
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಹೋರಾಟದಲ್ಲಿ ಉರಿವ ಬಿಸಿಲನ್ನು ಲೆಕ್ಕಿಸದೆ ಪಾಲ್ಗೊಂಡಿದ್ದ ಸ್ಪರ್ಧಾರ್ಥಿಗಳು
ರಾಜ್ಯಪಾಲರಿಂದ ಒಳ ಮೀಸಲಾತಿ ವಿಧೇಯಕ ವಾಪಸ್: ಉದ್ಯೋಗಾಕಾಂಕ್ಷಿಗಳ ಆಸೆಗೆ ಮತ್ತೆ ತಣ್ಣೀರು!
ಒಳ ಮೀಸಲಾತಿಯಿಂದಲೇ ಕಳೆದ ಎರಡು ವರ್ಷಗಳಿಂದ ಯಾವುದೇ ನೇಮಕಾತಿಗಳು ನಡೆಯದಿರುವ ಈ ವೇಳೆ ಮಸೂದೆಯನ್ನು ರಾಜ್ಯಪಾಲರು ವಾಪಸ್ ಕಳಿಸಿರುವುದು ಸ್ಪರ್ದಾರ್ಥಿಗಳಲ್ಲಿ ಆತಂಕ ಮೂಡಿಸಿದೆ.
ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಿ ಎರಡೂ ಸದನಗಳ ಒಪ್ಪಿಗೆ ಪಡೆದಿದ್ದ ಒಳ ಮೀಸಲಾತಿ ವಿಧೇಯಕವನ್ನು ರಾಜ್ಯಪಾಲರು ಅಂಕಿತ ಹಾಕದೇ ವಾಪಸ್ ಕಳಿಸಿರುವುದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಆಕಾಂಕ್ಷಿಗಳಿಗೆ ನಿರಾಸೆ ಎದುರಾಗಿದೆ.
ಎರಡೂ ಸದನಗಳ ಒಪ್ಪಿಗೆ ಪಡೆದ 22 ವಿಧೇಯಕಗಳ ಪೈಕಿ ರಾಜ್ಯಪಾಲರು ಶುಕ್ರವಾರ(ಜ.9) 19 ವಿಧೇಯಕಗಳಿಗೆ ಒಪ್ಪಿಗೆ ನೀಡಿದ್ದು, 'ಕರ್ನಾಟಕ ಜಾತಿಗಳ (ಉಪವರ್ಗೀಕರಣ) ಮಸೂದೆ', ‘ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಲವು ಇತರ ಕಾನೂನುಗಳ (ಸಂಶೋಧನೆ) ಮಸೂದೆ’ಯನ್ನೂ ರಾಜ್ಯಪಾಲರು ಸ್ಪಷ್ಟೀಕರಣ ಕೋರಿ ಹಿಂತಿರುಗಿಸಿದ್ದಾರೆ. ಇದಲ್ಲದೆ, ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ’ ಇನ್ನು ಕೂಡ ರಾಜ್ಯಪಾಲರ ಪರಿಶೀಲನೆಯ ಹಂತದಲ್ಲೇ ಇದೆ.
'ಕರ್ನಾಟಕ ಜಾತಿಗಳ (ಉಪವರ್ಗೀಕರಣ) ಮಸೂದೆ'ಗೆ ರಾಜ್ಯಪಾಲರು ಅಂಕಿತ ಹಾಕಿದ್ದರೆ ಕಾನೂನಾಗಿ ರಾಜ್ಯದಲ್ಲಿ ನೇಮಕಗಳಿಗೆ ಚಾಲನೆ ಸಿಗುತ್ತಿತ್ತು. ಆದರೆ ಇದೀಗ ಈ ಕಾಯ್ದೆಗೆ ರಾಜ್ಯಪಾಲರು ಸರ್ಕಾರದ ಸ್ಪಷ್ಟೀಕರಣ ಕೋರಿರುವುದರಿಂದ ಮಸೂದೆಗೆ ಅಂಕಿತ ಬೀಳುವುದು ಮತ್ತಷ್ಟು ತಡವಾಗಲಿದ್ದು, ಸ್ಪರ್ಧಾರ್ಥಿಗಳು ಮತ್ತಷ್ಟು ತಿಂಗಳುಗಳು ಕಾಯುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈಗಾಗಲೇ ಒಳ ಮೀಸಲಾತಿಯಿಂದಲೇ ಕಳೆದ ಎರಡು ವರ್ಷಗಳಿಂದ ಯಾವುದೇ ನೇಮಕಾತಿಗಳು ನಡೆಯದಿರುವ ಈ ವೇಳೆ ಮಸೂದೆ ವಾಪಸ್ ಆಗಿರುವುದು ಸ್ಪರ್ದಾರ್ಥಿಗಳಲ್ಲಿ ಆತಂಕ ಮೂಡಿಸಿದೆ.
