ರಾಜ್ಯದಲ್ಲಿದ್ದಾರೆ 5 ಲಕ್ಷ ಬಾಂಗ್ಲಾ ನುಸುಳುಕೋರರು;  ಕೇಂದ್ರಕ್ಕೆ ವರದಿ ಸಲ್ಲಿಕೆ
x

ಎಐ ಆಧಾರಿತ ಚಿತ್ರ

ರಾಜ್ಯದಲ್ಲಿದ್ದಾರೆ 5 ಲಕ್ಷ ಬಾಂಗ್ಲಾ ನುಸುಳುಕೋರರು; ಕೇಂದ್ರಕ್ಕೆ ವರದಿ ಸಲ್ಲಿಕೆ

ರಾಜ್ಯದಲ್ಲಿ ಕಳೆದ ಒಂದು ದಶಕದಿಂದ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ಬಾಂಗ್ಲಾ ನುಸುಳುಕೋರರ ಜಾಲವನ್ನು ಬಿಚ್ಚಿಡುವ ಸ್ಪೋಟಕ ಮಾಹಿತಿ ಇದ್ದು, ಶೇ. 75 ರಷ್ಟು ನಕಲಿ ದಾಖಲೆಗಳುಳ್ಳವರಾಗಿದ್ದಾರೆ ಎನ್ನಲಾಗಿದೆ.


Click the Play button to hear this message in audio format

ರಾಜ್ಯದಲ್ಲಿ ಕಳೆದ ಒಂದು ದಶಕದಿಂದ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ಬಾಂಗ್ಲಾ ನುಸುಳುಕೋರರ ಜಾಲವನ್ನು ಬಿಚ್ಚಿಡುವ ಸ್ಪೋಟಕ ಮಾಹಿತಿ ಇದ್ದು, ಶೇ. 75 ರಷ್ಟು ನಕಲಿ ದಾಖಲೆಗಳುಳ್ಳವರಾಗಿದ್ದಾರೆ. ಅಲ್ಲದೇ, ರಾಜ್ಯದ ಬೆಂಗಳೂರು ಮಹಾನಗರ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಸೇರಿದಂತೆ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಮಂಗಳೂರು, ಧಾರವಾಡ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಅಕ್ರಮವಾಗಿ ನುಸುಳಿ ಬಂದು ನೆಲೆಸಿರುವ ಬಾಂಗ್ಲಾ ನುಸುಳುಕೋರರ ಸಂಖ್ಯೆ ಕನಿಷ್ಠ 5 ಲಕ್ಷಕ್ಕಿಂತಲೂ ಹೆಚ್ಚು ಇದೆ ಎಂದು ಹೇಳಲಾಗಿದೆ.

ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್‌ ಮತ್ತು ಸುಧೀರ್‌ ಶೆಟ್ಟಿ ಜಂಟಿಯಾಗಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಹಲವು ಆಘಾತಕಾರಿ ವಿಷಯಗಳು ಬಹಿರಂಗಗೊಂಡಿವೆ. ಕೇಂದ್ರ ಗೃಹ ಇಲಾಖೆಗೆ ಈ ಬಗ್ಗೆ ಸಂಪೂರ್ಣ ವರದಿಯನ್ನು ನೀಡಲಾಗಿದೆ. ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಕಾರ್ಮಿಕರ ಸೋಗಿನಲ್ಲಿ ಕೆಲಸ ಕಾರ್ಯಗಳಿಗೆ ಪೂರೈಸುವ ನೂರಾರು ಏಜೆಂಟರು ಏಕಾಏಕಿ ಸೃಷ್ಟಿಯಾಗಿದ್ದಾರೆ. ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ಉಳಿದುಕೊಳ್ಳಲು ನೆಲೆಯನ್ನು ಕಲ್ಪಿಸಿಕೊಡುವುದರ ಜತೆಗೆ ಅವಶ್ಯಕತೆ ಇರುವ ಬಹುತೇಕ ಸಂಸ್ಥೆಗಳಿಗೆ ಕಡಿಮೆ ಸಂಬಳಕ್ಕೆ ಕಾರ್ಮಿಕರನ್ನು ಪೂರೈಸುವ ಮಾಫಿಯಾ ಬೃಹದಾಕಾರವಾಗಿ ಬೆಳೆದು ನಿಂತಿದೆ. ಬೆಂಗಳೂರಿನ ಮಾರತ್ತಹಳ್ಳಿ ರಿಂಗ್ ರಸ್ತೆ, ಬನ್ನೇರುಘಟ್ಟ ರಸ್ತೆ ಮತ್ತು ಆನೇಕಲ್ ಭಾಗಗಳಲ್ಲಿಯೇ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ನುಸುಳುಕೋರರು ವಾಸಿಸುತ್ತಿದ್ದಾರೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.

