Karnataka Assembly Session Live: ಸದನದಲ್ಲಿ ಬಿಜೆಪಿ ಸದಸ್ಯರ ಪ್ರತಿಭಟನೆ; ಕಲಾಪ ಜ.27ಕ್ಕೆ ಮುಂದೂಡಿಕೆ
x
ವಿಧಾನ ಮಂಡಲ ಅಧಿವೇಶನ

Karnataka Assembly Session Live: ಸದನದಲ್ಲಿ ಬಿಜೆಪಿ ಸದಸ್ಯರ ಪ್ರತಿಭಟನೆ; ಕಲಾಪ ಜ.27ಕ್ಕೆ ಮುಂದೂಡಿಕೆ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನದಲ್ಲಿ ಕೇವಲ ಒಂದು ಸಾಲಿನ ಭಾಷಣ ಮಾಡಿ ನಿರ್ಗಮಿಸಿರುವುದು ಈಗ ಆಡಳಿತಾರೂಢ ಕಾಂಗ್ರೆಸ್ ಪಾಲಿಗೆ ಕೇಂದ್ರದ ವಿರುದ್ಧದ ಹೋರಾಟಕ್ಕೆ ಹೊಸ ವೇದಿಕೆ ಒದಗಿಸಿದೆ.


Click the Play button to hear this message in audio format

ಸರ್ಕಾರ ಸಿದ್ಧಪಡಿಸಿದ ಭಾಷಣ ಓದದೆ ನಿರ್ಗಮಿಸಿದ ರಾಜ್ಯಪಾಲರ ಕ್ರಮವನ್ನು ವಿರೋಧಿಸಿ, ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರೀಯ ಮಟ್ಟದಲ್ಲಿ 'ಗೋ ಬ್ಯಾಕ್' ಅಭಿಯಾನ ನಡೆಸಲು ಕಾಂಗ್ರೆಸ್ ಸಜ್ಜಾಗಿದೆ. ನರೇಗಾ (MNREGA) ಯೋಜನೆಯಲ್ಲಿ ಕೇಂದ್ರದ ನಡೆಯನ್ನು ಟೀಕಿಸಿದ್ದಕ್ಕೆ ರಾಜ್ಯಪಾಲರು ಭಾಷಣ ಮೊಟಕುಗೊಳಿಸಿದ್ದನ್ನೇ ಪ್ರಮುಖವಾಗಿಟ್ಟುಕೊಂಡು, ಕೇಂದ್ರಕ್ಕೆ ರಾಷ್ಟ್ರಮಟ್ಟದಲ್ಲಿ ಮುಜುಗರ ಉಂಟುಮಾಡಲು ಕೈ ನಾಯಕರು ತೀರ್ಮಾನಿಸಿದ್ದಾರೆ.

ರಾಜ್ಯಪಾಲರ ನಡೆಯು ಸಂವಿಧಾನಬಾಹಿರ ಎಂದು ವಾದಿಸುತ್ತಿರುವ ಕಾಂಗ್ರೆಸ್, ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದು, ವಿಶೇಷ ಅಧಿವೇಶನದ ಉಭಯ ಸದನಗಳಲ್ಲಿ ತೀವ್ರ ಆಕ್ರೋಶ ಹೊರಹಾಕಲು ನಿರ್ಧರಿಸಿದೆ.

Live Updates

  • 23 Jan 2026 4:46 PM IST

    ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯ: ಕಲಾಪ ಜ.27ಕ್ಕೆ ಮುಂದೂಡಿಕೆ

    ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರು ಒತ್ತಾಯಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಸ್ಪೀಕರ್‌ ಯು.ಟಿ. ಖಾದರ್‌ ಕಲಾಪವನ್ನು ಮಂಗಳವಾರಕ್ಕೆ (ಜ.27) ಮುಂದೂಡಿದರು. 

     

  • 23 Jan 2026 3:38 PM IST

    ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹ: ಸದನ ಮುಂದೂಡಿದ ಸ್ಪೀಕರ್‌

    ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಆಗ್ರಹಿಸಿದ್ದಿರಿಂದ ಸ್ಪೀಕರ್‌ ಯು.ಟಿ. ಖಾದರ್‌ ಸದನವನ್ನು 15 ನಿಮಿಷ ಮುಂದೂಡಲಾಗಿದೆ. 

