
Today's news Mar 10: ಇರಾನ್ ಯುದ್ಧದ ಕುರಿತು ಟ್ರಂಪ್-ಪುಟಿನ್ ಚರ್ಚೆ
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಮಂಗಳವಾರ ಮಾರ್ಚ್ 10, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 10 March 2026 7:32 AM IST
"ನಾವೇ ಯುದ್ಧವನ್ನು ಅಂತ್ಯಗೊಳಿಸುತ್ತೇವೆ": ಟ್ರಂಪ್‌ಗೆ ಇರಾನ್ ಸವಾಲು!
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು 'ಬಹುತೇಕ ಅಂತ್ಯಗೊಂಡಿದೆ' ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಇರಾನ್‌ನ ಶಕ್ತಿಶಾಲಿ ಸೇನಾಪಡೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. "ಈ ಯುದ್ಧದ ಅಂತ್ಯವನ್ನು ನಾವೇ ನಿರ್ಧರಿಸುತ್ತೇವೆ" ಎಂದು ಇರಾನ್ ಸೇನೆ ಘೋಷಿಸಿದೆ.
ಟ್ರಂಪ್ ಅವರ ಹೇಳಿಕೆಗೆ ಅಧಿಕೃತ ಪ್ರಕಟಣೆಯ ಮೂಲಕ ಉತ್ತರಿಸಿದ IRGC, "ಈ ಯುದ್ಧವನ್ನು ಯಾವಾಗ ಮತ್ತು ಹೇಗೆ ಮುಗಿಸಬೇಕು ಎಂಬುದನ್ನು ನಾವೇ ನಿರ್ಧರಿಸುತ್ತೇವೆ. ಈ ಪ್ರಾಂತ್ಯದ ಭವಿಷ್ಯದ ಸಮೀಕರಣಗಳು ಮತ್ತು ಸ್ಥಿತಿಗತಿಗಳು ಈಗ ನಮ್ಮ ಸಶಸ್ತ್ರ ಪಡೆಗಳ ಕೈಯಲ್ಲಿವೆ. ಅಮೆರಿಕದ ಪಡೆಗಳು ಈ ಯುದ್ಧವನ್ನು ಕೊನೆಗೊಳಿಸಲು ಸಾಧ್ಯವಿಲ್ಲ" ಎಂದು ಗುಡುಗಿದೆ.
- 10 March 2026 7:14 AM IST
ಇರಾನ್ ಯುದ್ಧದ ಕುರಿತು ಟ್ರಂಪ್-ಪುಟಿನ್ ಚರ್ಚೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದು, ಪ್ರಮುಖವಾಗಿ ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಇತರ ಜಾಗತಿಕ ವಿದ್ಯಮಾನಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ನಡೆದ ಈ ಸಂಭಾಷಣೆಯು "ಅತ್ಯಂತ ನೇರ ಹಾಗೂ ವೃತ್ತಿಪರ" ಆಗಿತ್ತು ಎಂದು ಕ್ರೆಮ್ಲಿನ್ (ರಷ್ಯಾ ಅಧ್ಯಕ್ಷರ ಕಚೇರಿ) ತಿಳಿಸಿದೆ. ಇರಾನ್ ಮೇಲಿನ ಇಸ್ರೇಲ್ ದಾಳಿ ಮತ್ತು ಹೆಚ್ಚುತ್ತಿರುವ ತೈಲ ಬೆಲೆಗಳ ನಡುವೆ ವಿಶ್ವದ ಇಬ್ಬರು ಪ್ರಭಾವಿ ನಾಯಕರ ಈ ಮಾತುಕತೆ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

