MGNREGA v/s VB-G RAM G Part-1|ಉದ್ಯೋಗದ ಹಕ್ಕಿಗೆ ವಿಬಿ- ಜಿ ರಾಮ್ ಜಿ ಸಂಚಕಾರವೇ, ಆಧುನಿಕತೆಯ ಸ್ಪರ್ಶವೇ?
x

MGNREGA v/s VB-G RAM G Part-1|ಉದ್ಯೋಗದ ಹಕ್ಕಿಗೆ ವಿಬಿ- ಜಿ ರಾಮ್ ಜಿ ಸಂಚಕಾರವೇ, ಆಧುನಿಕತೆಯ ಸ್ಪರ್ಶವೇ?

ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ಕರ್ನಾಟಕ‌ ಸರ್ಕಾರ ಆಂದೋಲನ ಆರಂಭಿಸಿದೆ. ಕಾಯ್ದೆ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ಮುಂದುವರಿದಿದೆ. ಯೋಜನೆಯ ಸಾಧಕ-ಬಾಧಕ ಕುರಿತು 'ದ ಫೆಡರಲ್ ಕರ್ನಾಟಕ'ದ ಇಂದಿನಿಂದ ಸರಣಿ ಆರಂಭಿಸಿದೆ.


ಎರಡು ದಶಕಗಳಿಗೂ ಹೆಚ್ಚು ಕಾಲ ಗ್ರಾಮೀಣ ಆರ್ಥಿಕತೆಯ ಬೆನ್ನುಲುಬಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಇದೀಗ ವಿಕಸಿತ ಭಾರತ ಗ್ರಾಮೀಣ ರೋಜಗಾರ್‌ ಅಜೀವಿಕ ಮಿಷನ್‌ (ಗ್ರಾಮೀಣ) ಆಗಿ ಬದಲಾಗಿದೆ.

2005ರಲ್ಲಿ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಮನರೇಗಾ ಯೋಜನೆಯು ಜನರಿಗೆ 'ಬದುಕುವ ಹಕ್ಕು' ಕಲ್ಪಿಸಿದರೆ, ಈಗಿನ ಎನ್‌ಡಿಎ ನೇತೃತ್ವದ ಸರ್ಕಾರ 'ವಿಕಸಿತ ಭಾರತ'ದ ಪರಿಕಲ್ಪನೆಯಡಿ ಜಾರಿಗೊಳಿಸಿರುವ ವಿಬಿ ಜಿ ರಾಮ್‌ ಜಿ ಯೋಜನೆಯು ಹಳ್ಳಿಗಳನ್ನು 'ಸ್ವಾವಲಂಬಿʼ ಯ ತಾಣಗಳನ್ನಾಗಿ ರೂಪಿಸುವ ಉದ್ದೇಶ ಹೊಂದಿದೆ‌ ಎಂದು ಹೇಳಲಾದರೂ ಕಾಯ್ದೆಯು ರಾಜ್ಯದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕೇಂದ್ರ ಸರ್ಕಾರವು ಯೋಜನೆ ಹೆಸರಷ್ಟೇ ಅಲ್ಲದೇ ಕಾಯ್ದೆಯ ಮೂಲ ಸ್ವರೂಪ ಬದಲಿಸಿರುವುದು ರಾಜಕೀಯ ವಿರೋಧಕ್ಕೆ ಕಾರಣವಾಗಿದೆ. ಅಲ್ಲದೇ ಸಂವಿಧಾನಬದ್ಧ ಕೆಲಸದ ಹಕ್ಕನ್ನು ವಿಬಿ ಜಿ ರಾಮ್ ಜಿ ಕಿತ್ತುಕೊಂಡಿದೆ ಎಂದು ದೂರಲಾಗಿದೆ.

ಪ್ರಸ್ತುತ, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು ಸೇರಿ ಆರೇಳು ರಾಜ್ಯಗಳು ವಿಬಿ ಜಿ ರಾಮ್‌ ಜಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ. ಕೇಂದ್ರದ ವಿರುದ್ಧ ಹೋರಾಟ ತೀವ್ರಗೊಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಎರಡೂ ಕಾಯ್ದೆಗಳ ನಡುವಿನ ವ್ಯತ್ಯಾಸಗಳು, ಸಾಧಕ-ಬಾಧಕಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ವಿಬಿ ಜೆ ರಾಮ್ ಜಿ- ಮನರೇಗಾ ನಡುವಿನ ವ್ಯತ್ಯಾಸವೇನು?

