JDS Protest | ಎಚ್‌ಡಿಕೆಗೆ ಅವಹೇಳನ; ಸಚಿವ ಜಮೀರ್ ವಿರುದ್ಧ ಜೆಡಿಎಸ್ ಪ್ರತಿಭಟನೆ
ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೀಳು ಮಟ್ಟದ ಭಾಷೆ ಬಳಿಸಿರುವುದು ಅಕ್ಷಮ್ಯ. ಅವರ ಮಾತುಗಳು ಅವರ ಕೊಳಕು ಮನಸ್ಥಿತಿಯನ್ನು ತೋರುತ್ತವೆ. ಕೂಡಲೇ ಜಮೀರ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಮೈಬಣ್ಣವನ್ನು ನಿಂದಿಸಿದ್ದ ಸಚಿವ ಸಚಿವ ಜಮೀರ್ ಅಹಮದ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಬುಧವಾರ ಬೆಂಗಳೂರಿನಲ್ಲಿ ಪತಿಭಟನೆ ನಡೆಸಿದರು.
ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಜಮೀರ್ ಭೂತ ದಹನ ಮಾಡಿದರಲ್ಲದೆ, ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯ ಮಾಡಿದರು.
ಜೆಡಿಎಸ್ ಪಕ್ಷದ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನವನದ ಬಳಿ ಪ್ರತಿಭಟನೆ ನಡೆಸಿ ಜಮೀರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು, ಅಲ್ಲದೇ ಘೋಷಣೆಗಳ ಫಲಕಗಳನ್ನು ಪ್ರದರ್ಶಿಸಿ ಉಗ್ರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ, ನಮ್ಮ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೀಳು ಮಟ್ಟದ ಭಾಷೆ ಬಳಿಸಿರುವುದು ಅಕ್ಷಮ್ಯ. ಅವರ ಮಾತುಗಳು ಅವರ ಕೊಳಕು ಮನಸ್ಥಿತಿಯನ್ನು ತೋರುತ್ತವೆ. ಜಮೀರ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.
ಸರ್ಕಾರಕ್ಕೆ ನೈತಿಕತೆ ಇದ್ದರೆ ಕ್ರಮ ಕೈಗೊಳ್ಳಿ
ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿರುವ ಜಮೀರ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ ಈ ಕ್ರಮ ಕೈಗೊಳ್ಳಬೇಕು ಎಂದರು.
ಕ್ರಮ ಜರುಗಿಸದಿದ್ದರೆ ರಾಜ್ಯಪಾಲರಿಗೆ ದೂರು
ಜಮೀರ್ ವರ್ಣಬೇಧ ನೀತಿ ಮೂಲಕ ಜನಾಂಗೀಯ ನಿಂದನೆ ಮಾಡಿದ್ದಾರೆ. ಒಕ್ಕಲಿಗ ಸಮುದಾಯವನ್ನು ಅಪಮಾನಿಸಿದ್ದಾರೆ. ಇನ್ನು ಮುಂದೆ ಇದೇ ರೀತಿ ನಾಲಿಗೆ ಹರಿಯಬಿಟ್ಟರೆ, ನಾಡಿನ ಜನರು ತಕ್ಕ ಶಾಸ್ತಿ ಮಾಡುತ್ತಾರೆ. ಒಂದು ವೇಳೆ ಸಂಪುಟದಿಂದ ವಜಾ ಮಾಡದಿದ್ದರೆ, ಜಮೀರ್ ಹೇಳಿಕೆ ವಿರೋಧಿಸಿ ಕಪ್ಪುಬಾವುಟ ಪ್ರದರ್ಶಿಸುತ್ತೇವೆ. ರಾಜ್ಯಪಾಲರು, ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಅವರು ಹೇಳಿದರು.
ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು
ಬಳಿಕ ಜಮೀರ್ ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿ ರಸ್ತೆಗೆ ಇಳಿದಾಗ ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಶೈಲಜಾ ರಾವ್, ನಾರಾಯಣ ಸ್ವಾಮಿ, ರಮೇಶ್ ರಾವ್, ಮಂಗಳಮ್ಮ, ಹರಿಬಾಬು, ಮುನಿಸ್ವಾಮಿ, ಸಯ್ಯದ್ ಸೇರಿದಂತೆ ಪಕ್ಷದ ಮುಖಂಡರು ಭಾಗಿಯಾಗಿದ್ದರು.