ವನ್ಯಜೀವಿ ಮಂಡಳಿ | ವಿವಾದಕ್ಕೀಡಾದ ನೇಮಕಾತಿ: ವನ್ಯಜೀವಿಗಿಂತ ರಾಜಕೀಯ ಹಿತಾಸಕ್ತಿ ಮೇಲುಗೈ
x

ವನ್ಯಜೀವಿ ಮಂಡಳಿ | ವಿವಾದಕ್ಕೀಡಾದ ನೇಮಕಾತಿ: ವನ್ಯಜೀವಿಗಿಂತ ರಾಜಕೀಯ ಹಿತಾಸಕ್ತಿ ಮೇಲುಗೈ

ಈ ಬಾರಿಯ ವನ್ಯಜೀವಿ ಮಂಡಳಿ ನೇಮಕ ಪಟ್ಟಿ ಹೊರಬಿದ್ದಿದೆ. ಪಟ್ಟಿಯ ಹೆಸರುಗಳು ಬಹಿರಂಗವಾಗುತ್ತಲೇ ವನ್ಯಜೀವಿ ತಜ್ಞರು, ಪರಿಸರ ಪರ ಹೋರಾಟಗಾರರು ಅಚ್ಚರಿ ವ್ಯಕ್ತಪಡಿಸಿದ್ದು, ಸರ್ಕಾರ ಇಂತಹ ವಿಷಯದಲ್ಲಿ ಇಷ್ಟು ಹೊಣೆಗೇಡಿಯಾದರೆ ಭವಿಷ್ಯದ ಗತಿಯೇನು ಎಂದು ಹುಬ್ಬೇರಿಸಿದ್ದಾರೆ.


ಬಹುತೇಕ ನಗರವಾಸಿಗಳ ಪಾಲಿಗೆ ಪಶ್ಚಿಮಘಟ್ಟಗಳೆಂದರೆ ಚಾರಣ, ಪ್ರವಾಸ, ಮೋಜು-ಮಸ್ತಿಯ ಜಾಗ. ಸಾಮಾಜಿಕ ಜಾಲತಾಣ ʼರೀಲ್ʼ ಹವಾದಲ್ಲಿ ತೇಲುವ ಯುವ ಜನರಿಗಂತೂ ಮಲೆನಾಡಿನ ಬೆಟ್ಟ, ಕಣಿವೆ, ಜಲಪಾತಗಳು ರೀಲ್ ಮಾಡೋದಕ್ಕಾಗಿಯೇ ಇರುವ ಜಾಗಗಳು! ಇದು ಜನಸಾಮಾನ್ಯರು ಪಶ್ಚಿಮಘಟ್ಟಗಳನ್ನು ಗ್ರಹಿಸುವ ರೀತಿ. ಆದರೆ, ಈ ಬಾರಿಯ ಕರ್ನಾಟಕ ವನ್ಯಜೀವಿ ಮಂಡಳಿಯ ನೇಮಕಾತಿಗಳನ್ನು ನೋಡಿದರೆ, ಸರ್ಕಾರ ಕೂಡ ಪಶ್ಚಿಮಘಟ್ಟಗಳನ್ನು ಜನಸಾಮಾನ್ಯರಿಗಿಂತ ಭಿನ್ನವಾಗಿ ಗ್ರಹಿಸಿದಂತೆ ಕಾಣುವುದಿಲ್ಲ.