ಸುಪ್ರೀಂ ತೀರ್ಪು ಕಡಗಣನೆ
ಪರಿಶಿಷ್ಟ ಜಾತಿಯಲ್ಲಿ ಅವಕಾಶ ವಂಚಿತ ಸಮುದಾಯಗಳನ್ನು ಗುರುತಿಸಿ ವೈಜ್ಞಾನಿಕ ದತ್ತಾಂಶ ಸಂಗ್ರಹ ಮಾಡಿ ಮೀಸಲಾತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ 2024 ಆಗಸ್ಟ್ 1 ರಂದು ತೀರ್ಪು ನೀಡಿತ್ತು. ಆದರೆ ರಾಜ್ಯ ಸರ್ಕಾರ 1.5 ವರ್ಷವಾದರೂ ಸೌಲಭ್ಯವಂಚಿತ ಸಮುದಾಯಗಲಿಗೆ ಸರ್ಕಾರ ಇನ್ನೂ ಮೀಸಲಾತಿ ನೀಡಲು ಸಾಧ್ಯವಾಗಿಲ್ಲ. ಇನ್ನು ಕೇವಲ ಎರಡು ವರ್ಷಗಳಲ್ಲಿ ಸರ್ಕಾರದ ಅವಧಿ ಮುಕ್ತಾಯಗೊಳ್ಳಲಿದೆ. ಕಳೆದ ಮೂರು ವರ್ಷಗಳಿಂದ ಯಾವುದೇ ಹೊಸ ಅಧಿಸೂಚನೆಗಳಾಗಿಲ್ಲ. ಆದಷ್ಟು ಶೀಘ್ರವೇ ಸರ್ಕಾರ ರಾಜ್ಯಪಾಲರಿಗೆ ಸ್ಪಷ್ಟನೆ ನೀಡಿ ಮಸೂದೆಗೆ ಅಂಕಿತವಾಕಿಸಿ ನೇಮಕ ಪ್ರಕ್ರಿಯೆಗಳಿಗೆ ಚಾಲನೆ ನೀಡಬೇಕು ಎಂದು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಘದ ಅಧ್ಯಕ್ಷ ಸಂತೋಷ್ ಮರೂರ್ ʼದ ಫೆಡರಲ್ ಕರ್ನಾಟಕಕ್ಕೆʼ ತಿಳಿಸಿದರು.
