ಕರಾವಳಿಯಲ್ಲೀಗ ದೈವ ʼಸಂರಕ್ಷಣೆʼ ಎಂಬ ಅನೈತಿಕ ಪೊಲೀಸ್‌ಗಿರಿ!
x
ಸಾಂದರ್ಭಿಕ ಚಿತ್ರ (ಚಿತ್ರ ಕೃಪೆ: ಶರತ್‌ ಹೆಗ್ಡೆ ಕಡ್ತಲ)

ಕರಾವಳಿಯಲ್ಲೀಗ ದೈವ ʼಸಂರಕ್ಷಣೆʼ ಎಂಬ ಅನೈತಿಕ ಪೊಲೀಸ್‌ಗಿರಿ!

ಮಂಗಳೂರಿನ ಯೆಯ್ಯಾಡಿಯಲ್ಲಿ ಇತ್ತೀಚೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ದೈವ ನರ್ತನದ ಅನುಕರಣೆ ಮಾಡಿದರು ಎಂಬ ಆರೋಪ ಕೇಳಿ ಬಂದಿದೆ. ಅದೊಂದು ದೊಡ್ಡ ವಿವಾದವಾಗಿ ಮಹಿಳೆಯನ್ನು ನಗರದ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಕರೆಸಿ, ದೈವಾರಾಧನೆ ಕ್ಷೇತ್ರದ ʼಗಣ್ಯರʼ ಸಮ್ಮುಖದಲ್ಲಿ ಕ್ಷಮೆ ಯಾಚಿಸಿ, ತಪ್ಪು ಕಾಣಿಕೆ ಹಾಕಿಸಲಾಯಿತು. ಇದೀಗ ಆ ಘಟನೆ ಪರ ವಿರೋಧದ ತೀವ್ರ ಚರ್ಚೆಗೆ ಕಾರಣವಾಗಿದೆ


ಮಂಗಳೂರಿನ ಯೆಯ್ಯಾಡಿಯಲ್ಲಿ ಇತ್ತೀಚೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ದೈವ ನರ್ತನದ ಅನುಕರಣೆ ಮಾಡಿದರು ಎಂಬ ಆರೋಪ ಕೇಳಿ ಬಂದಿದೆ. ಅದೊಂದು ದೊಡ್ಡ ವಿವಾದವಾಗಿ ಮಹಿಳೆಯನ್ನು ನಗರದ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಕರೆಸಿ, ದೈವಾರಾಧನೆ ಕ್ಷೇತ್ರದ ʼಗಣ್ಯರʼ ಸಮ್ಮುಖದಲ್ಲಿ ಕ್ಷಮೆ ಯಾಚಿಸಿ, ತಪ್ಪು ಕಾಣಿಕೆ ಹಾಕಿಸಲಾಯಿತು. ಇದೀಗ ಆ ಘಟನೆ ಪರ ವಿರೋಧದ ತೀವ್ರ ಚರ್ಚೆಗೆ ಕಾರಣವಾಗಿದೆ.

ಬುದ್ಧಿವಂತರ ಜಿಲ್ಲೆ ಎನಿಸಿಕೊಂಡಿರುವ ಇಲ್ಲಿಯೇ ಮಹಿಳೆಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಕೆಲವು ದೈವ ʼಸಂರಕ್ಷಕರುʼ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಸಾಮಾಜಿಕ ಕಾರ್ಯಕರ್ತರು ಮತ್ತು ದೈವ ಚಿಂತಕರ ಕಡೆಯಿಂದಲೇ ಕೇಳಿಬಂದಿದೆ.

ನಡೆದದ್ದೇನು?

ಯೆಯ್ಯಾಡಿಯಲ್ಲಿ ಹಮ್ಮಿಕೊಂಡ ಆಟಿದ ಕೂಟ ಎಂಬ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಕಲಾವಿದರೊಬ್ಬರು ́ವಾ ಪೊರ್ಲುಯಾʼ ಎಂಬ ಹಾಡನ್ನು ಧ್ವನಿ ಮುದ್ರಿತ ಹಿನ್ನೆಲೆ ಸಂಗೀತದ ಟ್ರ್ಯಾಕ್‌ ಬಳಸಿ ಹಾಡುತ್ತಿದ್ದರು. ಜನಪದ ಶೈಲಿಯ ಹಾಡಿಗೆ ದೈವ ನರ್ತನದ ವಾದ್ಯ, ತಾಸೆ (ಒಂದು ಬಗೆಯ ಚರ್ಮವಾದ್ಯ)ಯ ಹಿಮ್ಮೇಳವಿದೆ. ಅದೇ ವೇಳೆ ಹಿರಿಯ ಮಹಿಳೆಯೊಬ್ಬರು ದೈವ ನರ್ತನದ ಶೈಲಿಯಲ್ಲೇ ಹೆಜ್ಜೆ ಹಾಕಿದರು. ಆ ದೃಶ್ಯದ ವಿಡಿಯೋ ವೈರಲ್ ಆಯಿತು. ಸಣ್ಣ ಘಟನೆ ಅತಿ ಎನಿಸುವಷ್ಟರಮಟ್ಟಿಗೆ ಹೋಯಿತು ಎಂಬುದು ಸಂಘಟಕರ ಬೇಸರ.