ಹೌದು ರಾಜ್ಯ ವನ್ಯಜೀವಿ ಮಂಡಳಿಯನ್ನು ಪುನರ್ ರಚಿಸಿ ಸರ್ಕಾರ ಹೊರಡಿಸಿರುವ ಹೊಸ ಪಟ್ಟಿ ಗಮನಿಸಿದರೆ ಯಾರಿಗಾದರೂ ಈ ಭಾವನೆ ಬರದೇ ಇರದು. ಏಕೆಂದರೆ ಇಡೀ ಮಂಡಳಿಯಲ್ಲಿ ಒಬ್ಬಿಬ್ಬರು ವನ್ಯಜೀವಿ ಮತ್ತು ಪರಿಸರ ಸಂಬಂಧಿತ ವಿಷಯಗಳಲ್ಲಿ ಅಷ್ಟಿಷ್ಟು ಅನುಭವ, ಅರಿವು ಹೊಂದಿದವರನ್ನು ಬಿಟ್ಟರೆ ಉಳಿದವರೆಲ್ಲ ಬಹುತೇಕ ಆಡಳಿತ ಪಕ್ಷದ ಬಂಧು-ಬಾಂಧವರೇ ಇದ್ದಾರೆ. ಆ ಪೈಕಿ ಬಹುತೇಕ ಮಂದಿಗೆ ವನ್ಯಜೀವಿ ರಂಗದಲ್ಲಿ ಕೆಲಸ ಮಾಡಿದ, ಅಥವಾ ಅಧ್ಯಯನ, ಸಂಶೋಧನೆ ಮಾಡಿದ ಅನುಭವವಾಗಲೀ, ಅರಿವಾಗಲೀ ಇಲ್ಲ ಎಂಬುದು ಬಹಳ ಮುಖ್ಯವಾಗಿ ರಾಜ್ಯ ಪರಿಸರ ಮತ್ತು ವನ್ಯಜೀವಿ ವಲಯದ ಪ್ರಮುಖರಿಂದ ಕೇಳಿಬರುತ್ತಿರುವ ಆಕ್ಷೇಪ.

ಪಟ್ಟಿ ಹೊರಬೀಳುತ್ತಲೇ ಹಲವು ವನ್ಯಜೀವಿ ತಜ್ಞರು, ಪರಿಸರ ಪರ ಹೋರಾಟಗಾರರು ಅಚ್ಚರಿ ವ್ಯಕ್ತಪಡಿಸಿದ್ದು, ಸರ್ಕಾರ ಇಂತಹ ವಿಷಯದಲ್ಲಿ ಇಷ್ಟು ಹೊಣೆಗೇಡಿಯಾದರೆ ಭವಿಷ್ಯದ ಗತಿಯೇನು ಎಂದು ಹುಬ್ಬೇರಿಸಿದ್ದಾರೆ.

ಪಶ್ಚಿಮಘಟ್ಟದ ಪ್ರಾತಿನಿಧ್ಯವೇ ಇಲ್ಲ!

ರಾಜ್ಯದ ವನ್ಯಜೀವಿ ಮಂಡಳಿಯ ಪ್ರಾಥಮಿಕ ಕರ್ತವ್ಯವೇ ರಾಜ್ಯದ ವನ್ಯಜೀವಿಗಳ ಹಿತಾಸಕ್ತಿ ರಕ್ಷಣೆ. ಯೋಜನೆಗಳು, ಉದ್ಯಮಗಳಿಂದ ಹಿಡಿದು ಕಳ್ಳಬೇಟೆಯಂತಹ ಮಾನವ ದಾಳಿಗಳವರೆಗೆ ಮತ್ತು ನೈಸರ್ಗಿಕ ವಿಪತ್ತುಗಳ ಹೊತ್ತಲ್ಲಿ ರಾಜ್ಯದ ಉದ್ದಗಲದ ವನ್ಯಜೀವಿಗಳ ಹಿತವನ್ನು ಆದ್ಯತೆಯಾಗಿ ಪರಿಗಣಿಸಿ ಸರ್ಕಾರಕ್ಕೆ ಸಲಹೆ- ಸೂಚನೆ ನೀಡುವುದು ಮಂಡಳಿಯ ಪ್ರಾಥಮಿಕ ಹೊಣೆಗಾರಿಕೆ. ಆದರೆ, ಇಂತಹ ಮಂಡಳಿಯಲ್ಲಿ ರಾಜ್ಯದ ವನ್ಯಜೀವಿ ಆವಾಸಸ್ಥಾನವಾದ ಪಶ್ಚಿಮಘಟ್ಟಗಳಿಗೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ!