ಅಲೆಮಾರಿ ಸಮುದಾಯಕ್ಕೆ ನ್ಯಾಯ ಸಿಗಲಿ
ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಅಂಕೇಶ್ ಪ್ರತಿಕ್ರಿಯಿಸಿ, " ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಕಳಿಸಿದ್ದ ಮಸೂದೆಯಲ್ಲಿ ಪರಿಶಿಷ್ಟ ಜಾತಿಯಲ್ಲಿನ ಪ್ರವರ್ಗ ʼಎʼ ಹಾಗೂ ಪ್ರವರ್ಗ ʼಬಿʼಗೆ ಶೇ.6 ಹಾಗೂ ಪ್ರವರ್ಗ ʼಸಿʼಗೆ ಶೇ.5 ಮೀಸಲಾತಿ ನೀಡಿತ್ತು. ಇದರಲ್ಲಿ ಪ್ರವರ್ಗ ʼಸಿʼಯಲ್ಲಿನ ಶೇ.5ರಲ್ಲಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಶೇ.1 ಮೀಸಲಾತಿ ನಿಗದಿಪಡಿಸಿರುವುದರಿಂದ ರಾಜ್ಯಪಾಲರಿಗೆ ಗೊಂದಲ ಉಂಟಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಮಸೂದೆಗೆ ಅಂಕಿತ ಪಡೆದು ನೇಮಕ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಹೈಕೋರ್ಟ್‌ನಲ್ಲಿಯೂ ಈ ಕುರಿತು ಪ್ರಕರಣವಿರುವುದರಿಂದ ಮತ್ತಷ್ಟು ತಡ ಮಾಡದೆ ಸರ್ಕಾರ ಹೈಕೋರ್ಟ್‌ನಲ್ಲಿರುವ ಪ್ರಕರಣವನ್ನು ವಿಲೇವಾರಿ ಮಾಡಿಸಬೇಕು. ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳಿಗೆ ಹಂತ-ಹಂತವಾಗಿ ಭರ್ತಿ ಮಾಡಬೇಕು" ಎಂದರು.
ಕೋರ್ಟ್ ಅಂತಿಮ ಆದೇಶಕ್ಕೆ ಒಳಪಟ್ಟು ನೇಮಕ ನಡೆಯಲಿ
ಕಳೆದ ಮೂರು ವರ್ಷದಿಂದ ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗೆ ತಯಾರಿ ನಡೆಸುತ್ತಿದ್ದೇನೆ. ಆದರೆ ಸರ್ಕಾರ ಒಳ ಮೀಸಲಾತಿ ಕಾರಣದಿಂದ ನೇಮಕ ಅಧಿಸೂಚನೆ ಹೊರಡಿಸಿಲ್ಲ. ನಗರದ ಪಿಜಿಯಲ್ಲಿ ಉಳಿದುಕೊಂಡು ಗ್ರಂಥಾಲಯದಲ್ಲಿ ಪರೀಕ್ಷೆಗೆ ಓದಿಕೊಳ್ಳುತ್ತಿದ್ದೇನೆ. ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿ ಮಸೂದೆ ಅಂಗೀಕಾರ ಮಾಡಿದಾಗ ಆದಷ್ಟು ಶೀಘ್ರ ಮಸೂದೆ ಪಾಸ್ ಆಗಿ ನೇಮಕಗಳಿಗೆ ವೇಗ ದೊರೆಯಲಿದೆ ಎಂದು ಸಂತಸಪಟ್ಟಿದ್ದೆವು. ಆದರೆ ಇದೀಗ ರಾಜ್ಯಪಾಲರು ಸ್ಪಷ್ಟೀಕರನ ಕೋರಿ ವಾಪಸ್ ಕಳಿಸಿರುವುದರಿಂದ ಮತ್ತಷ್ಟು ತಡವಾಗಲಿದೆ. ಆದ್ದರಿಂದ ಸರ್ಕಾರ ಮತ್ತಷ್ಟು ತಡನಾಡದೆ ಕೋರ್ಟ್ ಅಂತಿಮ ಆದೇಶಕ್ಕೆ ಒಳಪಟ್ಟು ನೇಮಕ ಪ್ರಕ್ರಿಯೆಗಳನ್ನು ನಡೆಸಲಿ. ಇದರಿಂದ ವಿದ್ಯಾರ್ಥಿಗಳಿಗೆ ಹಣ ಹಾಗೂ ಸಮಯ ಎರಡೂ ಉಳಿತಾಯವಾಗಲಿದೆ. ಕೆಲವರಿಗೆ ವಯೋಮಿತಿ ಮೀರುವ ಆತಂಕವೂ ಇರುವುದರಿಂದ ಆದಷ್ಟು ಬೇಗ ಸರ್ಕಾರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಶಿವಮೊಗ್ಗದ ಲಕ್ಷ್ಮಿ ಪ್ರತಾಪ್ ಪ್ರತಿಕ್ರಿಯಿಸಿದರು.

