ ಚರ್ಚೆ ನಡೆಸಲಿವೆ. ಜತೆಗೆ ಕಲಾಪದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಒಳಮೀಸಲಾತಿ ಹಾಗೂ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಹಂತ -ಹಂತವಾಗಿ ಭರ್ತಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟ ಸದಸ್ಯರನ್ನು ಒತ್ತಾಯಿಸಲಿದ್ದಾರೆ.

Live Updates

  • 9 March 2026 2:26 PM IST

    ಕಲಾಪ ಮಂಗಳವಾರ ಬೆಳಿಗ್ಗೆ 9ಕ್ಕೆ ಮುಂದೂಡಿಕೆ

    ವಿಧಾನಸಭೆ ಕಲಾಪವನ್ನು ಮಂಗಳವಾರ(ಮಾ.10)ಕ್ಕೆ ಮುಂದೂಡಿ ಸಭಾಧ್ಯಕ್ಷ ಯು.ಟಿ.ಖಾದರ್‌ ಆದೇಶಿಸಿದರು. ನಾಳೆ ಕಲಾಪ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ ಎಂದು ತಿಳಿಸಿದರು.  

  • 9 March 2026 2:23 PM IST

    ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ: ಶಾಸಕ ರವಿಕುಮಾರ್‌ ಆರೋಪ

    ವಸತಿ ಇಲಾಖೆಯಿಂದ ವಸತಿ ರಹಿತರಿಗೆ ಮನೆ ಸಿಗುತ್ತಿಲ್ಲ. ಮುಸ್ಲಿಮರಿಗೆ ಈ ಯೋಜನೆಯಲ್ಲಿ ಅನ್ಯಾಯವಾಗುತ್ತಿದೆ. 75 ಮನೆಗಳನ್ನು ಬೇರೆ ಯಾರಿಗೋ ಕೊಡಲಾಗಿದೆ ಎಂದು ಶಿಡ್ಲಘಟ್ಟ ಶಾಸಕ ರವಿಕುಮಾರ್ ಸದನದಲ್ಲಿ ಆರೋಪಿಸಿದರು. 

    ಇದಕ್ಕೆ ಉತ್ತರಿಸಿದ ಸಚಿವ ಜಮೀರ್ ಅಹಮದ್‌, ಒಂದು ಮನೆ ನಿರ್ಮಾಣಕ್ಕೆ 7 ಲಕ್ಷ ರೂ. ಬೇಕು. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ  1.5 ಲಕ್ಷ ರೂ. ಕೊಡಲಿ. ರಾಜ್ಯ ಸರ್ಕಾರ 1.20 ಲಕ್ಷ ರೂ.ಕೊಡುತ್ತೇವೆ. ಯೋಜನೆಗೆ ಆಯ್ಕೆಯಾದ ಫಲಾನುಭವಿ 4.50 ಲಕ್ಷ‌ ರೂ. ಪಾವತಿಸಬೇಕಾಗಿತ್ತು. ಆದರೆ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳು ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯನ ಗಮನಕ್ಕೆ ತರಲಾಗಿದೆ. ಇದೀಗ ಸರ್ಕಾರದಿಂದ ನಾಲ್ಕು ಲಕ್ಷ ರೂ.  ಕೊಡಲಾಗುತ್ತಿದೆ ಎಂದರು. 

    ಈಗಾಗಲೇ ಎರಡು ಕಂತಿನಲ್ಲಿ ಮನೆಗಳನ್ನು ನಿಡಿದ್ದೇವೆ. ಶಿಡ್ಲಘಟ್ಟಕ್ಕೆ 500 ಮನೆಗಳನ್ನು ಮಂಜೂರು ಮಾಡಲಾಗಿದೆ. 75 ಮನೆಗಳು ಶಾಸಕರ ವಿವೇಚನೆಯಿಂದ ನೀಡಬೇಕಾಗಿರುವುದರಿಂದ ಈ ಕುರಿತು ಚರ್ಚಿಸಲು ಮಂಗಳವಾರ (ಮಾ.10) ಸಭೆ ಕರೆಯಲಾಗಿದ್ದು, ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು. 