ಮನರೇಗಾ ಯೋಜನೆಯಲ್ಲಿ ಕೆಲಸ ಕೇಳುವುದು ಕಾರ್ಮಿಕನ ಕಾನೂನುಬದ್ಧ ಹಕ್ಕು. ಸರ್ಕಾರವು 15 ದಿನಗಳೊಳಗೆ ಉದ್ಯೋಗ ನೀಡಲು ವಿಫಲವಾದರೆ, ಫಲಾನುಭವಿಗೆ ಉದ್ಯೋಗ ಭತ್ಯೆ ನೀಡಬೇಕಾಗಿತ್ತು. ಆದರೆ, ವಿಬಿ ಜಿ ರಾಮ್‌ ಜಿ ಯೋಜನೆಯಡಿ ಉದ್ಯೋಗ ಭತ್ಯೆಯ ಪರಿಕಲ್ಪನೆ ಕೈ ಬಿಡಲಾಗಿದೆ. ಮನರೇಗಾದಲ್ಲಿ ಗ್ರಾಮೀಣ ಕುಟುಂಬಗಳಿಗೆ ಒಂದು ಆರ್ಥಿಕ ವರ್ಷದಲ್ಲಿ 100 ದಿನ ಕೆಲಸ ನೀಡಬೇಕಾಗಿತ್ತು. ಹೊಸ ಕಾಯ್ದೆಯಲ್ಲಿ ಅದನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ.

ಮನರೇಗಾದಲ್ಲಿ ಕೇಂದ್ರ ಹಾಗೂ ರಾಜ್ಯದ ಪಾಲು ಶೇ 90:10 ರಷ್ಟಿತ್ತು. ಆದರೆ, ಹೊಸ ಯೋಜನೆಯಲ್ಲಿ ನಿಧಿಯ ಹಂಚಿಕೆ ಶೇ 60:40 ರಷ್ಟು ಮಾಡಲಾಗಿದೆ. ಹಳೆಯ ಯೋಜನೆಯಲ್ಲಿ ಯಾವುದೇ ಋತುವಿನಲ್ಲಾದರೂ ಒಟ್ಟು 100 ಕೆಲಸ ನೀಡಬೇಕಾಗಿತ್ತು. ಹೊಸ ಯೋಜನೆಯಡಿ ಬಿತ್ತನೆ ಮತ್ತು ಕೊಯ್ಲಿನ ವೇಳೆಯ 60 ದಿನ ಉದ್ಯೋಗ ಕೈಗೊಳ್ಳುವಂತಿಲ್ಲ.

ಮನರೇಗಾದಲ್ಲಿ ಶಾರೀರಿಕ ಶ್ರಮದ ಮೂಲಕ ಕೆರೆ ಹೂಳು, ರಸ್ತೆ ಬದಿ ಗುಂಡಿ ತೆಗೆಯಲಾಗುತ್ತಿತ್ತು. ಆದರೆ, ವಿಕಸಿತ ಭಾರತದ ಕಾರ್ಯಸೂಚಿಯಲ್ಲಿ ಕೌಶಲ್ಯ ಭರಿತ ಕೆಲಸಗಳಿಗೆ ಆದ್ಯತೆ ನೀಡಲಾಗಿದೆ. ಕಾರ್ಮಿಕರಿಗೆ ಪ್ಲಂಬಿಂಗ್, ಎಲೆಕ್ಟ್ರಿಕಲ್ ಕೆಲಸ ಅಥವಾ ಸುಧಾರಿತ ಕೃಷಿ ಪದ್ಧತಿಗಳ ತರಬೇತಿ ನೀಡಲಾಗುತ್ತದೆ.

