ಸಿದ್ದರಾಮಯ್ಯ ಗುತ್ತಿಗೆ ಅವಧಿ ಸಿಎಂ, ವಿಬಿ ಜಿ ರಾಮ್‌ ಜಿ ಯೋಜನೆ ಬಗ್ಗೆ ಚರ್ಚೆಗೆ ಸಿದ್ಧ: ಎಚ್‌ಡಿಕೆ
x

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು. 

ಸಿದ್ದರಾಮಯ್ಯ ಗುತ್ತಿಗೆ ಅವಧಿ ಸಿಎಂ, ವಿಬಿ ಜಿ ರಾಮ್‌ ಜಿ ಯೋಜನೆ ಬಗ್ಗೆ ಚರ್ಚೆಗೆ ಸಿದ್ಧ: ಎಚ್‌ಡಿಕೆ

ವಿಬಿ ಜಿ ರಾಮ್‌ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ದೊಡ್ಡ ಮಟ್ಟದ ಅಪಪ್ರಚಾರ ಮಾಡುತ್ತಿದೆ. ಈ ಯೋಜನೆ ಯಾವ ರೀತಿ ಜನರಿಗೆ ಅನಾನುಕೂಲವಾಗಿದೆ ಎಂದು ಹೇಳಲಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದರು.


Click the Play button to hear this message in audio format

ಯುಪಿಎ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ನೂರಾರು ಯೋಜನೆಗಳು ಬಂದಿವೆ. ಅವುಗಳಲ್ಲಿ ಎಷ್ಟು ಯೋಜನೆಗಳಿಗೆ ಕಾಂಗ್ರೆಸ್ ಮಹಾತ್ಮ ಗಾಂಧೀಜಿ ಹೆಸರು ಇಟ್ಟಿದ್ದಾರೆ ಎಂದು ಸ್ಪಷ್ಟಪಡಿಸಲಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಶನಿವಾರ(ಜ.10) ನಡೆದ ಎನ್‌ಡಿಎ ನಾಯಕರ ಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಬಿ ಜಿ ರಾಮ್‌ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ದೊಡ್ಡ ಮಟ್ಟದ ಅಪಪ್ರಚಾರ ಮಾಡುತ್ತಿದೆ. ಈ ಯೋಜನೆ ಯಾವ ರೀತಿ ಜನರಿಗೆ ಅನಾನುಕೂಲವಾಗಿದೆ ಎಂದು ಹೇಳಲಿ. ಮನರೇಗಾ ಯೋಜನೆಯನ್ನು ಕಾಂಗ್ರೆಸ್ ಈ ಹಿಂದೆ ಮಹಾತ್ಮಗಾಂಧಿ ಹೆಸರಿಗೆ ಗೌರವ ತರುವ ರೀತಿ ಹೇಗೆ ಜಾರಿಗೆ ತಂದಿದ್ದಾರೆ, ಈ ಯೋಜನೆಗಳ ಹೆಸರಲ್ಲಿ ಕಳ್ಳ ಬಿಲ್ ಮಾಡಿಕೊಂಡು ಉಳ್ಳವರು ನಿರುದ್ಯೋಗದ ಹೆಸರಲ್ಲಿ ದುರುಪಯೋಗ ಮಾಡಿಕೊಂಡ ಬಗ್ಗೆ ವರದಿ ಬಂದ ನಂತರ ಕೇಂದ್ರ ಸರ್ಕಾರ ಬದಲಾವಣೆ ಮಾಡಿ ಹೊಸ ನಿರ್ಧಾರವನ್ನು ಕೈಗೊಂಡಿದೆ ಎಂದರು.

ಲೆಕ್ಕಪರಿಶೋಧನೆಯಲ್ಲಿ ಕಾಮಗಾರಿಗಳ ಅವ್ಯವಹಾರದ ಬಗ್ಗೆ ಪತ್ತೆಯಾಗಿದೆ. ನರೇಗಾದಲ್ಲಿ ಕರ್ನಾಟಕದಲ್ಲಿ ಯಾವ ತಾಲ್ಲೂಕಿನಲ್ಲಿ ಏನೇನು ಸಮಸ್ಯೆಯಾಗಿದೆ ಎಂದು ಎಲ್ಲರಿಗೂ ಗೊತ್ತು. ರಾಜ್ಯದಲ್ಲಿ ನರೇಗಾ ಕೆಲಸಕ್ಕೆ ಟ್ರಾಕ್ಟರ್‌ನಲ್ಲಿ ಹೋಗುವಾಗ ಅಪಘಾತವಾಗಿ ಮೃತಪಟ್ಟವರಿಗೆ ಪರಿಹಾರಕೊಡಲು ಹೋದಾಗ ಅವರಿಗೆ ಜಾಬ್ ಕಾರ್ಡ್ ಇರಲಿಲ್ಲ, ಅದಕ್ಕೆ ಜಾಬ್ ಕಾರ್ಡ್‌ ನಲ್ಲೂ ಅವ್ಯವಹಾರವಾಗಿದೆ ಎಂದು ಬದಲಾವಣೆ ತರಲಾಗಿದೆ. ಮನರೇಗಾ ಯೋಜನೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಬಹಿರಂಗ ಚರ್ಚೆಯ ಸವಾಲು ಸ್ವೀಕರಿಸಿ, ನಾವಾರು ಕದ್ದು ಓಡಿ ಹೋಗಲ್ಲ. ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿ ಹಾಗೂ ಬಿಜೆಪಿ ನಾಯಕರಿಗೆ ಬಹಿರಂಗ ಚರ್ಚೆಗೆ ಡಿಸಿಎಂ ಆಹ್ವಾನ ಮಾಡಿದ್ದಾರೆ. ನಾವು ಚರ್ಚೆಗೆ ಸಿದ್ದವಿದ್ದು, ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡೇ ಮಾತನಾಡುತ್ತಿರುವುದು ಎಂದು ತಿಳಿಸಿದರು.

