ಜೆಡಿಎಸ್ ವಾರಸುದಾರಿಕೆ ಪ್ರಶ್ನೆ | ರೇವಣ್ಣ ಕುಟುಂಬದ ಹಿನ್ನಡೆ; ನಿಖಿಲ್ ನಾಯಕತ್ವಕ್ಕೆ ಹಸಿರು ನಿಶಾನೆ?
ಸದ್ಯ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಪಕ್ಷದ ಇತರೆ ನಾಯಕರನ್ನು ಬದಿಗಿಟ್ಟು ಮಹತ್ವದ ಗುರುವಾರ ಪಕ್ಷದ ಮಹತ್ವದ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಪಕ್ಷದ ರಾಜ್ಯ ನಾಯಕತ್ವ ವಹಿಸುವ ಸೂಚನೆಯನ್ನು ಈಗಾಗಲೇ ನೀಡಿದ್ದಾರೆ.
ರಾಷ್ಟ್ರೀಯ ಪಕ್ಷಗಳಿಗಿಂತ ಜೆಡಿಎಸ್‌ಗೆ ಹೆಚ್ಚಿನ ರಾಜಕೀಯ ಲಾಭ ತಂದುಕೊಟ್ಟಿರುವ ಈ ಬಾರಿಯ ಲೋಕಸಭಾ ಚುನಾವಣೆ, ಪಕ್ಷದ ನಾಯಕತ್ವದ ವಿಷಯದಲ್ಲೂ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಕುಟುಂಬಕ್ಕೆ ಭರಪೂರ ಅವಕಾಶಗಳನ್ನೂ ಕೊಟ್ಟಿದೆ. ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಮೂಲಕ ಪಕ್ಷದ ನಾಯಕತ್ವ ಗೌಡರ ಕುಟುಂಬದ ಮೂರನೇ ತಲೆಮಾರಿಗೆ ಹಸ್ತಾಂತರವಾಗುವ ಸಾಧ್ಯತೆಗಳನ್ನು ಈ ಬೆಳವಣಿಗೆ ತೆರೆದಿಟ್ಟಿದೆ.
ಸದ್ಯ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಪಕ್ಷದ ಇತರೆ ನಾಯಕರನ್ನು ಬದಿಗಿಟ್ಟು ಮಹತ್ವದ ಗುರುವಾರ ಪಕ್ಷದ ಮಹತ್ವದ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಪಕ್ಷದ ರಾಜ್ಯ ನಾಯಕತ್ವ ವಹಿಸುವ ಸೂಚನೆಯನ್ನು ಈಗಾಗಲೇ ನೀಡಿದ್ದಾರೆ.
ಅಲ್ಲದೆ, ಪಕ್ಷದ ಸಂಘಟನೆ ಮತ್ತು ನಾಯಕತ್ವದ ಕುರಿತೂ ಮಾತನಾಡಿರುವ ಅವರು, "ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ನಾನು ಹೆಚ್ಚು ತೊಡಗಿಸಿಕೊಳ್ಳುತ್ತೇನೆ. 2019 ರ ಲೋಕಸಭಾ ಚುನಾವಣೆಯಲ್ಲಿ ನಾನು ಆಕಸ್ಮಿಕವಾಗಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದೆ. ರಾಜಕಾರಣ ಎಂಬುದು ಮಹತ್ತರವಾದ ಜವಾಬ್ದಾರಿ. ಅದರಲ್ಲೂ ಪ್ರಾದೇಶಿಕ ಪಕ್ಷವನ್ನು ನಡೆಸುವುದು ಒಂದು ನಿರ್ಣಾಯಕ ಹೊಣೆಗಾರಿಕೆ. ಅದೆಲ್ಲವನ್ನೂ ಅರಿತು ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಿ, ಬಲಪಡಿಸುವ ನಿಟ್ಟಿನಲ್ಲಿ ನಾನು ಸಂಪೂರ್ಣ ತೊಡಗಿಸಿಕೊಳ್ಳಲಿದ್ದೇನೆ" ಎಂದಿದ್ದಾರೆ.
