National Highway Tussle| ಮಂಗಳೂರು-ಬೆಂಗಳೂರು ಹೆದ್ದಾರಿ, ಹಾಸನದವರೆಗೆ ಕಿರಿಕಿರಿ
x

National Highway Tussle| ಮಂಗಳೂರು-ಬೆಂಗಳೂರು ಹೆದ್ದಾರಿ, ಹಾಸನದವರೆಗೆ ಕಿರಿಕಿರಿ


ಕಡಲನಗರಿ ಮಂಗಳೂರಿನಿಂದ ಬೆಂಗಳೂರಿಗೆ ತಲುಪಲು ಸುಲಭವಾದ ಮಾರ್ಗ ರಾಷ್ಟ್ರೀಯ ಹೆದ್ದಾರಿ 75. ಎಲ್ಲವೂ ಸರಿಯಾಗಿದ್ದರೆ, ಈ ಎರಡು ನಗರಗಳ ಮಧ್ಯೆ ಸ್ವಂತ ವಾಹನದಲ್ಲಿ ಐದರಿಂದ ಆರು ಗಂಟೆಯೊಳಗೆ ತಲುಪಬಹುದು. ಆದರೆ ಬಿ.ಸಿ.ರೋಡ್ (ಬಂಟ್ವಾಳ ಕ್ರಾಸ್‌ ರೋಡ್) ಮತ್ತು ಅ ಡ್ಡಹೊಳೆ ನಡುವೆ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಆರಂಭಗೊಂಡ ಮೇಲೆ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿವೆ. ಹೀಗಾಗಿ ಮಂಗಳೂರಿಂದ ಹಾಸನದವರೆಗೆ ತಲುಪುವುದು ಕಷ್ಟ ಎಂಬ ಮಾತು ಪ್ರಯಾಣಿಕರ ಬಾಯಲ್ಲಿ ಕೇಳಿಬಂದಿವೆ. ಸ್ವಂತ ವಾಹನ ಇದ್ದವರು ಪರ್ಯಾಯ ರಸ್ತೆಗಾಗಿ ಗೂಗಲ್ ಮೊರೆ ಹೋಗುವುದು ಸಾಮಾನ್ಯ ಸಂಗತಿ ಎಂಬಂತಾಗಿದೆ.

ಬಿ.ಸಿ.ರೋಡ್ ನಿಂದ ಅಡ್ಡಹೊಳೆಯವರೆಗೆ 64 ಕಿ.ಮೀ ಕಾಮಗಾರಿ ನಡೆಯುತ್ತಿದೆ. ಇದರ ಒಟ್ಟು ವೆಚ್ಚ 1417.8 ಕೋಟಿ ರೂ. ಇದರಲ್ಲಿ ಬಿ.ಸಿ.ರೋಡ್ ಮತ್ ಪರಿಯಶಾಂತಿವರೆಗಿನ 49 ಕಿ.ಮೀ ದೂರವನ್ನು 1,100.88 ಕೋಟಿ ರೂಗಳಲ್ಲಿ ಕೆಎನ್ ಆರ್ ಕನ್ಸ್ಟ್ರಕ್ಷನ್ಸ್ ಹೈದರಾಬಾದ್ ನಿರ್ಮಾಣ ಗುತ್ತಿಗೆ ವಹಿಸಿಕೊಂಡು ಕೆಲಸ ಮಾಡುತ್ತಿದ್ದರೆ, ಪೆರಿಯಶಾಂತಿಯಿಂದ ಅಡ್ಡಹೊಳೆವರೆಗೆ 15 ಕಿ.ಮೀ ದೂರದ ಕೆಲಸವನ್ನು 317 ಕೋ ರೂ ವೆಚ್ಚದಲ್ಲಿ ನಿರ್ಮಾಣ ಕಾರ್ಯವನ್ನು ಎಂ.ಔತಡೆ ಪ್ರೈವೇಟ್ ಲಿ. ಮಹಾರಾಷ್ಟ್ರದ ಕಂಪನಿ ಗುತ್ತಿಗೆ ವಹಿಸಿಕೊಂಡಿದೆ.