  • 23 Jan 2026 3:36 PM IST

    ಅಬಕಾರಿ ಇಲಾಖೆ ಹಣ ಅಸ್ಸಾಂ ಚುನಾವಣೆಗೆ ರವಾನೆ: ಆರ್‌. ಅಶೋಕ್‌ ಆರೋಪ

    ಅಬಕಾರಿ ಇಲಾಖೆಯ ಹಣವನ್ನು ಅಸ್ಸಾಂ ಹಾಗೂ ಕೇರಳ ಚುನಾವಣೆಗೆ ಕಳಿಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪ ಮಾಡಿದ್ದಾರೆ. ಮಾಜಿ ಸಚಿವ

    ಈಶ್ವರಪ್ಪ ವಿಚಾರ ಬಂದಾಗ ರಾಜೀನಾಮೆ ಕೊಡಿಸಿದ್ದರು. ಹೊಡೆದಾಟ ಗುದ್ದಾಟಕ್ಕೆ ಬಂದಿದ್ದರು. ಈಗ ಏಕೆ ಹಿಂದೇಟು ಹಾಕುತ್ತಿದ್ದೀರಿ ಎಂದು ಕಾಂಗ್ರೆಸ್‌ ಶಾಸಕರನ್ನು ಪ್ರಶ್ನಿಸಿದರು.

    ದೇಶವನ್ನೇ ಲೂಟಿ ಮಾಡಿದವರು ನೀವು, ಶಾಸಕ ಸುನೀಲ್ ಕುಮಾರ್‌ಗೆ ಅವಕಾಶ ಕೊಡಬೇಡಿ, ಅವರು ಏನೇನೋ ಮಾತನಾಡುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಸದನದಲ್ಲಿ ಮನವಿ ಮಾಡಿದರು.

  • 23 Jan 2026 3:23 PM IST

    ಕಲಾಪ ಆರಂಭ: ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಚರ್ಚೆಗೆ ಬಿಜೆಪಿ ಪಟ್ಟು

    ವಿಧಾನಸಭೆಯಲ್ಲಿ ಮಧ್ಯಾಹ್ನದ ಕಲಾಪ ಆರಂಭವಾಗಿದ್ದು, ಕಲಾಪ ಆರಂಭವಾಗುತ್ತಿದ್ದಂತೆ ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಚರ್ಚೆಗೆ ಬಿಜೆಪಿ ಪಟ್ಟು ಹಿಡಿದಿದೆ. 

     

  • ಅಬಕಾರಿ ಸಚಿವರ ರಾಜೀನಾಮೆಗೆ ಪಟ್ಟು
    23 Jan 2026 1:43 PM IST

    ಅಬಕಾರಿ ಸಚಿವರ ರಾಜೀನಾಮೆಗೆ ಪಟ್ಟು

    ಅಬಕಾರಿ ಇಲಾಖೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಇತ್ತೀಚೆಗೆ ಅಬಕಾರಿ ಜಿಲ್ಲಾ ಅಧಿಕಾರಿ 2.5 ಕೋಟಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಲಾಖೆಯಲ್ಲಿ ಸುಮಾರು 4000ಕೋಟಿ ರೂ. ಅವ್ಯವಹಾರ ನಡೆದಿದ್ದು, ಕೂಡಲೇ ಅಬಕಾರಿ ಸಚಿವರಿಂದ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಆಗ್ರಹಿಸಿದರು. 

    ಸದಸ್ಯರ ಗದ್ದಲದ ನಡುವೆಯೂ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆ ಆರಂಭಿಸಿದ್ದರಿಂದ ವಿರೋಧ ಪಕ್ಷಗಳ ಸದದ್ಯರು ಸಭಾತ್ಯಾಗ ಮಾಡಿದರು.

