Sensational Murder| ಒಂದೂವರೆ ತಿಂಗಳು ಪತಿಗೆ ಸ್ಲೋ ಪಾಯ್ಸನ್ ನೀಡಿದ ಮಹಿಳೆ, ಬದುಕುಳಿದ ಬಳಿಕ ಉಸಿರುಗಟ್ಟಿಸಿ ಕೊಲೆ
ತನ್ನ ಪ್ರೇಮಿ, ಕಾರ್ಕಳದ ಹೊಟೆಲ್ ಉದ್ಯಮಿ ಪುತ್ರನ ಸಂಚಿನಂತೆ ಹಬ್ಬ ದಿನದಿಂದಲೇ ನಗುನಗುತ್ತಾ ಊಟಕ್ಕೆ ನಿಧಾನ ವಿಷ (Slow Poison) ಬೆರಸಿ ಪ್ರತಿದಿನ ಪತಿಗೆ ಉಣಬಡಿಸಿದ ಈ ಮಹಿಳೆ, ಆತನ ಆರೋಗ್ಯ ಹದಗೆಡಿದ್ದಾಳೆ. ಚಿಕಿತ್ಸೆ ಪಡೆದು ಮನೆಗೆ ಮರಳಿದ ಮರುದಿನವೇ ಪ್ರಿಯಕರನ ಜತೆ ಸೇರಿ ಪತಿ ಕೊಲೆ ಮಾಡಿದ್ದಾಳೆ.
ಉಡುಪಿ ಜಿಲ್ಲೆಯ ಕಾರ್ಕಳದ ಪುಟ್ಟ ಊರು ಅಜೆಕಾರು. ಇಲ್ಲಿ ಬ್ಯೂಟಿಶಿಯನ್ ಆಗಿದ್ದ ಮಹಿಳೆ ಸಾಮಾಜಿಕ ಜಾಲತಾಣಗಳಿಗೆ ರೀಲ್ಸ್ ಮಾಡುವ ಹವ್ಯಾಸ. ಪ್ರತಿಯೊಂದರಲ್ಲೂ ಪತಿ ಜತೆ ಕೈಹಿಡಿದುಕೊಂಡು ಗಂಡ, ಹೆಂಡತಿ ಎಂದರೆ ಹೀಗಿರಬೇಕು ಎಂಬಂತಿದ್ದರು. ಆದರೆ ನಡೆದದ್ದೇ ಬೇರೆ!
ಗಣೇಶ ಹಬ್ಬ (ಚೌತಿ) ದಿನದಿಂದಲೇ ನಗುನಗುತ್ತಾ ಊಟಕ್ಕೆ ನಿಧಾನ ವಿಷ (Slow Poison) ಬೆರಸಿ ಪ್ರತಿದಿನ ಅಂದರೆ ಸುಮಾರು ಒಂದೂವರೆ ತಿಂಗಳು ಪತಿಗೆ ಉಣಬಡಿಸಿದ ಈ ಮಹಿಳೆ, ಆತನ ಆರೋಗ್ಯ ಹದಗೆಡಿಸಿದಳು. ಅನಾರೋಗ್ಯಪೀಡಿತನಾದ ಪತಿ ಮಂಗಳೂರು, ಮಣಿಪಾಲ, ಬೆಂಗಳೂರು ಮತ್ತಿತರ ಕಡೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ಮರುದಿನವೇ "ಇನ್ನೂ ಬದುಕುಳಿದ" ಪತಿಯನ್ನು ಪ್ರಿಯಕರನ ಜೊತೆ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ ಆರೋಪ ಹೊತ್ತಿದ್ದಾಳೆ. ಈಗ ಕಂಬಿ ಎಣಿಸುತ್ತಿದ್ದಾಳೆ.