ಆಧಾರ್ ಕಾರ್ಡ್ ದಂಧೆ: ಶೇ.75ರಷ್ಟು ದಾಖಲೆಗಳು ನಕಲಿ..!

ಸುಮಾರು 2 ಸಾವಿರ ಕಿ.ಮೀ ಉದ್ದದ ಭಾರತ-ಬಾಂಗ್ಲಾ ಗಡಿಯ ಮೂಲಕ ನುಸುಳುಕೋರರು ದೇಶದೊಳಗೆ ಪ್ರವೇಶಿಸುತ್ತಿದ್ದಾರೆ. ಏಜೆಂಟ್‌ಗಳು ನುಸುಳುಕೋರರ ಫೋಟೋಗಳನ್ನು ವಾಟ್ಸಾಪ್ ಮೂಲಕ ಪಡೆದು, ಭಾರತೀಯ ನಾಗರಿಕರ ಅಸಲಿ ಆಧಾರ್ ಕಾರ್ಡ್‌ಗಳ ಮೇಲೆ ಇವರ ಫೋಟೋಗಳನ್ನು ಅಂಟಿಸಿ ಕಲರ್ ಪ್ರಿಂಟ್ ತೆಗೆಯುತ್ತಾರೆ. ಪ್ರತಿ ನುಸುಳುಕೋರನಿಂದ ಸುಮಾರು 20 ರಿಂದ 25 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ನೆಲೆಸಿರುವ ನುಸುಳುಕೋರರ ಬಳಿ ಇರುವ ಆಧಾರ್ ಕಾರ್ಡ್‌ಗಳಲ್ಲಿ ಶೇ. 75 ರಷ್ಟು ನಕಲಿ ದಾಖಲೆಗಳಾಗಿವೆ..! ದೇಶದ ಗಡಿಯೊಳಗೆ ನುಸುಳಿ ಬರುವ ಸಂದರ್ಭದಲ್ಲಿ, ಪಶ್ಚಿಮ ಬಂಗಾಳ ಅಥವಾ ಅಸ್ಸಾಂ ಪೊಲೀಸರು ಪರಿಶೀಲನೆ ಮಾಡಿದರೆ ತಮ್ಮ ಮೊಬೈಲ್‌ನಲ್ಲಿರುವ ತಮ್ಮದೇ ಭಾವಚಿತ್ರವಿರುವ ಆಧಾರ್ ಕಾರ್ಡ್ ಗಳನ್ನು ತೋರಿಸಲಾಗುತ್ತದೆ. ಪರಿಶೀಲನೆ ಮಾಡುವ ಪೊಲೀಸರು ಆಧಾರ್ ಕಾರ್ಡ್ ಅಸಲಿಯೋ? ನಕಲಿಯೋ? ಎಂದು ಪರಿಶೀಲನೆ ಮಾಡುವುದಾಗಲಿ ಮಾಡುವುದಿಲ್ಲ. ಆಧಾರ್ ಕಾರ್ಡ್‌ಗಳಲ್ಲಿರುವ ಹೆಸರುಗಳು ಆಧಾರ್ ಕಾರ್ಡ್ ಅನ್ನು ಮೊಬೈಲ್‌ನಲ್ಲಿ ತೋರಿಸಿದ ವ್ಯಕ್ತಿಗೆ ತಾಳೆಯಾಗುತ್ತದೆಯೇ? ಇಲ್ಲವೇ ? ಎಂಬುದನ್ನು ತಲೆಕೆಡಿಸಿಕೊಳ್ಳುವುದೇ ಇಲ್ಲ ಎಂದು ಹೇಳಲಾಗಿದೆ.

