
ಬೆಂಗಳೂರಿನಲ್ಲಿ ಹೋಟೆಲ್ ಗೋಡೆಗೆ ಡಿಕ್ಕಿ ಹೊಡೆಸಿದ ಕುಡುಕ ಕಾರು ಚಾಲಕ; ಕೂದಲೆಳೆ ಅಂತರದಲ್ಲಿ ಪಾರಾದ ಗ್ರಾಹಕರು!
ಅಪಘಾತದ ಭೀಕರ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಕಾರು ಡಿವೈಡರ್ ದಾಟಿ ಅತಿವೇಗವಾಗಿ ಹೋಟೆಲ್ ಗೋಡೆಗೆ ಗುದ್ದುವ ಮೊದಲು, ಹೋಟೆಲ್ ಮುಂಭಾಗದಲ್ಲಿ ರಾತ್ರಿ ಊಟ ಮುಗಿಸಿ ಹೊರಬಂದಿದ್ದ ಜನರ ಗುಂಪೊಂದು ನಿಂತಿತ್ತು.
ಸಿಲಿಕಾನ್ ಸಿಟಿಯ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಗುರುವಾರ ತಡರಾತ್ರಿ ಭೀಕರ ಕಾರು ಅಪಘಾತವೊಂದು ಸಂಭವಿಸಿದೆ. ಅತಿವೇಗವಾಗಿ ವೇಗವಾಗಿ ಬಂದ ಸ್ಕೋಡಾ ಕಾರೊಂದರ ಚಾಲಕ ಮದ್ಯದ ಅಮಲಿನಲ್ಲಿ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ಹೋಟೆಲ್ ಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ. ಅದೃಷ್ಟವಶಾತ್ ಹೋಟೆಲ್ ಮುಂಭಾಗ ನಿಂತಿದ್ದ ಗ್ರಾಹಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಸಂಭವಿಸಬೇಕಿದ್ದ ಭಾರಿ ದುರಂತವೊಂದು ದೈವಬಲದಿಂದ ತಪ್ಪಿದಂತಾಗಿದೆ.
ಮದ್ಯದ ಅಮಲಿನಲ್ಲಿ ಅತಿವೇಗವಾಗಿ ಬಂದ ಕಾರು
ಈ ಘಟನೆಯು ಗುರುವಾರ ರಾತ್ರಿ ಸುಮಾರು 11.35ರ ವೇಳೆಗೆ ಸಂಭವಿಸಿದೆ. 42 ವರ್ಷದ ಡೆರಿಕ್ ಟೋನಿ ಎಂಬ ವ್ಯಕ್ತಿ ತನ್ನ ಸ್ಕೋಡಾ ಕಾರಿನಲ್ಲಿ 18ನೇ ಮುಖ್ಯರಸ್ತೆಯಿಂದ 100 ಅಡಿ ರಸ್ತೆಯ ಕಡೆಗೆ ಅತಿವೇಗವಾಗಿ ಬರುತ್ತಿದ್ದನು. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಚಾಲಕ ಡೆರಿಕ್ ಟೋನಿ ಅಪಘಾತದ ಸಮಯದಲ್ಲಿ ವಿಪರೀತ ಮದ್ಯಪಾನ ಮಾಡಿದ್ದನು. ರಸ್ತೆಯ ಜಂಕ್ಷನ್ ಬಳಿ ಎಡ ತಿರುವು ಪಡೆಯುವ ಬದಲು, ಮದ್ಯದ ಅಮಲಿನಲ್ಲಿದ್ದ ಆತ ನೇರವಾಗಿ ಡಿವೈಡರ್ ಮೇಲೆ ಕಾರನ್ನು ಹರಿಸಿದ್ದಾನೆ. ಅತಿವೇಗದಲ್ಲಿದ್ದ ಕಾರು ಗಾಳಿಯಲ್ಲಿ ಚಿಮ್ಮಿ ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದು, ನಂತರ ಸಮೀಪದ 'ಬಾರ್ಬೆಕ್ಯೂ ನೇಷನ್' ಹೋಟೆಲ್‌ನ ಗೋಡೆಗೆ ಬಲವಾಗಿ ಅಪ್ಪಳಿಸಿದೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ
ಅಪಘಾತದ ಭೀಕರ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಕಾರು ಡಿವೈಡರ್ ದಾಟಿ ಅತಿವೇಗವಾಗಿ ಹೋಟೆಲ್ ಗೋಡೆಗೆ ಗುದ್ದುವ ಮೊದಲು, ಹೋಟೆಲ್ ಮುಂಭಾಗದಲ್ಲಿ ರಾತ್ರಿ ಊಟ ಮುಗಿಸಿ ಹೊರಬಂದಿದ್ದ ಜನರ ಗುಂಪೊಂದು ನಿಂತಿತ್ತು. ಕೇವಲ 5 ಸೆಕೆಂಡುಗಳ ಅಂತರದಲ್ಲಿ ಕಾರು ಈ ಜನರ ಪಕ್ಕದಲ್ಲೇ ಹಾದುಹೋಗಿ ಗೋಡೆಗೆ ಡಿಕ್ಕಿ ಹೊಡೆದಿದೆ. ಒಂದು ವೇಳೆ ಕಾರು ಆ ಗುಂಪಿನ ಮೇಲೆ ಹರಿದಿದ್ದರೆ ದೊಡ್ಡ ಪ್ರಮಾಣದ ಜೀವಹಾನಿ ಸಂಭವಿಸುವ ಸಾಧ್ಯತೆಯಿತ್ತು. ಕಾರು ಡಿಕ್ಕಿಯಾದ ರಭಸಕ್ಕೆ ಹೋಟೆಲ್‌ನ ಗೋಡೆಗೆ ಭಾರಿ ಹಾನಿಯಾಗಿದ್ದು, ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ದ್ವಿಚಕ್ರ ವಾಹನ ಸವಾರನಿಗೆ ಗಾಯ
ಈ ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ. ಹೋಟೆಲ್ ಮುಂಭಾಗದಲ್ಲಿದ್ದವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಆದರೆ, ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಜಾಬಿರ್ ಅಹ್ಮದ್ ಎಂಬುವವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಾಳುವನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯ ಕುರಿತು ದೂರು ದಾಖಲಿಸಿಕೊಂಡಿರುವ ಜೀವನ ಭೀಮಾ ನಗರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು, ಆರೋಪಿ ಚಾಲಕ ಡೆರಿಕ್ ಟೋನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದ್ಯದ ಅಮಲಿನಲ್ಲಿ ಅತಿವೇಗವಾಗಿ ವಾಹನ ಚಾಲನೆ ಮಾಡಿ ಸಾರ್ವಜನಿಕರ ಜೀವಕ್ಕೆ ಸಂಚಕಾರ ತಂದ ಹಿನ್ನೆಲೆಯಲ್ಲಿ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