  • 23 Jan 2026 1:38 PM IST

    ಗವರ್ನರ್ ಓಡಿ ಹೋಗಿಲ್ಲ, ಫಾಸ್ಟ್ ಆಗಿ ಹೋದ್ರು ಅಷ್ಟೇ: ಸಿಎಂ ವ್ಯಂಗ್ಯ

    ರಾಜ್ಯಪಾಲರ ಭಾಷಣದ ವೇಳೆ ನಡೆದ ಗೊಂದಲದ ಕುರಿತು ವಿಧಾನಸಭೆಯಲ್ಲಿ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರು ರಾಷ್ಟ್ರಗೀತೆ ಮುಗಿಯುವವರೆಗೂ ಕಾಯಬೇಕಿತ್ತು ಎಂದು ಹೇಳುವ ಮೂಲಕ ಸಂವಿಧಾನಿಕ ಶಿಷ್ಟಾಚಾರದ ಅಗತ್ಯತೆಯನ್ನು ತಿಳಿಸಿದರು.

    'ಓಡಿ ಹೋದರು' ಪದದ ಬಗ್ಗೆ ಸ್ಪಷ್ಟನೆ ನೀಡಿದ ಅವರು, "ಕಾನೂನು ಸಚಿವರು ರಾಜ್ಯಪಾಲರು 'ಓಡಿ ಹೋದರು' ಎಂದು ಹೇಳಿದ್ದನ್ನು ದೊಡ್ಡದು ಮಾಡುವುದು ಬೇಡ. ಅವರು ಓಡಿ ಹೋಗಿಲ್ಲ, ಭಾಷಣ ಮುಗಿಸಿ ವೇಗವಾಗಿ ಹೊರನಡೆದರು ಅಷ್ಟೇ," ಎಂದು ಹೇಳುವ ಮೂಲಕ ಸದನದ ಬಿಸಿ ತಣಿಸಲು ಪ್ರಯತ್ನಿಸಿದರು.

    "ರಾಜ್ಯಪಾಲರು ನಿಮ್ಮವರೂ ಅಲ್ಲ, ನಮ್ಮವರೂ ಅಲ್ಲ. ಅವರು ಇಡೀ ರಾಜ್ಯದ ರಾಜ್ಯಪಾಲರು. ಭಾಷಣದಲ್ಲಿ 'ನನ್ನ ಸರ್ಕಾರ' ಎಂದು ಹೇಳುವುದು ಸಂವಿಧಾನಬದ್ಧವಾಗಿ ಸರಿಯಿದೆ. ಏಕೆಂದರೆ ಅವರು ಸರ್ಕಾರದ ಮುಖ್ಯಸ್ಥರು," ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.

     

  • 23 Jan 2026 1:26 PM IST

    ಏಳು ತಿಂಗಳಿಗೆ ಹುಟ್ಟಿದ್ದೀರಾ?": ಸುರೇಶ್ ಕುಮಾರ್ ವ್ಯಂಗ್ಯಕ್ಕೆ ಆಕ್ರೋಶ

    ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲರ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಯ ವೇಳೆ, ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಸಚಿವ ಭೈರತಿ ಸುರೇಶ್ ವಿರುದ್ಧ ನೀಡಿದ ವೈಯಕ್ತಿಕ ಹೇಳಿಕೆಯೊಂದು ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ಕೊನೆಗೆ ಮುಖ್ಯಮಂತ್ರಿಗಳ ಆಕ್ಷೇಪದ ಬೆನ್ನಲ್ಲೇ ಸುರೇಶ್ ಕುಮಾರ್ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ.

    ರಾಜ್ಯಪಾಲರು ಸದನದಲ್ಲಿ ಬಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುರೇಶ್ ಕುಮಾರ್ ಮಾತನಾಡುತ್ತಿದ್ದರು. ಈ ವೇಳೆ ಸಚಿವ ಭೈರತಿ ಸುರೇಶ್ ಮಧ್ಯಪ್ರವೇಶಿಸಿ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆರಳಿದ ಸುರೇಶ್ ಕುಮಾರ್, "9 ತಿಂಗಳಿಗೆ ಹುಟ್ಟಿದ್ರೆ ಸರಿಯಾಗುತ್ತಿತ್ತು, ನೀವು ಏಳು ತಿಂಗಳಿಗೆ ಹುಟ್ಟಿದ್ದೀರಾ?" ಎಂದು ವ್ಯಂಗ್ಯವಾಡಿದರು.

