Mysore MUDA Scam | ಪ್ರತಿಪಕ್ಷ ಪಾಳೆಯದಲ್ಲೂ ಕಂಪನ ಸೃಷ್ಟಿಸಿದ ʼಮುಡಾಸ್ತ್ರʼ
ಮುಡಾ ಹಗರಣವನ್ನೇ ಛೂಬಾಣ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಉರುಳಿಸಲು ಗುರಿ ಇಟ್ಟು ದಾಳಿ ನಡೆಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಕಳೆದ ಒಂದು ವಾರದಿಂದ ತಮ್ಮದೇ ಪಾಳೆಯದ ದಂಡ ನಾಯಕರೇ ಶತ್ರು ಸೇನೆಯ ಪರ ವಕಾಲತು ವಹಿಸುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.
ಒಂದು ಕಡೆ, ಮುಡಾ ಹಗರಣದ ಸುಳಿಯಲ್ಲಿ ಸಿಲುಕಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಮಿತ್ರಕೂಟ ಮುಗಿಬಿದ್ದಿದ್ದರೆ, ಮತ್ತೊಂದು ಕಡೆ ಸ್ವತಃ ತಮ್ಮದೇ ಕೋಟೆಯಲ್ಲಿ ಕಂದಕ ಬೀಳುತ್ತಿರುವ ಆತಂಕವೂ ಉಭಯ ಪಕ್ಷಗಳನ್ನು ಕಂಗೆಡಿಸಿದೆ.
ಮುಡಾ ಹಗರಣವನ್ನೇ ಛೂಬಾಣ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಉರುಳಿಸಲು ಗುರಿ ಇಟ್ಟು ದಾಳಿ ನಡೆಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಕಳೆದ ಒಂದು ವಾರದಿಂದ ತಮ್ಮದೇ ಪಾಳೆಯದ ದಂಡ ನಾಯಕರೇ ಶತ್ರು ಸೇನೆಯ ಪರ ವಕಾಲತು ವಹಿಸುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿಯಲ್ಲಿ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಪಡೆ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅದೇ ಹೊತ್ತಿಗೆ ಅವರದೇ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ ಸಿಂಹ ಸೇರಿದಂತೆ ಕೆಲವರು ಸಿದ್ದರಾಮಯ್ಯ ಪರ ಪರೋಕ್ಷ ಬ್ಯಾಟಿಂಗ್ ಬೀಸುತ್ತಿದ್ದಾರೆ.
ಜೆಡಿಎಸ್ ನಲ್ಲಿ ಕೂಡ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಮುಡಾ ಹಗರಣವನ್ನೇ ಪಾಶುಪತಾಸ್ತ್ರವಾಗಿ ಬಳಸಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಆದರೆ, ಅವರದೇ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ, ಮಾಜಿ ಸಚಿವ ಜಿ ಟಿ ದೇವೇಗೌಡ ಅವರು ಸಿದ್ದರಾಮಯ್ಯ ಏಕೆ ರಾಜೀನಾಮೆ ಕೊಡಬೇಕು? ಎಂದು ಸಾರ್ವಜನಿಕ ಸಭೆಯಲ್ಲೇ ಘರ್ಜಿಸಿ ಎಚ್‌ಡಿಕೆ ಸೇರಿದಂತೆ ಪಕ್ಷದ ವರಿಷ್ಠರಿಗೆ ಭಾರೀ ಇರುಸುಮುರುಸು ತಂದಿದ್ದಾರೆ.
ವಿಜಯೇಂದ್ರಗೆ ಆರ್‌ಸಿಬಿ ಗೂಗ್ಲಿ
ಈ ಆಂತರಿಕ ಬೇಗುದಿಗಳಲ್ಲಿ ಮೈತ್ರಿಕೂಟದ ಮುಡಾ ಹೋರಾಟದ ಕಾವು ಕರಗುತ್ತಿರುವ ಹೊತ್ತಿನಲ್ಲೇ ಯತ್ನಾಳ್ ಮತ್ತು ಬಿಜೆಪಿ ಮಾಜಿ ನಾಯಕ ಕೆ ಎಸ್ ಈಶ್ವರಪ್ಪ ಜಂಟಿಯಾಗಿ 'ಆರ್‌ಸಿಬಿ' ಕಟ್ಟಲು ಮುಂದಾಗಿದ್ದಾರೆ. ಯಡಿಯೂರಪ್ಪ ಮತ್ತು ಅವರ ಮಕ್ಕಳಿಂದಾಗಿ ತಮಗೆ ಬಿಜೆಪಿಯಲ್ಲಿ ಅನ್ಯಾಯವಾಗಿದೆ. ನಾವೆಲ್ಲಾ ಹಗಲಿರುಳು ದುಡಿದು ಕಟ್ಟಿದ ಪಕ್ಷ ಇಂದು ಒಂದು ಕುಟುಂಬದ ಆಸ್ತಿಯಂತಾಗಿದೆ ಎಂಬ ಗಂಭೀರ ಆರೋಪ ಮಾಡಿ ಪಕ್ಷದ ವಿರುದ್ಧವೇ ಕಳೆದ ಲೋಕಸಭಾ ಚುನಾವಣೆಯಲ್ಲಿ ತೊಡೆ ತಟ್ಟಿ ಪಕ್ಷದಿಂದ ಅಮಾನತುಗೊಂಡಿರುವ ಕೆ ಎಸ್ ಈಶ್ವರಪ್ಪ ಇದೀಗ ತಮ್ಮ ಹಳೆಯ 'ರಾಯಣ್ಣ ಬ್ರಿಗೇಡ್'ಗೆ ಮರುಜೀವ ಕೊಡುವ ಯತ್ನ ನಡೆಸಿದ್ದಾರೆ.