ಗ್ರಾಮ ಪಂಚಾಯತಿಗಳಿಗೆ ತಮ್ಮ ಹಳ್ಳಿಯ ಅಭಿವೃದ್ಧಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾಯತ್ತ ಅಧಿಕಾರವಿತ್ತು. ಯಾವ ಕೆರೆ ಹೂಳೆತ್ತಬೇಕು, ಯಾವ ರಸ್ತೆ ನಿರ್ಮಿಸಬೇಕು ಎಂಬುದು ಗ್ರಾಮ ಸಭೆಯಲ್ಲಿ ನಿರ್ಧಾರವಾಗುತ್ತಿತ್ತು. ಹೊಸ ಯೋಜನೆಯಲ್ಲಿ ಪಂಚಾಯತಿಗಳ ಈ ಅಧಿಕಾರವನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ. ಎಲ್ಲಿ ಕಾಮಗಾರಿ ನಡೆಯಬೇಕು, ಯಾವ ರೀತಿಯ ಆಸ್ತಿ ಸೃಷ್ಟಿಯಾಗಬೇಕು ಎಂಬುದನ್ನು ಕೇಂದ್ರವೇ ನಿರ್ಧರಿಸಲಿದೆ.

ವಿಬಿ ಜಿ ರಾಮ್‌ ಜಿ ಕಾಯ್ದೆಯ ಸಾಧಕಗಳೇನು?

ಮನರೇಗಾದಲ್ಲಿ 100 ದಿನಗಳ ಕೆಲಸವನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಇದು ಗ್ರಾಮೀಣ ಕುಟುಂಬಗಳ ವಾರ್ಷಿಕ ಆದಾಯ ಹೆಚ್ಚಳ, ವಲಸೆ ತಡೆಗೆ ಸಹಕಾರಿಯಾಗಿದೆ. ಅಂತರ್ಜಲ ಹೆಚ್ಚಿಸಲು ಯೋಜನೆಯಡಿ ಆದ್ಯತೆ ನೀಡಲಾಗಿದೆ. ಕೆರೆಗಳ ಪುನಶ್ಚೇತನ, ಹೂಳೆತ್ತುವುದು, ಚೆಕ್ ಡ್ಯಾಂ ನಿರ್ಮಾಣ ಮತ್ತು ಕೃಷಿಗೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಿದೆ.

ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ರಸ್ತೆಗಳ ನಿರ್ಮಾಣ, ಶಾಲಾ ಕಟ್ಟಡಗಳ ದುರಸ್ತಿ ಅಥವಾ ನಿರ್ಮಾಣ, ಅಂಗನವಾಡಿಯಂತಹ ಸಾರ್ವಜನಿಕ ಆಸ್ತಿಗಳ ಅಭಿವೃದ್ಧಿಪಡಿಗೂ ಹೆಚ್ಚು ಆದ್ಯತೆ ನೀಡಲಾಗಿದೆ. ರೈತರು ತಮ್ಮ ಬೆಳೆ ಸಂಗ್ರಹಿಸಲು ಗೋದಾಮು, ಉತ್ಪನ್ನಗಳನ್ನು ಮಾರಾಟ ಮಾಡಲು ಗ್ರಾಮೀಣ ಮಾರುಕಟ್ಟೆಗಳು ಮತ್ತು ಸಣ್ಣ ಪ್ರಮಾಣದ ಉತ್ಪಾದನಾ ಘಟಕಗಳ ಸ್ಥಾಪನೆಗೆ ಅಗತ್ಯವಾದ ಕಟ್ಟಡಗಳನ್ನು ನಿರ್ಮಿಸಬಹುದು.

ಪ್ರವಾಹ ನಿಯಂತ್ರಣಕ್ಕಾಗಿ ಬದುಗಳ ನಿರ್ಮಾಣ, ಮಣ್ಣಿನ ಸವಕಳಿ ತಡೆಗೆ ಮರಗಳನ್ನು ಬೆಳೆಸುವುದು, ನೈಸರ್ಗಿಕ ವಿಕೋಪ ಎದುರಿಸಲು ಗ್ರಾಮಗಳನ್ನು ಸಜ್ಜುಗೊಳಿಸುವ ಕಾಮಗಾರಿಗಳಿಗೆ ಇಲ್ಲಿ ಅವಕಾಶವಿದೆ. ಕೆಲಸದ ಸ್ಥಳದಲ್ಲಿ ಕಾರ್ಮಿಕರ ಉಪಸ್ಥಿತಿ ಖಚಿತಪಡಿಸಿಕೊಳ್ಳಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯಗೊಳಿಸಲಾಗಿದೆ. ಇದು ನಕಲಿ ಹಾಜರಾತಿ ಹಾವಳಿಯನ್ನು ತಡೆಯುತ್ತದೆ.

