
ತಂದೆ, ತಾಯಿ ಹಾಗೂ ತಮ್ಮ ತಂಗಿಯೊಂದಿಗೆ ಡಾ.ಸ್ನೇಹ
ಶಿಕ್ಷಣವೇ ಶಕ್ತಿ! ಕೊರಗುತ್ತಿರುವ ಕೊರಗರ ಚಿಗುರಿದ ಕನಸು
ಕರ್ನಾಟಕ ಮತ್ತು ಕೇರಳದಲ್ಲಿ 'ಅತ್ಯಂತ ಹಿಂದುಳಿದ ಬುಡಕಟ್ಟು ಸಮೂಹ' ಎಂದು ಗುರುತಿಸಲ್ಪಟ್ಟಿರುವ ಕೊರಗ ಸಮುದಾಯವು ತಲೆಮಾರುಗಳಿಂದ ಸಾಮಾಜಿಕ ಬಹಿಷ್ಕಾರ ಮತ್ತು ತಾರತಮ್ಯವನ್ನು ಎದುರಿಸುತ್ತಿದೆ.
ವಿನಾಶದ ಅಂಚಿನಲ್ಲಿರುವ ಕರ್ನಾಟಕದ ಬುಡಕಟ್ಟು ಜನಾಂಗ ಎಲ್ಲ ನೋವು-ದುಮ್ಮಾನಗಳ ನಡುವೆಯೇ ಶೈಕ್ಷಣಿಕ ಕ್ರಾಂತಿಯತ್ತ ಮುಖಮಾಡುತ್ತಾ, ಮತ್ತೆ ಪುಟಿದೇಳುವ ಪ್ರಯತ್ನ ಮಾಡುತ್ತಿದೆ! ಕಮರುತ್ತಿದ್ದ ಕನಸುಗಳು ಮತ್ತೆ ಟಿಸಿಲೊಡೆದು ಹೊಸ ಕಲರವ ಸೃಷ್ಟಿಸಿದೆ!
ಹೌದು. ದಕ್ಷಿಣ ಕನ್ನಡ, ಉಡುಪಿ ಕರಾವಳಿ ಮತ್ತು ಪಶ್ಚಿಮಘಟ್ಟಗಳ ತಪ್ಪಲಿನ ನಡುವೆ ನೆಲೆಯೂರಿರುವ ಕೊರಗ ಬುಡಕಟ್ಟಿನ ಮಟ್ಟಿಗೆ ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಗಿದೆ! 29 ವರ್ಷದ ಯುವತಿ ಮೊದಲ ಬಾರಿಗೆ ಎಂಡಿ (ಡಾಕ್ಟರ್ ಆಫ್ ಮೆಡಿಸಿನ್) ಪದವಿ ಪಡೆದಿರುವುದು, ಅನೇಕರು ಪಿಎಚ್‌ಡಿ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಮೆರೆಯುತ್ತಿರುವುದು, ತಮ್ಮಸಮೂದಾಯದ ಕಷ್ಟಗಳ ನಿವಾರಣೆಗೆ ಪ್ರಯತ್ನಿಸುತ್ತಿರುವುದು ಚಿಗುರಿದ ಕನಸಂತಾಗಿದೆ!
ಶೈಕ್ಷಣಿಕ ಕ್ರಾಂತಿಯ ಹಾದಿಯಲ್ಲಿ ಕೊರಗ ಸಮುದಾಯ
ಕಳೆದ ಕೆಲವು ದಶಕಗಳಿಂದ ಕೊರಗ ಸಮುದಾಯದ ಮಕ್ಕಳು ತಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳುವ ಉದ್ದೇಶದಿಂದ ಅಜ್ಞಾನದ ನೆರಳಿನಿಂದ ಹೊರಬಂದು ಶಿಕ್ಷಣ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದಾರೆ. ಕರಾವಳಿ ಜಿಲ್ಲೆಗಳು ಮತ್ತು ಕಾಸರಗೋಡು ಸೇರಿದಂತೆ ಈ ಸಮುದಾಯದ ಒಟ್ಟು ಜನಸಂಖ್ಯೆ ಸುಮಾರು 15,000 ದಿಂದ 16,000 ರಷ್ಟಿದೆ. ಈ ಪೈಕಿ ಕೇವಲ 150 ಕ್ಕೂ ಕಡಿಮೆ ಜನರು ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ ಮತ್ತು ಕೇವಲ ಐವರು ಮಾತ್ರ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದವರ ಸಂಖ್ಯೆ ಸುಮಾರು 1,000 ದಷ್ಟಿದೆ ಎಂದು ಈ ಬದಲಾವಣೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಹಾಗೂ ಕೊರಗ ಸಮುದಾಯದ ಮೊದಲ ಮಹಿಳಾ ಪಿಎಚ್‌ಡಿ ಪದವೀಧರೆಯಾದ ಡಾ. ಸಬಿತಾ ಗುಡ್ಮಿ ಕೊರಗ ಅವರು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ಸನ್ನಿವೇಶದಲ್ಲೂ, ಕೊರಗ ಸಮುದಾಯದ 29 ವರ್ಷದ ಯುವತಿಯೊಬ್ಬರು ಎಂಡಿ (ಡಾಕ್ಟರ್ ಆಫ್ ಮೆಡಿಸಿನ್) ಪದವಿ ಪಡೆದಿರುವುದು ಕೇವಲ ಆ ಯುವ ವೈದ್ಯೆ ಮತ್ತು ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕೊರಗ ಸಮುದಾಯಕ್ಕೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದ್ದಾರೆ. ಕೊರಗ ಸಮುದಾಯದ ಮೊದಲ ವೈದ್ಯೆಯಾದ ಸ್ನೇಹಾ ಕೆ.