Waqf Asset Dispute| ಮಕ್ಕಳಿಗೆ ಪೆನ್ ಬದಲು ತಲ್ವಾರ್: ಮರುಳಾರಾಧ್ಯ ಸ್ವಾಮೀಜಿ ಹೇಳಿಕೆ ವಿರುದ್ಧ ಎಫ್‌ಐಆರ್‌
x

Waqf Asset Dispute| ಮಕ್ಕಳಿಗೆ ಪೆನ್ ಬದಲು ತಲ್ವಾರ್: ಮರುಳಾರಾಧ್ಯ ಸ್ವಾಮೀಜಿ ಹೇಳಿಕೆ ವಿರುದ್ಧ ಎಫ್‌ಐಆರ್‌

ಕಲಬುರಗಿಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಈ ಹೇಳಿಕೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಫಜಲಪುರ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 299, 353/2 ರಡಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ.


ಮಕ್ಕಳ ಕೈಗೆ ಪೆನ್ ಬದಲು ತಲ್ವಾರ್ ಕೊಡಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಲಬುರಗಿಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ಕುರಿತು ಕಲಬುರಗಿಯ ಅಫಜಲಪುರದಲ್ಲಿ ಇತ್ತೀಚೆಗೆ ನಡೆದ ʼವಕ್ಫ್ ಹಠಾವೋ ದೇಶ್ ಬಚಾವೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಪೊಲೀಸರ ಎದುರೇ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.

"ಆ ಸಮುದಾಯದ (ಮುಸ್ಲಿಂ) ಎಲ್ಲರ ಮನೆಗಳಲ್ಲಿ ತಲ್ವಾರ್‌ಗಳಿವೆ. ಎದುರು ಬರುವವರನ್ನು ಕಡಿಯುತ್ತೇವೆ, ಕೊಚ್ಚುತ್ತೇವೆ ಎನ್ನುತ್ತಾರೆ. ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ಹೀಗಿರುವಾಗ ನಾವು ಸುಮ್ಮನೆ ಕುಳಿತುಕೊಂಡರೆ ಏನೂ ಆಗದು. ಹಾಗಾಗಿ ಮಕ್ಕಳ ಕೈಗೆ ಪೆನ್‌ ಬದಲು ತಲ್ವಾರ್ ಕೊಡಬೇಕು. ವಕ್ಫ್‌ ಕಾಯ್ದೆ ರದ್ದಾಗದಿದ್ದರೆ ಜೀವ ತೆಗೆಯಲು ತಲ್ವಾರ್‌ ಬೇಕಾಗುತ್ತದೆ" ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸ್ವಾಮೀಜಿಯ ಈ ಹೇಳಿಕೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಫಜಲಪುರ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 299, 353/2 ರಡಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಇನ್ನು ವಿವಾದಾತ್ಮಕ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಧರ್ಮಗುರುಗಳು ಧರ್ಮದಿಂದ ನಡೆದುಕೊಳ್ಳಬೇಕು. ಧರ್ಮ ಪ್ರಚಾರಕರಾಗಿ ಪ್ರಚೋದನೆಯ ಹೇಳಿಕೆ ನೀಡಬಾರದು. ಸ್ವಾಮೀಜಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ನಾವು ಪೂಜನೀಯ ಭಾವದಿಂದ ಸ್ವಾಮೀಜಿ ಅವರ ಕಾಲಿಗೆ ಬೀಳುತ್ತೇವೆ. ಅಂಥವರೇ ಮಕ್ಕಳ ಕೈಯಲ್ಲಿ ತಲ್ವಾರ್ ಕೊಡಿ ಎಂದು ಪ್ರಚೋದಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

Read More
Next Story