Belagavi Border Dispute| ಕರ್ನಾಟಕ ಸೇರಲು ಮುಂದಾದ ಗಡಿನಾಡ ಕನ್ನಡಿಗರ ಮೇಲೆ ಮಹಾರಾಷ್ಟ್ರ ಪ್ರತೀಕಾರ
x

Belagavi Border Dispute| ಕರ್ನಾಟಕ ಸೇರಲು ಮುಂದಾದ ಗಡಿನಾಡ ಕನ್ನಡಿಗರ ಮೇಲೆ ಮಹಾರಾಷ್ಟ್ರ ಪ್ರತೀಕಾರ

ಹೌದು ಎನ್ನಲು ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ನಡೆದುಕೊಳ್ಳುತ್ತಿರುವ ವರ್ತನೆಯೇ ಕಾರಣವಾಗಿದೆ. ಜತ್‌ ತಾಲೂಕಿನ ಕನ್ನಡ ಶಾಲೆಗಳಿಗೆ ಮರಾಠಿ ಭಾಷಿಕ ಶಿಕ್ಷಕರನ್ನು ಮಹಾರಾಷ್ಟ್ರ ಸರ್ಕಾರ ಮಾಡಿದೆ. ಆ ಮೂಲಕ ಅಲ್ಲಿನ ಕನ್ನಡ ಶಾಲೆಗಳ ಮಕ್ಕಳನ್ನು ಮರಾಠೀಕರಣಗೊಳಿಸಲು ಗಂಭೀರ ಯತ್ನ ನಡೆಸಿದೆ.


ಕಳೆದ ಎರಡು ವರ್ಷಗಳ ಹಿಂದೆ ಸಾಂಗ್ಲಿ ಜಿಲ್ಲೆಯ ಜತ್‌ ತಾಲೂಕಿನ 42 ಗ್ರಾಮಗಳ ಕನ್ನಡಿಗರು ʻಕರ್ನಾಟಕಕ್ಕೆ ಸೇರಲು ಅನುಮತಿ ಕೊಡಿ’ ಎಂದು ಮಹಾರಾಷ್ಟ್ರ ಸರ್ಕಾರದ ಮುಂದಿಟ್ಟಿದ್ದರು. ಆದರೆ, ಇದೀಗ ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಗಡಿಯಾಚೆಗಿನ ತನ್ನ ನೆಲದ ಕನ್ನಡಿಗರ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿದೆಯೇ?

ಹೌದು ಎನ್ನಲು ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ನಡೆದುಕೊಳ್ಳುತ್ತಿರುವ ವರ್ತನೆಯೇ ಕಾರಣವಾಗಿದೆ. ಜತ್‌ ತಾಲೂಕಿನ ಕನ್ನಡ ಶಾಲೆಗಳಿಗೆ ಮರಾಠಿ ಭಾಷಿಕ ಶಿಕ್ಷಕರನ್ನು ಮಹಾರಾಷ್ಟ್ರ ಸರ್ಕಾರ ಮಾಡಿದೆ. ಆ ಮೂಲಕ ಅಲ್ಲಿನ ಕನ್ನಡ ಶಾಲೆಗಳ ಮಕ್ಕಳನ್ನು ಮರಾಠೀಕರಣಗೊಳಿಸಲು ಗಂಭೀರ ಯತ್ನ ನಡೆಸಿದೆ.