ಎ. ಅವರು 2020 ರಲ್ಲಿ ಮಂಗಳೂರಿನ ಎಜೆ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪೂರ್ಣಗೊಳಿಸಿದ್ದರು. ನಂತರ ದೆಹಲಿಯ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಎಂಡಿ ವ್ಯಾಸಂಗ ಮುಂದುವರಿಸಿದ ಅವರು, ಡಿಸೆಂಬರ್ 2025 ರಲ್ಲಿ ತಮ್ಮ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಸ್ನೇಹಾ ಅವರ ಸಾಧನೆಗಳ ಬಗ್ಗೆ ಮಾತನಾಡಲು ಅವರೇ ಹಿಂಜರಿಯುತ್ತಾರೆ. “ನಿಮ್ಮ ಕುಟುಂಬದಲ್ಲಿ ಏನನ್ನಾದರೂ ಸಾಧಿಸಿದ ಮೊದಲ ವ್ಯಕ್ತಿ ನೀವಾಗಿದ್ದರೆ, ಪ್ರತಿಯೊಂದನ್ನೂ ನೀವೇ ಸ್ವತಃ ಕಂಡುಕೊಳ್ಳಬೇಕಾಗುತ್ತದೆ. ಅದನ್ನೇ ನಾನು ಈಗ ಮಾಡಲು ಪ್ರಯತ್ನಿಸುತ್ತಿದ್ದೇನೆ. ನಾನು ಸ್ವಲ್ಪಮಟ್ಟಿಗೆ ಸ್ಥಿರವಾಗಿದ್ದೇನೆ ಎಂದು ನನಗೆ ಅನಿಸುವವರೆಗೆ, ಇತರರಿಗೆ ನಾನು ಹೇಗೆ ಬೆಂಬಲ ನೀಡಬಲ್ಲೆ ಎಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಅದು ನನಗೇ ತಿಳಿದಿಲ್ಲ. ಪ್ರತಿಯೊಬ್ಬರಿಗೂ ಯಾವುದೋ ಒಂದು ಭವ್ಯವಾದ ಯೋಜನೆ ಇರುವುದಿಲ್ಲ ಮತ್ತು ಸದ್ಯಕ್ಕೆ ನಾನು ನನ್ನ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ,” ಎಂದು ಅವರು ‘ದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಡಾ.ಸ್ನೇಹಾ
"ಅವಳು ಮೊದಲಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿ. ಆದರೆ ನಾವು ಶ್ರೀಮಂತರಲ್ಲ. ವಿವಿಧ ಸಾಮಾಜಿಕ ಸಂಸ್ಥೆಗಳು, ಕುಟುಂಬ ಸದಸ್ಯರು ಮತ್ತು ಇತರ ದಾನಿಗಳ ಬೆಂಬಲದಿಂದ ಮಾತ್ರ ಸ್ನೇಹಾಳ ಶಿಕ್ಷಣ ಸಾಧ್ಯವಾಯಿತು. ಸ್ನೇಹಾ ತಮ್ಮ ಎಂಬಿಬಿಎಸ್ ಮುಗಿಸಿದ ನಂತರ, ಎಂಡಿ ಪದವಿಯನ್ನು ಪಡೆಯಲು ನಿರ್ಧರಿಸುವ ಮೊದಲು ಕೆಲವು ಕಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡಿದರು. ತನಗೆ ಸಿಗುತ್ತಿದ್ದ 45,000 ರೂಪಾಯಿ ಸಂಬಳದಲ್ಲಿ ಅವರು ನಮ್ಮ ಕುಟುಂಬವನ್ನು ಮತ್ತು ತಮ್ಮ ತಂಗಿಯ ಶಿಕ್ಷಣವನ್ನು ಪೋಷಿಸುತ್ತಿದ್ದರು" ಸ್ನೇಹಾ ಅವರ ತಾಯಿ, ವೃತ್ತಿಯಿಂದ ಶಿಕ್ಷಕಿಯಾಗಿರುವ ಜಯಶ್ರೀ ಶೆಡಗೇರಿ ತಮ್ಮ ಮಗಳ ಸಾಧನೆ ಬಗ್ಗೆ ಹೆಮ್ಮೆಯಿಂದ ʼ ದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಪ್ರಾಥಮಿಕ ಶಿಕ್ಷಣ ಮುಗಿದ ನಂತರ, ಆಕೆಗೆ ನವೋದಯ ವಿದ್ಯಾಲಯದಲ್ಲಿ ಪ್ರವೇಶ ದೊರೆಯಿತು. ಹೆಬ್ರಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಆಕೆ ತನ್ನ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿದಳು. ಆಕೆಯ ಪ್ರತಿಭೆಯನ್ನು ಗುರುತಿಸಿದ ಡಾ. ಎಂ. ಮೋಹನ್ ಆಳ್ವ ಅವರು, 1995ರಲ್ಲಿ ತಾವು ಸ್ಥಾಪಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ನಡೆಸಲ್ಪಡುವ ಕಾಲೇಜಿನಲ್ಲಿ ಆಕೆಗೆ ಉಚಿತ ಪಿಯುಸಿ ಶಿಕ್ಷಣವನ್ನು ನೀಡಿದರು. ಪಿಯುಸಿ ಪರೀಕ್ಷೆಯಲ್ಲಿ ಆಕೆ ಶೇಕಡಾ 96 ರಷ್ಟು ಅಂಕಗಳನ್ನು ಗಳಿಸಿದ್ದಾಳೆ ಎಂದು ಸ್ನೇಹಾಳ ತಂದೆ ಗಣೇಶ್ ವಿ. ಹೆಮ್ಮೆಯಿಂದ ಹೇಳುತ್ತಾರೆ.
ತಾಲೂಕು ಮಟ್ಟದ ಕೊರಗ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿರುವ ಗಣೇಶ್ ಅವರು, ಕೊರಗ ಸಮುದಾಯದ ಮಕ್ಕಳ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಸುಮಾರು ನಾಲ್ಕು ದಶಕಗಳಿಂದ ಶ್ರಮಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಕುಂಭಾಶಿ ಗ್ರಾಮದಲ್ಲಿ ಕೊರಗ ಮಕ್ಕಳಿಗಾಗಿ ವಸತಿ ನಿಲಯವನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಸಮುದಾಯದ ಜಾಗೃತಿ ಉಪಕ್ರಮಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಈ ಕುಟುಂಬವು ಉಡುಪಿಯ ಕುಂದಾಪುರದಲ್ಲಿ ವಾಸವಾಗಿದೆ.
ಶಿಕ್ಷಣ ಅಥವಾ ಉದ್ಯೋಗಗಳಲ್ಲಿ ಕೇವಲ ಮೀಸಲಾತಿ ನೀಡುವುದು ಒಂದು ಸಮುದಾಯದ ಏಳಿಗೆಗೆ ಸಾಕಾಗುವುದಿಲ್ಲ ಎಂಬ ಅವರ ನಂಬಿಕೆಯನ್ನು ಸ್ನೇಹಾ ಅವರ ಸಾಧನೆಗಳು ಸಾಬೀತುಪಡಿಸುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರಲ್ಲಿ ನಿಜವಾದ ಸವಾಲು ಅಡಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ. ನಿಜವಾದ ಶೈಕ್ಷಣಿಕ ಸುಧಾರಣೆಯು ಪ್ರಾಥಮಿಕ ಹಂತದಿಂದಲೇ ಆರಂಭವಾಗಬೇಕು ಮತ್ತು ಪ್ರತಿಯೊಬ್ಬ ಮಗುವಿಗೆ ಭದ್ರವಾದ ಬುನಾದಿಯನ್ನು ನಿರ್ಮಿಸಲು ಉನ್ನತ ಶಿಕ್ಷಣದವರೆಗೆ ಹಂತ ಹಂತವಾಗಿ ಬಲಗೊಳ್ಳಬೇಕು ಎಂದು ಅವರು ಹೇಳುತ್ತಾರೆ. ಇದೇ ಸಂದರ್ಭದಲ್ಲಿ, ನಾವು ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗದ ಕೊರಗ ಸಮುದಾಯದ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದೇವೆ ಎಂದು ಅವರು ತಿಳಿಸಿದರು.
