14 ಕ್ಷೇತ್ರಗಳ ಮತದಾನಕ್ಕೆ ಕ್ಷಣಗಣನೆ ಆರಂಭ;   2.6 ಕೋಟಿ ಮತದಾರರು ಬರೆಯಲಿದ್ದಾರೆ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ
x

14 ಕ್ಷೇತ್ರಗಳ ಮತದಾನಕ್ಕೆ ಕ್ಷಣಗಣನೆ ಆರಂಭ; 2.6 ಕೋಟಿ ಮತದಾರರು ಬರೆಯಲಿದ್ದಾರೆ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ


ಕರ್ನಾಟಕದ ಲೋಕಸಭಾ ಚುನಾವಣಾ ಕಣ ತಣ್ಣಗಾಗಲು ಕ್ಷಣಗಣನೆ ಆರಂಭವಾಗಿದೆ. ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಮತದಾನ ನಾಳೆ ನಡೆಯಲಿದೆ. ಚುನಾವಣೆಯ ಕೊನೆಯ ಕ್ಷಣದಲ್ಲಿ ಮತದಾರರ ಮನವೊಲಿಸಲು ರಾಜಕೀಯ ಪಕ್ಷಗಳು, ಅವುಗಳ ಅಭ್ಯರ್ಥಿಗಳು, ರಾಷ್ಟ್ರ, ರಾಜ್ಯ ನಾಯಕರು ತಮ್ಮ ಕೈಲಾದ ಕೊನೆ ಕ್ಷಣದದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮತದಾರರ ಅಂತರಂಗಕ್ಕೆ ಲಗ್ಗೆ ಹಾಕಲು ಧರ್ಮ, ದೇಶ, ಜಾತಿ ಮತ್ತಿತರ ಎಲ್ಲ ಮಾರ್ಗಗಳನ್ನೂ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮನೆಮನೆ ಪ್ರಚಾರಕ್ಕೆ ಅವಕಾವಿರುವುದರಿಂದ, ಎಲ್ಲರೂ ವೈಯಕ್ತಿಕವಾಗಿ ಮತದಾರರನ್ನು ಒಲಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದ್ದಾರೆ.

ನಾಳೆ ನಡೆಯಲಿರುವ ಮತದಾನದಲ್ಲಿ 2,59,52,958 ಮತದಾರರು ಕಿತ್ತೂರು ಕರ್ನಾಟಕ, ಮಲೆನಾಡು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ 14 ಕ್ಷೇತ್ರಗಳ 28,269 ಮತಗಟ್ಟೆಗಳಲ್ಲಿ 224 ಅಭ್ಯರ್ಥಿಗಳ ರಾಜಕೀಯ ಹಣೆಬರಹ ಬರೆಯಲಿದ್ದಾರೆ.

ಶೋರಾಪುರ ಉಪ-ಚುನಾವಣೆ

ಈ ಮಧ್ಯೆ ಈ ಭಾಗದ ಶೋರಾಪುರ ವಿಧಾನ ಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯಲಿದ್ದು, ಇಲ್ಲಿನ ಮತದಾರರು ಲೋಕಸಭೆ ಮತ್ತು ವಿಧಾನ ಸಭೆಗಳೆರಡಕ್ಕೂ ಮತ ಚಲಾವಣೆ ಮಾಡಲಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು, ನಾಲ್ಕು ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಆರು ಮಂದಿ ಕಣದಲ್ಲಿದ್ದಾರೆ