ಜತ್‌ ತಾಲೂಕಿನ 11 ಕನ್ನಡ ಶಾಲೆಗಳಿಗೆ 24 ಶಿಕ್ಷಕರನ್ನು ನೇಮಕ ಮಾಡಿದ್ದು, ಇವರಲ್ಲಿ 7 ಶಿಕ್ಷಕರಿಗೆ ಮಾತ್ರ ಕನ್ನಡ ಬರುತ್ತದೆ. ಉಳಿದವರು ಮರಾಠಿ ಶಿಕ್ಷಕರು! ಇದೀಗ ಮರಾಠಿ ಶಿಕ್ಷಕರನ್ನು ಕನ್ನಡ ಶಾಲೆಗಳಿಗೆ ನೇಮಕ ಮಾಡಿರುವುದು ಗಡಿನಾಡು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಜತ್ ತಾಲೂಕಿನಲ್ಲಿ 145 ಕನ್ನಡ ಮಾಧ್ಯಮ ಶಾಲೆಗಳಿದ್ದು, ಇದರಲ್ಲಿ 400 ಶಿಕ್ಷಕರ ಪೈಕಿ 280 ಶಿಕ್ಷಕರು ಕಾʻರ್ಯ ನಿರ್ವಹಣೆ ಮಾಡುತ್ತಿದ್ದಾರೆ. 120 ಶಿಕ್ಷಕರ ಕೊರತೆ ಇರುವುದರಿಂದ ಮಹಾರಾಷ್ಟ್ರ ಗಡಿನಾಡು, ಕನ್ನಡಿಗ ಶಿಕ್ಷಕರ ನೇಮಕಾತಿ ಮಾಡುವಂತೆ ಜತ್‌ʻ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಕಳೆದ ವರ್ಷ ಪ್ರತಿಭಟನೆ ನಡೆಸಲಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಲಾಗಿತ್ತು. ಈ ಶೈಕ್ಷಣಿಕ ವರ್ಷದಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ 11 ಮರಾಠಿ ಭಾಷೆ ಶಿಕ್ಷಕರನ್ನು ನೇಮಕ ಮಾಡಿ ಸಾಂಗ್ಲಿ ಜಿಲ್ಲಾಡಳಿತ ಆದೇಶ ಹೊರಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಜತ್‌ ತಾಲೂಕಿನ ಹಲವು ಹಳ್ಳಿಗಳಲ್ಲಿ ಕನ್ನಡ ಶಾಲೆಗಳಿವೆ. ಈ ಗ್ರಾಮಗಳಲ್ಲಿ ಮರಾಠಿ ಶಾಲೆಗಳನ್ನು ತೆರೆದು ಕನ್ನಡ ಶಾಲೆಗಳನ್ನು ಮುಚ್ಚುವ ವ್ಯವಸ್ಥಿತ ಸಂಚು ನಡೆದಿದೆ. ಅನೇಕ ಗ್ರಾಮಗಳಲ್ಲಿ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿವೆ. ಖಾಸಗಿ ಸಂಸ್ಥೆಗಳು ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜು ನಡೆಸುತ್ತಿವೆ. ಆದರೆ ಕನ್ನಡ ಮಾಧ್ಯಮದ ಒಂದೂ ಪದವಿ ಕಾಲೇಜಿಲ್ಲ. ಹೀಗಾಗಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಪಿಯುಸಿ ನಂತರ ಶಿಕ್ಷಣ ಮೊಟಕುಗೊಳಿಸಬೇಕು. ಇಲ್ಲವೇ ಅಥಣಿ, ವಿಜಯಪುರ ಮತ್ತಿತರ ಕಡೆ ಹೋಗಿ ವ್ಯಾಸಂಗ ಮುಂದುವರಿಸಬೇಕು. ಇದೀಗ ಕನ್ನಡ ಪ್ರಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಇಲ್ಲಿಯ ಮಕ್ಕಳು ಭಾಷಾಗೊಂದಲಕ್ಕೆ ಒಳಗಾಘಿ ಪ್ರೌಢ ಶಿಕ್ಷಣದ ವೇಳೆ ಇನ್ನಷ್ಟು ಸಮಸ್ಯೆಗೆ ಒಳಗಾಗುವ ಸಾಧ್ಯತೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ʻʻಕನ್ನಡ ಶಾಲೆಗಳಿಗೆ ಬೇರೆ ಭಾಷೆ ಶಿಕ್ಷಕರು ಬಂದು ಮಕ್ಕಳಿಗೆ ಏನು ಪಾಠ ಮಾಡ್ತಾರೆ? ಮಕ್ಕಳಿಗೆ ಏನು ಅರ್ಥ ಆಗುತ್ತದೆ? ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಾಚೆಗಿನ ತನ್ನ ಗಡಿಯಲ್ಲಿ ಕನ್ನಡವನ್ನು ಕ್ರಮೇಣವಾಗಿ ಅಳಿಸಲು ಈ ಕುತಂತ್ರ ಮಾಡುತ್ತಿದೆ. ಜತ್ ತಾಲೂಕಿನಲ್ಲಿರುವ ಕನ್ನಡ ಪ್ರಾಥಮಿಕ ಶಾಲೆಗಳಿಗೆ, ಪ್ರತಿಯೊಂದು ಶಾಲೆಗಳಲ್ಲಿ ಒಂದರಿಂದ ಎಂಟನೆಯ ತರಗತಿಯವರೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ, ಆ ಶಾಲೆಗಳಲ್ಲಿ 1 ರಿಂದ 8 ತರಗತಿ ವಿದ್ಯಾಭ್ಯಾಸಕ್ಕೆ ಇಬ್ಬರೇ ಶಿಕ್ಷಕರಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕನ್ನಡ ಕಲಿಯುತ್ತಿರುವ ಮಕ್ಕಳ ಜೀವನದಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆʼʼ ಎಂದು ಜತ್ ತಾಲೂಕಿನ ಕನ್ನಡಿಗರ ಆರೋಪವಾಗಿದೆ.