ಫ್ಲೈಓವರ್, ಓವರ್ ಪಾಸ್

ಇಡೀ ಕಾಮಗಾರಿಯಲ್ಲಿ ಗಮನ ಸೆಳೆಯುವುದು 2.1 ಮೀಟರ್ ಉದ್ದದ ಕಲ್ಲಡ್ಕ ಫ್ಲೈಓವರ್. ಇದರಲ್ಲಿ 72 ಕಂಬಗಳು ಇದ್ದು, ಈಗಾಗಲೇ 60 ಕಂಬಗಳನ್ನು ನಿರ್ಮಿಸಿ ಆಗಿದೆ. ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ ಜಂಕ್ಷನ್, ಉಪ್ಪಿನಂಗಡಿ ಸುಬ್ರಹ್ಮಣ್ಯ ಕ್ರಾಸ್, ನೆಲ್ಯಾಡಿ, ಪೆರಿಯಶಾಂತಿಯಲ್ಲಿ ಓವರ್ ಪಾಸ್ ಗಳಿವೆ. ಬಿ.ಸಿ.ರೋಡ್, ಉಪ್ಪಿನಂಗಡಿ ಮತ್ತು ಅಡ್ಡಹೊಳೆಯಲ್ಲಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದರೆ, ಪಾಣೆಮಂಗಳೂರು, ಮೆಲ್ಕಾರ್, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ, ನೆಲ್ಯಾಡಿಗಳಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ.

2017ರಲ್ಲಿ ಆರಂಭಗೊಂಡ ಕಾಮಗಾರಿ

2017ನೇ ಇಸವಿಯಲ್ಲಿ ಕಾಮಗಾರಿ ಆರಂಭಗೊಂಡ ಸಂದರ್ಭ ಎಲ್‌&ಟಿ ಕಂಪನಿ ಗುತ್ತಿಗೆ ವಹಿಸಿಕೊಂಡಿತ್ತು. ಆದರೆ ಅದು ಅರ್ಧಕ್ಕೆ ನಿಲ್ಲಿಸಿತ್ತು, ಆ ವೇಳೆ ರಸ್ತೆಯನ್ನು ಅಗೆದುಹಾಕಿ ಪ್ರಯಾಣಿಕರು, ಸ್ಥಳೀಯರು ಹಿಡಿಶಾಪ ಹಾಕುವಂತೆ ಮಾಡಿತ್ತು. ಬಳಿಕ 2021ರಲ್ಲಿ ಕೆಎನ್ ಆರ್ ಮತ್ತು ಎಂ.ಔತಡೆ ನಿರ್ಮಾಣ ಕಂಪನಿಗಳಿಗೆ ಬಿ.ಸಿ.ರೋಡ್ ಅಡ್ಡಹೊಳೆ ನಡುವಿನ ರಸ್ತೆಯನ್ನು ಪಾಲು ಮಾಡಿ ನಿರ್ಮಾಣಕ್ಕೆ ಕೊಡಲಾಯತು. ಮೂರು ವರ್ಷಗಳಿಂದ ಕೆಲಸ ನಡೆಯುತ್ತಿದೆ. ಯಾವ ಭಾಗವೂ ಪೂರ್ಣವಾಗಿದೆ ಎಂದು ಹೇಳುವಂತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಮುಂದಿನ ವರ್ಷ ಮುಗಿಸುವುದೇ.. ಎನ್ನುತ್ತಾರೆ. ಜನಪ್ರತಿನಿಧಿಗಳು ಅವರ ಮಾತನ್ನು ಪುನರುಚ್ಛರಿಸುತ್ತಾರೆ. ಈಗಿನ ಡೆಡ್ ಲೈನ್ ಪ್ರಕಾರ, 2025ರಲ್ಲಿ ಕಾಮಗಾರಿ ಮುಗಿದು ವಾಹನಗಳು ಸರಾಗವಾಗಿ ಓಡಾಡಬೇಕು!! ಈಗ ಗುರುತು ಮಾಡುವಂಥ ಹಾನಿಗೀಡಾದ ಜಾಗಗಳೆಂದರೆ ಬಿ.ಸಿ.ರೋಡ್ ನಿಂದ ಮಾಣಿ, ಉಪ್ಪಿನಂಗಡಿಯಿಂದ ನೆಲ್ಯಾಡಿ, ಶಿರಾಡಿ ಘಾಟಿ ಮುಗಿದ ಬಳಿಕ ಸಕಲೇಶಪುರದ ಮಾರೇನಹಳ್ಳಿ ರಸ್ತೆ ಡ್ರೈವರ್ ಗಳಿಗೆ ಚಾಲೆಂಜ್ ನೀಡುವ ಹೆದ್ದಾರಿ.