    ಸುರೇಶ್ ಕುಮಾರ್ ಅವರ ಈ 'ಏಳು ತಿಂಗಳ ಹುಟ್ಟು' ಎಂಬ ಪದ ಬಳಕೆಗೆ ಸಚಿವರಾದ ಪ್ರಿಯಾಂಕ್ ಖರ್ಗೆ, ಭೈರತಿ ಸುರೇಶ್ ಹಾಗೂ ಕಾಂಗ್ರೆಸ್‌ನ ಇತರ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಸದಸ್ಯರಾದ ಸುರೇಶ್ ಕುಮಾರ್ ಅವರು ಇಂತಹ ಅವಹೇಳನಕಾರಿ ಮಾತುಗಳನ್ನಾಡಬಾರದು, ಕೂಡಲೇ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು.

    ಸಿಎಂ ಮಧ್ಯಪ್ರವೇಶ

    ಈ ಗದ್ದಲದ ನಡುವೆ ಎದ್ದು ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ, "ಸುರೇಶ್ ಕುಮಾರ್ ಅವರು ಹೇಳಿದ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಒಬ್ಬ ಸದಸ್ಯರ ಬಗ್ಗೆ 'ಏಳು ತಿಂಗಳಿಗೆ ಹುಟ್ಟಿದ್ದೀರಾ' ಎಂದು ಹೇಳುವುದು ಅತ್ಯಂತ ತಪ್ಪು ಮತ್ತು ಅಸಂಸದೀಯ. ಇದನ್ನು ಒಪ್ಪಲಾಗದು," ಎಂದು ಖಾರವಾಗಿ ನುಡಿದರು. ಅಲ್ಲದೆ, ಈ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಲು ಸ್ಪೀಕರ್‌ಗೆ ಮನವಿ ಮಾಡಿದರು.

    ಕಡತದಿಂದ ವಜಾ

    ಸದನದಲ್ಲಿ ತಮ್ಮ ಹೇಳಿಕೆಗೆ ವಿರೋಧ ಹೆಚ್ಚಾದ ನಂತರ ಸುರೇಶ್ ಕುಮಾರ್, "ನಾನು ಆಡಿದ ಮಾತನ್ನು ವಾಪಸ್ ಪಡೆಯುತ್ತೇನೆ," ಎಂದು ಸ್ಪಷ್ಟಪಡಿಸಿದರು. ಕೂಡಲೇ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸುರೇಶ್ ಕುಮಾರ್ ಅವರ ವಿವಾದಾತ್ಮಕ ಹೇಳಿಕೆಯನ್ನು ಸದನದ ಕಡತದಿಂದ ತೆಗೆದುಹಾಕಲು ಸೂಚಿಸಿದರು.

  • 23 Jan 2026 1:17 PM IST

    ರಾಜ್ಯಪಾಲರು ನಾಡಿನ ಕ್ಷಮೆ ಕೇಳಲಿ: ಎಚ್.ಕೆ. ಪಾಟೀಲ್

    ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಗದ್ದಲದ ಕುರಿತ ಚರ್ಚೆ ತಾರಕಕ್ಕೇರಿದ್ದು, ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ರಾಜ್ಯಪಾಲರ ನಡವಳಿಕೆಯನ್ನು 'ಸಂವಿಧಾನ ವಿರೋಧಿ' ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ, ರಾಷ್ಟ್ರಗೀತೆ ಮತ್ತು ಸದನಕ್ಕೆ ಅಗೌರವ ತೋರಿದ ರಾಜ್ಯಪಾಲರು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