ಹೊರನಾಡಿನ ಕನ್ನಡಿಗರ ಬಗ್ಗೆ ʻದ ಫೆಡರಲ್‌ ಕರ್ನಾಟಕ'ದೊಂದಿಗೆ ಮಾತನಾಡಿದ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಅಶೋಕ್‌ ಚಂದರಗಿ, ʻʻಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಗೋವಾ ಹಾಗೂ ಕೇರಳ ರಾಜ್ಯದಲ್ಲೂ ಈ ರೀತಿಯ ಸಮಸ್ಯೆಗಳಿವೆ. ಹೊರನಾಡಿನಲ್ಲಿರುವ ಕನ್ನಡಿಗರು ಇದೇ ರೀತಿಯ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರದವರು ಅಲ್ಲಿಯ ಕನ್ನಡಿಗರಿಗೆ ತೊಂದರೆ ಕೊಡುತ್ತಿರಬಹುದು, ಆದರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರಗಳ ಬದ್ಧತೆ ಎನು?ʼʼ ಎಂದು ಪ್ರಶ್ನೆ ಮಾಡಿದರು.

ʻʻಹೊರನಾಡ ಕನ್ನಡಿಗರ ರಕ್ಷಣೆ ಬಗ್ಗೆ ರಾಜ್ಯ ಸರ್ಕಾರದ ಒಂದು ನೀತಿ ಇರಬೇಕು. ಕನ್ನಡಿಗರ ಶಿಕ್ಷಣ, ಉದ್ಯೋಗ ವಿಚಾರದಲ್ಲಿ ದೊಡ್ಡ ಸಮಸ್ಯೆಗಳಿವೆ. ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ ಮಾಡಿರುವುದು ಸಮಸ್ಯೆಗಳ ಒಂದು ಭಾಗವಷ್ಟೇ, ಇಂತಹ ಹತ್ತಾರು ಸಮಸ್ಯೆಗಳನ್ನು ಹೊರನಾಡು ಕನ್ನಡಿಗರು ಅನುಭವಿಸುತ್ತಿದ್ದಾರೆ. ಹಾಗಾಗಿ ಹೊರಾಜ್ಯ ಕನ್ನಡಿಗರಿಗಾಗಿ ನಿರ್ಧಿಷ್ಟವಾದ ನೀತಿಯನ್ನು ರಾಜ್ಯ ಸರ್ಕಾರ ರೂಪಿಸಬೇಕುʼʼ ಎಂದು ಅವರು ಆಗ್ರಹಿಸಿದರು.

ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್‌ ಜೋಶಿ ಅವರು ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ್ದು, ʻʻಸಂವಿಧಾನದ ಎಂಟನೇ ಶೆಡ್ಯೂಲ್‌ ಪ್ರಕಾರ, ಎಲ್ಲ ಸರ್ಕಾರಗಳ ಜವಾಬ್ದಾರಿ ಏನೆಂದರೆ ಆಯಾ ಪ್ರದೇಶಗಳಲ್ಲಿನ ಭಾಷೆಗಳನ್ನು ಬೆಳೆಸುವುದು ಮತ್ತು ಸಂರಕ್ಷಣೆ ಮಾಡುವುದಾಗಿದೆ. ಹಾಗಾಗಿ ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡುವ ಜನರಿಗೆ ಅವರ ಉಳಿಸಿಕೊಳ್ಳಲು ಬೇಕಾದ ಸಹಾಯ-ಸಹಕಾರ ನೀಡಬೇಕಾದದ್ದು ಮಹಾರಾಷ್ಟ್ರ ಸರ್ಕಾರದ ಕರ್ತವ್ಯವಾಗಿದೆ," ಎಂದರು.

ಭಾಷೆ ಇರುವುದು ಬಾಂಧವ್ಯ ಬೆಳಸುವ ವಸ್ತುವಾಗಬೇಕು, ದ್ವೇಷ ಹುಟ್ಟುಹಾಕುವಂತಾಗಬಾರದು. ಹಾಗಾಗಿ ಅಲ್ಲಿಯ ಸರ್ಕಾರ ಕನ್ನಡ ಮಾತನಾಡುವ ಜನರಿಗೆ ಕಷ್ಟಕರ ವಾತಾವರಣ ನಿರ್ಮಾಣ ಮಾಡುವುದನ್ನು ಕೈಬಿಡಬೇಕು. ಅನೇಕ ಕನ್ನಡಿಗರ ಮಾತೃಭಾಷೆ ಮರಾಠಿಯಾಗಿದೆ, ಹಾಗಯೇ ಅನೇಕ ಮರಾಠಿಗರ ಭಾಷೆ ಕನ್ನಡ ಆಗಿದೆ, ಉದಾಹರಣಗೆ ದ.ರಾ. ಬೇಂದ್ರೆ ಅವರ ಮಾತೃಭಾಷೆ ಮರಾಠಿ, ಆದರೆ ಅವರು ಕನ್ನಡ ಸಾಹಿತ್ಯಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಹಾಗಾಗಿ ಅಲ್ಲಿಯ ಕನ್ನಡ ಶಾಲೆಯ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರಿಗೆ ಕೇವಲ ಮರಾಠಿ ಮಾತನಾಡುವವರಾದರೆ, ಕನ್ನಡ ಏನು ಕಲಿಸಲು ಸಾಧ್ಯ? ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜೊತೆಗೂ ಮಾತನಾಡಿದ್ದೇನೆ. ಸಾಹಿತ್ಯ ಪರಿಷತ್‌ ಮತ್ತು ಪ್ರಾಧಿಕಾರ ಒಟ್ಟಿಗೆ ಸೇರಿ ಈ ವಿಚಾರದಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರದ ವೈರುಧ್ಯ ನಡೆಗಳು