ಹಳೆಯ ಜಾಬ್ ಕಾರ್ಡ್‌ ಬದಲಿಗೆ ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯದ ಹೊಸ 'ವಿಕಸಿತ ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್‌'ಗಳನ್ನು ವಿತರಿಸಲಾಗುತ್ತದೆ. ದುರ್ಬಲ ವರ್ಗದವರಿಗೆ ವಿಶೇಷ ಆದ್ಯತೆಯ ಗುರುತಿನ ಚೀಟಿ ನೀಡಲಾಗುತ್ತದೆ. ಸಾರ್ವಜನಿಕ ಡಿಜಿಟಲ್ ಡ್ಯಾಶ್‌ಬೋರ್ಡ್‌ ಸೃಷ್ಟಿಸಲಾಗಿದ್ದು, ಕಾಮಗಾರಿಗಳ ಪ್ರಗತಿ, ಹಣ ಪಾವತಿಯ ಸ್ಥಿತಿ ಮತ್ತು ಬಳಕೆಯಾದ ಅನುದಾನದ ಮಾಹಿತಿಯನ್ನು ಸಾರ್ವಜನಿಕರು ವೀಕ್ಷಿಸಲು ಲಭ್ಯವಿರುತ್ತದೆ. ಪ್ರತಿ ಕಾಮಗಾರಿಯನ್ನು ಜಿಪಿಎಸ್ ಮೂಲಕ ಟ್ಯಾಗ್ ಮಾಡಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಅಕ್ರಮ ಮತ್ತು ಕಾಮಗಾರಿ ವ್ಯತ್ಯಾಸಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ವ್ಯವಸ್ಥೆ ಜಾರಿಯಲ್ಲಿರಲಿದೆ. ಗ್ರಾಮ ಸಭೆಗಳ ಮೂಲಕ ಯೋಜನೆಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸುವ ಮತ್ತು ಕಾಮಗಾರಿಗಳ ಗುಣಮಟ್ಟ ಪ್ರಶ್ನಿಸುವ ಬಲಿಷ್ಠ ಸಾಮಾಜಿಕ ಪರಿಶೋಧನಾ ವ್ಯವಸ್ಥೆಯನ್ನು ವಿಬಿ ಜಿ ರಾಮ್‌ ಜಿ ಕಾಯ್ದೆ ಒಳಗೊಂಡಿದೆ.

ರೈತರು, ಕಾರ್ಮಿಕರಿಗೆ ಆಗುವ ಪ್ರಯೋಜನವೇನು?

ಬಿತ್ತನೆ ಹಾಗೂ ಕೊಯ್ಲು ಅವಧಿಯಲ್ಲಿ 60 ದಿನಗಳ ಕಾಲ ಉದ್ಯೋಗ ಸ್ಥಗಿತಗೊಳಿಸಬೇಕೆಂಬ ನಿಯಮವಿದೆ. ಕೃಷಿ ಚಟುವಟಿಕೆ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಕೆಲಸ ನಿಲ್ಲಿಸುವುದರಿಂದ ಜನರ ತಮ್ಮ ತಮ್ಮ ಜಮೀನುಗಳಲ್ಲಿ ಕೆಲಸ ಮಾಡಿಕೊಳ್ಳಬಹುದು.

ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು ಸರ್ಕಾರದ ಜವಾಬ್ದಾರಿ. ಒಂದು ವೇಳೆ ನಿಗದಿತ 15 ದಿನಗಳಲ್ಲಿ ಕೆಲಸ ನೀಡಲು ವಿಫಲವಾದರೆ, ಕಾರ್ಮಿಕರಿಗೆ ರಾಜ್ಯ ಸರ್ಕಾರದ ವತಿಯಿಂದ ಕಡ್ಡಾಯವಾಗಿ ನಿರುದ್ಯೋಗ ಭತ್ಯೆ ಪಾವತಿಸಬೇಕಾಗುತ್ತದೆ. ವಿಳಂಬವಾದರೆ ಪ್ರತಿ ದಿನಕ್ಕೂ ಇಂತಿಷ್ಟು ಲೆಕ್ಕದಲ್ಲಿ ಪರಿಹಾರ ಪಡೆಯುವ ಹಕ್ಕು ಹೊಂದಿರುತ್ತಾರೆ. ಭ್ರಷ್ಟಾಚಾರ ತಡೆಯಲು ಮತ್ತು ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಲು ಕೂಲಿಯನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಬಯೋಮೆಟ್ರಿಕ್ ಆಧರಿತ ಪಾವತಿ ವ್ಯವಸ್ಥೆ ಜಾರಿಗೆ ತರಲಾಗಿದೆ.

ವಿಬಿ ಜಿ ರಾಮ್‌ ಜಿ ಯೋಜನೆ ಅನಾನುಕೂಲತೆ ಏನು?

ಮನರೇಗಾ ಕಾಯ್ದೆಯಲ್ಲಿ ಸಂಪೂರ್ಣ ವೇತನ ಪಾವತಿಸುವ ಜವಾಬ್ದಾರಿ ಕೇಂದ್ರದ ಮೇಲಿತ್ತು. ವಿಬಿ-ಜಿ ರಾಮ್ ಜಿ ಕಾಯ್ದೆಯಲ್ಲಿ ವೇತನ ಪಾವತಿಯನ್ನು ರಾಜ್ಯಗಳಿಗೂ ವಹಿಸಲಾಗಿದೆ. ಮನರೇಗಾ ಕಾಯ್ದೆಯಲ್ಲಿ ಗುತ್ತಿಗೆದಾರರ ಹಸ್ತಕ್ಷೇಪ ನಿಷೇಧಿಸಲಾಗಿತ್ತು. ಆದರೆ, ಹೊಸ ವ್ಯವಸ್ಥೆಯಡಿ ಗ್ರಾಮೀಣ ಕಾರ್ಮಿಕರನ್ನು ರಸ್ತೆ, ಸುರಂಗ ನಿರ್ಮಾಣದಂತಹ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಳ್ಳುವ ಹುನ್ನಾರ ನಡೆದಿದೆ ಎಂಬ ಆರೋಪವಿದೆ. ಇಲ್ಲಿ ಕಾರ್ಮಿಕರು ಗುತ್ತಿಗೆದಾರರಡಿ ಕೆಲಸ ಮಾಡುತ್ತಾರೆ. ಇದು ಕಾರ್ಮಿಕರನ್ನು ಶೋಷಣೆ ವ್ಯವಸ್ಥೆಗೆ ತಳ್ಳುವ ಅಪಾಯ ಹೊಂದಿದೆ ಎನ್ನಲಾಗಿದೆ.