  • ಆರ್‌ಎಸ್‌ಎಸ್‌ ನಿಷೇಧಿಸಲು ಸಾಧ್ಯವಿಲ್ಲ, ಚಟುವಟಿಕೆ ಮೇಲೆ ನಿಗಾ: ಸತೀಶ್‌ ಜಾರಕಿಹೊಳಿ
    9 March 2026 1:36 PM IST

    ಆರ್‌ಎಸ್‌ಎಸ್‌ ನಿಷೇಧಿಸಲು ಸಾಧ್ಯವಿಲ್ಲ, ಚಟುವಟಿಕೆ ಮೇಲೆ ನಿಗಾ: ಸತೀಶ್‌ ಜಾರಕಿಹೊಳಿ

    ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸದಲ್ಲಿರುವುದರಿಂದ ಅವರ ಪರವಾಗಿ ಸದನದಲ್ಲಿ ನಾವೇ ಉತ್ತರ ನೀಡುತ್ತೇವೆ ಎಂದು ಸರ್ಕಾರದ ಪರವಾಗಿ ಸಚಿವ ಸತೀಶ್‌ ಜಾರಕಿಹೊಳಿ ಡಿಕೆಶಿಯನ್ನು ಸಮರ್ಥಿಸಿಕೊಳ್ಳುವ ಮೂಲಕ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದರು. 

    ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದರ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್‌ ಅನುಪಸ್ಥಿತಿಯಲ್ಲಿ ಸದನದಲ್ಲಿ ಅವರ ಪರವಾಗಿ ಉತ್ತರ ನೀಡಲು ನಾವೆಲ್ಲಾ ಸಚಿವರಿದ್ದೇವೆ. ವಿಷಯಗಳನ್ನು ನಾವು ಸಮರ್ಥವಾಗಿ ನಿಭಾಯಿಸುತ್ತೇವೆ. ಅವರು ನಾಳೆಯೇ ಬರಲಿ ಅಥವಾ ಇನ್ನೆರಡು ದಿನ ಬಿಟ್ಟು ಬರಲಿ, ಅದರಿಂದ ಸದನದ ನಡಾವಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಬಿಜೆಪಿ ನಾಯಕ ಅನಂತ ಕುಮಾರ್ ಹೆಗಡೆ ಅವರ ಹೇಳಿಕೆ ಹಾಗೂ ಆರ್‌ಎಸ್‌ಎಸ್ ನಿಷೇಧದ ವದಂತಿಗಳ ಬಗ್ಗೆ ಮಾತನಾಡಿದ ಅವರು, "ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡುತ್ತೇವೆ ಎಂದು ಈವರೆಗೆ ಯಾರೂ ಹೇಳಿಲ್ಲ. ಅಲ್ಲದೆ, ಯಾರೂ ಕೂಡ ಅದನ್ನು ಸುಲಭವಾಗಿ ಬ್ಯಾನ್ ಮಾಡಲು ಸಾಧ್ಯವಿಲ್ಲ," ಎಂದರು.

    ಚಟುವಟಿಕೆಗಳ ನಿಷೇಧ ಮಾಡುವುದು ಬೇರೆ ವಿಚಾರ, ಇಡೀ ಸಂಘಟನೆಯನ್ನೇ ನಿಷೇಧಿಸುವುದು ಬೇರೆ. ಈವರೆಗೆ ಯಾರೂ ಸಹ ಆರ್‌ಎಸ್‌ಎಸ್‌ನ್ನು ಅಧಿಕೃತವಾಗಿ ನಿಷೇಧಿಸಿಲ್ಲ ಎಂದು ತಿಳಿಸಿದರು. 



  • ಶ್ರೀರಾಮನವಮಿಯಂದು ಕಲಾಪ ಬೇಡ: ಸರ್ಕಾರಕ್ಕೆ ಪ್ರತಿಪಕ್ಷಗಳ ಮನವಿ
    9 March 2026 1:23 PM IST

    ಶ್ರೀರಾಮನವಮಿಯಂದು ಕಲಾಪ ಬೇಡ: ಸರ್ಕಾರಕ್ಕೆ ಪ್ರತಿಪಕ್ಷಗಳ ಮನವಿ

    ರಾಜ್ಯ ವಿಧಾನಸಭೆಯ ಅಧಿವೇಶನದ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಹತ್ವದ ಹೇಳಿಕೆ ನೀಡಿದ್ದು, ಸರ್ಕಾರದ ಕಾರ್ಯವೈಖರಿ ಮತ್ತು ಸಚಿವರ ಗೈರುಹಾಜರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.

    ಒಟ್ಟು 14 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಶ್ರೀರಾಮನವಮಿಯಂದು(ಮಾ.26) ಸದನ ನಡೆಸಬಾರದು ಎಂದು ವಿರೋಧ ಪಕ್ಷದ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅಧಿವೇಶನದಲ್ಲಿ ಸುಮಾರು 8 ರಿಂದ 10 ಬಿಲ್‌ಗಳು ಮಂಡನೆಯಾಗುವ ಸಾಧ್ಯತೆ ಇದೆ ಎಂದರು.

