Light Rail Transit| ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಶೀಘ್ರದಲ್ಲೇ ಹಗುರ ರೈಲು?
ದಕ್ಷಿಣ ಭಾರತದಲ್ಲೇ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಬಿಆರ್ಟಿಎಸ್) ಹೊಂದಿರುವ ಪ್ರಥಮ ಹಾಗೂ ಏಕೈಕ ನಗರವಾಗಿರುವ ಹುಬ್ಬಳ್ಳಿ- ಧಾರವಾಡ. ಎಲ್ ಆರ್ ಟಿ ವ್ಯವಸ್ಥೆ ಇಲ್ಲಿ ಪ್ರಾರಂಭವಾದರೆ ಈ ವಿಶಿಷ್ಟ ನಗರ ಸಾರಿಗೆ ಹೊಂದಿರುವ ದೇಶದ ಪ್ರಥಮ ನಗರವಾಗಲಿದೆ.
ಎಲ್ಲವೂ ಅಂದುಕೊಂಡಂತೆ ಆದರೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರ, ದೇಶದಲ್ಲೇ ಹಗುರ ರೈಲು ( ಲೈಟ್ ರೈಲ್ ಟ್ರಾನ್ಸಿಟ್ -LRT) ವ್ಯವಸ್ಥೆ ಹೊಂದುವ ಮೊದಲ ನಗರವಾಗುವ ಸಾಧ್ಯತೆಗಳು ಅಧಿಕವಾಗಿವೆ.
ದಕ್ಷಿಣ ಭಾರತದಲ್ಲೇ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಬಿಆರ್ಟಿಎಸ್) ಹೊಂದಿರುವ ಪ್ರಥಮ ಹಾಗೂ ಏಕೈಕ ನಗರವಾಗಿರುವ ಹುಬ್ಬಳ್ಳಿ- ಧಾರವಾಡ. ಎಲ್ ಆರ್ ಟಿ ವ್ಯವಸ್ಥೆ ಇಲ್ಲಿ ಪ್ರಾರಂಭವಾದರೆ ಈ ವಿಶಿಷ್ಟ ನಗರ ಸಾರಿಗೆ ಹೊಂದಿರುವ ದೇಶದ ಪ್ರಥಮ ನಗರವಾಗಲಿದೆ.
ಲೈಟ್ ರೈಲ್ ಟ್ರಾನ್ಸಿಟ್ (LRT) ಎಂಬುದು ಹೊಸ ರೈಲು ವ್ಯವಸ್ಥೆಯಾಗಿದ್ದು, ಇದು ನಗರ ಪ್ರದೇಶಗಳಲ್ಲಿ ಮಧ್ಯಮ ಸಾಮರ್ಥ್ಯದ ಸ್ಥಳೀಯ ಸಾರಿಗೆಯನ್ನು ಪೂರೈಸುತ್ತದೆ.. ಎಲ್ಆರ್ಟಿ ರೈಲುಗಳು ಸಾಮಾನ್ಯವಾಗಿ ಓವರ್ಹೆಡ್ ವಿದ್ಯುತ್ ತಂತಿಗಳ ಸಂಪರ್ಕದಿಂದ ಚಲಿಸುತ್ತವೆ ಹಾಗೂ ʼಸ್ಟ್ರೀಟ್ ಕಾರ್ʼ (ಟ್ರಾಮ್) ತಂತ್ರಜ್ಞಾನವನ್ನು ಅವಲಂಬಿಸಿರುತ್ತದೆ. ನಿರ್ವಹಣಾ ವೆಚ್ಚದ ದೃಷ್ಟಿಯಿಂದ, ಬಸ್ಗಳಿಗಿಂತ ಹಗುರವಾದ ರೈಲು ಪ್ರಯಾಣ ಅಗ್ಗವಾಗಿರುತ್ತವೆ ಎಂದು ಹೇಳಲಾಗಿದೆ.