ಉತ್ತರಕನ್ನಡದಿಂದ ಚಾಮರಾಜನಗರದವರೆಗೆ ಹತ್ತು ಜಿಲ್ಲೆಗಳಲ್ಲಿ ಹರಡಿರುವ ಪಶ್ಚಿಮಘಟ್ಟದ ವ್ಯಾಪ್ತಿಯಿಂದ ಯಾವೊಬ್ಬ ವನ್ಯಜೀವಿ ತಜ್ಞ, ಸಂರಕ್ಷಕ, ಪರಿಸರ ಪರ ಕಾರ್ಯಕರ್ತರೂ ರಾಜ್ಯ ಸರ್ಕಾರದ ಕಣ್ಣಿಗೆ ಬಿದ್ದಿಲ್ಲವೆ? ಕನಿಷ್ಟ ಆ ಪ್ರದೇಶಗಳಲ್ಲಿ ಕೆಲಸ ಮಾಡಿರುವ ವನ್ಯಜೀವಿ ಅಥವಾ ಪರಿಸರ ವಲಯದ ಸಂಶೋಧಕರು ಕೂಡ ಯಾರೂ ಸಿಗಲಿಲ್ಲವೆ? ಎಂಬ ಪ್ರಶ್ನೆ ಎದ್ದಿದೆ.

ರಾಜಕಾರಣಿಗಳು ಮಕ್ಕಳಿಗೆ ಗಂಜಿಕೇಂದ್ರವೇ?

ಸರ್ಕಾರದ ವಿವಿಧ ನಿಗಮ- ಮಂಡಳಿಗಳು ಆಡಳಿತ ಪಕ್ಷದ ರಾಜಕಾರಣಿಗಳು, ಅವರ ಚೇಲಾಗಳು, ಮಕ್ಕಳು, ಮೊಮ್ಮಕ್ಕಳಿಗೆ ಪುನರ್ವಸತಿ ಅಥವಾ ಆಶ್ರಯ ಕಲ್ಪಿಸುವ ಗಂಜಿ ಕೇಂದ್ರಗಳು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಜನಜನಿತ. ಆದರೆ, ವನ್ಯಜೀವಿ ಮಂಡಳಿಯಂತಹ ಸೂಕ್ಷ್ಮ ಹೊಣೆಗಾರಿಕೆಯ ಮತ್ತು ಇವತ್ತಿನ ವಿಪರೀತದ ಹವಾಮಾನ ಮತ್ತು ವನ್ಯಜೀವಿ-ಮಾನವ ಸಂಘರ್ಷದ ಹೊತ್ತಲ್ಲಿ ಮಹತ್ತರ ಜವಾಬ್ದಾರಿಯ ಸ್ಥಾನಕ್ಕೆ ಆಡಳಿತ ಪಕ್ಷದ ಸಚಿವರು, ಶಾಸಕರ ಮಕ್ಕಳು, ಆಪ್ತರನ್ನು ತುಂಬುವ ಸರ್ಕಾರ, ಈ ಮೂಲಕ ಯಾವ ಸಂದೇಶ ನೀಡುತ್ತಿದೆ? ಎನ್ನುತ್ತಾರೆ ವನ್ಯಜೀವಿ ಸಂರಕ್ಷಕ ಹಾಗೂ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಜೋಸೆಫ್ ಹೂವರ್.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, “ಇವತ್ತು ನಾವು ರಾಜ್ಯದಲ್ಲಿ ವಿಪರೀತ ಬರ, ಭೀಕರ ಪ್ರವಾಹವನ್ನು ನೋಡುತ್ತಿದ್ದೇವೆ. ಪರಿಸರದ ಈ ವಿಪರೀತಗಳ ನಡುವೆ, ಆನೆ- ಹುಲಿಯಂತಹ ಪರಿಸರ ನಿರ್ಣಾಯಕ ಜೀವಿಗಳ ಹತ್ಯೆ ಹೆಚ್ಚುತ್ತಿದೆ. ಮಾನವ- ವನ್ಯಜೀವಿ ಸಂಘರ್ಷ ಅಪಾಯಕಾರಿ ಮಟ್ಟಕ್ಕೆ ಹೋಗಿದೆ. ಈ ಹೊತ್ತಿನಲ್ಲಿ ವನ್ಯಜೀವಿ ಮಂಡಳಿಯಂತಹ ಮಹತ್ವದ ಹೊಣೆಗಾರಿಕೆ ನಿಭಾಯಿಸಲು ಫೀಲ್ಡ್ ಅನುಭವ ಮತ್ತು ಅಧ್ಯಯನದ ಜ್ಞಾನ ಹೊಂದಿರುವವರ ಜರೂರತ್ತಿದೆ. ಆದರೆ, ತನ್ನ ಪ್ರಣಾಳಿಕೆಯಲ್ಲಿ ಪರಿಸರ ಉಳಿಸುವ ಮಾತನಾಡಿದ್ದ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಹೀಗೆ ಯಾರು-ಯಾರನ್ನೋ ಮಂಡಳಿಗೆ ನೇಮಕ ಮಾಡಿದೆ. ಇದು ನಿಜಕ್ಕೂ ದುರಂತ” ಎಂದು ವಿಷಾದ ವ್ಯಕ್ತಪಡಿಸಿದರು.