    "ಸಂವಿಧಾನದ ಪ್ರಕಾರ ರಾಜ್ಯಪಾಲರು ಸರ್ಕಾರದ ಭಾಷಣವನ್ನು ಓದುವುದು ಕಡ್ಡಾಯ. ಅದನ್ನು ಬಿಟ್ಟು ಹೋಗಿರುವುದನ್ನು ಸದನ ಮನ್ನಿಸಲು ಸಾಧ್ಯವಿಲ್ಲ. ನಿಯಮಗಳಿಂದ ತಪ್ಪಿಸಿಕೊಳ್ಳಲು ರಾಜ್ಯಪಾಲರಿಗೆ ಸಾಧ್ಯವಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯಪಾಲರ ಕಚೇರಿಗೆ ಕೇಂದ್ರ ಸರ್ಕಾರದಿಂದ ನಿರಂತರ ಫೋನ್ ಕರೆಗಳು ಬರುತ್ತಿವೆ ಎಂದು ಆರೋಪಿಸಿದ ಸಚಿವರು, "ರಾಜಭವನವನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ನಾವು ವೈಯಕ್ತಿಕ ಟೀಕೆ ಮಾಡಿಲ್ಲ, ಸರ್ಕಾರದ ನೀತಿಗಳನ್ನಷ್ಟೇ ಭಾಷಣದಲ್ಲಿ ಬರೆದಿದ್ದೆವು. ರಾಜ್ಯಪಾಲರು ಖುಷಿಯಾಗಲಿ ಎಂದು ಭಾಷಣ ಸಿದ್ಧಪಡಿಸಲು ಸಾಧ್ಯವಿಲ್ಲ ಎಂದರು.

    ರಾಜ್ಯಪಾಲರು ರಾಷ್ಟ್ರಗೀತೆ ಮುಗಿಯುವ ಮೊದಲೇ ಸದನದಿಂದ ಹೊರನಡೆದಿರುವುದು ರಾಷ್ಟ್ರಕ್ಕೆ ಮತ್ತು ಸಂವಿಧಾನಕ್ಕೆ ಮಾಡಿದ ಅಪಮಾನ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಾಷ್ಟ್ರಗೀತೆಗೆ ಗೌರವ ಕೊಡುವುದು ಎಲ್ಲರ ಕರ್ತವ್ಯ. ರಾಜ್ಯಪಾಲರು ಈ ಕೂಡಲೇ ಕನ್ನಡ ನಾಡು ಮತ್ತು ಸದನದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

    ಈ ವೇಳೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಮತ್ತು ಸುರೇಶ್ ಕುಮಾರ್ ಅವರ ಆಕ್ಷೇಪಕ್ಕೆ ಉತ್ತರಿಸಿದ ಅವರು, "ನಾವು ಮಂತ್ರಿಗಳಾಗಿ ರಾಜ್ಯಪಾಲರ ಕಾರಿನವರೆಗೂ ಹೋಗಿ ಗೌರವಯುತವಾಗಿ ಬೀಳ್ಕೊಟ್ಟಿದ್ದೇವೆ. ಆದರೆ ಅವರು ನಡೆದುಕೊಂಡ ರೀತಿ ಮಾತ್ರ ಖಂಡನಾರ್ಹ," ಎಂದು ಸ್ಪಷ್ಟಪಡಿಸಿದರು.

     

  • 23 Jan 2026 1:05 PM IST

    ಬಿಜೆಪಿಯಿಂದ ರಾಜ್ಯಪಾಲರ ಕಚೇರಿ ದುರ್ಬಳಕೆ: ಎಚ್‌.ಕೆ. ಪಾಟೀಲ್‌

    ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವೇಳೆ ನಡೆದ ಗದ್ದಲದ ಕುರಿತು ಪ್ರತಿಪಕ್ಷಗಳ ಆರೋಪಕ್ಕೆ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಪ್ರತಿಕ್ರಿಯಿಸಿದ್ದು, "ನಾವು ರಾಜ್ಯಪಾಲರಿಗೆ ಗೌರವಯುತವಾಗಿಯೇ ವಿದಾಯ ಹೇಳಿದ್ದೇವೆ, ಆದರೆ ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬ ಸತ್ಯ ಬಿಚ್ಚಿಟ್ಟರೆ ಅವರಿಗೆ ನೋವಾಗುತ್ತದೆ" ಎಂದು ತಿರುಗೇಟು ನೀಡಿದರು.