ಅಲ್ಲದೆ, ಪಕ್ಷದ ಅಧ್ಯಕ್ಷರಾಗಿ ನಾಯಕತ್ವ ವಹಿಸುವ ಕುರಿತು ಕೇಳಲಾದ ಪ್ರಶ್ನೆಗೆ, "ಆ ಕುರಿತು ಪಕ್ಷದ ಹಿರಿಯ ನಾಯಕರಾದ ಎಚ್ ಡಿ ದೇವೇಗೌಡರು ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ನಿರ್ಧಾರ ಕೈಗೊಳ್ಳುತ್ತಾರೆ. ಯಾರಿಗೆ ಯಾವ ಜವಾಬ್ದಾರಿ ಕೊಡಬೇಕು ಎಂಬುದು ಅವರಿಗೆ ಬಿಟ್ಟದ್ದು.." ಎಂದಿದ್ದಾರೆ. ಆ ಮೂಲಕ ಪಕ್ಷದ ನಾಯಕತ್ವಕ್ಕೆ ಹೆಗಲು ಕೊಡಲು ತಾವು ಸಿದ್ಧ ಎಂಬ ಸಂದೇಶವನ್ನೂ ನಿಖಿಲ್ ಕುಮಾರಸ್ವಾಮಿ ರವಾನಿಸಿದ್ದಾರೆ.
ಜೊತೆಗೆ, ಪೆನ್‌ಡ್ರೈವ್ ಪ್ರಕರಣದ ಬಳಿಕ ಗೌಡರ ಕುಟುಂಬದೊಳಗೇ ಇದ್ದ ಪಕ್ಷದ ವಾರಸುದಾರಿಕೆಯ ಪೈಪೋಟಿ ಕೂಡ ಸದ್ದಡಗಿದೆ. ಎಚ್ ಡಿ ರೇವಣ್ಣ, ಅವರ ಪತ್ನಿ ಭವಾನಿ ರೇವಣ್ಣ ಮತ್ತು ಪುತ್ರ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಕರಣದಲ್ಲಿ ಸಿಲುಕಿರುವುದರಿಂದ ಪಕ್ಷದ ನಾಯಕತ್ವಕ್ಕೆ ಹಕ್ಕು ಮಂಡಿಸುವ ಸಾಧ್ಯತೆಗಳೂ ಇಲ್ಲ. ಹಾಗಾಗಿ ನಿಖಿಲ್ ಪಾಲಿಗೆ ಹಾಸನ ಜಿಲ್ಲಾ ನಾಯಕತ್ವ ಮಾತ್ರವಲ್ಲದೆ ಪಕ್ಷದ ನಾಯಕತ್ವದ ಅವಕಾಶಗಳ ಬಾಗಿಲೂ ತೆರೆದಿದೆ.
ರೇವಣ್ಣ ಕುಟುಂಬಕ್ಕೆ ಪೆನ್‌ಡ್ರೈವ್ ಕಂಟಕ
ಮೂರು ದಶಕದಿಂದ ಪಕ್ಷದ ಪ್ರಶ್ನಾತೀತ ಸೂತ್ರದಾರನಾಗಿರುವ ಗೌಡರ ಕುಟುಂಬದಲ್ಲಿ ಪ್ರಜ್ವಲ್ ಪ್ರಕರಣದ ಬಳಿಕ ದೇವೇಗೌಡರ ಹಿರಿಯ ಮಗ ಹಾಗೂ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಅತ್ಯಾಚಾರ, ಅತ್ಯಾಚಾರ ಸಂತ್ರಸ್ತೆಯ ಅಪಹರಣ, ಜೀವಬೆದರಿಕೆಯಂತಹ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ರೇವಣ್ಣ ಮತ್ತು ಸರಣಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಭವಿಷ್ಯ ಮಂಕಾಗಿದೆ. ಜೊತೆಗೆ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದ ರೇವಣ್ಣ ಪತ್ನಿ ಭವಾನಿ ರೇವಣ್ಣ ಕೂಡ ಈ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವುದರಿಂದ ರೇವಣ್ಣ ಕುಟುಂಬ ಪಕ್ಷದ ವಾರಸುದಾರಿಕೆಯ ಹಕ್ಕು ಮಂಡಿಸುವ ಸ್ಥಿತಿ ಸದ್ಯಕ್ಕಂತೂ ಕಾಣಿಸುತ್ತಿಲ್ಲ.
ಆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಪಕ್ಷವನ್ನು ಮುನ್ನಡೆಸುವ ಅನಿವಾರ್ಯತೆ ಬಂದೊದಗಿದೆ. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಸ್ಥಿತಿ ಈಗ ಅವರ ಪಾಲಿಗೆ ಇದೆ.
ಮೂರನೇ ತಲೆಮಾರಿಗೆ ಅಧಿಕಾರ ದಂಡ
ಬಲ್ಲ ಮೂಲಗಳ ಪ್ರಕಾರ ಪಕ್ಷದ ನಾಯಕತ್ವವನ್ನು ಕುಟುಂಬದಲ್ಲೇ ಉಳಿಸಿಕೊಂಡು ಶಾಸಕಾಂಗ ಪಕ್ಷದ ನಾಯಕತ್ವವನ್ನು ಇತರೆ ಹಿರಿಯ ಮುಖಂಡರಾದ ಪಕ್ಷದ ಹಾಲಿ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ, ಅಥವಾ ಶ್ರೀನಿವಾಸಪುರ ಶಾಸಕ ವೆಂಕಟಶಿವಾ ರೆಡ್ಡಿ ಅವರಿಗೆ ವಹಿಸುವ ಬಗ್ಗೆ ಚರ್ಚೆ ನಡೆದಿದೆ. ಅಂದರೆ, ಗೌಡರ ಕುಟುಂಬದ ಮೂರನೇ ತಲೆಮಾರಿಗೆ ಪಕ್ಷದ ಚುಕ್ಕಾಣಿ ವರ್ಗಾವಣೆಯಾಗುವ ಸಾಧ್ಯತೆಗಳು ಹೆಚ್ಚಿವೆ.
ಅದರ ಭಾಗವಾಗಿಯೇ ಕುಮಾರಸ್ವಾಮಿ ಅವರ ಪುತ್ರ ಹಾಗೂ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷದ ಚಟುವಟಿಕೆಗಳಲ್ಲಿ ಮುಂಚೂಣಿಗೆ ಬಂದಿದ್ದಾರೆ. ಎಚ್ ಡಿಕೆ ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಮೊದಲ ಬಾರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಲು ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕ್ರಮಗಳು ಮತ್ತು ಕುಮಾರಸ್ವಾಮಿ ಅವರ ಪ್ರವಾಸ ಕಾರ್ಯಕ್ರಮಗಳ ವಿವರ ನೀಡಲು ಬುಧವಾರ ನಿಖಿಲ್ ಅವರೇ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ್ದು, ಪಕ್ಷದ ಮುಂದಿನ ಸಂಘಟನೆ ಮತ್ತು ರಾಜಕೀಯ ಹೋರಾಟಗಳ ಕುರಿತೂ ಮಾತನಾಡಿದ್ದಾರೆ. ಮಹತ್ವದ ಈ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಜಿ ಟಿ ದೇವೇಗೌಡ ಮತ್ತಿತರರ ಗೈರು ಎದ್ದು ಕಾಣುತ್ತಿತ್ತು.