ಯಾರೆಲ್ಲಾ ಇದ್ದಾರೆ ಹಾಗಾದರೆ?

ಮಂಡಳಿಯಲ್ಲಿ ನಿಯಮದ ಪ್ರಕಾರ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಅರಣ್ಯ ಸಚಿವರು ಅದರ ಉಪಾಧ್ಯಕ್ಷರಾಗಿತ್ತಾರೆ. ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ನೇಮಕವಾಗುತ್ತಾರೆ. ಆ ಪೈಕಿ ಮೂವರು ಶಾಸಕರನ್ನು ನೇಮಕ ಮಾಡುವ ಅವಕಾಶವಿದೆ. ಆದರೆ, ಈ ಬಾರಿ ನೇಮಕವಾಗಿರುವ ಅಶೋಕ ಎಂ ಪಟ್ಟಣ(ರಾಮದುರ್ಗ-ಬೆಳಗಾವಿ ಜಿಲ್ಲೆ ), ಎಚ್ ಎಂ ಗಣೇಶ್ ಪ್ರಸಾದ್(ಗುಂಡ್ಲುಪೇಟೆ- ಚಾಮರಾಜನಗರ ಜಿಲ್ಲೆ) ಮತ್ತು ಪುಟ್ಟಣ್ಣ(ಬೆಂಗಳೂರು) ಅವರ ಪೈಕಿ ಗಣೇಶ್ ಪ್ರಸಾದ್ ಹೊರತುಪಡಿಸಿ ಉಳಿದವರು ಯಾವ ರೀತಿಯಲ್ಲೂ ಪಶ್ಚಿಮಘಟ್ಟಕ್ಕೆ ಸಂಬಂಧಿಸಿದವರೇ ಅಲ್ಲ.