ಡಾ. ಎಂ. ಮೋಹನ್ ಆಳ್ವ ಅವರು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರ ತಮ್ಮ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ಪಡೆದು ಇಂದು ವೈದ್ಯೆಯಾಗಿರುವ ಸ್ನೇಹ ಅವರ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಈ ಬಗ್ಗೆ ಫೆಡರಲ್‌ನೊಂದಿಗೆ ಮಾತನಾಡಿದ ಅವರು, ``ಸ್ನೇಹ ಅವರಲ್ಲಿ ಕಲಿಯುವ ಸಾಮರ್ಥ ಇತ್ತು ಅದಕ್ಕೆ ನಮ್ಮ ಸಂಸ್ಥೆ ಪ್ರೋತ್ಸಾಹ ನೀಡಿ ಹಾಗೂ ಸರಿಯಾದ ಮಾರ್ಗದರ್ಶನ ನೀಡುವ ಕೆಲಸ ನಮ್ಮ ಸಂಸ್ಥೆ ಮಾಡಿದೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ಎಂ. ಮೋಹನ್ ಆಳ್ವ ಅವರು ಸಮಾಜದಲ್ಲಿನ ಶೈಕ್ಷಣಿಕ ಅಸಮಾನತೆ ಮತ್ತು ಬುಡಕಟ್ಟು ಸಮೂಹಗಳ ಏಳಿಗೆಯ ಬಗ್ಗೆ ಮಹತ್ವದ ವಿಚಾರಗಳನ್ನು ದ ಫೆಡರಲ್‌ನೊಂದಿಗೆ ಹಂಚಿಕೊಂಡರು. ``ಸಮಾಜದ ವಿವಿಧ ವರ್ಗಗಳ ನಡುವೆ ಇಂದು ದೊಡ್ಡ ಮಟ್ಟದ ಅಂತರವಿದೆ. ಕೇವಲ ಮೀಸಲಾತಿ ನೀಡುವುದರಿಂದ ಈ ಅಂತರವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಶಿಕ್ಷಣದ ಸುಧಾರಣೆಯು ಪ್ರಾಥಮಿಕ ಹಂತದಿಂದಲೇ ಆರಂಭವಾಗಿ, ಉನ್ನತ ಶಿಕ್ಷಣದವರೆಗೆ ಹಂತ-ಹಂತವಾಗಿ ಗಟ್ಟಿಯಾಗಬೇಕು. ಆಗ ಮಾತ್ರ ಶೈಕ್ಷಣಿಕ ಅಡಿಪಾಯ ಸದೃಢಗೊಳ್ಳಲು ಸಾಧ್ಯ'' ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹರಡಿರುವ ಕೊರಗ ಜನಾಂಗ ಅತ್ಯಂತ ಸೌಮ್ಯ ಹಾಗೂ ನಾಚಿಕೆ ಸ್ವಭಾವದವರು. ಈ ಸಮುದಾಯದಲ್ಲಿ ಈ ಹಿಂದೆ ಒಬ್ಬರೇ ಒಬ್ಬರು ಎಂಬಿಬಿಎಸ್ ಪದವೀಧರರಿರಲಿಲ್ಲ. ಇಂತಹ ಸಂದರ್ಭದಲ್ಲಿ, ಗಣೇಶ್ ಎಂಬುವವರ ಪ್ರತಿಭಾವಂತ ಮಕ್ಕಳನ್ನು ಆಳ್ವಾಸ್ ಸಂಸ್ಥೆಯು ದತ್ತು ಪಡೆದು ಅವರಿಗೆ ಉನ್ನತ ಶಿಕ್ಷಣದ ಹಾದಿ ಸುಗಮಗೊಳಿಸಿತು. ಉಚಿತ ಸೀಟುಗಳನ್ನು ನೀಡುವುದು ದೊಡ್ಡ ವಿಷಯವಲ್ಲ, ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮಕ್ಕಳಿಗೆ ಸರಿಯಾದ ತರಬೇತಿ ನೀಡುವುದು ಮುಖ್ಯ. ಆಳ್ವಾಸ್ ಸಂಸ್ಥೆಯಲ್ಲಿ ದತ್ತು ಪಡೆದ ಹೆಣ್ಣುಮಗಳು CET ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ3000ನೇ ರ್ಯಾಂಕ್ ಪಡೆಯುವ ಮೂಲಕ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದಳು. ಇದು ಸರಿಯಾದ ಮಾರ್ಗದರ್ಶನ ಮತ್ತು ತರಬೇತಿಯಿಂದ ಮಾತ್ರ ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ಉಡುಪಿಯ ದೊಡ್ಡಣ್ಣಗುಡ್ಡೆಯ ಎ.ವಿ. ಬಾಳಿಗಾ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಮನೋವೈದ್ಯರಾದ ಡಾ. ಪಿ.