
Part-1: ರೆವೆನ್ಯೂ ಸೈಟ್ಗಳಿಗೆ ʼಎʼ ಖಾತಾ: ಪುಟಿದೇಳಲಿದೆಯೇ ಜಿಬಿಎ ರಿಯಲ್ ಎಸ್ಟೇಟ್?
'ಬಿ' ಖಾತಾ ನಿವೇಶನಗಳಿಗೆ 'ಎ' ಖಾತಾ ಮಾನ್ಯತೆ ನೀಡುವ ಐತಿಹಾಸಿಕ ಕ್ರಮಕ್ಕೆ ಸರ್ಕಾರ ಮುಂದಾಗಿದ್ದು, ನವೆಂಬರ್ನಿಂದ ಆರಂಭಗೊಂಡಿದೆ. ಸಾಮಾನ್ಯ ಜನರ ಆಸ್ತಿ ಹಕ್ಕಿನ ವಿಷಯದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ.
ಬೆಂಗಳೂರು ಇಂದು ಕೇವಲ ಕರ್ನಾಟಕದ ರಾಜಧಾನಿಯಾಗಿ ಉಳಿದಿಲ್ಲ. ಬದಲಾಗಿ ಜಾಗತಿಕ ತಂತ್ರಜ್ಞಾನದ ತವರು ಮತ್ತು ದೇಶದ ವೇಗವಾಗಿ ಬೆಳೆಯುತ್ತಿರುವ ಮಹಾನಗರವಾಗಿದೆ. ಈ ನಗರೀಕರಣದ ವೇಗಕ್ಕೆ ತಕ್ಕಂತೆ ಮೂಲಸೌಕರ್ಯ ಮತ್ತು ಆಡಳಿತ ವ್ಯವಸ್ಥೆ ಬೆಳೆಯದ ಕಾರಣ, ನಗರದಲ್ಲಿ ಅನಧಿಕೃತ ಬಡಾವಣೆಗಳು ಮತ್ತು ಕಂದಾಯ ನಿವೇಶನಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಇದರ ನೇರ ಪರಿಣಾಮವೇ ‘ಬಿ ಖಾತಾ’ ಸಮಸ್ಯೆಯಾಗಿದೆ. ಕಳೆದ ಹಲವು ದಶಕಗಳಿಂದ ಸುಮಾರು 15 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರು ತಮ್ಮದೇ ಸ್ವತ್ತಿಗೆ ಸಂಪೂರ್ಣ ಹಕ್ಕು ಪಡೆಯಲಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು "ಬಿ ಖಾತಾದಿಂದ ಎ ಖಾತಾ ಪರಿವರ್ತನಾ ಅಭಿಯಾನ"ವನ್ನು ಘೋಷಿಸಿದೆ.
ನವೆಂಬರ್ ತಿಂಗಳಿನಿಂದ ಈ ಅಭಿಯಾನ ಪ್ರಾರಂಭಗೊಂಡಿದ್ದು, 100 ದಿನಗಳ ಕಾಲ ನಡೆಯಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯ ಮುನ್ನೋಟದೊಂದಿಗೆ ಜಾರಿಗೆ ಬರುತ್ತಿರುವ ಈ ಯೋಜನೆಯು ಬೆಂಗಳೂರಿನ ರಿಯಲ್ ಎಸ್ಟೇಟ್ ಇತಿಹಾಸದಲ್ಲಿ ಒಂದು ನಿರ್ಣಾಯಕ ಮೈಲಿಗಲ್ಲಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿರುವ 'ಬಿ' ಖಾತಾ ನಿವೇಶನಗಳಿಗೆ 'ಎ' ಖಾತಾ ಮಾನ್ಯತೆ ನೀಡುವುದು ಮತ್ತು ಇಲ್ಲಿಯವರೆಗೂ ಯಾವುದೇ ಖಾತಾ ಹೊಂದಿರದ ನಿವೇಶನಗಳನ್ನು ಅಧಿಕೃತ ಖಾತಾ ವ್ಯಾಪ್ತಿಗೆ ತರುವ ಐತಿಹಾಸಿಕ ಆನ್ಲೈನ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯು ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲದೇ, ಬೆಂಗಳೂರಿನ ರಿಯಲ್ ಎಸ್ಟೇಟ್ ಮತ್ತು ಸಾಮಾನ್ಯ ಜನರ ಆಸ್ತಿ ಹಕ್ಕಿನ ವಿಷಯದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಬೆಂಗಳೂರಿನಲ್ಲಿ ಕಂದಾಯ ಭೂಮಿಗಳು ಅಥವಾ ಕೃಷಿ ಭೂಮಿಗಳು ಭೂಪರಿವರ್ತನೆಯಾಗದೆ ಬಡಾವಣೆಗಳಾಗಿ ಮಾರ್ಪಟ್ಟಾಗ, ಅಂತಹ ನಿವೇಶನಗಳಿಗೆ ಕಾನೂನುಬದ್ಧವಾದ 'ಎ' ಖಾತಾ ಸಿಗುತ್ತಿರಲಿಲ್ಲ. ಬದಲಾಗಿ ತೆರಿಗೆ ಸಂಗ್ರಹಣೆಗಷ್ಟೇ ಸೀಮಿತವಾದ 'ಬಿ' ಖಾತಾ ನೀಡಲಾಗುತ್ತಿತ್ತು. ಇದರಿಂದ ಮಾಲೀಕರಿಗೆ ಬ್ಯಾಂಕ್ ಸಾಲ ಸಿಗುತ್ತಿರಲಿಲ್ಲ ಹಾಗೂ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಮತ್ತು ಆಸ್ತಿಗಳಿಗೆ ಕಾನೂನುಬದ್ಧ ಹಕ್ಕನ್ನು ಒದಗಿಸಲು ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ನಿವೇಶನದ ವಿಸ್ತೀರ್ಣ ಮಿತಿ
2 ಸಾವಿರ ಚದರ ಮೀಟರ್ಗಿಂತ ಕಡಿಮೆ ಇರುವ ವಿಸ್ತೀರ್ಣದೊಳಗಿನ ಆಸ್ತಿ ಮಾಲೀಕರು ನೇರವಾಗಿ ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಇದು ಸಣ್ಣ ಮತ್ತು ಮಧ್ಯಮ ವರ್ಗದ ನಿವೇಶನದಾರರಿಗೆ ಅನುಕೂಲಕರವಾಗಿದೆ. 2 ಸಾವಿರ ಚದರ ಮೀಟರ್ಗಿಂತ ಹೆಚ್ಚು ಇರುವ ಬೃಹತ್ ವಿಸ್ತೀರ್ಣದ ಆಸ್ತಿಗಳಿಗೆ ಕೇವಲ ಅರ್ಜಿ ಸಾಲದು. ಇದಕ್ಕೆ ಕ್ಯಾಡ್ ಡ್ರಾಯಿಂಗ್ ಸೇರಿದಂತೆ ತಾಂತ್ರಿಕ ದಾಖಲೆಗಳನ್ನು ಎಂಜಿನಿಯರ್ಗಳ ದೃಢೀಕರಣದ ಮೂಲಕ ಸಲ್ಲಿಸಬೇಕಾಗುತ್ತದೆ. ಇದು ಬಡಾವಣೆ ಅಭಿವೃದ್ಧಿಪಡಿಸುವವರು ಅಥವಾ ದೊಡ್ಡ ಆಸ್ತಿ ಮಾಲೀಕರಿಗೆ ಅನ್ವಯಿಸುತ್ತದೆ. ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಿರುವ ವಿಶೇಷ ಅಭಿಯಾನವು ಮುಂದಿನ 100 ದಿನಗಳ ಕಾಲ ನಡೆಯಲಿದೆ. ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳುವವರಿಗೆ ಮಾತ್ರ ಈ ಸೌಲಭ್ಯ ಪ್ರಸ್ತುತ ದರದಲ್ಲಿ ಲಭ್ಯವಿರುತ್ತದೆ. ಕೇವಲ 500 ರೂ. ಅರ್ಜಿ ಶುಲ್ಕವನ್ನು ಪಾವತಿಸಿ ಆನ್ಲೈನ್ನಲ್ಲಿ ನೋಂದಾಯಿಸಿಕೊಂಡರೆ ಸಾಕು. ವಿಶೇಷವೆಂದರೆ, ಪಾಲಿಕೆ ಅಧಿಕಾರಿಗಳೇ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಬಂದು ಮುಂದಿನ ಪ್ರಕ್ರಿಯೆಗಳನ್ನು ನಡೆಸಿಕೊಡಲಿದ್ದಾರೆ. ಇದು ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ತೆಗೆದುಕೊಂಡಿರುವ ಪ್ರಮುಖ ಕ್ರಮವಾಗಿದೆ.