ಆದರೆ, ಈ ಬಾರಿ ತಮ್ಮ ಜೊತೆಗೆ ಬಿಜೆಪಿಯ ಮತ್ತೊಬ್ಬ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೂ ಸೇರಿಸಿಕೊಂಡು ʼರಾಯಣ್ಣ- ಚೆನ್ನಮ್ಮ ಬ್ರಿಗೇಡ್(ಆರ್‌ಸಿಬಿ)ʼ ಕಟ್ಟುವುದಾಗಿ ಘೋಷಿಸಿದ್ದಾರೆ. ಜೊತೆಗೆ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಕೂಡ ತಮ್ಮ ಆರ್‌ಸಿಬಿಗೆ ಕೈಜೋಡಿಸಲಿದ್ದಾರೆ. ಹಿಂದೂಗಳ ಹಿತರಕ್ಷಣೆಗಾಗಿ ಆರ್‌ಸಿಬಿ ಕೆಲಸ ಮಾಡಲಿದೆ ಎಂದೂ ಈಶ್ವರಪ್ಪ ಹೇಳಿದ್ದಾರೆ.
ಈಗಾಗಲೇ ಪಕ್ಷದಿಂದ ಹೊರಹೋಗಿರುವ ಈಶ್ವರಪ್ಪ ಜೊತೆಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರೋಧಿ ಗುಂಪಿನ ಪಂಚಮಸಾಲಿ ಸಮುದಾಯದ ಪ್ರಬಲ ನಾಯಕರಾದ ಯತ್ನಾಳ್ ಕೂಡ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ತನ್ನ ಪ್ರಬಲ ಮತಬ್ಯಾಂಕ್ ಆದ ಪಂಚಮಸಾಲಿ ಸಮುದಾಯದ ಮತಗಳು ಉತ್ತರಕರ್ನಾಟಕದಲ್ಲಿ ನಿರ್ಣಾಯಕ ಎಂಬ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಗೆ ಈ ಬೆಳವಣಿಗೆ ತಲೆನೋವು ತಂದಿದೆ.
ಆ ಹಿನ್ನೆಲೆಯಲ್ಲಿ ಬಿ ವೈ ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ವಾಕ್ಸಮರ ಮತ್ತು ಸಂಘರ್ಷ ಇದೀಗ ಬಿಜೆಪಿಯ ಇಬ್ಬರು ಮುಖಂಡರ ನಡುವಿನ ಸಂಘರ್ಷವಾಗಿ ಮಾತ್ರ ಉಳಿದಿಲ್ಲ. ರಾಜ್ಯದಲ್ಲಿ ಪಕ್ಷದ ಅಸ್ತಿತ್ವಕ್ಕೇ ಕೊಡಲಿ ಪೆಟ್ಟು ಕೊಡುವ ಮಟ್ಟಿಗೆ ಆ ಸಂಘರ್ಷ ಬೆಳೆದುನಿಂತಿದೆ ಎಂಬುದು ಪಕ್ಷದ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಗದಗದಲ್ಲಿ ಮಂಗಳವಾರ ಮಾತನಾಡಿದ್ದು ಕೆ ಎಸ್ ಈಶ್ವರಪ್ಪ, ರಾಯಣ್ಣ- ಚೆನ್ನಮ್ಮ ಬ್ರಿಗೇಡ್ ವಿಷಯದಲ್ಲಿ ಅ.20ರಂದು ಬಾಗಲಕೋಟೆಯಲ್ಲಿ ಬೃಹತ್ ಸಮಾವೇಶ ನಡೆಸುವುದಾಗಿಯೂ, ಸಮಾವೇಶದಲ್ಲಿ ಬ್ರಿಗೇಡ್ ಮುಂದಿನ ರೂಪುರೇಷೆ ನಿರ್ಧರಿಸಲಿದ್ದು, ತಮ್ಮೊಂದಿಗೆ ಈ ವಿಷಯದಲ್ಲಿ ಕೇವಲ ಯತ್ನಾಳ್ ಮಾತ್ರವಲ್ಲದೆ, ಜಯ ಮೃತ್ಯುಂಜಯ ಸ್ವಾಮೀಜಿ ಕೂಡ ಇದ್ದಾರೆ ಎಂದು ಹೇಳಿದ್ದರು. ಅವರ ಆ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, "ಆರ್‌ಸಿಬಿ (ರಾಯಣ್ಣ-ಚನ್ನಮ್ಮ ಬ್ರಿಗೇಡ್) ಟಿ-20 