ವಿ. ಭಂಡಾರಿ ಅವರು 'ದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡುತ್ತಾ, "ಕೊರಗ ಸಮುದಾಯದ ವಿರುದ್ಧ ಸಮಾಜದಲ್ಲಿ ಇಂದಿಗೂ ಇರುವ ಪೂರ್ವಾಗ್ರಹ ಪೀಡಿತ ಮನೋಭಾವವು ಆ ಸಮುದಾಯದ ಮಕ್ಕಳು ಶಾಲೆಯನ್ನು ಅರ್ಧಕ್ಕೆ ಬಿಡಲು ಮುಖ್ಯ ಕಾರಣವಾಗಿದೆ. ಅವರನ್ನು ಅನ್ಯಾಯವಾಗಿ 'ಕುಡುಕರು' ಎಂಬ ಹಣೆಪಟ್ಟಿ ನೀಡಲಾಗುತ್ತಿದೆ. ಆದರೆ ವಾಸ್ತವ ಬಡತನ, ಅಪೌಷ್ಟಿಕತೆ ಮತ್ತು ಸಾಮಾಜಿಕ ಅಸಮಾನತೆಯು ಅವರನ್ನು ಬೆಂಬಲ ವ್ಯವಸ್ಥೆಗಳಿಂದ ದೂರ ಇಟ್ಟಿದೆ. ಆದ್ದರಿಂದ ಅವರ ಶಿಕ್ಷಣ ಮತ್ತು ಒಳಿತಿಗಾಗಿ ಆರೋಗ್ಯ ಸಂಬಂಧಿತ ಹಸ್ತಕ್ಷೇಪಗಳು ಹಾಗೂ ಆರ್ಥಿಕ ವಿದ್ಯಾರ್ಥಿವೇತನಗಳನ್ನು ಒದಗಿಸುವುದು ಅತ್ಯಗತ್ಯʼʼ ಎಂದು ಅವರು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಮತ್ತು ಕೊರಗ ಸಮುದಾಯದಿಂದ ಡಾಕ್ಟರೇಟ್ ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಡಾ. ಸಬಿತಾ ಕೊರಗ ಅವರು, ಡಾ. ಸ್ನೇಹಾ ಅವರ ಇತ್ತೀಚಿನ ಶೈಕ್ಷಣಿಕ ಸಾಧನೆಯನ್ನು ತಮ್ಮ ಸಮುದಾಯದ ಪಾಲಿನ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಸತಸ ವ್ಯಕ್ತಪಡಿಸಿರುವ ಅವರು, "ನಮ್ಮ ಸಮುದಾಯವು ಕರಾವಳಿ ಜಿಲ್ಲೆಗಳು ಮತ್ತು ಕಾಸರಗೋಡು ಸೇರಿದಂತೆ ಒಟ್ಟು 15,000 ರಿಂದ 16,000 ಜನಸಂಖ್ಯೆಯನ್ನು ಹೊಂದಿದೆ. ಆದರೆ, ಇವರಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದವರು 150 ಕ್ಕಿಂತ ಕಡಿಮೆ ಇದ್ದಾರೆ ಮತ್ತು ಕೇವಲ ಐವರು ಮಾತ್ರ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಸುಮಾರು 1,000 ಜನರು ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಮುಖ ಮಾಡಿ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಯುತ್ತಿದೆʼʼ ಎಂದು ಅವರು ತಿಳಿಸಿದರು.
ಕೊರಗ ಸಮುದಾಯದ ಮೊದಲ ಮಹಿಳಾ ಪಿಹೆಚ್‌ಡಿ ಪದವೀಧರೆ ಡಾ. ಸಬಿತಾ ಕೊರಗ
ಕೊರಗ ಸಮುದಾಯದ ಜನಾಂಗದ ವಿರುದ್ಧದ ತೀವ್ರ ತಾರತಮ್ಯದಲ್ಲಿ ಅಜಲು ಪದ್ಧತಿಯೂ ಸೇರಿತ್ತು. ಈ ಪದ್ಧತಿಯಲ್ಲಿ ಕೊರಗ ಸಮುದಾಯದವರಿಗೆ ಕೂದಲು, ಉಗುರು ಮತ್ತು ಇತರ ತಿನ್ನಲಾಗದ ವಸ್ತುಗಳನ್ನು ಬೆರೆಸಿದ ಆಹಾರವನ್ನು ನೀಡಲಾಗುತ್ತಿತ್ತು. ಕರ್ನಾಟಕ ಕೊರಗ (ಅಜಲು ಪದ್ಧತಿ ನಿಷೇಧ) ಕಾಯ್ದೆಯಡಿ ಈ ಪದ್ಧತಿಯನ್ನು ನಿಷೇಧಿಸಲಾಗಿದ್ದರೂ, ಬುಡಕಟ್ಟು ಸದಸ್ಯರನ್ನು ಅವಮಾನಿಸುವ ರೂಪದಲ್ಲಿ ಇದು ಇನ್ನೂ ಬಳಕೆಯಲ್ಲಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಅಲ್ಲದೆ, ಕಂಬಳದ ಓಟದ ಸಮಯದಲ್ಲಿ ಪ್ರಾಣಿಗಳ ಮುಂದೆ ಓಡುವಂತೆ ಕೊರಗ ಸಮುದಾಯದವರನ್ನು ಒತ್ತಾಯಿಸಲಾಗುತ್ತಿತ್ತು.