ಬಹಿರಂಗ ಚರ್ಚೆಗೆ ಕರೆ

ವಿಬಿ ಜಿ ರಾಮ್‌ ಜಿ ಯೋಜನೆಯಲ್ಲಿ ರಾಜ್ಯ ಸರ್ಕಾರವನ್ನು ಕಡೆಗಣಿಸಿಲ್ಲ. ಗ್ರಾಮ ಪಂಚಾಯತ್‌ಗಳಿಗೂ ಅಧಿಕಾರವಿದೆ. ಕಾಂಗ್ರೆಸ್‌ನವರು ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಆಗಿಲ್ಲ. 15ನೇ ಹಣಕಾಸು ಆಯೋಗದ ಹಣ ವಾಪಸ್‌ ಹೋಗುವ ರೀತಿ ಕಾಂಗ್ರೆಸ್ ಮಾಡಿದೆ. ಇವರು ಸದಸ್ಯರ ಅಧಿಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಪ್ರಚಾರಕ್ಕಾಗಿ ಈ ಯೋಜನೆ ಬಗ್ಗೆ ವಿಶೇಷ ಅಧಿವೇಶನ ಕರೆಯುತ್ತಿದ್ದಾರೆ. ಬಹಿರಂಗ ಚರ್ಚೆಗೆ ಸಿದ್ದರಿದ್ದೇವೆ. ಕರ್ನಾಟಕದಲ್ಲೂ ನರೇಗಾ ಯೋಜನೆಯಲ್ಲಿ ಹಲವು ಕಡೆ ಲೂಟಿಯಾಗಿರುವ ದಾಖಲೆಗಳಿವೆ. ವಿಕಸಿತ ಭಾರತ್ ಹೆಸರಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ, ಕೇಂದ್ರ ಸರ್ಕಾರದ ಜತೆ ಪ್ರತಿ ನಿತ್ಯ ಸಂಘರ್ಷಕ್ಕೆ ಹೋಗದೆ ಗೌರವದಿಂದ ನಡೆದುಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ಗುತ್ತಿಗೆ ಅವಧಿ ಸಿಎಂ

ಹೈಕಮಾಂಡ್ ಹೇಳುವವರೆಗೂ ಸಿಎಂ ಆಗಿರುತ್ತೇನೆ ಎಂದು ಪದೇ ಪದೇ ಸಿದ್ದರಾಮಯ್ಯ ಹೇಳುತ್ತಾರೆ, ಅವರೇನು ಗುತ್ತಿಗೆ ಅವಧಿಗೆ ಸಿಎಂ ಆಗಿದ್ದಾರಾ, ಎಷ್ಟು ಅವಧಿಗೆ ಗುತ್ತಿಗೆ ಎಂದು ನನಗೆ ಗೊತ್ತಿಲ್ಲ. ನನಗೂ ಅವರಿಗೂ ಸಂಪರ್ಕವಿಲ್ಲ. ಸಿದ್ದರಾಮಯ್ಯ ಭೋಗ್ಯದ ಸಿಎಂ ಆಗಿದ್ದಾರೆ ಎಂದರು.

ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟ

ವಿಬಿ ಜಿ ರಾಮ್‌ ಜಿ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಯೋಜನೆಯ ಬಗ್ಗೆ ಕಾಂಗ್ರೆಸ್‌ ಯೋಚನೆ ಮಾಡದೆ, ಕೇವಲ ಹಗರಣಗಳ ಬಗ್ಗೆ ಮಾತ್ರ ಯೋಚನೆ ಮಾಡುವುದು. ಈ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಅಧಿವೇಶನ ಕರೆಯಲು ಹೊರಟಿದ್ದಾರೆ. ಇದನ್ನು ಸ್ವಾಗತಿಸಿ, ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಕಾಂಗ್ರೆಸ್ ಸುಳ್ಳು ಪ್ರಚಾರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಗ್ರಾಮ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

Read More
Next Story