ಏಕೆಂದರೆ ಮೂರು ಬೋಗಿಗಳನ್ನು ಹೊಂದಿರುವ ಈ ರೈಲುಗಳ ಸಾಮರ್ಥ್ಯವು ಬಸ್ಗಳಿಗಿಂತ ಹೆಚ್ಚಿರುತ್ತದೆ. ಸಂಖ್ಯೆಯ ದೃಷ್ಟಿಯಲ್ಲಿ ಕಡಿಮೆ ಲಘು ರೈಲು ರೈಲುಗಳು ಕ ಚಲಿಸುವುದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಹಾಗೂ ಆರ್ಥಿಕವಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜತೆಗೆ ವೇಗವಾಗಿ ನಿರ್ದಿಷ್ಟ ಪ್ರದೇಶವನ್ನು ಬಸ್ ಪ್ರಯಾಣಿಕರ ಸಂಖ್ಯೆಗಿಂತ ಆರು ಪಟ್ಟು ಜನ ಮೂರು ಬೋಗಿಗಳಲ್ಲಿ ತಲುಪಲೂ ಬಹುದು.
ಈಗಾಗಲೇ ಹುಬ್ಬಳ್ಳಿ-ಧಾರವಾಡ ಮಧ್ಯದ ಸುಮಾರು 22.25 ಕಿ.ಮೀ. ಅಂತರವನ್ನು ಬಿಆರ್ ಟಿಎಸ್ ಬಸ್ಗಳು ತ್ವರಿತಗೊಳಿಸಿದೆ. ಮೆಟ್ರೋ ಆನ್ ರೋಡ್ ಎಂದು ಕರೆಯಲಾಗುವ ಈ ವ್ಯವಸ್ಥೆಯಲ್ಲಿ ಬಸ್ಗಳು ತಮಗಾಗಿ ಮೀಸಲಿಡಲಾದ ಪಥದಲ್ಲಿ ಸಂಚರಿಸುವುದರಿಂದ ಹಾಗೂ ಈ ಪಥದಲ್ಲಿ ಬೇರೆ ವಾಹನಗಳಿಗೆ ಅವಕಾಶ ಇಲ್ಲದಿರುವದರಿಂದ ಅವಳಿ ನಗರಗಳ ನಡುವೆ ತುರ್ತು ಸಂಚಾರ ಸಾಧ್ಯವಾಗಿದೆ.
2018 ರಲ್ಲಿ ಪ್ರಾಯೋಗಿಕ ಓಡಾಟ ಆರಂಭಿಸಿದ ಬಿಆರ್ಟಿಎಸ್ ಬಸ್ಗಳು ಜನ ಮನ್ನಣೆ ಗಳಿಸಿದೆ ಎನ್ನುವದೆನೋ ಸತ್ಯ ಆದರೆ ಈ ಸಂಚಾರ ವ್ಯವಸ್ಥೆ ಹಲವು ಟೀಕೆಗಳಿಗೆ ಗುರಿಯಾಗಿದೆ ಅನ್ನುವುದು ಸಹ ಅಷ್ಟೇ ಸತ್ಯ. ಯೋಜನೆಗೆ ಬೇಕಾದ ವ್ಯವಸ್ಥೆಯನ್ನು ಸರಿಯಾಗಿ ಅಳವಡಿಸದಿರುವುದರಿಂದ ಅವಳಿ ನಗರದ ಜನರು ಇದರ ಲಾಭಕ್ಕಿಂತ, ಕೆಟ್ಟದನ್ನೇ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ವಿಶ್ವಾಸ ಸಂಗಟಿ ಅಭಿಪ್ರಾಯಪಡುತ್ತಾರೆ.
ವಿಶಿಷ್ಟ
ಲೈಟ್ ರೈಲ್ ಟ್ರಾನ್ಸಿಟ್ (LRT) ವ್ಯವಸ್ಥೆಯು ಈಗಿರುವ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (BRTS) ಜೊತೆಗೆ ಕಾರ್ಯ ನಿರ್ವಹಿಸುವ ಸಾಧ್ಯತೆಗಳೇ ಅಧಿಕವಾಗಿರುವದರಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರವು ದೇಶದಲ್ಲಿಯೇ ಎರಡು ವಿಶಿಷ್ಟ ಸಾರಿಗೆ ಸೇವೆ ಹೊಂದಿರುವ ನಗರವಾಗಲಿದೆ.