ಮಾರ್ಗಸೂಚಿ ದರ ಮತ್ತು ಅಭಿವೃದ್ಧಿ ಶುಲ್ಕ
ಈ ಯೋಜನೆಯು ಉಚಿತವಲ್ಲ, ಆದರೆ ಕಾನೂನುಬದ್ಧತೆಗೆ ನೀಡಬೇಕಾದ ಬೆಲೆಯಾಗಿದೆ. ಆಸ್ತಿ ಮಾಲೀಕರು ತಮ್ಮ ಆಸ್ತಿಯ ಪ್ರಸ್ತುತ ಮಾರ್ಗಸೂಚಿ ದರದ ಶೇಕಡಾ 5ರಷ್ಟನ್ನು ಅಭಿವೃದ್ಧಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಸರ್ಕಾರವು ಈ ಶುಲ್ಕವನ್ನು ಕೇವಲ ಆದಾಯಕ್ಕಾಗಿ ಸಂಗ್ರಹಿಸುತ್ತಿಲ್ಲ. ಬದಲಾಗಿ, ಅನಧಿಕೃತ ಬಡಾವಣೆಗಳಲ್ಲಿ ವಿದ್ಯುತ್, ನೀರು, ಒಳಚರಂಡಿ ಮತ್ತು ರಸ್ತೆಯಂತಹ ಮೂಲಸೌಕರ್ಯಗಳನ್ನು ಒದಗಿಸಲು ಈ ಹಣವನ್ನು ವಿನಿಯೋಗಿಸಲಾಗುವುದು. 100 ದಿನಗಳ ಅಭಿಯಾನ ಮುಗಿದ ನಂತರವೂ ನೋಂದಣಿ ಮಾಡಿಸದಿದ್ದರೆ, ಅಂತಹ ಮಾಲೀಕರಿಗೆ ಹೆಚ್ಚುವರಿ ಶುಲ್ಕ ಅಥವಾ ದಂಡವನ್ನು ವಿಧಿಸಲಾಗುತ್ತದೆ.
ಏನಿದು ಬಿ ಖಾತಾ ಮತ್ತು ಎ ಖಾತಾ ಗೊಂದಲ?
ಸಾಮಾನ್ಯವಾಗಿ ಜನರಲ್ಲಿ ಖಾತಾ ಎಂದರೆ ಆಸ್ತಿಯ ಹಕ್ಕುಪತ್ರ ಎಂಬ ತಪ್ಪು ಕಲ್ಪನೆಯಿದೆ. ವಾಸ್ತವದಲ್ಲಿ ಖಾತಾ ಎನ್ನುವುದು ಆಸ್ತಿ ತೆರಿಗೆಯನ್ನು ನಿರ್ಣಯಿಸುವ ಒಂದು ದಾಖಲೆ. ಎ ಖಾತಾ ಎಂದರೆ ಬಿಬಿಎಂಪಿ ಕಾಯ್ದೆ ಮತ್ತು ಕಟ್ಟಡ ನಿಯಮಾವಳಿಗಳನ್ನು ಸಂಪೂರ್ಣವಾಗಿ ಪಾಲಿಸಿ, ಅಧಿಕೃತ ಬಡಾವಣೆಗಳಲ್ಲಿ ನಿರ್ಮಿಸಲಾದ ಆಸ್ತಿಗಳಿಗೆ ನೀಡುವ ಪ್ರಮಾಣಪತ್ರ. ಇದು ಆಸ್ತಿಯ ಕಾನೂನುಬದ್ಧತೆಯನ್ನು ಖಾತ್ರಿಪಡಿಸುತ್ತದೆ. ಇನ್ನು, ಬಿ ಖಾತಾ ಎಂದರೆ ಕಂದಾಯ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಬಡಾವಣೆಗಳು, ಭೂಪರಿವರ್ತನೆಯಾಗದ ಜಾಗಗಳು ಅಥವಾ ಬಿಬಿಎಂಪಿ ಅನುಮೋದನೆ ಇಲ್ಲದ ಕಟ್ಟಡಗಳಿಂದಲೂ ತೆರಿಗೆ ಸಂಗ್ರಹಿಸಲು ಪಾಲಿಕೆ ನಿರ್ವಹಿಸುವ ಪ್ರತ್ಯೇಕ ನೋಂದಣಿ ಇದಾಗಿದೆ.
