ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್‌  ʼಗುಪ್ತ ಸಮಾಲೋಚನೆʼ; ರಾಜೀವ್‌ ಗಾಂಧಿ ಇತಿಹಾಸ ಮರುಕಳಿಸಲಿದೆಯೇ?
x

ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್‌ ʼಗುಪ್ತ ಸಮಾಲೋಚನೆʼ; ರಾಜೀವ್‌ ಗಾಂಧಿ ಇತಿಹಾಸ ಮರುಕಳಿಸಲಿದೆಯೇ?

ವಿಮಾನ ನಿಲ್ದಾಣದಲ್ಲಿ ರಾಹುಲ್‌ಗಾಂಧಿ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೊಂದಿಗಿನ ಪ್ರತ್ಯೇಕ ಮಾತುಕತೆ ರಾಜ್ಯ ನಾಯಕತ್ವದ ಬದಲಾವಣೆಯ ಮುನ್ಸೂಚನೆಯೇ ಎಂಬ ಚರ್ಚೆಗಳು ಆರಂಭಗೊಂಡಿವೆ.


Click the Play button to hear this message in audio format

ಇತ್ತೀಚೆಗಷ್ಟೇ ಮೈಸೂರು ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಪ್ರತ್ಯೇಕವಾಗಿ ನಡೆಸಿದ ಮಾತುಕತೆ ರಾಜಕೀಯ ವಲಯದಲ್ಲಿ ತೀವ್ರ ಕೂತುಹಲ ಕೆರಳಿಸಿದೆ.

ಪ್ರತ್ಯೇಕ ಮಾತುಕತೆಯು ರಾಜ್ಯ ನಾಯಕತ್ವದ ಬದಲಾವಣೆಯ ಮುನ್ಸೂಚನೆಯೇ ಎಂಬ ಚರ್ಚೆಗಳು ಆರಂಭಗೊಂಡಿವೆ. ಈ ಘಟನೆಯು 1990ರಲ್ಲಿ ನಡೆದ ರಾಜೀವ್ ಗಾಂಧಿ ಮತ್ತು ವೀರೇಂದ್ರ ಪಾಟೀಲ್ ಅವರ ಐತಿಹಾಸಿಕ ಘಟನೆಯನ್ನು ನೆನಪಿಸಿದೆ.

ವೀರೇಂದ್ರ ಪಾಟೀಲರು ಸಿಎಂ ಆಗಿದ್ದ ಸಮಯದಲ್ಲಿ 1990ರ ಅಕ್ಟೋಬರ್ ತಿಂಗಳಲ್ಲಿ ರಾಮನಗರ-ಚನ್ನಪಟ್ಟಣ ಭಾಗದಲ್ಲಿ ಕೋಮುಗಲಭೆ ನಡೆದಿತ್ತು. ಈ ನಡುವೆ ವೀರೇಂದ್ರ ಪಾಟೀಲ್‌ ಅವರು ಪಾರ್ಶ್ವವಾಯುವಿಗೆ ತುತ್ತಾಗಿ ಚೇತರಿಸಿಕೊಳ್ಳುತ್ತಿದ್ದರು. ಅದೇ ಸಮಯದಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರು ಬೆಂಗಳೂರಿಗೆ ಬಂದಿದ್ದರು. ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದ ಅವರು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ "ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ" ಎಂದು ಘೋಷಿಸಿಬಿಟ್ಟರು. ಈ ಒಂದೇ ಒಂದು ಹೇಳಿಕೆ ವೀರೇಂದ್ರ ಪಾಟೀಲ್ ಅವರ ಪದಚ್ಯುತಿಗೆ ಕಾರಣವಾಯಿತು. ಇದು ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್‌ನಿಂದ ದೂರವಾಗುವಂತೆ ಮಾಡಿತು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನೆಲೆಯನ್ನು ದಶಕಗಳ ಕಾಲ ಕುಗ್ಗಿಸಿತು.

ಈಗ ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ನಡೆಸಿದ ಚರ್ಚೆಯು, ಇತಿಹಾಸ ಮರುಕಳಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹುಟ್ಟುಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ರಾಜೀವ್‌ ಪುತ್ರ ರಾಹುಲ್‌ ಗಾಂಧಿ ಕುತ್ತು ತರಲಿದ್ದಾರೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ.