ಪಂಜಾಬ್, ತಮಿಳುನಾಡು ಸೇರಿ ಆರೇಳು ರಾಜ್ಯಗಳು ಯೋಜನೆಯ ಬಗ್ಗೆ ಸ್ಪಷ್ಟ ನಿಲುವು ತಳೆದಿವೆ. ಕರ್ನಾಟಕದ ಜನರ ಅಗತ್ಯಗಳನ್ನು ನಾವು ನಿರ್ಧರಿಸಬೇಕೇ ಹೊರತು ಕೇಂದ್ರವಲ್ಲ ಎಂಬುದು ನಮ್ಮ ವಾದ. ಇದೇ ನಿಟ್ಟಿನಲ್ಲಿ ಸರ್ಕಾರವು ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಅಧಿಕಾರ ಕೇಂದ್ರೀಕರಣ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ರಾಜ್ಯಗಳ ಹಕ್ಕುಗಳನ್ನು ಮತ್ತು ಸ್ಥಳೀಯ ಸಂಸ್ಥೆಗಳ ಸ್ವಾಯತ್ತತೆಯನ್ನು ಹತ್ತಿಕ್ಕುವ ಮೂಲಕ ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ಆಧಾರಸ್ತಂಭವನ್ನೇ ಅಲುಗಾಡಿಸುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಕೇಂದ್ರವು ಅನಗತ್ಯವಾಗಿ ನಿಯಮಗಳನ್ನು ಹೇರುವ ಮೂಲಕ ರಾಜ್ಯಗಳ ಹಕ್ಕು ಕಸಿದುಕೊಳ್ಳಲು ಮುಂದಾಗಿದೆ. ಹೊಸ ವ್ಯವಸ್ಥೆಯಲ್ಲಿ ಕೆಲಸ ನೀಡದಿದ್ದಲ್ಲಿ ಉದ್ಯೋಗ ಭತ್ಯೆ ಕೇಳುವ ಹಕ್ಕನ್ನು ಹಂತ ಹಂತವಾಗಿ ಮೊಟಕುಗೊಳಿಸಲಾಗುತ್ತಿದೆ. ಇದು ಬಡವರನ್ನು ಅತಂತ್ರ ಸ್ಥಿತಿಗೆ ತಳ್ಳಲಿದೆ ಎಂದು ದೂರಲಾಗಿದೆ.

ಸರ್ಕಾರ- ಪ್ರತಿಪಕ್ಷಗಳ ವಾದ

ನರೇಗಾ ಯೋಜನೆ ಹೆಸರು ಬದಲಿಸಿ ಕೆಲವೊಂದು ಅಂಶಗಳನ್ನು ಮಾರ್ಪಾಡು ಮಾಡಲಾಗಿದೆ. ವಿಬಿ ಜಿ ರಾಮ್‌ ಜಿ ಯೋಜನೆ ಮೂಲಕ ಜನರ ಹಿತವನ್ನು ಕೇಂದ್ರ ಸರ್ಕಾರ ಬಲಿ ಕೊಡಲಾಗುತ್ತಿದೆ ಎಂದು ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಕೇಂದ್ರ ಸರ್ಕಾರವು ಸಂವಿಧಾನ ಆಶಯಗಳನ್ನು ಉಲ್ಲಂಘಿಸುತ್ತಿದೆ. ಗ್ರಾಮ ಸಭೆಗಳಿಗೆ ಇರುವ ಅಧಿಕಾರವನ್ನು ಕಿತ್ತುಕೊಳ್ಳಲಾಗುತ್ತಿದೆ. ಕೇಂದ್ರದ ಈ ತೀರ್ಮಾನವನ್ನು ರಾಜ್ಯ ಸರ್ಕಾರವು ತೀವ್ರ ವಿರೋಧ ವ್ಯಕ್ತಪಡಿಸಿದೆ. ಯೋಜನೆ ಹಿಂಪಡೆಯುವವರೆಗೆ ಕಾಂಗ್ರೆಸ್‌ ಪಕ್ಷವು ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಪ್ರತಿಕ್ರಿಯಿಸಿ, ವಿಬಿ ಜಿ ರಾಮ್‌ ಜಿ ಯೋಜನೆಯ ಕುರಿತು ಕಾಂಗ್ರೆಸ್‌ ಸರ್ಕಾರ ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದೆ. ಯೋಜನೆಯಿಂದ ಗ್ರಾಮೀಣ ಭಾಗದ ಜನತೆಗೆ ಈ ಹಿಂದೆಗಿಂತ ಹೆಚ್ಚು ಅನುಕೂಲವಾಗಲಿದೆ. ಕೇವಲ ಹೆಸರು ಬದಲಾವಣೆ ಮಾಡಿಲ್ಲ. ಬದಲಿಗೆ ಯೋಜನೆಯನ್ನು ಇನ್ನಷ್ಟು ಬಲಗೊಳಿಸಲಾಗಿದೆ. ಈ ಬಗ್ಗೆ ರಾಜ್ಯದ ಜನತೆಯಲ್ಲಿ ಅರಿವು ಮೂಡಿಸಲಾಗುವುದು ಎಂದರು.

Read More
Next Story