ಕೃಷಿ ಭೂಮಿಗೆ ಹಾನಿ, ಪರಿಹಾರವೂ ಇಲ್ಲ, ಭೂಕುಸಿತ ಭೀತಿ

ಎಷ್ಟು ಜಾಗ ರಸ್ತೆಗಾಗಿ ಸ್ವಾಧೀನವಾಗುತ್ತದೋ ಅಷ್ಟಕ್ಕೆ ಮಾತ್ರ ಪರಿಹಾರ ನೀಡುವುದು ರಸ್ತೆ ಅಗಲಗೊಳ್ಳುವ ಕಾಮಗಾರಿ ಎಲ್ಲಾದರೂ ನಡೆದರೆ ಬಳಸುವ ಮಾನದಂಡವಾಗಿದೆ. ಹೀಗಾಗಿ ಅದರಾಚೆಗೆ ಇರುವ ಕೃಷಿಭೂಮಿ, ವ್ಯವಹಾರ ನಡೆಸುವವರು ಇದರಿಂದ ಬಾಧಿತರಾದರೂ ಮೌನವಾಗಿಯೇ ಇರಬೇಕಷ್ಟೇ. ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆ ಕಾಮಗಾರಿ ನಡೆಸುವ ವೇಳೆ ಇಂಥ ಅನೇಕ ಪ್ರಕರಣಗಳು ಕಂಡುಬರುತ್ತವೆ. ಹೆದ್ದಾರಿ ಇಕ್ಕೆಲಗಳಲ್ಲಿರುವ ಮನೆ, ಕೃಷಿಭೂಮಿಗೆ ಸಂಪರ್ಕ ದಾರಿಯೇ ಇಲ್ಲ. ಸಾಕಷ್ಟು ಕೃಷಿಭೂಮಿಗಳಿಗೆ ನೀರು ನುಗ್ಗಿ ಅನಾಹುತಗಳು ಆಗಿವೆ. ಭೂಮಿಯ ಏರುತಗ್ಗುಗಳನ್ನು ನಿವಾರಿಸುವ ಸಂದರ್ಭ, ಸಮತಟ್ಟು ಮಾಡುವ ವೇಳೆ ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡುವ ಕಾಮಗಾರಿ ಕಂಪನಿ ಪಕ್ಕದಲ್ಲಿ ಮನೆಗಳಿವೆಯೇ ಎಂಬುದನ್ನು ನೋಡುವುದಿಲ್ಲ. ಹೀಗಾಗಿ ಮನೆಗಳ ಬುಡಕ್ಕೇ ಜೆಸಿಬಿ ಬಂದು ಗರ್ಜಿಸಿದ್ದುಂಟು. ಹೀಗಾಗಿ ಕೆಲವೆಡೆ ಕಾಂಕ್ರೀಟ್ ತಡೆಗೋಡೆ ಹಾಕಲಾಗಿದ್ದರೂ ಅವುಗಳನ್ನು ಮೀರಿ ಗುಡ್ಡಕುಸಿತ ಉಂಟಾಗಿದೆ. ಕಳೆದ ಮಳೆಗಾಲದಲ್ಲಿ ಸಣ್ಣಪ್ರಮಾಣದ ಭೂಕುಸಿತ ಉಂಟಾಗಿದ್ದು, ಉತ್ತರ ಕನ್ನಡದಂಥ ಘಟನೆಗಳು ನಮ್ಮ ಕಣ್ಣೆದುರೇ ಇರುವ ಕಾರಣ ಇಂಥದ್ದಕ್ಕೆಲ್ಲಾ ಹೆಚ್ಚುವರಿ ಭೂಸ್ವಾಧೀನ ನಡೆಸಿ ಪರಿಹಾರ ನೀಡಿ, ಅಪಾಯಕಾರಿ ಮನೆ ಗುಡ್ಡಗಳನ್ನು ತೆರವು ಮಾಡಬೇಕು ಎನ್ನುತ್ತಾರೆ ಸ್ಥಳೀಯರಾದ ರಮೇಶ ಗೌಡ.