    ಬಿಜೆಪಿಯ ಸುನೀಲ್ ಕುಮಾರ್ ಅವರ 'ಗೂಂಡಾ ಸರ್ಕಾರ' ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, "ಯಾರೋ ಆವೇಶದಲ್ಲಿ ಏನೋ ಅಂದ ತಕ್ಷಣ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಅವರು ಯಾವ ಸಂದರ್ಭದಲ್ಲಿ ಹಾಗೆ ಹೇಳಿದ್ದಾರೆ ಎಂಬುದನ್ನು ನೋಡಬೇಕು. ನಾವು ಇಲ್ಲಿ ನಡೆಸುತ್ತಿರುವ ಚರ್ಚೆಯನ್ನು ಇಡೀ ದೇಶ ಮತ್ತು ದಕ್ಷಿಣ ಭಾರತದ ರಾಜ್ಯಗಳು ಗಮನಿಸುತ್ತಿವೆ" ಎಂದರು.

    ರಾಜ್ಯಪಾಲರನ್ನು ಕಳುಹಿಸಿಕೊಟ್ಟಿಲ್ಲ ಎಂಬ ಆರೋಪವನ್ನು ನಿರಾಕರಿಸಿದ ಅವರು, "ರಾಜ್ಯಪಾಲರು ಭಾಷಣವನ್ನು ಕೇವಲ ಎರಡು ನಾಲ್ಕು ಸಾಲುಗಳಿಗೆ ಮೊಟಕುಗೊಳಿಸಿ ಹೊರನಡೆದರು. ಆದರೂ ಮುಖ್ಯಮಂತ್ರಿಗಳು, ಸಭಾಪತಿಗಳು ಮತ್ತು ನಾನು ಸ್ವತಃ ಅವರ ಕಾರಿನವರೆಗೂ ಹೋಗಿ, ಹಸ್ತಲಾಘವ ನೀಡಿ ಗೌರವಯುತವಾಗಿ ಕಳುಹಿಸಿಕೊಟ್ಟಿದ್ದೇವೆ. ನಾವು ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದೇವೆ," ಎಂದು ಸ್ಪಷ್ಟಪಡಿಸಿದರು.

     

  • 23 Jan 2026 12:48 PM IST

    ರಾಷ್ಟ್ರಗೀತೆಗೆ ಅಪಮಾನ ಮಾಡಿದ ರಾಜ್ಯಪಾಲರ ಮೇಲೆ ಕ್ರಮವಾಗಲಿ: ಶಿವಲಿಂಗೇಗೌಡ ಗುಡುಗು

    ರಾಜ್ಯಪಾಲರಿಗೆ ಅಗೌರವ ತೋರಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, "ರಾಷ್ಟ್ರಗೀತೆ ಆರಂಭವಾಗುವ ಮುನ್ನವೇ ಹೊರನಡೆದ ರಾಜ್ಯಪಾಲರು ದೇಶದ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ, ಅವರ ವಿರುದ್ಧವೇ ಮೊದಲು ಕ್ರಮ ಕೈಗೊಳ್ಳಿ" ಎಂದು ಆಗ್ರಹಿಸಿದರು.

    "ನಾನು 20 ವರ್ಷಗಳಿಂದ ಸದನದಲ್ಲಿದ್ದೇನೆ. ರಾಜ್ಯಪಾಲರು ಪೂರ್ಣ ಭಾಷಣ ಓದದಿದ್ದರೂ ಪರವಾಗಿಲ್ಲ, ಆದರೆ ರಾಷ್ಟ್ರಗೀತೆ ಆರಂಭವಾಗುವ ಮೊದಲೇ ಅವರು ಹೊರನಡೆದಿದ್ದು ಎಷ್ಟು ಸರಿ? ರಾಷ್ಟ್ರಗೀತೆಗೆ ಗೌರವ ಕೊಡುವುದು ಅವರಿಗೆ ಗೊತ್ತಿರಲಿಲ್ಲವೇ" ಎಂದು ಪ್ರಶ್ನಿಸಿದರು.

Read More
Next Story