'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ದ ವ್ಯಾಪ್ತಿಗೆ ಬರುವ ಎಲ್ಲಾ ಆಸ್ತಿಗಳಿಗೆ ಇದು ಅನ್ವಯವಾಗಲಿದೆ. ಸುಮಾರು 15 ಲಕ್ಷ ಬಿ ಖಾತಾ ಆಸ್ತಿಗಳನ್ನು ಸಕ್ರಮಗೊಳಿಸಿ ಎ ಖಾತಾ ನೀಡುವುದಾಗಿದೆ. ಎಲ್ಲಾ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಇದು ಭವಿಷ್ಯದಲ್ಲಿ ನಕಲಿ ದಾಖಲೆಗಳ ಹಾವಳಿ ತಪ್ಪಲಿದೆ. ಕಳೆದ 50 ವರ್ಷಗಳಲ್ಲಿ ಆಗದಂತಹ ಸುಧಾರಣೆಯಾಗಿ, ನಗರದಾದ್ಯಂತ ಏಕರೂಪದ ಖಾತಾ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿದೆ.
ಆಸ್ತಿ ಮಾಲೀಕರಿಗೆ ಆಗುವ ಲಾಭಗಳೇನು?
ಈ ಅಭಿಯಾನ ಯಶಸ್ವಿಯಾದರೆ, ಮಧ್ಯಮ ವರ್ಗದ ಲಕ್ಷಾಂತರ ಜನರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಸಿಗಲಿದೆ. ಪ್ರಸ್ತುತ ಬಿ ಖಾತಾ ಆಸ್ತಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಗೃಹ ಸಾಲ ನೀಡುವುದಿಲ್ಲ. ಎ ಖಾತಾ ಸಿಕ್ಕರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಲಭ್ಯವಾಗುತ್ತದೆ. ಎ ಖಾತಾ ಇದ್ದರೆ ಮಾತ್ರ ಕಾನೂನುಬದ್ಧವಾಗಿ ಮನೆ ಕಟ್ಟಲು ಯೋಜನಾ ಅನುಮತಿ ಲಭ್ಯವಾಗಲಿದೆ. ಇಲ್ಲದಿದ್ದರೆ ಕಟ್ಟಡವು ಅಕ್ರಮ ಎನಿಸಿಕೊಳ್ಳುತ್ತದೆ. ಎ ಖಾತಾ ಆದ ತಕ್ಷಣ ಆಸ್ತಿಯ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಹೆಚ್ಚಾಗುತ್ತದೆ. ಮರುಮಾರಾಟ ಪ್ರಕ್ರಿಯೆ ಸುಲಭವಾಗುತ್ತದೆ. ಅಲ್ಲದೇ, ಆಸ್ತಿಯು ಕಾನೂನುಬದ್ಧವಾಗುವುದರಿಂದ ಮಾಲೀಕರಿಗೆ ನೆಮ್ಮದಿ ಸಿಗುತ್ತದೆ. ಡಿಜಿಟಲ್ ದಾಖಲೀಕರಣ ಮತ್ತು ವೀಡಿಯೊ ಪರಿಶೀಲನೆಯಿಂದಾಗಿ, ಒಂದೇ ಆಸ್ತಿಯನ್ನು ಹಲವರಿಗೆ ಮಾರಾಟ ಮಾಡುವುದು ಅಥವಾ ನಕಲಿ ದಾಖಲೆ ಸೃಷ್ಟಿಸುವುದು ತಪ್ಪುತ್ತದೆ. ಸಂಗ್ರಹವಾಗುವ ಶುಲ್ಕದಿಂದ ಬಡಾವಣೆಗಳಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸುಧಾರಣೆಯಾಗುವ ನಿರೀಕ್ಷೆಯಿದೆ.