ಕಾರ್ಕಳ ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆಯಲ್ಲಿ ವಾಸ ಮಾಡುತ್ತಿರುವ ನಿಟ್ಟೆಯಲ್ಲಿ ಕ್ಯಾಂಟೀನ್ ಒಂದನ್ನು ನಡೆಸುತ್ತಿದ್ದ ಬಾಲಕೃಷ್ಣ ಪೂಜಾರಿ (44) ಕೊಲೆಯಾದವರು, ಅವರ ಪತ್ನಿ ಪ್ರತಿಮಾ (38) ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ (28) ಅ.20ರಂದು ಕೊಲೆ ಮಾಡಿದ್ದು, ಪ್ರಕರಣ ಆಕೆಯ ಸೋದರನಿಂದಲೇ ಬೆಳಕಿಗೆ ಬಂದಿದೆ. ದಿಲೀಪ್ ಹೆಗ್ಡೆ, ಕಾರ್ಕಳದ ಹೊಟೇಲ್ ಉದ್ಯಮಿಯೊಬ್ಬರ ಪುತ್ರನಾಗಿದ್ದು, ಸಾಮಾಜಿಕ ಜಾಲತಾಣ ಮೂಲಕ ಇಬ್ಬರೂ ಪರಿಚಯ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕೃಷ್ಣ ಪೂಜಾರಿ ಹಾಗೂ ಪ್ರತಿಮಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮುಂಬಯಿಯಲ್ಲಿದ್ದ ದಂಪತಿ ಕೋವಿಡ್ ಬಳಿಕ ಊರಿಗೆ ಬಂದಿದ್ದರು. ಕಳೆದ ವರ್ಷ ಹೊಸ ಮನೆ ಕಟ್ಟಿಸಿದ್ದರು. ಆರು ತಿಂಗಳ ಹಿಂದೆ ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್ ಅನ್ನು ತನ್ನ ಪ್ರೀತಿಯ ಪತ್ನಿ ಪ್ರತಿಮಾಗೆ ಹಾಕಿಸಿಕೊಟ್ಟಿದ್ದರು. ದಂಪತಿಯ 9ನೇ ತರಗತಿಯಲ್ಲಿ ಕಲಿಯುವ ಮಗ ಹಾಗೂ 5ನೇ ತರಗತಿಯಲ್ಲಿ ಕಲಿಯುವ ಮಗಳು ಈಗ ತಂದೆಯನ್ನು ಕಳೆದುಕೊಂಡಿದ್ದಾರೆ. ಇಬ್ಬರು ಮಕ್ಕಳೂ ತಾಯಿಯೇ ಹಂತಕಿ ಎಂಬುದನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ.
ಪತಿ, ಪತ್ನಿ ಔರ್ ವೋ ಕತೆ ಇದು. ಇಂಥ ಅನೇಕ ಪ್ರಕರಣಗಳು ಘಟಿಸಿರಬಹುದು. ಆದರೆ ತನ್ನ ಗಂಡನನ್ನು ಕೊಲ್ಲಲು ಮಹಿಳೆ ಉಪಯೋಗಿಸಿದ ವಿಧಾನ ಮೈಜುಮ್ಮೆನ್ನಿಸುವಂತಿದೆ. ಕಳೆದ ಒಂದೂವರೆ ತಿಂಗಳಿಂದ ವಿಷದ ಪದಾರ್ಥವನ್ನು ಪತಿಯ ಆಹಾರ ಪದಾರ್ಥಕ್ಕೆ ಆಕೆ ಸೇರಿಸಿ ಕೊಡುತ್ತಿದ್ದಳು!. ದಿನಾ ವಿಷ ನೀಡಿದರೂ, ಪತಿಯ ಆರೋಗ್ಯ ಹದಗೆಟ್ಟರೂ ಮತ್ತೆ ಗುಣಮುಖನಾಗುವುದನ್ನು ಗಮನಿಸಿದ ಪತ್ನಿ, ಇನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರಿಯಕರನ ಜೊತೆ ಸೇರಿ, ಉಸಿರುಗಟ್ಟಿಸಿ ಸಾಯುವಂತೆ ಮಾಡಿದ್ದಾಗಿ ಆರೋಪಿಸಲಾಗಿದೆ .
ಪ್ರತಿಮಾಕೆಗೆ ಸಾಥ್ ನೀಡಿ, ಉಡುಪಿಯ ಮೆಡಿಕಲ್ ಶಾಪ್ ನಿಂದ ವಿಷದ ಪದಾರ್ಥ ತಂದು ಕೊಟ್ಟು, ಕೊಲೆಯ ಸಂದರ್ಭವೂ ಸಹಕರಿಸಿದ ಪ್ರೇಮಿ ದಿಲೀಪ್ ಗೆ ಕೇವಲ 28 ವರ್ಷ. ಪತ್ನಿಯೇ ಪತಿಯನ್ನು ಕೊಲೆ ಮಾಡುವ ಸುದ್ದಿಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ನಿಧಾನ ವಿಷ (ಸ್ಲೋ ಪಾಯ್ಸನ್) ನೀಡಿ ಕೊಲೆಗೆ ಸಂಚು ಮಾಡಿದ ಘಟನೆಗಳು ಬಹಳ ವಿರಳ.