2010ರ ಆಸುಪಾಸಿನಲ್ಲಿ ಅಕ್ರಮ ವಲಸೆ ಪ್ರಾರಂಭ

ಅಕ್ರಮ ಬಾಂಗ್ಲಾ ವಲಸಿಗರು ಬೆಂಗಳೂರು ಮಹಾನಗರಕ್ಕೆ ಸರಿಸುಮಾರು 2010 ರ ಆಸುಪಾಸಿನಲ್ಲಿ ಅಕ್ರಮ ವಲಸೆಯನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರಿನ ಹೊರಭಾಗದ ಕೆರೆಗಳ ಬಫರ್‌ ಝೋನ್‌ ಪ್ರದೇಶಗಳಲ್ಲಿ ಅನಧಿಕೃತ ಗುಡಿಸಲುಗಳನ್ನು, ಶೆಡ್ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಾ, ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನೆಲೆಯೂರಿದ್ದಾರೆ. ಸರ್ಕಾರಿ ನೆಲಗಳ್ಳರು, ಗುಜರಿ ವ್ಯಾಪಾರಿಗಳು ಮತ್ತು ಕಳ್ಳತನದ ಮಾಲುಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಮಾಫಿಯಾಗಳು ಇಂತಹ ವಿವಾದಿತ ಸ್ಥಳಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಗುಡಿಸಲುಗಳನ್ನು ನಿರ್ಮಿಸಿ ಅವರಿಂದ ಬಾಡಿಗೆ ವಸೂಲಿ ಮಾಡುವ ಕೆಲಸ ಮಾಡುತ್ತಾರೆ.

ಮಾರತ್ತಹಳ್ಳಿ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ಜಕ್ಕಸಂದ್ರ ಜಂಕ್ಷನ್, ಕೆ. ಆರ್. ಪುರ ಕೆರೆ, ವರ್ತೂರು ಕೆರೆ, ಬೆಳ್ಳಂದೂರು ಕೆರೆ, ಕುಂದಲಹಳ್ಳಿ ಗೇಟ್, ಮೊನ್ನೆಕೊಳಲು, ಕಾಡು ಬೀಸನಹಳ್ಳಿ ಮತ್ತು ದೇವರ ಬೀಸನಹಳ್ಳಿ ಪ್ರದೇಶಗಳಲ್ಲಿ ಹಾಗೂ ಬನ್ನೇರುಘಟ್ಟ ರಸ್ತೆಯ ಚಿಕ್ಕ ಬೇಗೂರು ಮತ್ತು ನೈಸ್‌ ರಸ್ತೆ ಜಂಕ್ಷನ್ ಪ್ರದೇಶಗಳಲ್ಲಿ, ಆನೇಕಲ್ ತಾಲ್ಲೂಕಿನ ಗೌರೇನಹಳ್ಳಿ, ಇಂಡ್ಲುವಾಡಿ ಪ್ರದೇಶಗಳಲ್ಲಿ ಅಕ್ರಮ ಬಾಂಗ್ಲಾ ನುಸುಳುಕೋರರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಐಟಿ/ಬಿಟಿ ಕಂಪನಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರು ಮತ್ತು ಶ್ರಮಿಕ ವರ್ಗದ ಕೆಲಸ ಕಾರ್ಯಗಳಿಗೆ ಬೇಡಿಕೆ ಹೆಚ್ಚಾದ ಕಾರಣ ನಿಗದಿತ ಪ್ರಮಾಣಕ್ಕಿಂತಲೂ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಸಿದ್ಧರಿರುವ ಬಾಂಗ್ಲಾ ನುಸುಳುಕೋರರನ್ನು ಇಂತಹ ಕಾರ್ಯಗಳಿಗೆ ಬಳಸಿಕೊಳ್ಳುವ ಕಾನೂನು ಬಾಹಿರ ಕಾರ್ಯಗಳನ್ನು ಪ್ರಾರಂಭಿಸಲಾಗಿದೆ. ಬೆಂಗಳೂರು ಮಹಾನಗರದ ಬಹುತೇಕ ಐಟಿ/ಬಿಟಿ ಕಂಪನಿಗಳು, ಮಾಲ್ಸ್‌ಗಳು, ಅಪಾರ್ಟ್‌ಮೆಂಟ್‌ಗಳಲ್ಲಿ ಭದ್ರತಾ ಸಿಬ್ಬಂದಿಗಳಾಗಿ ಮತ್ತು ಹೌಸ್‌ಕೀಪಿಂಗ್‌ ಕಾರ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶೇ. 50 ರಷ್ಟು ಜನ ಅಕ್ರಮ ಬಾಂಗ್ಲಾ ನುಸುಳುಕೋರರೇ ಆಗಿದ್ದಾರೆ ಎಂಬುದನ್ನು ವರದಿಯು ಬೆಳಕು ಚೆಲ್ಲಿದೆ.