ಬಂದಿತು ದೈವ ʼಸಂರಕ್ಷಕʼರ ದಂಡು

ಈ ಘಟನೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಆರಂಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆ ಮಹಿಳೆ ಹಾಗೂ ಸಂಘಟಕರ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಆದರೆ ಆ ಮಹಿಳೆಯಿಂದ ಕದ್ರಿ ಮಂಜುನಾಥೇಶ್ವರ ಕ್ಷೇತ್ರದಲ್ಲಿ ಕ್ಷಮೆಯಾಚನೆ ಮಾಡಿಸಿ, ತುಳು ಸಾಂಸ್ಕೃತಿಕ ಕ್ಷೇತ್ರದ ಗಣ್ಯರೆನಿಸಿಕೊಂಡವರು ನಡೆದುಕೊಂಡ ರೀತಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಆ ಮಹಿಳೆಯನ್ನು ಕದ್ರಿ ಕ್ಷೇತ್ರಕ್ಕೆ ಕರೆತಂದು ದೇವಸ್ಥಾನಕ್ಕೆ ಸುತ್ತು ಹಾಕಿ ಮಾಧ್ಯಮ ಕ್ಯಾಮೆರಾಗಳ ಮುಂದೆ ದೇವರಲ್ಲಿ ಕ್ಷಮೆ ಕೇಳಿಸಲಾಯಿತು. ಅವರು ದೈವ ಸಂಬಂಧಿಸಿ ವಿವಿಧ ಹರಕೆಗಳನ್ನು ಸಲ್ಲಿಸುವುದಾಗಿಯೂ ಹೇಳಿಕೊಂಡರು. ಆಕೆ ಅಸಹಾಯಕರಾಗಿ ಕ್ಷಮೆ ಯಾಚಿಸುತ್ತಿರುವ ದೃಶ್ಯಗಳು ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡವು.

ಸಾಂಸ್ಕೃತಿಕ ಕ್ಷೇತ್ರದ ಅಸಹಾಯಕತೆ

ಈ ಬೆಳವಣಿಗೆಗೆ ಸಂಬಂಧಿಸಿ ಸಾಂಸ್ಕೃತಿಕ ಕ್ಷೇತ್ರದ ಹಲವು ವಿದ್ವಾಂಸರು ಕಳವಳ ವ್ಯಕ್ತಪಡಿಸಿದ್ದಾರೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರೊಬ್ಬರು ವಿಷಾದ ವ್ಯಕ್ತಪಡಿಸಿ, ʼದೈವಾರಾಧನೆ ಮತ್ತು ಸಾಂಸ್ಕೃತಿಕ ಕ್ಷೇತ್ರವು ಉದ್ಯಮ ಸ್ವರೂಪ ಪಡೆದಿರುವ ಹೊತ್ತಿನಲ್ಲಿ ಏನನ್ನು ಹೇಳುವುದೂ ಕಷ್ಟ. ಸಂಸ್ಕೃತಿಯ ಹೆಸರಿನಲ್ಲಿ ಆಭಾಸಗಳು ಸೃಷ್ಟಿ ಆಗುತ್ತಿವೆ. ನಾವು ಏನನ್ನು ಹೇಳಿದರೂ ಸ್ವೀಕರಿಸುವವರು ಇಲ್ಲವಾಗಿದ್ದಾರೆ. ಸಂವಾದದ ಬದಲಿಗೆ ಸಂಘರ್ಷವೇ ಉಂಟಾಗುತ್ತಿದೆ. ಇದನ್ನೆಲ್ಲ ನೋಡಿಯೂ ಸುಮ್ಮನಾಗಬೇಕಿದೆʼ ಎಂದರು.