ಇಂದಿನ ಪರಿಸ್ಥಿತಿ 1990ಕ್ಕಿಂತ ಭಿನ್ನವಾಗಿದ್ದರೂ, ಸವಾಲುಗಳು ಅಷ್ಟೇ ತೀವ್ರವಾಗಿವೆ. ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಂಡ ಬಳಿಕ ನಾಯಕತ್ವದ ಬದಲಾವಣೆ ವಿಚಾರದಲ್ಲಿ ತೀವ್ರ ಬೆಳವಣಿಗೆಗಳನ್ನು ಕಾಣಲಾರಂಭಿಸಿವೆ. ಇದು ಆಡಳಿತದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಯಾಗಿದ್ದಾರೆ. ಎರಡು ಬಣಗಳ ನಡುವೆ ನಡೆಯುತ್ತಿರುವ ರಾಜಕೀಯ ಕಿತ್ತಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಹೀಗಾಗಿ ಮೈಸೂರು ವಿಮಾನ ನಿಲ್ದಾಣದಲ್ಲಿ ನಡೆದ ಮಾತುಕತೆಗೆ ಚರ್ಚೆಗೆ ಗ್ರಾಸವಾಗಿದೆ.

ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿರುವುದು ಹಲವು ಸಾಧ್ಯತೆಗಳಿರಬಹುದು ಎಂಬ ಅನುಮಾನಗಳನ್ನು ಹುಟ್ಟುಹಾಕಿವೆ. ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯದ ಕೊರತೆ ಇರಬಾರದು ಎಂಬ ಎಚ್ಚರಿಕೆಯನ್ನು ರಾಹುಲ್ ನೀಡಿದ್ದಾರೆಯೇ? ಅಥವಾ ನಾಯಕತ್ವ ಬದಲಾವಣೆಗೆ ಏನಾದರೂ ಮುನ್ಸೂಚನೆ ನೀಡಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಮೊದಲಿನಿಂದಲೂ ಚರ್ಚೆ ಇದೆ. ಇದನ್ನೇ ಡಿ.ಕೆ.ಶಿವಕುಮಾರ್‌ ಬಳಸಿಕೊಂಡು ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆಗೆ ರಾಹುಲ್ ಗಾಂಧಿ ಅಡಿಪಾಯ ಹಾಕುತ್ತಿದ್ದಾರೆಯೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಈ ನಡುವೆ, ರಾಜ್ಯ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಬರುತ್ತಿರುವ ಬಗ್ಗೆ ರಾಹುಲ್ ಗಾಂಧಿ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವುದು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದು ಎಂಬುದು ಅವರ ಆತಂಕವಾಗಿರಬಹುದು ಎಂದು ಮೂಲಗಳು ಹೇಳಿವೆ.

1990, 2024ರ ನಡುವಿನ ಸಾಮ್ಯತೆ

ಎರಡೂ ಸಂದರ್ಭಗಳಲ್ಲಿ ಹೈಕಮಾಂಡ್ ವಿಮಾನ ನಿಲ್ದಾಣದಂತಹ ಸಾರ್ವಜನಿಕ ಸ್ಥಳದಲ್ಲಿ ರಾಜ್ಯ ನಾಯಕರೊಂದಿಗೆ ನಿರ್ಣಾಯಕ ಮಾತುಕತೆ ನಡೆಸಿರುವುದು ಮತ್ತು ಎರಡೂ ಸಂದರ್ಭಗಳಲ್ಲಿ ಮುಖ್ಯಮಂತ್ರಿಯ ಪದಚ್ಯುತಿಯ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿವೆ.