ಬೆಳ್ತಂಗಡಿಯಲ್ಲಿ ನಿವಾಸಿ ಅನಿತಾ ಕೊರಗ ಅವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾ, "ದಶಕಗಳಿಂದ ನಮ್ಮ ಕುಟುಂಬಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ನಾವು ನಿಂದನೆ ಮತ್ತು ಶೋಷಣೆಗೆ ಒಳಗಾಗಿದ್ದೇವೆ, ನಮಗೆ ಉಗುರು ಮತ್ತು ಕೂದಲು ಬೆರೆಸಿದ ಆಹಾರವನ್ನು ತಿನ್ನಲು ನೀಡಲಾಗುತ್ತಿತ್ತು. ನಮ್ಮ ನೋವುಗಳು ತುಂಬಾ ಆಳವಾಗಿವೆ. ಶಿಕ್ಷಣದ ಕೊರತೆಯಿಂದಾಗಿ ನಮಗೆ ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಎನ್‌ಜಿಒಗಳು ನಮಗೆ ಅಲ್ಲಲ್ಲಿ ಸ್ವಲ್ಪ ಸಹಾಯ ಮಾಡುತ್ತಿವೆಯಾದರೂ, ಅದು ಸಾಲದಾಗಿದೆ" ಎಂದು ಅವರು ಅಭಿಪ್ರಾಯಪಟ್ಟರು.
ಕೆಲಸದಿಂದ ವಂಚಿತರಾಗುತ್ತಿದ್ದಾರೆ ಕೊರಗ ವಿದ್ಯಾರ್ಥಿಗಳು
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುಶೀಲಾ ನಾಡಾ ಅವರು ʼ ದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡುತ್ತಾ, "1990ರ ದಶಕದಲ್ಲಿ, ಕೊರಗ ಸಮುದಾಯದ ಮಕ್ಕಳು 4ನೇ, 5ನೇ ಅಥವಾ 6ನೇ ತರಗತಿಯಲ್ಲೇ ಶಾಲೆಯನ್ನು ಬಿಡುತ್ತಿದ್ದರು. ಅದಕ್ಕಿಂತ ಹಿಂದಿನ ತಲೆಮಾರುಗಳಲ್ಲಿ ಔಪಚಾರಿಕ ಶಿಕ್ಷಣ ಎಂಬುದು ಅಸ್ತಿತ್ವದಲ್ಲೇ ಇರಲಿಲ್ಲ. ಆದರೆ ಇತ್ತೀಚೆಗೆ ಸಮುದಾಯದ ಮಕ್ಕಳು ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಆದರೆ ಸರಿಯಾದ ಕೆಲಸ ದೊರಕದೆ ವಂಚಿತರಾಗುತ್ತಿದ್ದಾರೆʼʼ ಎಂದು ಅಭಿಪ್ರಾಯಪಟ್ಟರು.
ಈಗಲೂ ಉದ್ಯೋಗ ಎಂಬುದು ಸಮುದಾಯಕ್ಕೆ ಒಂದು ದೊಡ್ಡ ಸವಾಲಾಗಿ ಉಳಿದಿದೆ. ಕರ್ನಾಟಕ ಸರ್ಕಾರವು ಪರಿಶಿಷ್ಟ ಪಂಗಡದ (ST) ಸಮುದಾಯಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ. 7 ರಷ್ಟು ಮೀಸಲಾತಿಯನ್ನು ನೀಡುತ್ತದೆ. "ಆದರೆ, ಎಸ್‌ಟಿ ಪಟ್ಟಿಯಲ್ಲಿ ಒಟ್ಟು 52 ಪಂಗಡಗಳಿರುವುದರಿಂದ, ಕೊರಗ ಮತ್ತು ಜೇನು ಕುರುಬರಂತಹ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಅದೇ ವರ್ಗದಲ್ಲಿರುವ ಪ್ರಬಲ ಗುಂಪುಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ, ಅವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆʼʼ ಎಂದು ಸುಶೀಲಾ ನಾಡಾ ಅವರು ವಿವರಿಸಿದರು.