ಸಂಚು ರೂಪಿಸಿ ಕೊಲೆ ಮಾಡಿದ್ದಾರೆ: ಎಸ್ಪಿ ಡಾ. ಅರುಣ್
ಬಾಲಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪ್ರತಿಮಾ ಮತ್ತು ದಿಲೀಪ್ ಹೆಗ್ಡೆ ಸಂಚು ರೂಪಿಸಿ ಕೊಲೆ ಮಾಡಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಇವರು ಮೊದಲೇ ಪರಿಚಯಸ್ಥರು, ಅನ್ಯೋನ್ಯವಾಗಿದ್ದರು. ಹೇಗಾದರೂ ಬಾಲಕೃಷ್ಣ ಅವರನ್ನು ಕೊಲೆ ಮಾಡಬೇಕು ಎಂದು ಸಂಚು ರೂಪಿಸಿ, ಪ್ರತಿ ದಿನ ಊಟದಲ್ಲಿ ವಿಷಪದಾರ್ಥ ಮಿಶ್ರಣ ಮಾಡಿ ಕೊಡುತ್ತಿದ್ದರು ಇದೀಗ ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದೆ, ಹೆಚ್ಚಿನ ವಿವರಗಳೂ ಹೊರಬರಲಿವೆ ಎಂದು ಉಡುಪಿ ಎಸ್‌ಪಿ ಡಾ. ಅರುಣ್ "ದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ..
ಗಣೇಶ ಹಬ್ಬದ ದಿನದಿಂದ ವಿಷವಿಕ್ಕಲು ಆರಂಭಿಸಿದ್ದಳು
ಬಾಲಕೃಷ್ಣ ಹಾಗೂ ಪ್ರತಿಮಾ ಮದುವೆಯಾಗಿ 16 ವರ್ಷಗಳಾಗಿದ್ದವು. ಇಬ್ಬರು ಮಕ್ಕಳೂ ಇದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದ ಪ್ರತಿಮಾಗೆ ಆಕೆಗಿಂತ ಹತ್ತು ವರ್ಷ ಕಿರಿಯನಾದ ದಿಲೀಪ್ ಜತೆ ಸಖ್ಯ ಬೆಳೆದಿತ್ತು. ಕಾರ್ಕಳದ ಹೊಟೆಲ್ ಉದ್ಯಮಿಯೊಬ್ಬರ ಪುತ್ರನಾಗ ಅನ್ಯೋನ್ಯತೆವರೆಗೆ ಹೋಗಿತ್ತು. ಈ ವಿಷಯ ಬಾಲಕೃಷ್ಣರಿಗೆ ಗೊತ್ತಾಗಿತ್ತು. ಆಕೆಯ ಅಣ್ಣ ಸಂದೀಪ್ ಹಾಗೂ ಬಾಲಕೃಷ್ಣ ದೀರ್ಘಕಾಲದ ಗೆಳೆಯರು. ಸ್ನೇಹ ತಂಗಿಯನ್ನು ಕೊಟ್ಟು ಮದುವೆ ಮಾಡಿ ಸಂಬಂಧವೂ ಆಗಿತ್ತು. ಹೀಗಾಗಿ ದಿಲೀಪ್ ಜತೆ ಸಖ್ಯದ ವಿಚಾರ ಮಾತುಕತೆಯಲ್ಲಿ ಮುಗಿದಿತ್ತು. ಹಾಗೆಂದು ಬಾಲಕೃಷ್ಣ ಅಂದುಕೊಂಡಿದ್ದರು. ಆದರೆ ನಡೆದದ್ದೇ ಬೇರೆ. ಚೌತಿಯ ದಿನವೇ ವಿಷವನ್ನು ಪತಿಗೆ ನೀಡಲು ಆರಂಭಿಸಿದ್ದಳು!! ಅಂದು ಸೆಪ್ಟೆಂಬರ್ 7. ಎಲ್ಲೆಡೆ ಚೌತಿ ಸಂಭ್ರಮಾಚರಣೆ ನಡೆಯುತ್ತಿದ್ದರೆ ಇಲ್ಲಿ ಪತಿ ಹತ್ಯೆಗೇ ಮುಹೂರ್ತ!!.