ವೀರೇಂದ್ರ ಪಾಟೀಲ್ ಅವರಿಗೆ ಅನಾರೋಗ್ಯದ ಕಾರಣವಿತ್ತು, ಸಿದ್ದರಾಮಯ್ಯ ಅವರಿಗೆ ನಾಯಕತ್ವ ಬದಲಾವಣೆಯ ಕೂಗಿನ ಕಾರಣವಿದೆ. ರಾಜೀವ್ ಗಾಂಧಿ ನೇರವಾಗಿಯೇ ಘೋಷಣೆ ಮಾಡಿದ್ದರು, ಆದರೆ ರಾಹುಲ್ ಗಾಂಧಿ ಅತ್ಯಂತ ಜಾಣ್ಮೆಯಿಂದ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಅಂದು ವೀರೇಂದ್ರ ಪಾಟೀಲ್ ಅವರಿಗೆ ಶಾಸಕರ ಬೆಂಬಲವಿದ್ದರೂ ಹೈಕಮಾಂಡ್ ಪದಚ್ಯುತಿಗೊಳಿಸಿತು. ಆದರೆ ಇಂದು ಸಿದ್ದರಾಮಯ್ಯ ಅವರಿಗೆ ಅಹಿಂದ ವರ್ಗದ ಮತ್ತು ಬಹುತೇಕ ಶಾಸಕರ ಭದ್ರ ಬುನಾದಿ ಇದೆ.

ಒಂದು ವೇಳೆ ರಾಹುಲ್ ಗಾಂಧಿ ಅವರ ಈ ಭೇಟಿಯು ನಾಯಕತ್ವ ಬದಲಾವಣೆಯ ಮುನ್ನುಡಿಯಾಗಿದ್ದರೆ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವುದು ಅಷ್ಟು ಸುಲಭದ ಮಾತಲ್ಲ. ಅವರು ಹಿಂದುಳಿದ ವರ್ಗಗಳ ಬಲಿಷ್ಠ ನಾಯಕನಾಗಿದ್ದು, ಅವರನ್ನು ಕೆಳಗಿಳಿಸಿದರೆ ಪಕ್ಷಕ್ಕೆ ಆಗುವ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಹೈಕಮಾಂಡ್ ಪಾಲಿನ ಸಂಕಷ್ಟ. ಮತ್ತೊಂದೆಡೆ, ಡಿ.ಕೆ. ಶಿವಕುಮಾರ್ ಅವರು 'ಸಂಘಟನಾ ಚತುರ' ಮತ್ತು ಪಕ್ಷಕ್ಕೆ ನಿಷ್ಠರಾಗಿರುವ ನಾಯಕ. ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡಬೇಕೆಂಬ ಒತ್ತಡವೂ ಹೆಚ್ಚಿದೆ. ವಿಮಾನ ನಿಲ್ದಾಣದ ಈ 'ಪ್ರತ್ಯೇಕ ಭೇಟಿ' ಈ ಇಬ್ಬರು ನಾಯಕರ ನಡುವಿನ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನವೂ ಇರಬಹುದು.

ಮೈಸೂರು ವಿಮಾನ ನಿಲ್ದಾಣದಲ್ಲಿ ನಡೆದ ಆ ಕೆಲವು ನಿಮಿಷಗಳ ಸಂಭಾಷಣೆ ರಾಜ್ಯದ ಮುಂದಿನ ರಾಜಕೀಯ ದಿಕ್ಸೂಚಿಯನ್ನು ನಿರ್ಧರಿಸಬಹುದು ಎಂದು ಹೇಳಲಾಗಿದೆ. ಇತಿಹಾಸವು ಪುನರಾವರ್ತನೆಯಾಗುತ್ತದೆಯೇ ಅಥವಾ ಹೊಸ ರಾಜಕೀಯ ತಿರುವು ಪಡೆಯುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಸದ್ಯಕ್ಕಂತೂ ಮೈಸೂರು ವಿಮಾನ ನಿಲ್ದಾಣವು ರಾಜ್ಯದ ರಾಜಕೀಯದ ಶಕ್ತಿ ಕೇಂದ್ರವಾಗಿ ಬದಲಾಗಿರುವುದಂತೂ ಸತ್ಯ. ಅದೇನೇ ಇರಲಿ 1990ರ ರಾಜೀವ್ ಗಾಂಧಿ ಅವರ ನಿರ್ಧಾರ ಕಾಂಗ್ರೆಸ್‌ಗೆ ತಂದೊಡ್ಡಿದ ಸಂಕಷ್ಟವನ್ನು ರಾಹುಲ್ ಗಾಂಧಿ ನೆನಪಿನಲ್ಲಿಟ್ಟುಕೊಂಡೇ ಈ ಬಾರಿ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.

Read More
Next Story