ಪೆರ್ನೆ ಸಮೀಪ ಚಂದ್ರಾವತಿ ಮತ್ತು ಧರ್ಣಪ್ಪ ನಾಯ್ಕ್ ಅವರ ಎರಡು ಎಕರೆ ವಿಸ್ತೀರ್ಣದ ಅಡಕೆ ತೋಟದಲ್ಲಿ ಈಗಲೂ ನೀರು ನಿಲ್ಲುತ್ತಿದೆ. ಬೆಂಗಳೂರಿನಲ್ಲಿ ಮಳೆನೀರು ಒಂದು ರಾತ್ರಿ ನುಗ್ಗಿದರೆ ಬೆನ್ನತ್ತುವ ರಾಜಕಾರಣಿ, ಅಧಿಕಾರಿ ವರ್ಗ, ಇತ್ತ ಕಣ್ಣೆತ್ತಿಯೂ ನೋಡೋದಿಲ್ಲ ಎಂಬುದು ಅವರ ಅಳಲು. ಎರಡು ತಿಂಗಳ ಹಿಂದೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಣಾಮ ಶೂನ್ಯ.

ಪರ್ಯಾಯ ಹಾದಿ ಹುಡುಕಾಟದಲ್ಲಿ...

ಬಿ.ಸಿ.ರೋಡ್ ನಿಂದ ಗುಂಡ್ಯದವರೆಗೆ ರಸ್ತೆ ಎಲ್ಲಿ ಸರಿ ಇದೆ ಎಂದು ಊಹಿಸಲು ಅಸಾಧ್ಯ. ಕಾಮಗಾರಿ ನಿರ್ಮಾಣವಾಗುತ್ತಿರುವ ಸಂದರ್ಭ ಸರಿಯಾದ ಸರ್ವೀಸ್ ರಸ್ತೆಯನ್ನೂ ನಿರ್ಮಿಸದ ಕಾರಣ, ಪ್ರತಿಯೊಂದು ಕಡೆಯೂ ಹಾಳಾಗಿದೆ. ಇದು ಮಂಗಳೂರು ಬೆಂಗಳೂರು ಪ್ರಯಾಣಕ್ಕೆ ಹೊಡೆತ ನೀಡುತ್ತಿದೆ. ಪರ್ಯಾಯ ಮಾರ್ಗಕ್ಕೆ ಹೆಚ್ಚುವರಿ ಇಂಧನ ವ್ಯಯಿಸಬೇಕಿರುವ ಕಾರಣ ವಾಹನ ಸವಾರರಿಗೆ ಕಷ್ಟ. ನಿತ್ಯ ಸಾಗುವ ಬಸ್ಸುಗಳು, ಲಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಾರು ಚಾಲಕರಂತೂ ಗೂಗಲ್ ಮ್ಯಾಪ್ ನಲ್ಲಿ ಸಮೀಪದ ದಾರಿ ಎಲ್ಲುಂಟು ಎಂದು ಹುಡುಕುತ್ತಿದ್ದಾರೆ. ಕಲ್ಲಡ್ಕದಲ್ಲಿ ರಸ್ತೆ ನಿರ್ಮಾಣ ವೇಳೆ ಸುರಕ್ಷತಾ ಕ್ರಮ ಅನುಸರಿಸುತ್ತಿಲ್ಲ ಎಂದು ಪುತ್ತೂರು ನಿವಾಸಿ ತಿರುಮಲ ಕುಮಾರ್ ಎಂಬುವರು ದೂರಿದರು. ಏರ್ ಪೋರ್ಟ್ ಗೆ ಕಾರಿನಲ್ಲಿ ಅವರು ಹೋಗುತ್ತಿದ್ದ ವೇಳೆ ಫ್ಲೈಓವರ್ ಮೇಲಿನಿಂದ ಸಿಮೆಂಟ್ ಮಿಶ್ರಿತ ನೀರು ಅವರ ಮುಂದಿನ ಗಾಜಿಗೆ ಬಿದ್ದು ಸಮಸ್ಯೆ ಉಂಟಾಗಿರುವ ವಿಚಾರವನ್ನು ಅವರು ತಿಳಿಸಿದರು.

ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುವುದೇನು?

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿ ಕಾಮಗಾರಿ ತ್ವರಿತಗೊಳಿಸಲು ಸೂಚಿಸಿದ್ದಾರೆ. ಈ ಕುರಿತು "ದ ಫೆಡರಲ್‌ ಕರ್ನಾಟಕʼದ ಜತೆ ಮಾತನಾಡಿದ ಅವರು ಮಳೆಗಾಲ ಕಳೆದ ಕೂಡಲೇ ಪ್ಯಾಚ್ ವರ್ಕ್ ಗಳನ್ನು ಮಾಡಿಸುವುದೇ ಮೊದಲಾದ ಕಾರ್ಯವನ್ನು ನಡೆಸಲು ಸೂಚಿಸಿದ್ದೇನೆ. ಜನರಿಗೆ ತೊಂದರೆ ಉಂಟಾಗದಂತೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ತಿಳಿಸಲಾಗಿದೆ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಕೆ.ಎನ್.ಆರ್. ಕನ್ಸ್ ಸ್ಟ್ರಕ್ಷನ್ಸ್ ನ ಮುಖ್ಯ ಎಂಜಿನಿಯರ್ ರಘುನಾಥ ರೆಡ್ಡಿ, ಜನರಿಗೆ ಸಮಸ್ಯೆ ಆಗದಂತೆ ಕಾಮಗಾರಿ ನಡೆಸಲು ಪ್ರಯತ್ನಿಸುತ್ತಿದ್ದೇವೆ. ಮಳೆಯಿಂದಾಗಿ ನಮಗೂ ತೊಂದರೆಗಳು ಉಂಟಾಗಿವೆ. ಆದಾಗ್ಯೂ ನಾವು ಕೆಲಸಕಾರ್ಯಗಳನ್ನು ಶೀಘ್ರವಾಗಿ ಮುಗಿಸುವ ಗುರಿ ಹೊಂದಿದ್ದೇವೆ. ಮುಂದಿನ ಮಾರ್ಚ್ ವೇಳೆ ಕಲ್ಲಡ್ಕ ಫ್ಲೈಓವರ್ ಜನಸಂಚಾರಕ್ಕೆ ತೆರೆದುಕೊಳ್ಳಲಿದೆ. ಆಗ ಸಾಕಷ್ಟು ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂದರು

Read More
Next Story