ಅರ್ಧ ವೇತನಕ್ಕೆ ಕೆಲಸ

ಕಾಫಿ, ಟೀ ಬೆಳೆಗಳನ್ನು ಬೆಳೆಯುವ ಸಕಲೇಶಪುರ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿರುವ ಕಾಫಿ ಮತ್ತು ಟೀ ತೋಟಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಥಳೀಯ ಕಾರ್ಮಿಕರಿಗೆ ನೀಡುತ್ತಿದ್ದ ಸಂಬಳದ ಅರ್ಧ ಭಾಗದಷ್ಟು ಹಣಕ್ಕೆ ಕೆಲಸ ಮಾಡಲು ಸಿದ್ಧರಿರುವ ಬಾಂಗ್ಲಾ ನುಸುಳುಕೋರರು ವ್ಯಾಪಕವಾಗಿ ನೆಲೆಸಿದ್ದಾರೆ. ಇದರಿಂದಾಗಿ ಸ್ಥಳೀಯ ಜನರು ಕೂಲಿ ಕೆಲಸ ಮಾಡುವ ದುಡಿಮೆಗಳಿಂದ ವಂಚಿತರಾಗಿದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರ ಪ್ರಾಬಲ್ಯ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಸಕಲೇಶಪುರ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆದು ನಿಂತಿದೆ. ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಕಾರ್ಮಿಕರ ಸೋಗಿನಲ್ಲಿ ಪೂರೈಸುವ ದೇಶ ವಿರೋಧಿ ಏಂಜೆಂಟರು ತಮಗೆ ಮತ್ತಷ್ಟು ಅವಶ್ಯಕತೆ ಇರುವ ಬಾಂಗ್ಲಾ ನುಸುಳುಕೋರರನ್ನು ಪೂರೈಸಲೆಂದು ಬಾಂಗ್ಲಾ ದೇಶದ ಢಾಕಾ ಮತ್ತು ಕುಲನ ಜಿಲ್ಲೆಗಳಲ್ಲಿ ತಮ್ಮ ಉಪ ಏಜೆಂಟರುಗಳನ್ನು ನೇಮಿಸಿಕೊಂಡಿರುತ್ತಾರೆ. ಬಹಳಷ್ಟು ಗಡಿ ಪ್ರದೇಶ ನದಿ ಭಾಗಕ್ಕೆ ಹೊಂದಿಕೊಂಡಿರುವುದರಿಂದ ಗಡಿಯಲ್ಲಿನ ತಂತಿ ಬೇಲಿಗಳನ್ನು ಸರಿಸಿ ಮತ್ತು ನದಿಯ ಮೂಲಕ ಪ್ರತೀ ನಿತ್ಯ ನೂರಾರು ಅಕ್ರಮ ಬಾಂಗ್ಲಾ ನುಸುಳುಕೋರರು ದೇಶದೊಳಗೆ ನುಸುಳಿ ಬರುತ್ತಿದ್ದಾರೆ ಎನ್ನಲಾಗಿದೆ.

ಅಪರಾಧ ಪ್ರಕರಣಗಳಲ್ಲಿ ಭಾಗಿ

ಬಾಂಗ್ಲಾ ನುಸುಳುಕೋರರು 19 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಜೆಎಂಬಿ ಉಗ್ರರ ನಂಟು ಹೊಂದಿರುವ ಬಗ್ಗೆ ಮಾಹಿತಿ ಇದ್ದು, 2015 ಮತ್ತು 2019ರಲ್ಲಿ ದಾವಣಗೆರೆ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಜೆಎಂಬಿ ಉಗ್ರ ಸಂಘಟನೆಯ ಸದಸ್ಯರ ಬಂಧನ ಮಾಡಲಾಗಿತ್ತು. 2017ರಲ್ಲಿ ಜೆ.ಪಿ. ನಗರದಲ್ಲಿ 300 ಮೀಟರ್ ಸುರಂಗ ಕೊರೆದು ಆಭರಣದ ಅಂಗಡಿ ಲೂಟಿ ಮಾಡಿದ ಪ್ರಕರಣದಲ್ಲಿ 6 ಜನ ಬಾಂಗ್ಲಾ ನುಸುಳುಕೋರರ ಬಂಧಿಸಲಾಯಿತು. ಹಿಂದೂ ಹೆಸರುಗಳನ್ನು ಇಟ್ಟುಕೊಂಡು ಪಾಕಿಸ್ತಾನಿ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಮೆಹ್ದಿ ಫೌಂಡೇಷನ್‌ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 2025ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ದೇವರಬಿಸನಹಳ್ಳಿಯಲ್ಲಿ ದೇವಸ್ಥಾನದ ಮೂರ್ತಿಗೆ ಚಪ್ಪಲಿಯಿಂದ ಹೊಡೆದ ಘಟನೆಯಲ್ಲಿ ಬಾಂಗ್ಲಾ ನುಸುಳುಕೋರರು ಭಾಗಿಯಾಗಿರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ.

ಈ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌, ರಾಜ್ಯಕ್ಕೆ ಬಾಂಗ್ಲಾ ನುಸುಳುಕೋರರು ನುಗ್ಗಿರುವ ಬಗ್ಗೆ ಚುಟುಕು ಕಾರ್ಯಾಚರಣೆ ಮೂಲಕ ಮಾಹಿತಿ ಪಡೆದು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಕೆ ಮಾಡಲಾಗಿದೆ. ಇದು ಸುಧೀರ್‌ ಶೆಟ್ಟಿ ಸಹಕಾರದೊಂದಿಗೆ ಮಾಡಲಾಗಿದೆ. ಅಕ್ರಮ ಬಾಂಗ್ಲಾ ಪ್ರಜೆಗಳನ್ನು ವಾಪಸ್‌ ಕಳುಹಿಸಬೇಕಾಗಿದೆ. ಇಲ್ಲದಿದ್ದರೆ ದೇಶಕ್ಕೆ ಕಂಟಕವಾಗಲಿದೆ. ಮೆಹ್ದಿ ಫೌಂಡೇಷನ್‌ ಸಂಸ್ಥೆಯನ್ನು ಭಾರತ ದೇಶದಾದ್ಯಂತ ಬೃಹತ್ ಮಟ್ಟದಲ್ಲಿ ಬೆಳೆಸಬೇಕೆಂಬ ಗುರಿ ಹೊಂದಿರುವುದು ಗೊತ್ತಾಗಿದೆ ಎಂದು ಹೇಳಿದರು.

Read More
Next Story