ತಂತ್ರಜ್ಞಾನದ ಬಳಕೆ ಮತ್ತು ದಾಖಲೀಕರಣ
ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ತಂತ್ರಜ್ಞಾನ ಆಧಾರಿತ ಖಾತಾ ವಿತರಣೆ ನಡೆಯುತ್ತಿದೆ. ಎಲ್ಲಾ ಆಸ್ತಿಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಅರ್ಜಿ ಸಲ್ಲಿಸಿದ ನಂತರ, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆಸ್ತಿಯ ಮುಂದೆ ಮಾಲೀಕರನ್ನು ನಿಲ್ಲಿಸಿ ಫೋಟೋ ಮತ್ತು ವೀಡಿಯೊ ಚಿತ್ರೀಕರಣ ಮಾಡಿ ವ್ಯವಸ್ಥೆಯಲ್ಲಿ ಅಪ್ಲೋಡ್ ಮಾಡುತ್ತಾರೆ. ಇದು ನಕಲಿ ಖಾತೆಗಳ ಸೃಷ್ಟಿ, ಬೇನಾಮಿ ಆಸ್ತಿಗಳ ನೋಂದಣಿ ಮತ್ತು ಒಬ್ಬರ ಆಸ್ತಿಯನ್ನು ಮತ್ತೊಬ್ಬರು ಕಬಳಿಸುವುದನ್ನು ತಡೆಯಲು ಸಹಕಾರಿಯಾಗಲಿದೆ. ಈ ದಾಖಲೀಕರಣದ ನಂತರ ಸಾರ್ವಜನಿಕ ಪರಿಶೀಲನೆಗೆ ಮತ್ತು ತಕರಾರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಇದು ಪ್ರಕ್ರಿಯೆಯ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ.
ಸ್ಪಷ್ಟೀಕರಣಗಳು ಮತ್ತು ಮಿತಿಗಳು
ಇದು ಅಕ್ರಮ-ಸಕ್ರಮ ಯೋಜನೆಯಲ್ಲ. ಕಟ್ಟಡಗಳಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ ಶುಲ್ಕ ನಿಗದಿಪಡಿಸಲಾಗುವುದು. ಪ್ರಸ್ತುತ 'ಬಿ' ಖಾತಾದಲ್ಲಿರುವ ಬಹುಮಹಡಿ ಕಟ್ಟಡಗಳು ತಕ್ಷಣವೇ 'ಎ' ಖಾತಾಗೆ ಬದಲಾವಣೆಯಾಗುವುದಿಲ್ಲ. ಮೊದಲ ಹಂತದಲ್ಲಿ ನಿವೇಶನಗಳ ಮಾಲೀಕತ್ವದ ಹಕ್ಕನ್ನು ಭದ್ರಪಡಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಹೊಸ ಖಾತಾ ವ್ಯವಸ್ಥೆಗೂ, ಸ್ವಾಧೀನಾನುಭವ ಪತ್ರ (ಒಸಿ) ಅಥವಾ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರಕ್ಕೂ (ಸಿಸಿ) ಸದ್ಯಕ್ಕೆ ಸಂಬಂಧ ಕಲ್ಪಿಸಲಾಗಿಲ್ಲ. ಸರ್ಕಾರಿ ಜಮೀನು, ಪಿಟಿಸಿಎಲ್ ( ದಲಿತರ ಭೂಮಿ ಪರಭಾರೆ ನಿಷೇಧ ಕಾಯ್ದೆ) ವ್ಯಾಪ್ತಿಯ ಆಸ್ತಿಗಳು ಮತ್ತು 94ಸಿ ಅಡಿಯಲ್ಲಿ ಬರುವ ಪ್ರಕರಣಗಳ ಭೂಮಿಗೆ ಈ ಯೋಜನೆಯಡಿ ಖಾತಾ ನೀಡಲಾಗುವುದಿಲ್ಲ.
