ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ | ತಕ್ಷಣ ಜಾರಿ ಅನುಮಾನ: ಹೊಸ ಸಮೀಕ್ಷೆಗೆ ಹೆಚ್ಚಿದ ʼಬಲಗೈʼ ಒತ್ತಡ?
ಎಸ್ಸಿ ಸಮುದಾಯಗಳಿಗೆ ಒಳಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದು, ಕೋರ್ಟ್ ಆದೇಶ ಕರ್ನಾಟಕದಲ್ಲಿ ಸದ್ಯದಲ್ಲೇ ಪಾಲನೆಯಾಗುವ ಸಾಧ್ಯತೆಗಳು ಕ್ಷೀಣವಾಗಿವೆ.
ಎಸ್ಸಿ ಸಮುದಾಯಗಳಿಗೆ ಒಳಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದು, ಕೋರ್ಟ್ ಆದೇಶ ರಾಜ್ಯದಲ್ಲಿ ಸದ್ಯದಲ್ಲೇ ಪಾಲನೆಯಾಗುವ ಸಾಧ್ಯತೆಗಳು ಕ್ಷೀಣವಾಗಿವೆ.
101 ಸಮುದಾಯಗಳನ್ನೊಳಗೊಂಡಿರುವ ದಲಿತರಲ್ಲಿ ಯಾವ ಸಮುದಾಯದ ಜನಸಂಖ್ಯೆ ಎಷ್ಟಿದೆ ಎನ್ನುವುದನ್ನು ನಿಖರವಾಗಿ ತಿಳಿದುಕೊಳ್ಳಲು ಹೊಸದಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕೆಂಬ ಒತ್ತಡ ರಾಜ್ಯ ಸರ್ಕಾರದ ಮೇಲೆ ತೆರೆಮರೆಯಲ್ಲಿ ನಡೆಯುತ್ತಿದೆ.
ಒಳ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಯಾವುದೇ ವಿಳಂಬ ಮಾಡದೇ ತಕ್ಷಣವೇ ಜಾರಿಗೆ ತರಬೇಕು ಎಂದು ಎಲ್ಲ ಎಡಗೈ ಸಮುದಾಯದ ಮುಖಂಡರುಗಳು ಹಾಗೂ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಅಲ್ಲದೇ ಸುಪ್ರೀಂ ಕೋರ್ಟ್ ಆದೇಶವನ್ನು ತಕ್ಷಣವೇ ಜಾರಿಗೊಳಿಸುವಂತೆ ಬಹಿರಂಗವಾಗಿಯೇ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ.
ಆದರೆ, ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳಲೂ ಆಗದ ಹಾಗೂ ಬಹಿರಂಗವಾಗಿ ವಿರೋಧಿಸಲು ಆಗದ ಸ್ಥಿತಿಯಲ್ಲಿರುವ ಎಸ್ಸಿ ಬಲಗೈ ಸಮುದಾಯ ಸೇರಿದಂತೆ ಎಸ್ಸಿ ಸ್ಪೃಶ್ಯ ಸಮುದಾಯಗಳು ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯದಲ್ಲಿರುವ ಎಲ್ಲ ಎಸ್ಸಿ ಸಮುದಾಯಗಳ ಜಾತಿ ಗಣತಿ ಹೊಸದಾಗಿ ಹಾಗೂ ನಿಖರವಾಗಿ ಮಾಡಿದ ನಂತರ ಕೋರ್ಟ್ ಆದೇಶ ಅನುಷ್ಠಾನ ಮಾಡಬೇಕು ಎಂಬ ನಿಲುವು ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕೃತವಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಏನು ಅವರ ವಾದ?
ಒಳ ಮೀಸಲಾತಿಯ ಎರಡೂ ವರ್ಗೀಕರಣದಲ್ಲಿ ಯಾವ ಸಮುದಾಯದ ಜನಸಂಖ್ಯೆ ಎಷ್ಟಿದೆ ಎಂಬ ನಿಖರವಾದ ದಾಖಲೆ ಇಲ್ಲ ಎನ್ನುವುದು ಹೊಸದಾಗಿ ಸಮೀಕ್ಷೆ ನಡೆಸಬೇಕೆನ್ನುವವರ ವಾದವಾಗಿದೆ.
ಪ್ರಮುಖವಾಗಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ಸಮೀಕ್ಷೆಯಲ್ಲಿ ನಗರ ಪ್ರದೇಶದ ಶೇ.30 ರಷ್ಟು ಜನರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂಬ ವಾದ ಇದೆ. ಸದಾಶಿವ ಆಯೋಗದ ವರದಿಯಲ್ಲಿ ರಾಜ್ಯದ ಒಟ್ಟು ಎಸ್ಸಿ ಸಮುದಾಯದ ಜನಸಂಖ್ಯೆ 96 ಲಕ್ಷ ಎಂದು ಹೇಳಿದ್ದಾರೆ. ಅದರಲ್ಲಿ ಬಲಗೈ ಸಮುದಾಯ 31 ಲಕ್ಷ, ಎಡಗೈ ಸಮುದಾಯ 32 ಲಕ್ಷ, ಬೋವಿ, ಲಂಬಾಣಿ 25 ಲಕ್ಷ ಹಾಗೂ ಇತರೆ ಸಮುದಾಯಗಳು 8 ಲಕ್ಷದಷ್ಟಿದ್ದಾರೆ ಎಂದು ಹೇಳಿದ್ದು, ಅದರ ಆಧಾರದಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಎಸ್ಸಿ ಸಮುದಾಯಕ್ಕೆ ಮೀಸಲಿದ್ದ ಶೇ.15 ರಲ್ಲಿ ನಾಲ್ಕು ವರ್ಗಗಳಾಗಿ ವಿಂಗಡಿಸಿ. ಎಸ್ಸಿ ಎಡಗೈ ಸಮುದಾಯಕ್ಕೆ ಶೇ. 6%, ಎಸ್ಸಿ ಬಲಗೈ ಸಮುದಾಯಕ್ಕೆ ಶೇ. 5 % ಬೇಡ ಜಂಗಮ, ಆದಿ ದ್ರಾವಿಡ ಸಮುದಾಯಳಿಗೆ ಶೇ. 3% ಹಾಗೂ ಲಂಬಾಣಿ, ಭೋವಿ, ಕೊರಚ, ಕೊರಮೆ ಸಮುದಾಯಗಳಿಗೆ ಶೇ.1% ರಷ್ಟು ಮೀಸಲಾತಿ ನೀಡಬಹುದು ಎಂದು ವರ್ಗೀಕರಣ ಮಾಡಿದೆ.
ಆದರೆ, ಅದೇ ವರ್ಷ ನಡೆದ ಜನಗಣತಿಯ ವರದಿಯಲ್ಲಿ ರಾಜ್ಯದಲ್ಲಿ ಎಸ್ಸಿ ಸಮುದಾಯದ ಜನಸಂಖ್ಯೆ 1.4 ಕೋಟಿ ಜನಸಂಖ್ಯೆ ಎಂದು ಹೇಳಿದೆ. ನ್ಯಾಯಮೂರ್ತಿ ಸದಾಶಿವ ಆಯೋಗದ ಸಮೀಕ್ಷೆಯಿಂದ ಹೊರಗುಳಿದವರು ಸುಮಾರು 6 ಲಕ್ಷ ಜನರು, ಜನಗಣತಿಯ ಜನಸಂಖ್ಯೆಯ ವ್ಯತ್ಯಾಸದಿಂದ ಹೊರಗುಳಿದವರು ಸುಮಾರು 8 ಲಕ್ಷ ಜನರು. ಒಟ್ಟು 14 ಲಕ್ಷ ಎಸ್ಸಿ ಸಮುದಾಯದ ಜನಸಂಖ್ಯೆ ಯಾವ ಒಳ ಪಂಗಡಕ್ಕೆ ಸೇರಿದ್ದಾರೆ ಎನ್ನುವುದು ಸ್ಪಷ್ಟತೆ ಇಲ್ಲ ಎನ್ನುವುದು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ವಿರೋಧಿಸುವವರ ವಾದವಾಗಿದೆ.
ಹೀಗಾಗಿ ಅಷ್ಟು ಜನಸಂಖ್ಯೆ ಯಾವ ವರ್ಗಕ್ಕೆ ಸೇರಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಅಷ್ಟೊಂದು ಜನರನ್ನು ಸಮೀಕ್ಷೆಯಿಂದ ಹೊರಗಿಟ್ಟು ಮೀಸಲಾತಿ ಹಂಚಿಕೆ ಮಾಡುವುದು ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಹೊಸದಾಗಿ ಸಮೀಕ್ಷೆ ಮಾಡಿಯೇ ಒಳ ಮೀಸಲಾತಿ ಜಾರಿಗೊಳಿಸಬೇಕೆಂಬ ವಾದ ಮಂಡಿಸಲು ಮುಂದಾಗಿದ್ದಾರೆ.
ದಲಿತರಲ್ಲಿ ಅತಿ ಹೆಚ್ಚಾಗಿರುವ ಎಡಗೈ ಮತ್ತು ಬಲಗೈ ಸಮುದಾಯಗಳಲ್ಲಿ ತಮ್ಮ ಉಪ ಪಂಗಡಗಳನ್ನು ದಾಖಲಿಸುವಾಗ ಕೆಲವು ಜಿಲ್ಲೆಗಳಲ್ಲಿ ಗೊಂದಲಗಳಿದ್ದು, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಎಡಗೈ ಸಮುದಾಯದವರು ಆದಿ ದ್ರಾವಿಡ, ಆದಿ ಕರ್ನಾಟಕ ಎಂದು ದಾಖಲೆಗಳಲ್ಲಿ ನಮೂದಿಸಿದ್ದು, ತುಮಕೂರಿನಲ್ಲಿ ಬಲಗೈ ಸಮುದಾಯದವರು ಆದಿ ದ್ರಾವಿಡ ಎಂದು ದಾಖಲಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ನಿಖರ ಅಂಕಿ ಅಂಶಗಳ ದಾಖಲೆಗಳನ್ನು ಮುಂದಿಟ್ಟುಕೊಂಡು ಒಳ ಮೀಸಲಾತಿ ಜಾರಿ ಮಾಡಲಿ ಎನ್ನುವುದು ಕೆಲವರ ವಾದವಾಗಿದೆ.