ಈ ಬೆಳವಣಿಗೆ ಕುರಿತು ʼದ ಫೆಡರಲ್ ಕರ್ನಾಟಕʼಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್ ಹಿರಿಯ ನಾಯಕರೊಬ್ಬರು, ಪಕ್ಷದ ನಾಯಕತ್ವ ದೇವೇಗೌಡರ ಕುಟುಂಬದ ಕುಡಿಗೆ ವಂಶಪಾರಂಪರ್ಯವಾಗಿ ಹಸ್ತಾಂತರವಾಗುವ ಸೂಚನೆ ಸಿಕ್ಕಿದೆ ಎಂದು ಹೇಳಿದ್ದಾರೆ. "ಪಕ್ಷದ ಹಿರಿಯ ನಾಯಕರನ್ನು ಬಿಟ್ಟು ನಿಖಿಲ್ ನೇತೃತ್ವದಲ್ಲಿ ಮಹತ್ವದ ಪತ್ರಿಕಾಗೋಷ್ಠಿ ನಡೆಸಿರುವುದರಲ್ಲೇ ಗೌಡರ ಕುಟುಂಬದ ಸ್ಪಷ್ಟ ಸಂದೇಶ ಇದ್ದಂತಿದೆ. ಪಕ್ಷದ ನಾಯಕತ್ವದ ಕುರಿತು ಪತ್ರಕರ್ತರ ಪ್ರಶ್ನೆಗೆ, ಆ ವಿಷಯವನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂದು ನಿಖಿಲ್ ಪ್ರತಿಕ್ರಿಯಿಸಿದ್ದರೂ, ಅವರ ಆ ಪತ್ರಿಕಾಗೋಷ್ಠಿ ಪರೋಕ್ಷವಾಗಿ ನಾಯಕತ್ವದ ಕುರಿತ ಪ್ರಶ್ನೆಗಳಿಗೆ ಉತ್ರರದಂತಿತ್ತು" ಎಂದೂ ಆ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, "ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸಿ, ಅದರ ನೆಲೆ ವಿಸ್ತರಿಸಲು ಪೂರಕವಾಗಿ ಪಕ್ಷದ ನಾಯಕತ್ವವನ್ನು ಗೌಡರ ಕುಟುಂಬ ಮತ್ತು ಒಕ್ಕಲಿಗ ಸಮುದಾಯವನ್ನು ಹೊರತುಪಡಿಸಿ ಉಳಿದ ಸಮುದಾಯದ ನಾಯಕರಿಗೆ ನೀಡುವುದು ಅಗತ್ಯವಿದೆ. ಅದರಲ್ಲೂ ಮುಖ್ಯವಾಗಿ ಶಾಸಕಾಂಗ ಪಕ್ಷದ ನಾಯಕತ್ವ ಮತ್ತು ಕೋರ್ ಕಮಿಟಿ ನಾಯಕತ್ವ ಒಕ್ಕಲಿಗ ಸಮುದಾಯದ ನಾಯಕರಿಗೆ ನೀಡಿದಲ್ಲಿ ಕುರುಬ ಅಥವಾ ಲಿಂಗಾಯತ ಮುಖಂಡರಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ನೀಡುವುದು ರಾಜಕೀಯವಾಗಿ ಜಾಣ ನಡೆಯಾಗಬಹುದು. ಆದರೆ, ಅಂತಹ ಬದಲಾವಣೆಯನ್ನು ನಿರೀಕ್ಷಿಸುವ ಸ್ಥಿತಿ ಸದ್ಯಕ್ಕೆ ಇದ್ದಂತಿಲ್ಲ" ಎಂಬ ಮಾತನ್ನೂ ಅವರು ಸೇರಿಸಿದರು.
ಲೋಕಸಭಾ ಜಯ ತಂದ ಹುರುಪು
ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಮೂರು ಕ್ಷೇತ್ರಗಳ ಪೈಕಿ ಎರಡು ಕಡೆ ಜಯ ಗಳಿಸುವ ಮೂಲಕ ಜಾತ್ಯತೀತ ಜನತಾ ದಳ(ಜೆಡಿಎಸ್) ರಾಜಕೀಯವಾಗಿ ಮತ್ತೆ ಪುಟಿದೆದ್ದಿದೆ. ಅದರಲ್ಲೂ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿ ಎಚ್ ಡಿ ಕುಮಾರಸ್ವಾಮಿ ಅಧಿಕಾರವಹಿಸಿಕೊಳ್ಳುವ ಮೂಲಕ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಹೊಸ ಹುರುಪಿಗೆ ಕಾರಣವಾಗಿದ್ದಾರೆ.
1990 ರ ದಶಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದಂದಿನಿಂದಲೂ ಪಕ್ಷದ ಅಧಿಕಾರ ಮತ್ತು ನೀತಿ ನಿರ್ಧಾರದ ಕೇಂದ್ರವಾಗಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬದ ಕುಡಿ ಹಾಗೂ ಮೂರನೇ ತಲೆಮಾರಿನ ಯುವ ನಾಯಕರಾದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಲೈಂಗಿಕ ಹಗರಣ ಪ್ರಕರಣ ಹೊರಬಿದ್ದ ಬಳಿಕ ಪಕ್ಷದ ಶಾಸಕರು ಮತ್ತು ಮುಖಂಡರ ಪಾಲಿಗೆ ರಾಜಕೀಯ ಅಸ್ತಿತ್ವದ ಆತಂಕ ಎದುರಾಗಿತ್ತು. ಅಷ್ಟೇ ಅಲ್ಲ; ಈ ಪ್ರಕರಣ ಪಕ್ಷದ ಅಸ್ತಿತ್ವವನ್ನೇ ಅಲುಗಾಡಿಸಬಹುದು ಎಂಬ ಮಾತುಗಳು ಕೇಳಿಬಂದಿದ್ದವು.