ಅಸಹಾಯಕ ಕಲಾವಿದರು, ನಿರ್ದೇಶಕರು

ಮಂಗಳೂರಿನ ತುಳು ಸಿನಿಮಾ ಹಾಗೂ ರಂಗ ನಿರ್ದೇಶಕರೊಬ್ಬರು ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ಸಾಕಷ್ಟು ಮಾತನಾಡುವುದಿದೆ. ಆ ಮಹಿಳೆ ಎಂತಹ ದೈವಭಕ್ತೆ ಎಂಬುದು ನನಗೆ ಗೊತ್ತು. ಆದರೆ, ಇಲ್ಲಿ ನಡೆಯುತ್ತಿರುವ ವಿಪರೀತಗಳಿಂದಾಗಿ ನಾವು ಏನನ್ನೂ ಮಾಡಲಾರದವರಾಗಿದ್ದೇವೆʼ ಎಂದಷ್ಟೇ ಪ್ರತಿಕ್ರಿಯಿಸಿ ಸುಮ್ಮನಾದರು.

ಭಯ ಸೃಷ್ಟಿಸಿದ್ದು ಸಲ್ಲದು: ತಮ್ಮಣ್ಣ ಶೆಟ್ಟಿ

ದೈವ ಚಿಂತಕ ತಮ್ಮಣ್ಣ ಶೆಟ್ಟಿ ಅವರು ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿ,, ʼಯೆಯ್ಯಾಡಿಯಲ್ಲಿ ಮಹಿಳೆ ದೈವ ನರ್ತನದ ಅನುಕರಣೆ ಮಾಡಿದ್ದು ಸರಿಯೆನಿಸಲಿಲ್ಲ. ಅವರಿಗೆ ಹಾಗೆ ಮಾಡದಂತೆ ಸಲಹೆ ಕೊಡಬಹುದಿತ್ತು ಅಷ್ಟೇ. ತಪ್ಪುಗಳು ಮನವರಿಕೆಯಾದಾಗ ದೈವದಲ್ಲಿ ಪ್ರಾರ್ಥಿಸಿದರೆ ಸಾಕು. ದೈವ ಕ್ಷಮೆ ಕೊಡುತ್ತದೆ. ಆದರೆ ಇಲ್ಲಿ ಭಯ ಸೃಷ್ಟಿಸುವ ಯತ್ನ ನಡೆದಿದೆʼ ಎಂದರು.

ಮಾತು ಮುಂದುವರಿಸಿದ ತಮ್ಮಣ್ಣ ಶೆಟ್ಟಿ, ʼಯೆಯ್ಯಾಡಿಯಲ್ಲಿ ನಡೆದದ್ದು ಅಂಥಹ ಗಂಭೀರ ಅಪರಾಧವೇನೂ ಅಲ್ಲ. ಆದರೆ, ಆ ಮಹಿಳೆ ಕ್ಷಮೆ ಕೋರಲೇಬೇಕು ಎಂದು ಒತ್ತಡ ಸೃಷ್ಟಿಸಿದ್ದು, ಅವರನ್ನು ದೇವಸ್ಥಾನಕ್ಕೆ ಕರೆದೊಯ್ಯುವುದು, ಅವರ ಅಸಹಾಯಕತೆ, ದುಃಖವನ್ನು ಮಾಧ್ಯಮಗಳ ಮುಂದೆ ತೋರಿಸಿ ಪ್ರಸಾರ ಮಾಡುವುದು ಯಾವತ್ತೂ ಸರಿಯಲ್ಲ. ಅದೇನಿದ್ದರೂ ತೀರಾ ಖಾಸಗಿಯಾಗಿ ನಡೆಯಬೇಕಿದ್ದ ಪ್ರಕ್ರಿಯೆ. ಅಲ್ಲಿ ದೈವ ಮತ್ತು ಭಕ್ತನ ನಡುವೆ ಮಾತ್ರ ಅನುಸಂಧಾನ ಇರುತ್ತದೆ. ಆದರೆ, ದೈವ ಪಾವಿತ್ರ್ಯತೆಯ ಹೆಸರಿನಲ್ಲಿ ಈ ಪ್ರಕರಣವನ್ನು ಎಳೆದು ತಂದು ಅವರಿಗೆ ಮಾನಸಿಕ ಒತ್ತಡ ಸೃಷ್ಟಿಸಿ ಕ್ಷಮೆ ಯಾಚಿಸುವಂತೆ ಮಾಡಿದ್ದು ಒಪ್ಪುವಂತದ್ದಲ್ಲ. ಅವರವರ ನಂಬಿಕೆ, ಭಾವನೆಗಳ ಮೇಲೆ ದೈವಾರಾಧನೆ ಕ್ಷೇತ್ರದ ದೊಡ್ಡವರೆನಿಸಿಕೊಂಡವರು ಒತ್ತಡ ಹೇರಿದ್ದು, ನಡೆದುಕೊಂಡ ರೀತಿ ಸರಿಯಲ್ಲ. ಹೀಗೆ ಮಾಡುವ ಮೂಲಕ ಜನ ಸಮೂಹದ ಮೇಲೆ ಭಯ ಸೃಷ್ಟಿಸಲಾಗುತ್ತಿದೆ. ನಂಬಿಕೆಯೊಂದು ಭಯದ ವಾತಾವರಣದ ಒಳಗೆ ನಲುಗುವಂತಾಗಿದೆʼ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆಯ ಮೇಲೆ ದೌರ್ಜನ್ಯ?