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಶೀಲ ನಾಡಾ
ಯಾರೀ ಕೊರಗರು?
ಕರ್ನಾಟಕದ ಕರಾವಳಿ ಅರಣ್ಯಗಳ ನಡುವೆ, ಕಾಡಿನ ಮೌನ ಮತ್ತು ಸಮುದ್ರದ ಅಬ್ಬರವು ಒಂದಾಗುವ ಸ್ಥಳಗಳಲ್ಲಿ ಕೊರಗ ಸಮುದಾಯದ ಗ್ರಾಮಗಳಿವೆ. ಕರ್ನಾಟಕ ಮತ್ತು ಕೇರಳದಲ್ಲಿ ಇರುವ ಅತೀ ಕಡಿಮೆ ಜನಸಂಖ್ಯೆಯಲ್ಲಿರುವ ಇವರನ್ನು 'ಅತ್ಯಂತ ಹಿಂದುಳಿದ ಬುಡಕಟ್ಟು ಗುಂಪು' (PVTG) ಎಂದು ವರ್ಗೀಕರಿಸಲಾಗಿದೆ.
ಹದಿನೈದನೇ ಶತಮಾನದ ಸುಮಾರಿಗೆ ಹುಬಾಶಿಕ ಎಂಬ ರಾಜನು ತುಳುನಾಡಿನಲ್ಲಿ ಅಂದರೆ ಇಂದಿನ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಪಯಸ್ವಿನಿ ನದಿಯವರೆಗಿನ ಪ್ರದೇಶದಲ್ಲಿ ಕೊರಗ ಸಾಮ್ರಾಜ್ಯವನ್ನು ಸ್ಥಾಪಿಸಿದನೆಂಬ ಇತಿಹಾಸವಿದೆ. ಆದರೆ ಅವರ ಈ ನೆಮ್ಮದಿಯು ಅಲ್ಪಕಾಲ ಮಾತ್ರ ಇತ್ತು. ಎದುರಾಳಿ ಗುಂಪಿನವರಿಂದ ಹುಬಾಶಿಕನು ಮೋಸಕ್ಕೊಳಗಾಗಿ ಹತ್ಯೆಗೀಡಾದನು.
ಹುಬಾಶಿಕನು ಕೊರಗ ಸಾಮ್ರಾಜ್ಯವನ್ನು ಹೇಗೆ ಸ್ಥಾಪಿಸಿದನು ಮತ್ತು ಅವನ ಸಾವು ಹೇಗೆ ಸಂಭವಿಸಿತು ಎಂಬುದರ ಕುರಿತು ಬೇರೆ ಬೇರೆ ಕಥೆಗಳಿವೆ. ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ತಮ್ಮ 'ಕೊಟ್ಟ' ಕಾದಂಬರಿಯಲ್ಲಿ, ಮಂಜೇಶ್ವರದ ರಾಜ ಅಂಗಾರ ವರ್ಮನು ಹುಬಾಶಿಕನನ್ನು ಕೊಂದನು ಎಂದು ಉಲ್ಲೇಖಿಸಿದ್ದಾರೆ. ಮೈಸೂರಿನ ಇತಿಹಾಸದ ಬಗ್ಗೆ ಅಪಾರ ಕೆಲಸ ಮಾಡಿರುವ ಇತಿಹಾಸಕಾರ ಕರ್ನಲ್ ಮಾರ್ಕ್ ವಿಲ್ಕ್ಸ್ ಪ್ರಕಾರ, ಕ್ರಿ.ಶ. 1450ರಲ್ಲಿ ಹುಬಾಶಿಕನು ಕೊರಗರ ಸೈನ್ಯವನ್ನು ಸಂಘಟಿಸಿ ಮಂಗಳೂರು ಮತ್ತು ಮಂಜೇಶ್ವರ ಪ್ರದೇಶಗಳ ಮೇಲೆ ಆಕ್ರಮಣ ಮಾಡಿ ಅಲ್ಲಿ ತನ್ನ ರಾಜ್ಯವನ್ನು ಸ್ಥಾಪಿಸಿ 12 ವರ್ಷಗಳ ಕಾಲ ಆಳಿದ್ದನು ಎಂದು ಹೇಳಲಾಗುತ್ತದೆ.