ನಾಳೆ ಮುಂಜಾನೆ 7 ಗಂಟೆಯಿಂದಲೇ, ಮತದಾನ ಆರಂಭವಾಗಲಿದ್ದು, ಉತ್ತರ ಕರ್ನಾಟಕ ಭಾಗದ ರಣ ಬಿಸಿಲು ಚುನಾವಣಾ ಆಯೋಗ, ಮತದಾರ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು-ಈ ಎಲ್ಲರನ್ನೂ ಹೈರಾಣಾಗಿಸಿದೆ. ರಾಜಕೀಯ ಪಕ್ಷಗಳು ಮತದಾನವನ್ನು ಆರು ಗಂಟೆಯ ನಂತರವೂ ಕೆಲ ಕಾಲ ಮುಂದುವರಿಸುವಂತೆ ಮನವಿ ಕೂಡ ಮಾಡಿದ್ದಾರೆ. ಚುನಾವಣಾ ಆಯೋಗ ಈ ಮನವಿಯನ್ನು ಪರಿಶೀಸಲಿಸುತ್ತಿದೆ, ಎಂದು ಆಯೋಗದ ಮೂಲಗಳು ತಿಳಿಸಿವೆ. ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಮತದಾರರ ಚೀಟಿಯ ಹಿಂಭಾಗದಲ್ಲಿ ಕ್ಯೂ ಆರ್‌ ಕೋಡ್‌ ಮುದ್ರಿಸಿದ್ದು, ಇದು ಮತದಾರರಿಗೆ ಮತದಾನ ಮಾಡಲು ಸಹಕಾರಿಯಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಸಿದ್ದಾರೆ.

ಚುನಾವಣೆ ಎದುರಿಸುತ್ತಿರುವ ಕ್ಷೇತ್ರಗಳು

ಈ ಹದಿನಾಲ್ಕು ಲೋಕಸಭಾ ಕ್ಷೇತ್ರಗಳ ಪೈಕಿ ವಿಜಯಪುರ ಹಾಗೂ ಕಲಬುರಗಿ ಪರಿಶಿಷ್ಟ ಜಾತಿ ಮೀಸಲಾತಿ ಕ್ಷೇತ್ರಗಳಾಗಿದ್ದರೆ, ರಾಯಚೂರು, ಬಳ್ಳಾರಿ ಪರಿಶಿಷ್ಟ ವರ್ಗ ಮೀಸಲು ಕ್ಷೇತ್ರಗಳಾಗಿವೆ. ಚುನಾವಣೆ ಎದುರಿಸುತ್ತಿರುವ ಉಳಿದ ಕ್ಷೇತ್ರಗಳೆಂದರೆ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬೀದರ್‌, ಕೊಪ್ಪಳ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಹಾಗೂ ಶಿವಮೊಗ್ಗ. ಇವೆಲ್ಲವೂ ಸಾಮಾನ್ಯ ಕ್ಷೇತ್ರಗಳು. ಈ ಕ್ಷೇತ್ರಗಳ ಪೈಕಿ ಕಲಬುರಗಿ 20,98,202 ಅತಿಹೆಚ್ಚು ಮತದಾರರನ್ನು ಹೊಂದಿದ್ದರೆ, 16,41,156 ಮತದಾರರನ್ನು ಹೊಂದಿರುವ ಉತ್ತರ ಕನ್ನಡ ಅತಿ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ.

ದಾವಣಗೆರೆಯಿಂದ ಮಹಿಳೆ ಲೋಕಸಭೆಗೆ

ನಾಳೆ ನಡೆಯಲಿರುವ ಮತದಾನವು, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್‌ ಶೆಟ್ಟರ್‌ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ. ದಾವಣಗೆರೆಯಲ್ಲಿ ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜನ್‌ ಹಾಗೂ ಬಿಜೆಪಿಯ ಗಾಯಿತ್ರಿ ಸಿದ್ದೇಶ್ವರ ಮುಖಾಮುಖಿಯಾಗಿದ್ದು, ಈ ಇಬ್ಬರ ಪೈಕಿ ಒಬ್ಬ ಮಹಿಳೆ ಲೋಕಸಭೆಯನ್ನು ಪ್ರವೇಶಿಸುವುದು ಖಚಿತ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಬೀದರ್‌, ರಾಯಚೂರುಮ ಕೊಪ್ಪಳ, ಹಾವೇರಿ, ಧಾರವಾಡ, ದಾವಣಗೆರೆ ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗಿಳಿದಿರುವುದರಿಂದ ಈ ಕ್ಷೇತ್ರಗಳು ರಾಜಕೀಯ ವಲಯದ ಆಸಕ್ತಿಯನ್ನು ಕೆರಳಿಸಿದೆ. ಈ ಪೈಕಿ ನಾಲ್ವರು ಸಚಿವರ ಮಕ್ಕಳು, ಒಬ್ಬ ಸಚಿವರ ಪತ್ನಿ, ಮತ್ತೊಬ್ಬ ಸಚಿವರ ಸೋದರಿ, ಹಾಲಿ ಸಂಸದರು ಅವರ ಕುಟುಂಬದ ಸದಸ್ಯರು ಕಣದಲ್ಲಿದ್ದಾರೆ.

