
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ; ಬಂಧನ
ಕೊರಿಯಾಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯ ಮೇಲೆ ಈ ದೌರ್ಜನ್ಯ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಏರ್‌ಪೋರ್ಟ್ ಸಿಬ್ಬಂದಿ ಅಫಾನ್ ಅಹ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆಗೆ ಹೆಸರಾಗಿರುವ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಆಘಾತಕಾರಿ ಘಟನೆಯೊಂದು ನಡೆದಿದೆ. ಭದ್ರತೆ ಮತ್ತು ತಪಾಸಣೆ ನೆಪದಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬ ವಿದೇಶಿ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ಕೊರಿಯಾಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯ ಮೇಲೆ ಈ ದೌರ್ಜನ್ಯ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಏರ್‌ಪೋರ್ಟ್ ಸಿಬ್ಬಂದಿ ಅಫಾನ್ ಅಹ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿ ಅಫಾನ್ ಅಹ್ಮದ್, ಕೊರಿಯಾಗೆ ತೆರಳುತ್ತಿದ್ದ ವಿದೇಶಿ ಮಹಿಳೆಯ ಟಿಕೆಟ್ ಪರಿಶೀಲಿಸಿದ್ದಾನೆ. ಬಳಿಕ ಬ್ಯಾಗ್ ತಪಾಸಣೆ ನಡೆಸುವ ನಾಟಕವಾಡಿ, "ಬ್ಯಾಗ್‌ನಲ್ಲಿ 'ಬೀಪ್' ಶಬ್ದ ಬರುತ್ತಿದೆ, ಹೀಗಾಗಿ ಪ್ರತ್ಯೇಕವಾಗಿ ತಪಾಸಣೆ ನಡೆಸಬೇಕಿದೆ," ಎಂದು ಮಹಿಳೆಯನ್ನು ನಂಬಿಸಿದ್ದಾನೆ.
ಶೌಚಾಲಯದಲ್ಲಿ ವಿಕೃತ ವರ್ತನೆ:
ಬ್ಯಾಗ್ ತಪಾಸಣೆಗಾಗಿ ಅಧಿಕೃತ ಚೆಕ್ಕಿಂಗ್ ಕೌಂಟರ್‌ಗೆ ಹೋದರೆ ವಿಮಾನ ಏರಲು ತಡವಾಗುತ್ತದೆ (Late) ಎಂದು ಸುಳ್ಳು ಹೇಳಿದ ಆರೋಪಿ, ಮಹಿಳೆಯನ್ನು ಸಮೀಪದ ಪುರುಷರ ಶೌಚಾಲಯಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ತಪಾಸಣೆಯ ಸೋಗಿನಲ್ಲಿ ಮಹಿಳೆಯನ್ನು ಹಿಂದಿನಿಂದ ತಬ್ಬಿಕೊಂಡು, ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಸಿಬ್ಬಂದಿಯ ಈ ಅನಿರೀಕ್ಷಿತ ಮತ್ತು ವಿಕೃತ ವರ್ತನೆಯಿಂದ ಗಾಬರಿಗೊಂಡ ಮಹಿಳೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಳೆ ಪ್ರತಿರೋಧ ತೋರುತ್ತಿದ್ದಂತೆ ಎಚ್ಚೆತ್ತ ಆರೋಪಿ, ಏನೂ ಆಗಿಲ್ಲದಂತೆ "ಓಕೆ ಥ್ಯಾಂಕ್ ಯೂ" ಎಂದು ಹೇಳಿ ಶೌಚಾಲಯದಿಂದ ಹೊರಬಂದಿದ್ದಾನೆ.
ಘಟನೆಯಿಂದ ಆಘಾತಗೊಂಡರೂ ಧೈರ್ಯ ಕಳೆದುಕೊಳ್ಳದ ಸಂತ್ರಸ್ತೆ, ತಕ್ಷಣವೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯನ್ನು ಸಂಪರ್ಕಿಸಿ ತಮಗಾದ ಅನ್ಯಾಯ ಮತ್ತು ಆರೋಪಿಯ ಅವಾಚ್ಯ ವರ್ತನೆಯ ಬಗ್ಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಪಡೆಗಳು (CISF/Security Staff) ಆರೋಪಿ ಅಫಾನ್ ಅಹ್ಮದ್‌ನನ್ನು ವಶಕ್ಕೆ ಪಡೆದು, ಮುಂದಿನ ಕ್ರಮಕ್ಕಾಗಿ ಕೆಂಪೇಗೌಡ ಏರ್‌ಪೋರ್ಟ್ ಠಾಣಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣದಲ್ಲಿ ರಕ್ಷಣೆ ನೀಡಬೇಕಾದ ಸಿಬ್ಬಂದಿಯೇ ಇಂತಹ ಕೃತ್ಯ ಎಸಗಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