    ಯಾವುದೇ ವಿಧೇಯಕವನ್ನು ಮಂಡಿಸುವ ಕನಿಷ್ಠ ಮೂರು ದಿನಗಳ ಮುಂಚಿತವಾಗಿ ಅದರ ಪ್ರತಿಯನ್ನು ವಿರೋಧ ಪಕ್ಷಕ್ಕೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮೇಲಿನ ಚರ್ಚೆಗೆ ಸಂಬಂಧಿಸಿದಂತೆ ಮಾ.25 ಹಾಗೂ ಮಾ.26 ರಂದು ಎರಡೂ ಸದನಗಳಿಗೆ ಉತ್ತರ ನೀಡಲಿದ್ದಾರೆ. ಸರ್ಕಾರದ ಕೆಲ ಸಚಿವರು ಅಧಿವೇಶನಕ್ಕೆ ಗೈರು ಹಾಜರಾಗುವ ಮೂಲಕ ಸದನದ ಬಗ್ಗೆ  ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

  • 9 March 2026 1:10 PM IST

    ವಿಧಾನಸೌಧ ದ್ವಾರಗಳಿಗೆ ಹೈಟೆಕ್‌ ಸ್ಪರ್ಷ

    ವಿಧಾನಸೌಧದ ದ್ವಾರಗಳಿಗೆ ಹೈಟೆಕ್ ಸ್ಪರ್ಷ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಎಲ್ಲಾ ದ್ವಾರಗಳಿಗೂ ಅಲಂಕಾರಿತ ಬಾಗಿಲು ಅಳವಡಿಕೆಗೆ ತಿರ್ಮಾನಿಸಿದೆ. ಮೊದಲ ಭಾಗವಾಗಿ ಪಶ್ಚಿಮ ದ್ವಾರದಲ್ಲಿ ಕಾರ್ಯ ಆರಂಭವಾಗಿದ್ದು, ಪಶ್ವಿಮ ದ್ವಾರಕ್ಕೆ ಅಲಂಕಾರಿಕ ರೋಸ್ ವುಡ್ ಬೃಹತ್ ಬಾಗಿಲು ಅಳವಡಿಕೆ ಕಾರ್ಯ ನಡೆಯಲಿದೆ. ಕಬ್ಬಿಣದ ಗ್ರಿಲ್‌ಗಳ ತೆರವು ಮಾಡಿ ಅಲಂಕಾರಿಕ ರೋಸ್ ವುಡ್ ಬಾಗಿಲು ಅಳವಡಿಕೆ ಮಾಡುತ್ತಿದ್ದು, ಸುಮಾರು 3 ಕೋಟಿ ರೂ. ಗೂ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ. 


  • ಟ್ರೋಫಿ ಗೆದ್ದ ಭಾರತ ತಂಡಕ್ಕೆ ಅಧಿವೇಶನದಲ್ಲಿ ಅಭಿನಂದನೆ
    9 March 2026 1:04 PM IST

    ಟ್ರೋಫಿ ಗೆದ್ದ ಭಾರತ ತಂಡಕ್ಕೆ ಅಧಿವೇಶನದಲ್ಲಿ ಅಭಿನಂದನೆ

    ಸತತ ಎರಡು ಬಾರಿ ಹಾಗೂ ಟಿ-20 ವಿಶ್ವಕಪ್‌ನ ಮೂರನೇ ಪ್ರಶಸ್ತಿ ಜಯಿಸಿದ ಭಾರತ ತಂಡಕ್ಕೆ ವಿಧಾನಸಭೆಯಲ್ಲಿ ಸಭಾಪತಿ ಯು.ಟಿ. ಖಾದರ್‌ ಅಭಿನಂಧನೆ ಸಲ್ಲಿಸಿದರು.

    ನ್ಯೂಜಿಲೆಂಡ್‌ ವಿರುದ್ಧ 96 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದ ಸೂರ್ಯಕುಮಾರ್‌ ಯಾದವ್‌ ನೇತೃತ್ವದ ತಂಡ ಟೂರ್ನಿ ಆಯೋಜಿಸಿದ ದೇಶವೊಂದು ತವರಿನಲ್ಲಿ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿತ್ತು. ಫೈನಲ್‌ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಪಡೆದ ಬೂಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಸೂಪರ್‌-8, ಸೆಮಿಫೈನಲ್‌ ಹಾಗೂ ಫೈನಲ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಪ್ಲೇಯರ್‌ ಆಫ್‌ ದ ಟೂರ್ನಿಮೆಂಟ್‌ ಪ್ರಶಸ್ತಿ ಪಡೆದರು. 

Read More
Next Story