ಅವಳಿನಗರದ ಜನಸಂಖ್ಯೆ ಇದೀಗ 16 ಲಕ್ಷದಷ್ಟಿದ್ದು ಪ್ರತಿನಿತ್ಯ ಸುಮಾರು 1 ಲಕ್ಷ ಜನ ಬಿಆರ್ಟಿಎಸ್ ಬಸ್ಗಳ ಮೂಲಕ ಅವಳಿ ನಗರಗಳ ಮಧ್ಯ ಸಂಚರಿಸುತ್ತಾರೆ. ಸುಮಾರು 50 ಸಾವಿರದಷ್ಟು ಜನ ಸಾಮಾನ್ಯ ನಗರ ಸಾರಿಗೆ ಮೂಲಕ ಅವಳಿ ನಗರಗಳ ಮಧ್ಯ ಸಂಚರಿಸುತ್ತಾರೆ. ಸರ್ಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಿಲು, ಖಾಸಗಿ ವಾಹನಗಳಿಂದ ರಸ್ತೆಗಳಲ್ಲಿ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಈ ಯೋಜನೆಯ ಕುರಿತು ಚಿಂತನ ಮಂಥನ ನಡೆಸಿದೆ
ಧಾರವಾಡ ಜಿಲ್ಲೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಈ ಕುರಿತು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ ಈಗಿರುವ ಬಿಆರ್ಟಿಎಸ್ ತೆಗೆದು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡುವುದೋ ಅಥವಾ ಈಗಿರುವ ವ್ಯವಸ್ಥೆಯಲ್ಲಿ ಎಲ್ಆರ್ಟಿ ವ್ಯವಸ್ಥೆಯನ್ನು ಜೋಡಿಸುವುದೋ ಈ ಬಗ್ಗೆ ಚಿಂತನೆ ನಡೆದಿದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನೂ ಮೂರ್ನಾಲ್ಕು ಸಭೆ ಆಯೋಜಿಸಿ ತೀರ್ಮಾನಿಸಲಾಗುವುದು. ಎಲ್ಆರ್ಟಿ ಯೋಜನೆ ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಚಿಂತಿಸಲಾಗಿದೆ. ಈ ಬಗ್ಗೆ ಸರಕಾರಕ್ಕೆ ವಿವರವಾದ ಪ್ರಸ್ತಾವನೆ ಸಲ್ಲಿಸಲಾಗುವುದು.
ಯೋಜನೆಯ ಪ್ರಸ್ತಾವನೆ ಇನ್ನೊಂದು ನಾಲ್ಕು ವಾರಗಳಲ್ಲಿ ಸಿದ್ಧವಾಗಲಿದೆ. ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಕೈಗೊಳ್ಳುವ ಯೋಜನೆಯಿದೆ. ಎಲ್ಲಾ ಯೋಜನೆಯಂತೆ ನಡೆದರೆ, ಈ ಯೋಜನೆ ಒಂದುವರೆ ವರ್ಷದಲ್ಲಿ ಜಾರಿಯಾಗಲಿದೆ. ಈ ಬಗ್ಗೆ ಈಗಾಗಲೇ ಒಂದು ಹಂತದ ಚರ್ಚೆಯಾಗಿದ್ದು, ಸ್ವಿಟಜರ್ಲ್ಯಾಂಡ್ ಮೂಲದ ಎಚ್ಎಸ್ಸೆಎಲ್ಐ (HSLI) ಟ್ರಾಮ್ ಸಂಸ್ಥೆ ಪ್ರಾತ್ಯಕ್ಷಿಕೆಯನ್ನು ನೀಡಿದೆ.