ಅವನ ಸಾವಿನ ನಿಖರ ಸಂದರ್ಭಗಳು ಏನೇ ಇರಲಿ, ಹತ್ಯೆಯ ನಂತರ ನಾಯಕನಿಲ್ಲದ ಕೊರಗರು ಕಾಡಿಗೆ ಓಡಿಹೋದರು ಮತ್ತು ಬದುಕಲು ಅರಣ್ಯ ಉತ್ಪನ್ನಗಳನ್ನೇ ಅವಲಂಬಿಸಿದರು. ಶತಮಾನಗಳು ಕಳೆದರೂ ಕೊರಗರ ಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆಯಾಗಿಲ್ಲ. ಅಸ್ಪೃಶ್ಯತೆಯ ಕಳಂಕಕ್ಕೆ ಗುರಿಯಾಗಿರುವ ಈ ಸಮುದಾಯವು ಸಾಂಪ್ರದಾಯಿಕವಾಗಿ ಬುಟ್ಟಿ ಹೆಣೆಯುವುದನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡಿದೆ. ಆರ್ಥಿಕ ಸಂಕಷ್ಟ ಮತ್ತು ಸಾಮಾಜಿಕ ಅಸಮಾನತೆಯನ್ನು ಅವರು ಇಂದಿಗೂ ಎದುರಿಸುತ್ತಿದ್ದಾರೆ. ನಾಗರಿಕ ಸಮಾಜದ ಕಾರ್ಯಕರ್ತರು ಅವರ ಪರಿಸ್ಥಿತಿಯನ್ನು ಪದೇ ಪದೇ ಎತ್ತಿ ತೋರಿಸುತ್ತಿದ್ದರೂ, ಗೌರವ ಮತ್ತು ಗುರುತಿಗಾಗಿ ಅವರು ನಡೆಸುತ್ತಿರುವ ಹೋರಾಟವನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗಿದೆ ಎಂದು ಸಮುದಾಯದ ಸದಸ್ಯರು ಹೇಳುತ್ತಾರೆ.
ನಶಿಸುತ್ತಿದೆ ‘ಕೊರಗ’ ಭಾಷೆ
ಬ್ರಿಟಿಷ್ ಆಡಳಿತಗಾರ ಜಾರ್ಜ್ ಅಬ್ರಹಾಂ ಗ್ರಿಯರ್ಸನ್ ಅವರು ‘ಮದ್ರಾಸ್‌ನ ರಹಸ್ಯ ದ್ರಾವಿಡ ಭಾಷೆ’ ಎಂದು ಬಣ್ಣಿಸಿದ್ದ ಕೊರಗ ಭಾಷೆ ಇಂದು ಅಳಿವಿನ ಅಂಚಿನಲ್ಲಿದೆ. 2011ರ ಅಂಕಿಅಂಶಗಳ ಪ್ರಕಾರ 23 ಲಕ್ಷ ಜನಸಂಖ್ಯೆಯ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೇವಲ 15 ಸಾವಿರ ಜನರು ಮಾತ್ರ ಈ ಭಾಷೆಯನ್ನು ಮಾತನಾಡುತ್ತಿದ್ದರು. ಕಾಲಾನಂತರದಲ್ಲಿ ಈ ಸಂಖ್ಯೆ ಮತ್ತಷ್ಟು ಕ್ಷೀಣಿಸುತ್ತಿದ್ದು, ಭಾಷೆಯೊಂದಿಗೆ ಸಮುದಾಯದ ಸಾಂಸ್ಕೃತಿಕ ಬೇರುಗಳೂ ಸಡಿಲವಾಗುತ್ತಿವೆ.
ಜನಸಂಖ್ಯೆ ಕುಸಿತ ಮತ್ತು ಆರೋಗ್ಯ ಸಮಸ್ಯೆ
1981ರ ಜನಗಣತಿಯಲ್ಲಿ 15 ಸಾವಿರಕ್ಕೂ ಅಧಿಕವಿದ್ದ ಕೊರಗರ ಸಂಖ್ಯೆ 2002ರ ವೇಳೆಗೆ 14,794ಕ್ಕೆ ಇಳಿದಿತ್ತು. ಪ್ರಸ್ತುತ ಅಂದಾಜಿನ ಪ್ರಕಾರ ಈ ಸಂಖ್ಯೆ ಕೇವಲ 10 ರಿಂದ 12 ಸಾವಿರಕ್ಕೆ ಕುಸಿದಿದೆ. ಅಪೌಷ್ಟಿಕತೆ, ರಕ್ತಹೀನತೆ, ಅನುವಂಶಿಕ ಕಾಯಿಲೆಗಳು ಮತ್ತು ಕ್ಷಯದಂತಹ ಮಾರಕ ರೋಗಗಳು ಸಮುದಾಯವನ್ನು ಹೈರಾಣಾಗಿಸಿವೆ.