ಸಾಮಾಜಿಕ ಕಾರ್ಯಕರ್ತ ಶೀನ ಶೆಟ್ಟಿ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ಪ್ರತಿಕ್ರಿಯಿಸಿ, ʼಆಟಿದ ಕೂಟದಲ್ಲಿ ಮಹಿಳೆಯು ದೈವ ನರ್ತನದ ಶೈಲಿ ಅನುಕರಿಸಿದ್ದನ್ನು ಅಪರಾಧವೆಂದು ಪರಿಗಣಿಸಬೇಕಿಲ್ಲ. ಯಾರಿಗಾದರೂ ನೋವಾಗಿದ್ದರೆ, ಅಲ್ಲಿಯೇ ಕ್ಷಮೆ ಕೇಳಿ ಮುಗಿಸಬೇಕಿತ್ತೇ ವಿನಃ ಅದನ್ನು ಮುಂದುವರಿಸುವುದು ಸರಿಯಲ್ಲ. ದೈವಾರಾಧನೆಯಲ್ಲಿ ಮಹಿಳೆಯರಿಗೆ ಪವಿತ್ರ ಸ್ಥಾನಮಾನ ಕೊಟ್ಟ ಮೇಲೆ, ಇಂಥಹ ಕ್ಷುಲ್ಲಕ ಪ್ರಕರಣದಲ್ಲಿ ಮಹಿಳೆಯನ್ನು ನಡೆಸಿಕೊಂಡ ರೀತಿಯನ್ನು ದೌರ್ಜನ್ಯ ಎಂದು ಹೇಳಬೇಕಾಗುತ್ತದೆʼ ಎಂದರು.

ಧಾರ್ಮಿಕ ಮೂಲಭೂತವಾದ

ಹಿರಿಯ ಸಾಹಿತಿ, ಚಿಂತಕ ಡಾ.ಪುರುಷೋತ್ತಮ ಬಿಳಿಮಲೆ ಈ ಘಟನೆ ಬಗ್ಗೆ ತೀವ್ರ ಬೇಸರ ಹೊರ ಹಾಕಿದರು."ʼದ ಫೆಡರಲ್ ಕರ್ನಾಟಕ" ಜತೆ ಮಾತನಾಡಿದ ಅವರು, “ಕರಾವಳಿಯಲ್ಲಿ ಭೂತಾರಾಧನೆ ಒಂದು ವಿಚಿತ್ರ ಹಂತ ತಲುಪಿದೆ. ಯೆಯ್ಯಾಡಿಯಲ್ಲಿ ಮಹಿಳೆ ಆ ರೀತಿ ನರ್ತಿಸಿದ್ದು ಅಪರಾಧವಲ್ಲ. ಅವರ ಬಗ್ಗೆ ಸ್ಥಳೀಯ ಶಕ್ತಿಗಳು ನಡೆದುಕೊಂಡ ರೀತಿ ಧಾರ್ಮಿಕ ಮೂಲಭೂತವಾದದಂತಿದೆ. ಗೆಳೆಯರೊಬ್ಬರು ಹೇಳಿದಂತೆ ಅಲ್ಲಿ ' ದೈವ' ಒಂದು ಬಿಟ್ಟು ಉಳಿದೆಲ್ಲವೂ ಉಂಟು. ಕಲ್ಲುರ್ಟಿ, ಸಿರಿ, ಉಳ್ಳಾಳ್ತಿ ಮೊದಲಾದ ಶಕ್ತಿ ದೈವಗಳಿರುವ ನಾಡಲ್ಲಿ ಈಗ ನಡೆಯುತ್ತಿರುವ ಘಟನೆಗಳು ಅಪೇಕ್ಷಣೀಯ ಅಲ್ಲ" ಎಂದರು.