ಇನ್ನು ವನ್ಯಜೀವಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರ ಕೋಟಾದಡಿ ಆಯ್ಕೆಯಾಗಿರುವ ಮೂವರ ಪೈಕಿ ಕೂಡ ಯಾರೊಬ್ಬರಿಗೂ ವನ್ಯಜೀವಿ ವಲಯದಲ್ಲಿ ಮಹತ್ವದ ಕೆಲಸ ಮಾಡಿರುವ ಹಿನ್ನೆಲೆ ಇಲ್ಲ ಎಂಬ ಮಾತು ಕೇಳಿಬಂದಿದೆ. ವನ್ಯಜೀವಿಗಳ ಕುರಿತ ಆಸಕ್ತಿ, ವನ್ಯಜೀವಿ ಛಾಯಾಗ್ರಹಣ ಬೇರೆ, ಅವುಗಳ ಸಂರಕ್ಷಣೆಯ ಕುರಿತ ಆಳ ಅಧ್ಯಯನ ಮತ್ತು ಅರಿವು ಬೇರೆ. ಆ ಕಾರಣಕ್ಕೆ ಈ ಕೋಟಾದ ಆಯ್ಕೆಯ ಬಗ್ಗೆಯೂ ಆಕ್ಷೇಪಗಳು ಕೇಳಿಬಂದಿವೆ.

ಇನ್ನು ಸಂರಕ್ಷಣಾ ವಿಶೇಷ ತಜ್ಞರು, ಜೀವಿಶಾಸ್ತ್ರಜ್ಞರು ಮತ್ತು ಪರಿಸರವಾದಿಗಳ ಕೋಟಾದಡಿ ಹತ್ತು ಮಂದಿಯನ್ನು ಆಯ್ಕೆ ಮಾಡಿದ್ದು, ಆ ಪೈಕಿ ಐದಕ್ಕೂ ಹೆಚ್ಚು ಮಂದಿ ರಾಜಕಾರಣಿಗಳ ಆಪ್ತರು. ಧೃವ್ ಎಂ ಪಾಟೀಲ್ ಸಚಿವ ಡಾ ಎಂ ಬಿ ಪಾಟೀಲ್ ಪುತ್ರ, ವೈಶಾಲಿ ಕುಲಕರ್ಣಿ ಶಾಸಕ ವಿನಯ್ ಕುಲಕರ್ಣಿ ಪುತ್ರಿ, ಸಂಕೇತ್ ಪೂವಯ್ಯ ಕಾಂಗ್ರೆಸ್ ವಕ್ತಾರ, ಡಾ ಸಂತೃಪ್ತ್ ಸಚಿವ ಕೆ ಜೆ ಜಾರ್ಜ್ ಆಪ್ತ. ಇನ್ನುಳಿದವರು ಕೂಡ ಯಾರೂ ವನ್ಯಜೀವಿ ವಲಯದಲ್ಲಿ ಕೆಲಸ ಮಾಡಿದ ಅನುಭವಿಗಳಲ್ಲ. ಜೊತೆಗೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಜೀವಿಸಿದ, ಕೆಲಸ ಮಾಡಿದ, ಪರಿಸರಕ್ಕಾಗಿ ಹೋರಾಡಿದ ಅನುಭವ ಕೂಡ ಅವರಿಗೆ ಇಲ್ಲ ಎಂಬ ಆಕ್ಷೇಪಗಳು ಎದ್ದಿವೆ.

ಇಂತಹ ಮಂಡಳಿಯಿಂದ ಅಪಾಯವೇನು?

ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಇರುವವರಿಗೆ ಪರಿಸರ ಮತ್ತು ವನ್ಯಜೀವಿಗಳೇ ಹಿತಾಸಕ್ತಿಯಾಗಿರಬೇಕು. ವನ್ಯಜೀವಿ ಮತ್ತು ಪರಿಸರ ವಲಯದಲ್ಲಿ ಅನುಭವ ಮತ್ತು ಕಾಳಜಿ ಇರುವವರೇ ಮಂಡಳಿಯ ದನಿಯಾಗಿರಬೇಕು. ವನ್ಯಜೀವಿಗಳ ದನಿಯಾಗಿ ಕೆಲಸ ಮಾಡುವ ಬದ್ಧತೆ ಇಲ್ಲದೆ ಹೋದರೆ ಮಂಡಳಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಲಾಭಿಗಳಿಗೆ ತಕ್ಕಂತೆ ಕೆಲಸ ಮಾಡುವ, ಅವರಿಗೆ ಅನುಕೂಲಕರ ನಿರ್ಧಾರಗಳನ್ನು ಕೈಗೊಳ್ಳುವ ʼವನ್ಯಜೀವಿ ದ್ರೋಹಿʼ ಮಂಡಳಿಯಾಗುತ್ತದೆ. ಇದು ಅಪಾಯಕಾರಿ ಎನ್ನುತ್ತಾರೆ ಪಶ್ಚಿಮಘಟ್ಟ ಉಳಿವಿಗಾಗಿ ದಶಕಗಳಿಂದ ಹೋರಾಡುತ್ತಿರುವ ಶಿವಮೊಗ್ಗದ ಅಖಿಲೇಶ್ ಚಿಪ್ಪಳಿ.