ಆಡೋಕೆ ಮಾತ್ರ ಚೆನ್ನಾಗಿರುತ್ತೆ. ಆದರೆ ನಾನು ಟೆಸ್ಟ್ ಮ್ಯಾಚ್ ಆಡುವುದಕ್ಕೆ ಬಂದವನು. ನಾನು ಸುದೀರ್ಘವಾಗಿ ಓಡುವಂತಹ ಕುದುರೆ. ವಿಜಯೇಂದ್ರ ತಾಕತ್ತಿನ ಬಗ್ಗೆ ಅರಿತುಕೊಂಡಿರುವುದು ಬಹಳ ಸಂತಸ. ನಾನು ಲಂಬಿ ರೇಸ್ ಕಾ ಗೋಡಾ… ನೋಡೋಣ" ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಲು ಯತ್ನಾಳ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಂಡು ಈಶ್ವರಪ್ಪ ಮತ್ತು ಯತ್ನಾಳ್ ಇಬ್ಬರಿಗೂ ಗುರಿಯಾಗಿಸಿಕೊಂಡು ವಿಜಯೇಂದ್ರ ನೀಡಿರುವ ಈ ಹೇಳಿಕೆ, ಬಿಜೆಪಿ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಾಯಿಸಬೇಕು ಎಂದು ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪ ಸಿಂಹ, ಕುಮಾರ್ ಬಂಗಾರಪ್ಪ ಮತ್ತಿತರ ನಾಯಕರನ್ನು ಪದೇಪದೆ ಭೇಟಿ ಮಾಡಿ, ಬೆಳಗಾವಿ, ಬೆಂಗಳೂರು, ದಾವಣಗೆರೆಯಲ್ಲಿ ಸಭೆ ಸರಣಿ ಸಭೆ ನಡೆಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇದೀಗ ʼಆರ್‌ಸಿಬಿʼ ಕಟ್ಟುವ ಕಾರ್ಯ ಬಿರುಸುಗೊಂಡಿದೆ.
ಮತ್ತೊಂದು ಕಡೆ, ಜೆಡಿಎಸ್ ನಲ್ಲೂ ಮುಡಾ ಹಗರಣದ ಅಡ್ಡಪರಿಣಾಮಗಳು ಢಾಳಾಗಿ ಎದ್ದುಕಾಣತೊಡಗಿವೆ. ಸಿದ್ದರಾಮಯ್ಯ ಪರ ಹೇಳಿಕೆ ನೀಡಿದ ಜಿ ಟಿ ದೇವೇಗೌಡರ ವಿಷಯದಲ್ಲಿ ಎಚ್ ಡಿ ಕೆ ಮಾಡಿದ ಟೀಕೆ ಅವರನ್ನು ಕೆರಳಿಸಿದೆ. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಪಕ್ಷದಲ್ಲಿ ಆದ್ಯತೆ ಸಿಗದೇ ಇರುವ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಜಿಟಿಡಿ, ಒಂದು ಕಾಲು ಹೊರಗಿಟ್ಟಿದ್ದಾರೆ. ಹಾಗಾಗಿ ಕೂಡಲೇ ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡರು ಅವರನ್ನು ಕರೆದು ಸಮಾಧಾನ ಮಾಡಬೇಕು ಎಂದು ಸ್ವತಃ ಜೆಡಿಎಸ್ ಶಾಸಕರೇ ಒತ್ತಡ ಹೇರಿದ್ದಾರೆ.
ಒಟ್ಟಾರೆ, ಮುಡಾ ಹಗರಣ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷದಲ್ಲಿ ಕಂಪನ ಸೃಷ್ಟಿಸಿರುವುದು ಮಾತ್ರವಲ್ಲ, ಅದನ್ನೇ ಅಸ್ತ್ರವಾಗಿ ಬಳಸುತ್ತಿರುವ ಪ್ರತಿಪಕ್ಷ ಪಾಳೆಯದ ಪಾಲಿಗೂ ತಿರುಗುಬಾಣವಾದಂತಿದೆ.