“ಒಟ್ಟಿನಲ್ಲಿ ನಂಬಿಕೆ ಹೆಸರಿನಲ್ಲಿರುವ ಆರಾಧನಾ ವ್ಯವಸ್ಥೆಯೊಂದು ಕೆಲವೇ ಕೆಲವು ಹಿತಾಸಕ್ತಿಗಳ ಕೈಯಲ್ಲಿ ಗುತ್ತಿಗೆ ರೂಪ ಪಡೆದಿದೆ. ರಂಗಭೂಮಿ, ಯಕ್ಷಗಾನ, ಸಿನಿಮಾ ಕ್ಷೇತ್ರದ ಮೇಲೂ ಇವರ ಒತ್ತಡ ಇತ್ತೀಚೆಗೆ ಹಾವಳಿಯ ಸ್ವರೂಪ ಪಡೆದಿದೆ. ಇದರಿಂದ ಸಾಮಾನ್ಯ ಭಕ್ತರ ಅಭಿಮಾನ, ಕಲಾ ಅಭಿವ್ಯಕ್ತಿ ಮಾಧ್ಯಮಗಳಿಗಷ್ಟೇ ಹೊಡೆತವಲ್ಲ. ದೈವಾರಾಧನೆಯನ್ನು ಭಯಗ್ರಸ್ತ ವಾತಾವರಣದಲ್ಲಿ ನಡೆಸುವಂತಾಗಿದೆ. ಎಲ್ಲೂ ಅಭಿವ್ಯಕ್ತಿಗೊಳಿಸದೇ ಇಂಥ ಶಕ್ತಿಗಳಿಂದ “ಸುರಕ್ಷಿತ ಅಂತರʼ ಕಾಪಾಡಿಕೊಳ್ಳುವುದೇ ವಾಸಿʼ ಎಂದು ʼದ ಫೆಡರಲ್ ಕರ್ನಾಟಕʼದ ಜತೆ ಹೆಸರು ಹೇಳಲಿಚ್ಛಿಸದ ದಕ್ಷಿಣ ಕನ್ನಡ ಮೂಲದ ಚಿತ್ರ ನಿರ್ದೇಶಕರೊಬ್ಬರು ಅಭಿಪ್ರಾಯ ಹಂಚಿಕೊಂಡರು.

ʼಪುಟ್ಟ ಕಾರ್ಯಕ್ರಮದಲ್ಲಿ ಮಹಿಳೆ ನರ್ತಿಸಿದ್ದನ್ನೇ ದೊಡ್ಡ ವಿಷಯವನ್ನಾಗಿಸಿದ ಇದೇ ಹಿತಾಸಕ್ತಿಗಳು ಕೆಲವೆಡೆ ಜಾಣ ಮೌನ ವಹಿಸಿದ್ದಾರೆ. ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಾಗದರ್ಶನ ಮಾಡಿಸಿದ್ದು, ನಾಗ ಪಾತ್ರಧಾರಿ ಅದೇ ವೇಷದಲ್ಲಿ ಟಿವಿಗಳಿಗೆ ಹೇಳಿಕೆ ನೀಡಿದ್ದು, ಅಲ್ಲಿಯೂ ನಟಿ ಮಹಿಳೆಯೊಬ್ಬರಿಗೆ ಆವೇಶ ಬಂದಿದ್ದು, ಇತ್ಯಾದಿ ಬಗ್ಗೆ ಚಕಾರ ಎತ್ತುವುದಿಲ್ಲ. ಮಂಗಳೂರಿನಲ್ಲಿ ಮಾತ್ರ ಮಹಿಳೆಯ ಮತ್ತು ಸಂಘಟಕರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಮಾಧ್ಯಮಗಳೂ ಈ ಬಗ್ಗೆ ಏಕಮುಖ ಅಭಿಪ್ರಾಯವನ್ನೇ ವ್ಯಕ್ತಪಡಿಸಿವೆʼ ಎಂಬ ಆಕ್ರೋಶ ಧಾರ್ಮಿಕ ಆರಾಧನಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವವರೊಬ್ಬರಿಂದ ಕೇಳಿಬಂದಿದೆ.

ಕ್ಷಮಾಪಣೆ ಸನ್ನಿವೇಶದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತುಳು ಅಕಾಡೆಮಿ ಮಾಜಿ ಅಧ್ಯಕ್ಷ, ದಯಾನಂದ ಕತ್ತಲ್ಸಾರ್ ಅವರ ಪ್ರತಿಕ್ರಿಯೆಗೆ ʼದ ಫೆಡರಲ್ ಕರ್ನಾಟಕʼ ಎರಡು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

Read More
Next Story