ಸರ್ಕಾರದ ನಿಲುವಿನಲ್ಲಿ ಗೊಂದಲ
ಒಳ ಮೀಸಲಾತಿ ಜಾರಿಗೊಳಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಎಡಗೈ ಸಮುದಾಯದ ನಾಯಕರು ಹಾಗೂ ಮಠಾಧೀಶರ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಮೀಸಲಾತಿ ಜಾರಿಗೆ ತಮ್ಮ ಸಹಮತವಿದ್ದು, ಈ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ನಾಯಕರ ಅಭಿಪ್ರಾಯ ಪಡೆಯುವುದಾಗಿ ಹೇಳಿದ್ದಾರೆ.
ಅಲ್ಲದೇ, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ಏನು ಎನ್ನುವುದನ್ನೂ ತಿಳಿದುಕೊಳ್ಳುವ ಆಲೋಚನೆಯನ್ನೂ ರಾಜ್ಯ ಸರ್ಕಾರ ಹೊಂದಿದಂತಿದೆ. ಆದರೆ, ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಕೊಟ್ಟಿರುವುದರಿಂದ ಕೇಂದ್ರದ ನಿಲುವು ಏನೇ ಆದರೂ, ರಾಜ್ಯ ಸರ್ಕಾರ ತನ್ನದೇ ಆದ ನಿಲುವು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ, ಕೆಲವು ರಾಜ್ಯಗಳಲ್ಲಿ ಎಸ್ಸಿ ಸಮುದಾಯಗಳಲ್ಲಿ ಇರುವ ಪಂಗಡಗಳು ಕೆಲವು ರಾಜ್ಯಗಳಲ್ಲಿ ಪವರ್ಗ 1 ರಲ್ಲಿ ಗುರುತಿಸಲ್ಪಟ್ಟಿವೆ. ಹೀಗಾಗಿ ಸಮುದಾಯಗಳ ಒಳ ಮೀಸಲಾತಿ ರಾಜ್ಯದಿಂದ ರಾಜ್ಯಗಳಿಗೆ ವ್ಯತ್ಯಾಸವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರವೇ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅನಿವಾರ್ಯತೆ ನಿರ್ಮಾಣವಾಗಲಿದೆ. ಹೀಗಾಗಿ ರಾಜ್ಯ ಸರ್ಕಾರ ನ್ಯಾಯಮೂರ್ತಿ ಸದಾಶಿವ ಆಯೋಗ ಅಥವಾ ಕಾಂತರಾಜ ಆಯೋಗದ ವರದಿಯನ್ನೇ ಆಧಾರವಾಗಿಟ್ಟುಕೊಂಡು ಇರುವ ಅಂಕಿ ಅಂಶಗಳ ಆಧಾರದಲ್ಲಿ ಒಳ ಮೀಸಲಾತಿ ನೀಡುವ ಪಯತ್ನ ಮಾಡುತ್ತದೆಯೋ ಅಥವಾ ನಿಖರವಾದ ಜನಸಂಖ್ಯೆಯ ಮಾಹಿತಿ ತಿಳಿಯಲು ಮತ್ತೊಂದು ಸಮೀಕ್ಷೆಗೆ ಮುಂದಾಗುತ್ತದೆಯೋ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಪಿ. ಎಂ. ನರೇಂದಸ್ವಾಮಿ, "ಒಳ ಮೀಸಲಾತಿ ಜಾರಿಗೊಳಿಸುವ ವಿಚಾರಕ್ಕೆ ವಿರೋಧವಿಲ್ಲ. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ನಿಖರವಾಗಿಲ್ಲ. ಸರ್ಕಾರ ಯಾವುದಾದರೂ ಸ್ಟ್ಯಾಟೆಸ್ಟಿಕಲ್ ಎವಿಡನ್ಸ್ (ಅಂಕಿ ಅಂಶಗಳ ದಾಖಲೆ) ಇಟ್ಟುಕೊಂಡು ಒಳ ಮೀಸಲಾತಿ ಜಾರಿ ಮಾಡಲಿ. ಎಸ್ಸಿ ಜಾತಿ ಗಣತಿ ಮಾಡಿ ಜನಸಂಖ್ಯೆಗೆ ಅನುಗುಣವಾಗಿ ನೀಡಿದರೆ ಅನುಕೂಲವಾಗಲಿದೆ. ಅಥವಾ ಕಾಂತರಾಜ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಅದರ ಆಧಾರದಲ್ಲಿ ಒಳ ಮೀಸಲಾತಿ ನೀಡಲಿ. ನಾವು ಯಾರೂ ಕಿತ್ತಾಟ ಮಾಡುವುದು ಬೇಡ. ಒಮ್ಮತದಿಂದ ಒಳ ಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇವೆ" ಎಂದು ಹೇಳಿದರು.