ಈ ನಡುವೆ, ಲೋಕಸಭಾ ಚುನಾವಣೆಗೆ ಮುನ್ನ ಪ್ರಭಾವಿ ಪಕ್ಷ ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡು ಎನ್‌ಡಿಎ ಭಾಗವಾಗಿ ಚುನಾವಣೆ ಎದುರಿಸಲು ನಿರ್ಧರಿಸಿದ ಪಕ್ಷದ ನಾಯಕರ ನಿರ್ಧಾರ ಕೂಡ ಪಕ್ಷದ ರಾಜಕೀಯ ಭವಿಷ್ಯಕ್ಕೆ ಮುಳುವಾಗಬಹುದು ಎಂಬ ಆತಂಕ ಸ್ವತಃ ಪಕ್ಷದ ವಲಯದಲ್ಲಿಯೇ ಕೇಳಿಬಂದಿತ್ತು.
ಆದರೆ, ಲೋಕಸಭಾ ಚುನಾವಣೆಯ ಪಕ್ಷದ ಯಶಸ್ಸು ಈ ಎಲ್ಲಾ ಆತಂಕಗಳನ್ನು ಬದಿಗೆ ಸರಿಸಿ, ಪಕ್ಷ ಮತ್ತೊಮ್ಮೆ ಪುಟಿದೇಳಲು ನೆರವಾಗಿದೆ. ಅದರಲ್ಲೂ ಪಕ್ಷದ ಭದ್ರ ನೆಲೆಯಾದ ಹಳೇ ಮೈಸೂರು ಭಾಗದ ಮಂಡ್ಯ ಮತ್ತು ಕೋಲಾರದಲ್ಲಿ ಪಕ್ಷದ ಅಭ್ಯರ್ಥಿಗಳು ಭಾರೀ ಅಂತರದ ಗೆಲುವು ದಾಖಲಿಸಿರುವುದು ಸಹಜವಾಗೇ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹೊಸ ಭರವಸೆ ಮೂಡಿಸಿದೆ.
ಈ ನಡುವೆ, ಪಕ್ಷದ ರಾಜ್ಯಾಧ್ಯಕ್ಷರೂ ಮತ್ತು ಚನ್ನಪಟ್ಟಣ ಶಾಸಕರಾಗಿ ಶಾಸಕಾಂಗ ಪಕ್ಷದ ನಾಯಕರೂ ಆಗಿದ್ದ ಎಚ್ ಡಿ ಕುಮಾರಸ್ವಾಮಿ ಅವರು ಲೋಕಸಭೆಗೆ ಆಯ್ಕೆಯಾಗಿ ಸಂಪುಟ ಸಚಿವರೂ ಆಗಿರುವುದರಿಂದ ಪಕ್ಷದ ಚುಕ್ಕಾಣಿ ಹಿಡಿಯುವವರು ಯಾರು? ಮತ್ತು ಶಾಸಕಾಂಗ ಪಕ್ಷದ ನಾಯಕತ್ವ ಯಾರ ಪಾಲಿಗೆ? ಎಂಬ ಚರ್ಚೆ ಆರಂಭವಾಗಿದೆ. ಸಹಜವಾಗಿಯೇ ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರಿಗೆ ಪಕ್ಷದ ಅಧ್ಯಕ್ಷರಾಗಿ ಪಕ್ಷ ಸಂಘಟನೆಯನ್ನು ನಿಭಾಯಿಸುವುದು ಸಾಧ್ಯವಿಲ್ಲ. ಹಾಗಾಗಿ ಪರ್ಯಾಯ ನಾಯಕರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತರುವ ಅನಿವಾರ್ಯತೆ ಇದೆ. ಆ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವದ ಪ್ರಶ್ನೆ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ.