Cabinet approves setting up of AI Centre of Excellence in Bengaluru at a cost of Rs 20 crore
x
ಕೃತಕ ಬುದ್ಧಿಮತ್ತೆ(ಸಾಂದರ್ಭಿಕ ಚಿತ್ರ)

ಬೆಂಗಳೂರಿನಲ್ಲಿ 20 ಕೋಟಿ ರೂ. ವೆಚ್ಚದ ಎಐ ಶ್ರೇಷ್ಠತಾ ಕೇಂದ್ರ ಸ್ಥಾಪನೆಗೆ ಸಂಪುಟ ಅನುಮೋದನೆ

ಎಐ ಶ್ರೇಷ್ಠತಾ ಕೇಂದ್ರವು ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್, ಸ್ವಯಂಚಾಲನೆ, ಪೂರೈಕೆ ಸರಪಳಿ ಗರಿಷ್ಠ ಸದ್ಬಳಕೆ ಮತ್ತು ಡಿಜಿಟಲ್ ಪರಿವರ್ತನೆ ಸೇರಿದಂತೆ ಆದ್ಯತೆಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ.


Click the Play button to hear this message in audio format

ಕರ್ನಾಟಕವನ್ನು ಜಾಗತಿಕ ತಂತ್ರಜ್ಞಾನದ ಭೂಪಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಈಗ ಭರ್ಜರಿ ಹೆಜ್ಜೆ ಇಟ್ಟಿದೆ. ವಿವಿಧ ಕೈಗಾರಿಕೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ಕ್ರಾಂತಿ ಮೂಡಿಸಲು ಮತ್ತು ಡಿಜಿಟಲ್ ಪರಿವರ್ತನೆಗೆ ಹೊಸ ವೇಗ ನೀಡಲು 'ಸಿಎಟಿಎಸ್' (CATS - Centre for Applied AI Technology Solutions) ಹೆಸರಿನ ಹೈಟೆಕ್ 'ಶ್ರೇಷ್ಠತಾ ಕೇಂದ್ರ' ಸ್ಥಾಪನೆಗೆ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಈ ಮಹತ್ವಾಕಾಂಕ್ಷಿ ಯೋಜನೆಯು ಉದ್ಯಮ 4.0 ನಾವೀನ್ಯತೆಗೆ ದಾರಿದೀಪವಾಗಲಿದ್ದು, ರಾಜ್ಯದ ತಾಂತ್ರಿಕ ಭವಿಷ್ಯವನ್ನೇ ಬದಲಿಸುವ ಮುನ್ಸೂಚನೆ ನೀಡಿದೆ.ರಾಷ್ಟ್ರೀಯ ಸಾಫ್ಟ್‌ವೇರ್‌ ಹಾಗೂ ಸೇವಾ ಸಂಸ್ಥೆಯ ಒಕ್ಕೂಟದ (ನಾಸ್ಕಾಂ) ಸಹಭಾಗಿತ್ವದಲ್ಲಿ ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಕಿಯೊನಿಕ್ಸ್‌ ತಾಣದಲ್ಲಿ ನಾಲ್ಕು ವರ್ಷಗಳಲ್ಲಿ ಒಟ್ಟು 20 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರವು ಅಸ್ತಿತ್ವಕ್ಕೆ ಬರಲಿದೆ. ಕೇಂದ್ರ ಸ್ಥಾಪನೆಗೆ ಬಳಕೆಯಾಗಲಿರುವ ಹಣಕಾಸು ನೆರವು- ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ), ಕರ್ನಾಟಕ ಸರ್ಕಾರ ಮತ್ತು ಉದ್ಯಮ ಪಾಲುದಾರರ ಕೊಡುಗೆ ಇರಲಿದೆ.

ನಾವೀನ್ಯತೆ ಬಲಪಡಿಸುವ ಗುರಿ

ಎಐ ಶ್ರೇಷ್ಠತಾ ಕೇಂದ್ರವು ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್, ಸ್ವಯಂಚಾಲನೆ, ಪೂರೈಕೆ ಸರಪಳಿ ಗರಿಷ್ಠ ಸದ್ಬಳಕೆ ಮತ್ತು ಡಿಜಿಟಲ್ ಪರಿವರ್ತನೆ ಸೇರಿದಂತೆ ಆದ್ಯತೆಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ. ಈ ಉಪಕ್ರಮವು ನವೋದ್ಯಮಗಳು, ಎಂಎಸ್‌ಎಂಇಗಳು, ಉದ್ಯಮ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಅಗತ್ಯ ಬೆಂಬಲ ನೀಡುವ ಮೂಲಕ ರಾಜ್ಯದಲ್ಲಿನ ನಾವೀನ್ಯತೆ ವ್ಯವಸ್ಥೆಯನ್ನು ಬಲಪಡಿಸುವ ಗುರಿ ಹೊಂದಿದೆ.

ಮುಂದಿನ ನಾಲ್ಕು ವರ್ಷಗಳಲ್ಲಿ, ಈ ಕೇಂದ್ರವು ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸುವ, ಡೀಪ್ ಟೆಕ್ ಸ್ಟಾರ್ಟ್ ಅಪ್‌ಗಳನ್ನು ಬೆಂಬಲಿಸುವ ಮತ್ತು ಪರಿಕಲ್ಪನೆಗಳ ಪುರಾವೆ, ಉದ್ಯಮ ಸಹಯೋಗಗಳು ಮತ್ತು ತಂತ್ರಜ್ಞಾನ ಸದ್ಬಳಕೆ ಸುಗಮಗೊಳಿಸುವ ನಿರೀಕ್ಷೆಯಿದೆ.

ಸಂಶೋಧನೆಯಿಂದ ಹೊಸ ಪಥ ನಿರ್ಮಾಣ

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ "ಇದು ಕರ್ನಾಟಕದ ಡೀಪ್ ಟೆಕ್ ದಶಕವಾಗಿದ್ದು, ಈ ಶ್ರೇಷ್ಠತಾ ಕೇಂದ್ರವು ಡೀಪ್ ಟೆಕ್ ಸ್ಟಾರ್ಟ್ ಅಪ್‌ಗಳು ಮತ್ತು ಕೈಗಾರಿಕಾ ಸಹಯೋಗಗಳಿಗೆ ಒಂದು ಚಿಮ್ಮು ಹಲಗೆಯಾಗಿ ಕಾರ್ಯನಿರ್ವಹಿಸಲಿದೆ. ಸರ್ಕಾರ, ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮವನ್ನು ಒಟ್ಟಿಗೆ ತರುವ ಮೂಲಕ, ನಾವು ಸಂಶೋಧನೆಯಿಂದ ಮಾರುಕಟ್ಟೆ ಸಿದ್ಧ ನಾವೀನ್ಯತೆಗೆ ಹೊಸ ಪಥ ನಿರ್ಮಿಸುತ್ತಿದ್ದೇವೆ" ಎಂದು ತಿಳಿಸಿದರು.

ತಂತ್ರಜ್ಞಾನ, ಉದ್ಯಮಗಳಿಗೆ ಅವಕಾಶ

ಈ ಉಪಕ್ರಮವು ಸರ್ಕಾರಿ ಇಲಾಖೆಗಳು ಮತ್ತು ಸರ್ಕಾರಿ ಸ್ವಾಮ್ಯದ ಉದ್ಯಮಗಳ ಜೊತೆಗೆ ಜಾಗತಿಕ ತಂತ್ರಜ್ಞಾನ ಮತ್ತು ಪ್ರಮುಖ ಉದ್ಯಮಗಳ ಮಧ್ಯೆ ಸಹಯೋಗಕ್ಕೆ ಅವಕಾಶ ಕಲ್ಪಿಸಿಕೊಡಲಿದೆ. ಕೇಂದ್ರದ ಪ್ರಮುಖ ಕಾರ್ಯಕ್ಷಮತೆಯ ಮಾನದಂಡಗಳಲ್ಲಿ ನೆರವು ಕಲ್ಪಿಸಿ ಪೋಷಿಸಿದ ನವೋದ್ಯಮಗಳ ಸಂಖ್ಯೆ, ಅಭಿವೃದ್ಧಿಪಡಿಸಿದ ಮೂಲ ಮಾದರಿಗಳು, ಬೌದ್ಧಿಕ ಆಸ್ತಿಗೆ ಸಲ್ಲಿಸಿದ ಮನವಿಗಳು, ಉದ್ಯಮ ಸಹಯೋಗಗಳು ಮತ್ತು ತರಬೇತಿ ಪಡೆದ ಪರಿಣತ ವೃತ್ತಿಪರರು, ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕ ಬೆಳವಣಿಗೆಯ ಗುರಿಗಳನ್ನು ಒಳಗೊಂಡಿರಲಿದೆ.

ಕೇಂದ್ರ ಸ್ಥಾಪಿಸುವ ಪ್ರಸ್ತಾವನೆಗೆ ಹಣಕಾಸು ಇಲಾಖೆಯಿಂದ ಒಪ್ಪಿಗೆ ಮತ್ತು ಯೋಜನಾ ಇಲಾಖೆಯಿಂದ ತಾತ್ವಿಕ ಅನುಮೋದನೆ ದೊರೆತಿದೆ. ಉದ್ಯಮ 4.0 ತಂತ್ರಜ್ಞಾನಗಳು ಮತ್ತು ಡೀಪ್ ಟೆಕ್ ನಾವೀನ್ಯತೆಗಾಗಿ ದೇಶದ ಪ್ರಮುಖ ಕೇಂದ್ರವಾಗುವ ನಿಟ್ಟಿನಲ್ಲಿ ಸಾಗಿರುವ ಕರ್ನಾಟಕದ ಯಶಸ್ಸಿನ ಪ್ರಯಾಣದಲ್ಲಿ ಈ ನಿರ್ಧಾರವು ಮಹತ್ವದ ಮೈಲಿಗಲ್ಲಾಗಿದೆ.

Read More
Next Story