ಅಭಿಯಾನದಲ್ಲಿನ ಸವಾಲುಗಳು
ಸರ್ಕಾರ ಕೈಗೊಂಡಿರುವ ಅಭಿಯಾನವು ಕೆಲವು ಸವಾಲುಗಳನ್ನು ಒಳಗೊಂಡಿದೆ. ಶೇ. 5ರಷ್ಟು ಅಭಿವೃದ್ಧಿ ಶುಲ್ಕವು ಸಾಮಾನ್ಯ ಮಧ್ಯಮ ವರ್ಗದ ಜನರಿಗೆ ದೊಡ್ಡ ಮೊತ್ತವಾಗಿ ಪರಿಣಮಿಸಬಹುದು. ಈಗಾಗಲೇ ಆಸ್ತಿ ಖರೀದಿಸಿ ಸಾಲದಲ್ಲಿರುವವರಿಗೆ ಇದು ಹೊರೆಯಾಗುವ ಸಾಧ್ಯತೆಯಿದೆ. ನಿವೇಶನಕ್ಕೆ ಖಾತಾ ನೀಡಿದ ನಂತರ, ಅದರ ಮೇಲಿರುವ ಕಟ್ಟಡವು ಬೈಲಾ ಉಲ್ಲಂಘನೆಯಾಗಿದ್ದರೆ ಮುಂದೇನು ಎಂಬ ಪ್ರಶ್ನೆ ಉಳಿಯುತ್ತದೆ. ಕಟ್ಟಡ ನಕ್ಷೆ ಅನುಮೋದನೆ ಸದ್ಯಕ್ಕೆ ಸಿಗುವುದಿಲ್ಲ ಎಂದು ಹೇಳಿರುವುದು ಗೊಂದಲಕ್ಕೆ ಕಾರಣವಾಗಬಹುದು. 100 ದಿನಗಳಲ್ಲಿ ಲಕ್ಷಾಂತರ ಅರ್ಜಿಗಳನ್ನು ವಿಲೇವಾರಿ ಮಾಡುವುದು ಮತ್ತು ಪ್ರತಿಯೊಂದು ಆಸ್ತಿಯ ಸ್ಥಳ ಪರಿಶೀಲನೆ ನಡೆಸುವುದು ಆಡಳಿತ ಯಂತ್ರಕ್ಕೆ ದೊಡ್ಡ ಸವಾಲಾಗಿದೆ.
ನಿಯಮದ ಪ್ರಕಾರ, ಕಂದಾಯ ಭೂಮಿಯನ್ನು ವಾಸಯೋಗ್ಯ ಎಂದು ಜಿಲ್ಲಾಧಿಕಾರಿಗಳಿಂದ ಪರಿವರ್ತನೆ ಮಾಡಿಸಿದ್ದರೆ ಮಾತ್ರ ಎ ಖಾತಾ ನೀಡಲಾಗುತ್ತದೆ. ಆದರೆ, ಬೆಂಗಳೂರಿನ ಶೇ. 60 ರಷ್ಟು ಬಿ ಖಾತಾ ಆಸ್ತಿಗಳು ರೆವೆನ್ಯೂನಲ್ಲಿದ್ದು, ಡಿಸಿ ಕನ್ವರ್ಷನ್ ಆಗಿಲ್ಲ. ಇಂತಹ ಆಸ್ತಿಗಳಿಗೆ ಎ ಖಾತಾ ಸಿಗುವುದಿಲ್ಲ. ಹೀಗಾಗಿ, ಅಭಿಯಾನವಿದ್ದರೂ ಬಹುಪಾಲು ಜನರಿಗೆ ಇದರ ಲಾಭ ಸಿಗುತ್ತಿಲ್ಲ. ಆನ್ಲೈನ್ ವ್ಯವಸ್ಥೆ ಎಂದು ಹೇಳಿದರೂ ಅಂತಿಮ ಅನುಮೋದನೆಗೆ ಸಹಾಯಕ ಕಂದಾಯ ಅಧಿಕಾರಿ ಲಾಗಿನ್ಗೆ ಹೋಗಬೇಕು. ಅಲ್ಲಿ ಕಡತ ವಿಲೇವಾರಿಯಾಗಲು ಮತ್ತೆ ಲಂಚ ನೀಡಬೇಕಾದ ಪರಿಸ್ಥಿತಿ ಇದೆ ಎಂಬುದು ಸಾರ್ವಜನಿಕರ ದೂರಾಗಿದೆ.
