ಕೇಂದ್ರದ ವಿರುದ್ಧ ಕಾಂಗ್ರೆಸ್‌ ‘ನರೇಗಾ’ ಸಮರ: ಜ.26 ರಿಂದ ರಾಜ್ಯಾದ್ಯಂತ ಪಾದಯಾತ್ರೆ
x

ಕೇಂದ್ರದ ವಿರುದ್ಧ ಕಾಂಗ್ರೆಸ್‌ ‘ನರೇಗಾ’ ಸಮರ: ಜ.26 ರಿಂದ ರಾಜ್ಯಾದ್ಯಂತ ಪಾದಯಾತ್ರೆ

ಕೇಂದ್ರದ ಹೊಸ ಮಸೂದೆಯಿಂದ ಹಣಕಾಸಿನ ಹರಿವಿಗೆ ಕತ್ತರಿ ಬೀಳುವ ಭೀತಿಯಿದೆ. ಇದು ಕೇವಲ ಬಡವರ ಕೂಲಿಯಲ್ಲ, ಬದಲಾಗಿ ಹಳ್ಳಿಗಳ ಆರ್ಥಿಕ ಚಲಾವಣೆಯ ಶಕ್ತಿಯಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷ ಈಗ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ಮನರೇಗಾ) ವಿಚಾರದಲ್ಲಿ ತಾರಕಕ್ಕೇರಿದೆ. ಕೇಂದ್ರ ಸರ್ಕಾರವು ನರೇಗಾ ಯೋಜನೆಯಲ್ಲಿ ತಂದಿರುವ ಬದಲಾವಣೆಗಳನ್ನು ವಿರೋಧಿಸಿ ಕಾಂಗ್ರೆಸ್‌ ಸರ್ಕಾರವು ರಾಜ್ಯಾದ್ಯಂತ ಬೃಹತ್ ಪಾದಯಾತ್ರೆ ಮತ್ತು ಜನಾಂದೋಲನಕ್ಕೆ ಕರೆ ನೀಡಿದೆ. ಜ.26ರ ಗಣರಾಜ್ಯೋತ್ಸವದ ದಿನದಂದು ಈ ಅಭಿಯಾನ ಚಾಲನೆ ನೀಡಲು ತೀರ್ಮಾನಿಸಿದೆ. ಈ ಕುರಿತು ಮಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗಳು ಕೇವಲ ರಾಜಕೀಯ ಟೀಕೆಗಳಲ್ಲ. ಬದಲಿಗೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ಗ್ರಾಮೀಣ ಮತದಾರರನ್ನು ತಲುಪಲು ರೂಪಿಸುವ ಬಲಿಷ್ಠ ಹೋರಾಟದ ರೂಪುರೇಷೆಗಳಾಗಿವೆ ಎಂಬ ಚರ್ಚೆಗಳು ವ್ಯಕ್ತವಾಗುತ್ತಿವೆ.

ರಾಜ್ಯಕ್ಕೆ ಪ್ರತಿ ವರ್ಷ ಸುಮಾರು 6 ಸಾವಿರ ಕೋಟಿ ರೂಪಾಯಿ ನರೇಗಾ ಅನುದಾನ ಹರಿದುಬರುತ್ತಿದೆ. ಸರಾಸರಿ ಲೆಕ್ಕದಲ್ಲಿ ಪ್ರತಿ ಪಂಚಾಯಿತಿಗೆ 1 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಇದು ಅವಕಾಶ ಕಲ್ಪಿಸುತ್ತಿದೆ. ಈ ಬೃಹತ್ ಮೊತ್ತದ ಹಣವು ಹಳ್ಳಿಗಳ ಮೂಲಸೌಕರ್ಯ ಮತ್ತು ಬಡವರ ಕೈಗೆ ನೇರ ವೇತನವಾಗಿ ಸಿಗುತ್ತಿದೆ. ಕೇಂದ್ರದ ಹೊಸ ಮಸೂದೆಯಿಂದ ಈ ಹಣಕಾಸಿನ ಹರಿವಿಗೆ ಕತ್ತರಿ ಬೀಳುವ ಭೀತಿಯಿದೆ. ಇದು ಕೇವಲ ಬಡವರ ಕೂಲಿಯಲ್ಲ, ಬದಲಾಗಿ ಹಳ್ಳಿಗಳ ಆರ್ಥಿಕ ಚಲಾವಣೆಯ ಶಕ್ತಿಯಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಜ.26ರ ಗಣರಾಜ್ಯೋತ್ಸವದ ದಿನದಂದು ಈ ಅಭಿಯಾನ ಆರಂಭವಾಗಲಿದ್ದು, ಪ್ರತಿ ಕ್ಷೇತ್ರದಲ್ಲಿ 5 ರಿಂದ 10 ಕಿ.ಮೀ ಪಾದಯಾತ್ರೆ ನಡೆಸುವ ಮೂಲಕ ನೇರವಾಗಿ ಕಾರ್ಮಿಕರನ್ನು ತಲುಪುವ ಯೋಜನೆ ಇದಾಗಿದೆ. ಜ.6ರಿಂದ ಫೆ.2ರವರೆಗೆ ತಾಲ್ಲೂಕು ಮಟ್ಟದಲ್ಲಿ ಪಂಚಾಯಿತಿ ಸದಸ್ಯರು ಮತ್ತು ಫಲಾನುಭವಿಗಳನ್ನು ಒಳಗೊಂಡ ಬೃಹತ್ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಚರ್ಚೆ ಮಾಡಲು ಎರಡು ದಿನ ವಿಶೇಷ ಅಧಿವೇಶನ ಕರೆಯುವ ಆಲೋಚನೆ ಸಹ ಇದೆ. ಆಮೂಲಕ ಇದರಿಂದ ಗ್ರಾಮೀಣ ಪ್ರದೇಶದ ಮೇಲೆ ಹೇಗೆ ದುಷ್ಪರಿಣಾಮ ಬೀರಲಿದೆ ಎಂದು ಜನರಲ್ಲಿ ಅರಿವು ಮೂಡಿಸಲಾಗುವುದು. ಮತ್ತೆ ನರೇಗಾವನ್ನು ಮರುಸ್ಥಾಪಿಸುವ ತನಕ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಅಸ್ಸಾಂ ರಾಜ್ಯಕ್ಕೆ ಭೇಟಿ ನೀಡುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ನನಗೆ ಜವಾಬ್ದಾರಿ ನೀಡಿದ್ದು, ಇದರ ಬಗ್ಗೆ ಪಕ್ಷದ ನಾಯಕರ ಬಳಿ ಚರ್ಚೆ ನಡೆಸುತ್ತೇನೆ ಎಂದರು. ಬಳ್ಳಾರಿ ಜಿಲ್ಲೆಯಲ್ಲಿನ ಘಟನೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರ ಕೈವಾಡ ಇದೆ ಎಂಬ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಅವರು ದಿನ ಆರೋಪ ಮಾಡುತ್ತಿರಲಿ, ದಿನಾ ಆರೋಪ ಕೇಳುತ್ತಾ ಇರೋಣ ಎಂದು ವ್ಯಂಗ್ಯವಾಡಿದರು.

Read More
Next Story