
ಡಿ. ಕೆ ಶಿವಕುಮಾರ್
ಸ್ವಾರ್ಥಕ್ಕಾಗಿ ಕಾರ್ಯಕರ್ತರ ಬಲಿ; ಡಿಕೆಶಿ ವಿರುದ್ಧ ಕಿಡಿಕಾರಿದ ಕವಿತಾ ರೆಡ್ಡಿ
ಡಿಕೆಶಿ ಅವರು ಪಕ್ಷದ ಪದಾಧಿಕಾರಿಗಳಿಗೆ ಮತ್ತು ಬದ್ಧ ಕಾರ್ಯಕರ್ತರಿಗೆ ನೀಡಿದ ಯಾವುದೇ ಮಾತನ್ನು ಉಳಿಸಿಕೊಂಡಿಲ್ಲ ಎಂದು ಕವಿತಾ ರೆಡ್ಡಿ ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕಾಂಗ್ರೆಸ್ ಪಕ್ಷದ ಉಚ್ಛಾಟಿತ ನಾಯಕಿ ಕವಿತಾ ರೆಡ್ಡಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಡಿಕೆಶಿ ಒಬ್ಬ ನಂಬಿಕೆಗೆ ಅರ್ಹರಲ್ಲದ ವ್ಯಕ್ತಿ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆ ಎಐಸಿಸಿ ವಕ್ತಾರೆಯಾಗಿ ಗುರುತಿಸಿಕೊಂಡಿದ್ದ ಕವಿತಾ ರೆಡ್ಡಿ ಅವರು, ಪಕ್ಷದ ನಿರ್ಧಾರಗಳನ್ನು ಬಹಿರಂಗವಾಗಿ ಟೀಕಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿದ್ದರು.
ಇದೀಗ ಮತ್ತೆ ಡಿಕೆಶಿ ವಿರುದ್ಧ ಹರಿಹಾಯ್ದಿರುವ ಅವರು, ಡಿ.ಕೆ. ಶಿವಕುಮಾರ್ ಅವರಿಂದ ಪಕ್ಷಕ್ಕೆ ಯಾವುದೇ ಲಾಭವಾಗಿಲ್ಲ. ಅವರು ಪಕ್ಷದ ಪದಾಧಿಕಾರಿಗಳಿಗೆ ನೀಡಿದ ಒಂದೇ ಒಂದು ಮಾತನ್ನು ಉಳಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಇದೆಂತಹ ಹಾಸ್ಯಾಸ್ಪದ ಸಂಗತಿ ಎಂದರೆ, ಡಿ.ಕೆ. ಶಿವಕುಮಾರ್ ಅವರು ಕಾರ್ಯಕರ್ತರಿಗೆ ಅಥವಾ ಪದಾಧಿಕಾರಿಗಳಿಗೆ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಡಿಕೆಶಿ ಅವರ ಈ ಬೇಡಿಕೆ ಸಂಪೂರ್ಣ ಆಧಾರರಹಿತವಾಗಿದೆ" ಎಂದು ಕವಿತಾ ರೆಡ್ಡಿ ಕಿಡಿಕಾರಿದ್ದಾರೆ.
ತಮ್ಮ ರಾಜಕೀಯ ಬೆಳವಣಿಗೆಗಾಗಿ ಬದ್ಧ ಕಾರ್ಯಕರ್ತರನ್ನು ಬಲಿ ಕೊಡಲು ಅವರು ಹಿಂದೆಮುಂದೆ ನೋಡುವುದಿಲ್ಲ. ಅವರು ಸಂಪೂರ್ಣವಾಗಿ ಸ್ವಾರ್ಥಿಯಾಗಿದ್ದು, ತನಗಾಗಿ ಮಾತ್ರ ರಾಜಕೀಯ ಮಾಡುತ್ತಿದ್ದಾರೆ. ನನ್ನಂತಹ ಎಷ್ಟೋ ಪ್ರಾಮಾಣಿಕ ಕಾರ್ಯಕರ್ತರಿಗೆ ಅವರು ವಂಚಿಸಿದ್ದಾರೆ ಎಂದು ಕವಿತಾ ರೆಡ್ಡಿ ತಮ್ಮ ಪೋಸ್ಟ್‌ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಅವರು ನಾಯಕಿಯ ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಮತ್ತು ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