ಮೊದಲ ಬಾರಿಗೆ 'ಏಕರೂಪ ಖಾತಾ' ವ್ಯವಸ್ಥೆ ಜಾರಿ
ಅಭಿಯಾನ ಕುರಿತು ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿ ಮಾಡಲಾಗಿದೆ. ಆಸ್ತಿಗಳ ದಾಖಲೆ ಡಿಜಿಟಲೀಕರಣ ಮಾಡಲು ದಾಖಲೆಗಳನ್ನು ಸ್ಕ್ಯಾನ್ ಮಾಡಿದ್ದೇವೆ. ಆನ್ಲೈನ್ ಖಾತಾ ವ್ಯವಸ್ಥೆಯನ್ನೂ ಜಾರಿ ಮಾಡಿದ್ದೇವೆ. 50 ವರ್ಷಗಳಲ್ಲಿ ಇಂತಹ ತೀರ್ಮಾನ ಆಗಿರಲಿಲ್ಲ. ನಿಮ್ಮ ಆಸ್ತಿ ನಿಮ್ಮ ಹಕ್ಕು ಎಂಬ ಘೋಷವಾಕ್ಯದಡಿ ನಿಮ್ಮ ಹಕ್ಕನ್ನು ನಾವು ಸರಿಪಡಿಸುತ್ತಿದ್ದೇವೆ. ಕೆಟಿಸಿಪಿ ಕಾಯ್ದೆ 61 ರ ಅಡಿಯಲ್ಲಿ ಅನುಮೋದನೆಗೊಂಡ ಕಂದಾಯ ಜಮೀನಿನಲ್ಲಿ ಇರುವ ನಿವೇಶನಗಳಲ್ಲಿ ಒಂದಷ್ಟು ಜನ ಭೂ ಪರಿವರ್ತನೆ ಮಾಡಿಕೊಳ್ಳದೇ ಕಟ್ಟಡ ಕಟ್ಟಿಕೊಂಡಿದ್ದಾರೆ. ಈ ಆಸ್ತಿಗಳಿಗೆ ಬಿ ಖಾತಾ ನೀಡಲಾಗಿತ್ತು. ಇಂತಹವರಿಗೆ ಬ್ಯಾಂಕ್ ಸಾಲ ದೊರೆಯುತ್ತಿರಲಿಲ್ಲ. ಕಾನೂನು ಪ್ರಕಾರ ಕಟ್ಟಡ ನಕ್ಷೆಗೆ ಅನುಮತಿ ಸೇರಿ ಯಾವುದೇ ಸೌಲಭ್ಯಗಳನ್ನು ಪಡೆಯಲು ಪರದಾಡಬೇಕಿತ್ತು. ಸರ್ಕಾರದ ಹೊಸ ಕ್ರಮದಿಂದ ಜನರ ಸಮಸ್ಯೆ ತಪ್ಪುತ್ತದೆ. ಆದರೆ ಈ ನಿವೇಶಗಳಲ್ಲಿ ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸುವುದಿಲ್ಲ ಎಂದು ಹೇಳಿದ್ದರು. .1