ಮಹಾರಾಷ್ಟ್ರದ ಈ ರೀತಿಯ ನಡೆ ಇದು ಮೊದಲನೆಯದಲ್ಲ. ಇದೇ ವರ್ಷದ (2024) ಜನವರಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಸಿಂಧೆ ಅವರು ಬೆಳಗಾವಿ ನೆಲದಲ್ಲಿ ಬಂದು ಕರ್ನಾಟಕದ 865 ಊರುಗಳಲ್ಲಿನ ಮರಾಠಿ ಮಾತನಾಡುವ ಜನರಿಗಾಗಿ ಮಹಾತ್ಮ ಪುಲೆ ಆರೋಗ್ಯ ವಿಮೆ ಯೋಜನೆಗೆ ಚಾಲನೆ ಕೊಟ್ಟರೂ, ಕರ್ನಾಟಕ ಸರ್ಕಾರ ಮಾತ್ರ ಮೌನವಹಿಸಿದೆ. ಆರೋಗ್ಯ ವಿಮೆ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ. ಎರಡು ರಾಜ್ಯಗಳ ಗಡಿ ನಿಯಮವನ್ನು ಸೀಮೋಲ್ಲಂಘನೆ ಮಾಡಿ ಮಹಾರಾಷ್ಟ ಸರ್ಕಾರ ಉದ್ಧಟತನ ಪ್ರದರ್ಶಿಸಿದೆ. ಕರ್ನಾಟಕದಲ್ಲಿ ಇರುವ ಮರಾಠಿ ಭಾಷಿಕರಿಗೆ ಆರೋಗ್ಯ ವಿಮೆ ಜಾರಿ ಮಾಡುವ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿರುವ ಬೆಳಗಾವಿ ಗಡಿವಿವಾದದ ಪ್ರಕರಣದಲ್ಲಿ ತನಗೆ ಅನುಕೂಲಕರ ಪುರಾವೆ ಸೃಷ್ಟಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿತ್ತು ಎನ್ನಲಾಗಿದೆ.

ಈಗ ಜತ್‌ ತಾಲೂಕು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಲೂಕು ಕೇಂದ್ರವಾಗಿದ್ದು, ಈಲ್ಲಿ ಶೇ.90 ರಷ್ಟು ಜನ ಕನ್ನಡಿಗರೇ. ಅವರಿಗೆ ತಾವಿರುವ ರಾಜ್ಯದ ಸಂಸ್ಕೃತಿಯನ್ನು ಅಪ್ಪಿಕೊಳ್ಳಲೂ ಆಗದೆ, ಇತ್ತ ಕರ್ನಾಟಕವನ್ನು ಸೇರಲೂ ಆಗದಿರುವಂಥ ತ್ರಿಶಂಕು ಸ್ಥಿತಿ ಎದುರಾಗಿದೆ. ತಾಂತ್ರಿಕವಾಗಿ ಮಹಾರಾಷ್ಟ್ರದಲ್ಲಿರುವ ಇಲ್ಲಿಯ ಕನ್ನಡಿಗರಿಗೆ ಶಿಕ್ಷಣ, ಉದ್ಯೋಗ, ಸಂಸ್ಕೃತಿ, ಸಾಹಿತ್ಯ ಮತ್ತಿತರ ಸಂಗತಿಗಳಲ್ಲಿ ಅಲ್ಲಿನ ಸರಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಕರ್ನಾಟಕದ ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಹಾರಾಷ್ಟ್ರದ ಜತ್‌, ಅಕ್ಕಲಕೋಟ, ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಎಂದು ಅದೇ ಕಾರಣಕ್ಕೆ ಹೇಳಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕನ್ನಡಿಗರಾಗಿರುವ ಜತ್ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಕ್ಕಾಗಿ 1983ರಲ್ಲಿ ಕೃಷ್ಣಾ ನದಿಗೆ ಮಹಿಷಾಳ ಎನ್ನುವ ಪ್ರದೇಶದ ಬಳಿ ರೂಪಿಸಿದ ಏತ ನೀರಾವರಿ ಯೋಜನೆ ಈವರೆಗೂ ಅನುಷ್ಠಾನಗೊಂಡಿಲ್ಲ. ಈ ಹಳ್ಳಿಗಳಿಗೆ ನೀರಾವರಿಯಾಗದಂತೆ ವ್ಯವಸ್ಥಿತವಾಗಿ ವಂಚಿಸಲಾಗಿದೆ. ಮಹಾಜನ ವರದಿ ಜಾರಿಯಾದರೆ ಕನ್ನಡಿಗರಿರುವ ಗ್ರಾಮಗಳು ಕರ್ನಾಟಕಕ್ಕೆ ಸೇರುತ್ತವೆ ಎಂಬ ಕಾರಣಕ್ಕೆ ಇವುಗಳನ್ನು ನೀರಾವರಿಗೆ ಒಳಪಡಿಸುತ್ತಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ. ಈ ನಿರ್ಲಕ್ಷದಿಂದ ಬೇಸತ್ತ ಜತ್, ಉಮದಿ, ಸಂಖ ಮತ್ತಿತರ ಗ್ರಾಮಗಳ ಕನ್ನಡಿಗರು 2015ರಲ್ಲಿ ‘ನೀರು ಕೊಡಿ, ಇಲ್ಲವೆ ಕರ್ನಾಟಕಕ್ಕೆ ಸೇರಲು ಅನುಮತಿ ಕೊಡಿ’ ಎಂಬ ಬೇಡಿಕೆ ಮುಂದಿಟ್ಟಿದ್ದು, ಮಹಾರಾಷ್ಟ್ರ ಸರ್ಕಾರದ ಸಿಟ್ಟಿಗೆ ಕಾರಣವಾಗಿತ್ತು.