ದಿನಾ ವಿಷ ನೀಡಿ ಪ್ಲ್ಯಾನ್
ಸೋಶಿಯಲ್ ಮೀಡಿಯಾದಲ್ಲಿ ಒಂದೆಡೆ ಪತಿಯೊಡನೆ ರೀಲ್ಸ್ ಮಾಡುತ್ತಲೇ ಆತನನ್ನು ಕೊಲ್ಲುವುದು ಹೇಗೆ ಎಂದು ಪತ್ನಿ ಯೋಚಿಸುತ್ತಿದ್ದಳು. ಇದಕ್ಕೆ ದಿಲೀಪ್ ಜೊತೆ ಮೀಟಿಂಗ್ ಮಾಡುತ್ತಿದ್ದಳು. ಇಂಥ ಹೊತ್ತಿನಲ್ಲೇ ದಿಲೀಪ್, ದಿನಾ ವಿಷ ನೀಡಿ ಆಹಾರದ ಜೊತೆ ಕೊಟ್ಟರೆ ಬಾಲಕೃಷ್ಣ ಸಾಯ್ತಾರೆ, ಕೊಂದದ್ದು ಎಂದೂ ಗೊತ್ತಾಗುವುದಿಲ್ಲ ಎಂಬ ಕೊಲೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಜಾಲಾಡಿ ನಿಧಾನ ವಿಷದ ಮಾತ್ರೆ ಬಗ್ಗೆ ಮಾಹಿತಿ ಪಡೆದಿದ್ದ ಎನ್ನಲಾಗಿದೆ.
ಐಡಿಯಾ ವರ್ಕೌಟ್ ಆಗಬಹುದು ಎಂದು ಖಚಿತವಾದ ಬಳಿಕ ಉಡುಪಿಯ ಅಂಗಡಿಯೊಂದರಿಂದ ದಿಲೀಪ್ ನಿಧಾನ ವಿಷ ಖರೀದಿಸಿದ್ದಾನೆ. ಬಳಿಕ ಅದನ್ನು ಪ್ರತಿಮಾಗೆ ನೀಡಿದ್ದಾನೆ. ಚೌತಿ ದಿನ ಕಾರ್ಯಕ್ರಮವೊಂದರಲ್ಲಿ ಪತಿ, ಪತ್ನಿ ಒಟ್ಟಾಗಿದ್ದರು. ಊಟ ಮಾಡುವಾಗ ನಗುನಗುತ್ತಾ ಮೊದಲ ಕಂತು ವಿಷವಿಕ್ಕಿದ್ದಾಳೆ. ಬಳಿಕ ಅದನ್ನೇ ಚಾಚೂ ತಪ್ಪದೆ ಮುಂದುವರಿಸಿದ್ದಾಳೆ.
ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಂತಾಯಿತು
ಬಾಲಕೃಷ್ಣ ಅವರಿಗೆ 25 ದಿನಗಳ ಹಿಂದೆ ಜ್ವರ ಮತ್ತು ವಾಂತಿ ಶುರುವಾಗಿತ್ತು. ಈ ಸಂದರ್ಭ, ಅವರನ್ನು ಸಮೀಪದ ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಕಾಮಾಲೆ ರೋಗವಿರುವುದು ಗಮನಕ್ಕೆ ಬಂತು. ಅಲ್ಲಿ 6 ದಿನ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದರು. ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾದರು. ಅಲ್ಲಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕೃಷ್ಣ ಅವರಿಗೆ ನರ ರೋಗವಿರುವುದಾಗಿ ತಿಳಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಾಲಕೃಷ್ಣ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಲು ಸಲಹೆ ನೀಡಿರುತ್ತಾರೆ. ಅದರಂತೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಅಲ್ಲಿಯೂ ಗುಣಮುಖರಾಗದೇ ಇದ್ದಾಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಲ್ಲಿ 1 ವಾರ ಚಿಕಿತ್ಸೆ ಪಡೆದ ಬಳಿಕ ವೈದ್ಯಾಧಿಕಾರಿಯವರು ಬಾಲಕೃಷ್ಣ ಅವರನ್ನು ಉದ್ಯಾವರ ಅಥವಾ ಅಂಕೋಲಾ ಆಯರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ತಿಳಿಸುತ್ತಾರೆ. ಅ. 19ರಂದು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಾಲಕೃಷ್ಣ ಅವರು ರಾತ್ರಿ 10 ಗಂಟೆಗೆ ಅಜೆಕಾರು ದೆಪ್ಪುತ್ತೆಯಲ್ಲಿರುವ ತಮ್ಮ ಮನೆಗೆ ಬಂದಿರುತ್ತಾರೆ. ಅ. 20ರಂದು ಕೊಲೆಗೀಡಾಗಿದ್ದಾರೆ. ತನಿಖೆ ಬಳಿಕ ನಿಧಾನವಿಷದ ಪರಿಣಾಮವಿದು ಎಂದು ಗೊತ್ತಾಗುತ್ತದೆ. ಪತ್ನಿ ನೀಡಿದ ನಿಧಾನವಿಷ ಬಾಲಕೃಷ್ಣ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಂತೆ ಮಾಡುತ್ತದೆ. ಏಕಾಏಕಿಯಾಗಿ ಕಾಣಿಸಿಕೊಂಡ ಅನಾರೋಗ್ಯದಿಂದ ಚಿಕಿತ್ಸೆಯಾದ ಬಳಿಕ ಮನೆಗೆ ಬಂದ ಬಾಲಕೃಷ್ಣ ಅವರು ಮೃತಪಟಿದ್ದರಿಂದ ಅನುಮಾನಗೊಂಡ ಕುಟುಂಬದವರು ಪೊಲೀಸ್ ಮೆಟ್ಟಿಲೇರಿದ ಕಾರಣ ಸತ್ಯ ಬಹಿರಂಗವಾಗಿದೆ.
ಪ್ರಕರಣ ಬೆಳಕಿಗೆ ತಂದ ಸೋದರ
ಬಾಲಕೃಷ್ಣ ಪೂಜಾರಿ ಹತ್ಯೆಯಾಗಿ ಐದು ದಿನ ಕಳೆದ ಬಳಿಕ ವಿಚಾರ ಗೊತ್ತಾಗಿದೆ. ಬಂಧುಗಳೆಲ್ಲ ದಿನ ಮನೆಯಲ್ಲಿ ಸೇರಿದ್ದ ಸಂದರ್ಭ ಪ್ರತಿಮಾ ವರ್ತನೆ ಸಂಶಯಾಸ್ಪದಗೊಂಡ ಸಂದರ್ಭ ಅಣ್ಣ ವಿಚಾರಣೆ ನಡೆಸಿ, ಆಕೆ ಹೇಳಿಕೆಯನ್ನು ರೆಕಾರ್ಡ್ ಮಾಡಿದ್ದಾನೆ. ಬಳಿಕ ಮನೆಯವರೊಂದಿಗೆ ದೂರು ನೀಡಿ, ಪೊಲೀಸ್ ಕಾರ್ಯಾಚರಣೆ ಮೂಲಕ ಹೆಚ್ಚಿನ ವಿಚಾರಣೆ ನಡೆದಿದೆ.
ಕರಿಮಣಿ ಮಾಲೀಕ ನೀನಲ್ಲ ಎಂದು ರೀಲ್ಸ್ ಮಾಡಿದ್ದಳು:
ಕರಿಮಣಿ ಮಾಲೀಕ ನೀನಲ್ಲ ಎಂದು ರೀಲ್ಸ್ ಮಾಡುವ ಮೂಲಕ ಪತಿ, ಪತ್ನಿ ಕಾರ್ಕಳ ಪರಿಸರದಲ್ಲಷ್ಟೇ ಅಲ್ಲ ಇಂಟರ್ನೆಟ್ ಜಾಲತಾಣ ಹುಡುಕಾಟ ನಡೆಸುವವರ ವಲಯದಲ್ಲಿ ಪ್ರಸಿದ್ಧರಾಗಿದ್ದರು. ತಮಾಷೆಗೆ ಎಂದು ಮಾಡಿದ ವಿಡಿಯೋವನ್ನು ಪತ್ನಿ ನಿಜವಾಗಿಸಿದ್ದಾಳೆ. ಪ್ರಿಯಕರನ ಜೊತೆ ಸೇರಿ ಪತಿ ಕರಿಮಣಿ ಮಾಲೀಕ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಕ್ರೂರತನದ ಪರಮಾವಧಿ ಮೆರೆದು, ವಿಷ ಹಾಕಿದರೂ ಬದುಕುಳಿದ ಪತಿಯನ್ನು ಕೊರಳೊತ್ತಿ ಕೊಂದಿದ್ದಾಳೆ.