ಈ 14 ಕ್ಷೇತ್ರಗಳೂ ಲಿಂಗಾಯತ ಸಮುದಾಯದ ಭದ್ರಕೋಟೆಯಾಗಿದ್ದು, ಈ ಸಮುದಾಯ ಯಾರಿಗೆ ಆಶೀರ್ವದಿಸುವುದೋ, ಆ ಪಕ್ಷ ಹೆಚ್ಚಿನ ಸ್ಥಾನ ಗಳಿಸುವುದು ನಿಶ್ಚಿತ. ಚುನಾವಣೆಯ ಸಂದರ್ಭದಲ್ಲಿಯೇ ಎದ್ದಿರುವ ಬಿಜೆಪಿಯ ಮಿತ್ರ ಪಕ್ಷವಾದ ಜೆಡಿಎಸ್‌ ಪಕ್ಷದ ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌ ಡಿ ರೇವಣ್ಣ ಅವರು ಲೈಂಗಿಕ ಹಗರಣ ಮತ್ತು ಬೆದರಿಕೆ ಅಪಹರಣ ಪ್ರಕರಣದಲ್ಲಿ ಸಿಕ್ಕಿಕೊಂಡಿರುವುದರಿಂದ, ಮಹಿಳಾ ಮತದಾರರು ತಮ್ಮ ನಿಲುವನ್ನು ಪ್ರದರ್ಶಿಸುವರೇ, ಅದರಿಂದೇನಾದರೂ ತೊಂದರೆಯಾಗುವುದೇ ಎಂಬ ಆತಂಕ ಬಿಜೆಪಿಯನ್ನು ಕಾಡುತ್ತಿದ್ದರೆ, ಇದರಿಂದ ಲಾಭವಾಗುವುದೇ ಎಂಬ ಆಶಾ ಭಾವನೆ ಕಾಂಗ್ರೆಸ್ನದ್ದಾಗಿದೆ.

ಈ 14 ಕ್ಷೇತ್ರಗಳಲ್ಲಿ ಹಲವು ಸಂಗತಿಗಳು ಸಾರ್ವಜನಿಕ ಚರ್ಚೆಗೊಳಗಾಗಿದ್ದು, ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಪ್ರಕರಣದ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್‌, ಮಹಿಳೆಯರ ಆತ್ಮಗೌರವದ ಪ್ರಶ್ನೆಯನ್ನೆತಿ, ಬಿಜೆಪಿಗೆ ಆತಂಕವನ್ನು ಉಂಟುಮಾಡಿದೆ.

ಈ ನಡುವೆ ಲೋಕಸಭಾ ಚುನಾವಣೆಯ ಮೊದಲ ಎರಡು ಹಂತಗಳ ಮತದಾನ ಪ್ರಮಾಣದ ದತ್ತಾಂಶವನ್ನು ಪ್ರಕಟಿಸುವಲ್ಲಿ ಚುನಾವಣಾ ಆಯೋಗವು ವಿಳಂಬ ಮಾಡಿರುವುದರಿಂದ ಹಲವು ಪ್ರಶ್ನೆಗಳು ಉದ್ಭವವಾಗಿವೆ. ಆಯೋಗ ಪ್ರಕಟಿಸಿರುವ ಮಾಹಿತಿ ಮತ್ತು ಅದರ ಸತ್ಯಾಸತ್ಯತೆ ಕುರಿತು ಕೂಡ ಸಂದೇಹಗಳು ವ್ಯಕ್ತವಾಗಿವೆ. ಈ ಹಂತದ ಚುನಾವಣೆಯಲ್ಲಿ ಈ ಸಮಸ್ಯೆಗಳು ಪರಿಹಾರವಾಗುವುದೇ ಕಾದುನೋಡಬೇಕಿದೆ.

Read More
Next Story