2012ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಗಡಿಕನ್ನಡಿಗರ ಸಮಸ್ಯೆ ಆಲಿಸಿ ಪರಿಹಾರ ಒದಗಿಸುವ ಬಗ್ಗೆ ಕರ್ನಾಟಕ ಸರಕಾರಕ್ಕೆ ಕೆಲವು ಶಿಫಾರಸು ಮಾಡಿದ್ದರು. ಕನ್ನಡ ಸಾಂಸ್ಕೃತಿಕ ಭವನಗಳ ನಿರ್ಮಾಣ, ಮಠ-ಗುಡಿಗಳಿಗೆ ಧನಸಹಾಯ, ಗ್ರಂಥಾಲಯ, ವಾಚನಾಲಯಗಳಿಗೆ ಉಚಿತ ಪುಸ್ತಕಗಳ ಪೂರೈಕೆ, ಸಾಹಿತಿಗಳು-ಕಲಾವಿದರಿಗೆ ಮಾಸಾಶನ, ರಾಜ್ಯೋತ್ಸವ ಪ್ರಶಸ್ತಿ, ಪ್ರಾಧಿಕಾರ-ಅಕಾಡೆಮಿಗಳ ಸದಸ್ಯತ್ವ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ, ರೈತರಿಗೆ ಕೃಷಿ ಸಾಲ, ರಿಯಾಯ್ತಿ ಸೌಲಭ್ಯ, ಬೆಳೆ ಪರಿಹಾರ, ಕನ್ನಡ ಅಂಗನವಾಡಿ ಕೇಂದ್ರಗಳ ಆರಂಭ, ಕನ್ನಡ ಶಿಕ್ಷಕರಿಗೆ ಕನ್ನಡ ಮಾಧ್ಯಮದಲ್ಲಿ ತರಬೇತಿ... ಮುಂತಾದ ಶಿಫಾರಸುಗಳು ಅದರಲ್ಲಿದ್ದವು. ಅವ್ಯಾವುವೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.

ಕನ್ನಡಿಗರೆಂಬ ಕಾರಣಕ್ಕೆ ಪಹಣಿ, ಸಣ್ಣ ಹಿಡುವಳಿ, ಶೈಕ್ಷ ಣಿಕ ಸೌಲಭ್ಯಕ್ಕಾಗಿ ಆದಾಯ, ಜಾತಿ ಪ್ರಮಾಣಪತ್ರ ನೀಡಲು ಸರಕಾರಿ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಕೃಷಿಗೆ ಬ್ಯಾಂಕ್‌ ಸಾಲ ಸಿಗುವುದಿಲ್ಲ. ಯಾವುದಾದರೂ ಕೆಲಸಕ್ಕೆ ಸರಕಾರಿ ಕಚೇರಿಗೆ ಹೋದರೆ ‘ಕಾನಡಿ’ ಎಂದು ಅವಮಾನಿಸುತ್ತಾರೆ ಎನ್ನುವುದು ಇಲ್ಲಿಯ ಜನರ ಅಳಲು..

Read More
Next Story