ಮನೋವೈದ್ಯರು ಏನಂತಾರೆ?
ಈ ಪ್ರಕರಣದ ಕುರಿತು ಮಂಗಳೂರಿನ ಮನೋವೈದ್ಯರಾದ ಡಾ. ರಾಜೇಶ್ ಮಾತನಾಡಿ, ತನಗಿಂತಲೂ ಸಣ್ಣ ಪ್ರಾಯದ ಯುವಕನೊಂದಿಗೆ ಪ್ರೇಮಪ್ರಕರಣವಾದ ಸಂದರ್ಭ ಸಾಮಾನ್ಯವಾಗಿ ಮನೆಯಲ್ಲಿ ಕಲಹಗಳು ಮೂಡುತ್ತವೆ. ಅದು ಡೈವೋರ್ಸ್ ನಲ್ಲಿ ಪರ್ಯಾವಸನಗೊಳ್ಳುತ್ತದೆ. ಆದರೆ ಪ್ರೇಮೋನ್ಮಾದ ಪತಿಯನ್ನೇ ಕೊಲ್ಲುವಂತೆ ಮಾಡಿದೆ. ಅದರಲ್ಲೂ ನಿಧಾನವಾಗಿ ಪ್ರತಿ ದಿನ ವಿಷ ಬೆರೆಸಿ ನೀಡುವ ಕೃತ್ಯ ಆರೋಪಿಗಳ ಕ್ರಿಮಿನಲ್ ಮನೋಸ್ಥಿತಿ ಉಚ್ಛ್ರಾಯ ಸ್ಥಿತಿಗೆ ಹೋಗಿರುವುದು ಹಾಗೂ ಸೈಕೋಪಾತ್ ವರ್ತನೆಯನ್ನು ತೋರಿಸಿರುವುದನ್ನು ಕಾಣಬಹುದು. ಎದುರಿನಿಂದ ನಗುನಗುತ್ತಾ, ಒಳಗೊಳಗೆ ಹತ್ಯೆ ಮಾಡುವ ಯೋಚನೆ ಮಾನಸಿಕವಾಗಿ ಕ್ರೌರ್ಯದ ಸ್ಥಿತಿಯನ್ನು ಬಿಂಬಿಸುತ್ತದೆ ಎಂದರು. ಹೇಗಾದರೂ ಸರಿ, ಪತಿ ಸಾಯಬೇಕು ಎಂಬ ಮನಸ್ಸೇ ಸೈಕೋಪಾತ್ ಲಕ್ಷಣಗಳನ್ನು ತೋರಿಸುತ್ತದೆ ಎಂಬುದು ಮನೋವೈದ್ಯರ ನಿಲುವು.
ನಿಧಾನ ವಿಷ:
ನಿಧಾನ ವಿಷ ಅಥವಾ ಅಂತಹ ಯಾವುದೇ ವಿಷ ಔಷಧಿ ಅಥವಾ ಮಾತ್ರೆಗ್ಳನ್ನು ಮಾರಾಟ ಮಾಡುವ ಔಷಧಿ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಯಾವುದೇ ವೈದ್ಯರ ಚೀಟಿ ಅಥವಾ ಅನುಮತಿ (ಪ್ರಿಸ್ಕ್ರಿಪ್ಷನ್) ಇಲ್ಲದೆ ಔಷಧಿ ಅಂಗಡಿಯವರು ಅವುಗಳ ಮಾರಾಟ ಮಾಡುವುದು ಅಪರಾಧ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗೆ ಅಂತಹ ಮಾತ್ರೆ ನೀಡಿದ ಔಷಧಿ ಅಂಗಡಿ ವಿರುದ್ಧ ವೂ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.