ವಿಧಾನಸಭೆ ವಿರೋಧ ಪಕ್ಷದ ಉಪನಾಯಕ, ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಶಾಸಕ ಅರವಿಂದ ಬೆಲ್ಲದ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ,. ಬಿಆರ್ಟಿಎಸ್ ಒಳ್ಳೆಯ ಯೋಜನೆ ಆದರೆ ಅದು ಸರಿಯಾಗಿ ಜಾರಿಯಾಗಿಲ್ಲ. ಹಲವು ಅವ್ಯವಸ್ಥೆಗಳು ಇದನ್ನು ಭಾದಿಸುತ್ತಿದ್ದು, ಇನ್ಪ್ರಾಸ್ಟಕ್ಚರ್ ಸಮಸ್ಯೆಗಳನ್ನು ಬಗೆಹರಿಸಿ ಇದನ್ನು ಇನ್ನೂ ವ್ಯವಸ್ಥಿತವಾಗಿಸಬೇಕಿದೆ.
ಸಚಿವ ಸಂತೋಷ ಲಾಡ್ ಹೇಳುವಂತೆ ಎಲ್ಆರ್ಟಿ ಏನೂ ಅತ್ಯಂತ ವಿಶೇಷ ಸಾರಿಗೆ ವ್ಯವಸ್ಥೆಯಲ್ಲ, ಎರಡು-ಮೂರು ಬಸ್ಗಳನ್ನು ಜಂಟಿಯಾಗಿ ಓಡಿಸುವುದು ಈ ಯೋಜನೆ, ನಮ್ಮಲ್ಲಿ ಈ ಹಿಂದೆ ಈ ತರಹದ ಬಸ್ಗಳು ಅವಳಿ ನಗರದ ರಸ್ತೆಗಳ ಮೇಲೆ ಓಡಾಡಿದೆ. ಈಗಿರುವ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಸಚಿವ ಲಾಡ್ ಅವರು ತುರ್ತಾಗಿ ಸಭೆ ಕರೆಯಬೇಕೆಂದು ಬೆಲ್ಲದ ಒತ್ತಾಯಿಸಿದರು.
"ಸ್ವಿಟಜರ್ಲ್ಯಾಂಡ್ ಮೂಲದ ಎಚ್ಎಸ್ಸೆಲೈ ಟ್ರಾಮ್ ಸಂಸ್ಥೆ ಪ್ರಾತ್ಯಕ್ಷಿಕೆಯನ್ನು ನೀಡಿದ್ದು ಎಲ್ಆರ್ಟಿ ೩ ಬೋಗಿ ಒಳಗೊಂಡಿದ್ದು ಸಂಪೂರ್ಣವಾಗಿ ಎಲೆಕ್ಟ್ರಿಕ್ ಸಾಧನ ಹೊಂದಿದೆ. ಇದು ಏಕಕಾಲಕ್ಕೆ ೨೫೦ ಜನರನ್ನು ಹೊತ್ತಯ್ಯಲಿದೆ. ಒಂದು ವೇಳೆ ಈ ವ್ಯವಸ್ಥೆ ಜಾರಿಯಾದರೆ ದೇಶದಲ್ಲಿಯೇ ಈ ವ್ಯವಸ್ಥೆ ಹೊಂದಿರುವ ಪ್ರಥಮ ನಗರ ಹುಬ್ಬಳ್ಳಿ-ಧಾರವಾಡವಾಗಲಿದೆ," ಎಂದು ಸಂಸ್ಥೆಯವರು ತಿಳಿಸಿದರು.
ಹುಬ್ಬಳ್ಳಿ- ಧಾರವಾಡ ಪಾಲಿಕೆ ಆದಿಕಾರಿಗಳ ಪ್ರಕಾರ ನಗರದ ಜನಸಂಖ್ಯೆ 15 ಲಕ್ಷ ದಾಟಿದ್ದು. ಪ್ರತಿದಿನ 2 ಲಕ್ಷ ಜನ ಈ ಅವಳಿ ನಗರಗಳಿಗೆ ವಿವಿಧ ಕಾರಣಗಳಿಗೆ ಭೇಟಿ ನೀಡುತ್ತಾರೆ. ಈಗ ಜಾರಿಯಲ್ಲಿರುವ ಬಿಆರ್ಟಿಎಸ್ ಬಸ್ಗಳ ಮೂಲಕ ಸುಮಾರು 1 ಲಕ್ಷ ಜನ ಪ್ರತಿದಿನ ಅವಳಿ ನಗರಗಳ ನಡುವೆ ಸಂಚರಿಸುತ್ತಾರೆ.