ಇಕೋ ಸೆನ್ಸಿಟೀವ್ ಝೋನ್ ಇರುವುದು ಪಶ್ಚಿಮಘಟ್ಟದಲ್ಲಿ. ಈ ಭಾಗದವರನ್ನು ಹೊರತುಪಡಿಸಿ ವನ್ಯಜೀವಿ ಮಂಡಳಿಗೆ ಘಟ್ಟ ವ್ಯಾಪ್ತಿಯ ಹೊರಗಿನವರನ್ನೇ ನೇಮಕ ಮಾಡುವ ಮೂಲಕ ಸರ್ಕಾರ, ವನ್ಯಜೀವಿ ಸಂರಕ್ಷಣೆಯ ಬದಲಿಗೆ ತನ್ನ ಲಾಬಿಗಳ ಹಿತಾಸಕ್ತಿಗಾಗಿ ಈ ನೇಮಕ ಮಾಡಿದೆ ಎಂದು ಅವರು ಟೀಕಿಸಿದರು.

ಘಟ್ಟ ವ್ಯಾಪ್ತಿಯಲ್ಲಿ ಈ ಸರ್ಕಾರ ಕಣ್ಣಿಟ್ಟಿರುವ ಬೃಹತ್ ಯೋಜನೆಗಳಿಗೆ ಪೂರಕವಾಗಿ ಈ ನೇಮಕವಾಗಿದೆ. ಮಂಡಳಿಯಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಲೆಕ್ಕಾಚಾರದ ನಡೆ ಇದು. ಈ ಮಾನವೀಯ, ಜೀವಪರ ಧೋರಣೆ ಇರದ ಈ ನೇಮಕಾತಿಯನ್ನು ಪಶ್ಚಿಮಘಟ್ಟ ವ್ಯಾಪ್ತಿಯ ಜೀವಪರರು, ಪರಿಸರಪರರು ಕಟುವಾಗಿ ವಿರೋಧಿಸಬೇಕು ಎಂದು ಅಖಿಲೇಶ್ ಕರೆ ನೀಡಿದರು.

ಒಟ್ಟಾರೆ, ವನ್ಯಜೀವಿ ಮಂಡಳಿಯ ನೇಮಕಾತಿ ಸಂಪೂರ್ಣ ರಾಜಕೀಯಪ್ರೇರಿತವಾಗಿದ್ದು, ಅದರಲ್ಲಿ ರಾಜಕೀಯ ಹಿತಾಸಕ್ತಿ ಮತ್ತು ಉದ್ಯಮ ಹಿತಾಸಕ್ತಿಯೇ ಮುಖ್ಯವಾದಂತಿದೆ ವಿನಃ ವನ್ಯಜೀವಿ ಅಥವಾ ಪರಿಸರದ ಹಿತಾಸಕ್ತಿ ಕಾಣುತ್ತಿಲ್ಲ ಎಂಬ ಬಲವಾದ ಕೂಗು ಕೇಳಿಬಂದಿದೆ. ವನ್ಯಜೀವಿ ಮಂಡಳಿಯ ಆಯ್ಕೆ ವಿವಾದಕ್ಕೊಳಗಾಗಿದೆ.

Read More
Next Story