ಕನ್ನಡ ಸಾಹಿತ್ಯ ಸಮ್ಮೇಳನ| ಸರ್ವಾಧ್ಯಕ್ಷ ಹುದ್ದೆಗೆ ಸಿಎಂ ಸಿದ್ದರಾಮಯ್ಯ ಪರಿಗಣಿಸಲು ಒತ್ತಾಯ: ಮಹೇಶ್‌ ಜೋಶಿ
x

ಕನ್ನಡ ಸಾಹಿತ್ಯ ಸಮ್ಮೇಳನ| ಸರ್ವಾಧ್ಯಕ್ಷ ಹುದ್ದೆಗೆ ಸಿಎಂ ಸಿದ್ದರಾಮಯ್ಯ ಪರಿಗಣಿಸಲು ಒತ್ತಾಯ: ಮಹೇಶ್‌ ಜೋಶಿ

ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪೀಠಕ್ಕೆ ಯಾರನ್ನು ಆಯ್ಮೆ ಮಾಡಬೇಕು? ಸಾಹಿತಗಳಿಗೇ? ಸಾಹಿತ್ಯೇತರರಿಗೇ? ಸಮ್ಮೇಳನದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್‌ ತುರ್ತಾಗಿ ಅಕ್ಟೋಬರ್‌ 28 (ಸೋಮವಾರ)ದಂದು ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆದಿದೆ.


ಶತಮಾನದ ಆಯುಷ್ಯವನ್ನು ಕಳೆದಿರುವ ಕನ್ನಡ ಮತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ-ಕನ್ನಡ ಸಾಹಿತ್ಯ ಪರಿಷತ್‌ ನ ಅತಿಮುಖ್ಯ ಸಂಭ್ರಮವೆಂದೇ ಪರಿಗಣಿಸಲಾಗಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಯಾರಾಗಬೇಕು? ಸಾಹಿತಿಗಳಷ್ಟೇ ಈ ಪೀಠ ಅಲಂಕರಿಸಬೇಕೇ? ಕನ್ನಡದ ನೆಲ-ಜಲ, ಭಾಷೆಗಾಗಿ ದುಡಿದಂಥ ಮಹನೀಯರನ್ನೇಕೆ ಈ ಸರ್ವಾಧ್ಯಕ್ಷ ಸ್ಥಾನಲ್ಲಿ ಕುಳ್ಳಿರಿಸಬಾರದು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡು, ಪರ-ವಿರೋಧ ವಾದವನ್ನು ಮಂಡಿಸುತ್ತಿರುವ ಎರಡು ಪಂಗಡಗಳು ತಮ್ಮ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿರುವುದರಿಂದಾಗಿ ಈಗ ವಿವಾದವೊಂದು ಸೃಷ್ಟಿಯಾಗಿದೆ.

ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು 1915ರಲ್ಲಿ ಸ್ಥಾಪನೆಯಾದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದೇ ಗುರುತಿಸಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್‌ಗೆ ಮುಂದಿನ ವರ್ಷಕ್ಕೆ ನೂರಾಹತ್ತು ವರ್ಷ ತುಂಬಲಿದೆ. ಆರಂಭದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್‌ ಎಂದು ಗುರುತಿಸಿಕೊಂಡಿದ್ದ ಈ ಸಂಸ್ಥೆ 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಎಂದು ಮರುನಾಮಕರಣಗೊಂಡಿತು. ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನ ನಡೆದದ್ದು 1915ರಲ್ಲಿ. ಬೆಂಗಳೂರಿನಲ್ಲಿ. ಈಗ ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್‌ 20ರಂದು ಅರಂಭವಾಗಲಿರುವ ಸಮ್ಮೇಳನ 87ನೇಯದು.

ಕರ್ನಾಟಕದ ಏಕೀಕರಣ ಸಾಧಿಸುವುದು ಮತ್ತು ಕನ್ನಡ ನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲು ಅಗತ್ಯವಾದ ಜನಜಾಗೃತಿಯನ್ನು, ಸಂಕಲ್ಪವನ್ನು ರೂಪಿಸುವುದು ಈ ಸಮ್ಮೇಳನದ ಉದ್ದೇಶ. ಕನ್ನಡ ಸಾಹಿತ್ಯಕ್ಕೆ ಅವಿರತವಾಗಿ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಅಂದಿನಿಂದಲೂ, ಕನ್ನಡ ಸಾಹಿತ್ಯದ ಅನೇಕ ಗಣ್ಯರು ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳಲ್ಲಿಯೇ ಸ್ಪಷ್ಟವಾಗಿ ಹೇಳಲಾಗಿದೆ.

ವಿವಾದ ನನ್ನಿಂದಲ್ಲ; ಜೋಶಿ

ಹಾಗಿದ್ದೂ, ಹೊಸದಾಗಿ ಈ ಪ್ರಶ್ನೆ, ಈ ವಿವಾದ ಹುಟ್ಟಿದ್ದಾದರೂ ಹೇಗೆ?

“ಈ ವಿವಾದದ ಹುಟ್ಟಿಗೆ ನಾನು ಕಾರಣನಲ್ಲ” ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್‌ ಜೋಶಿ ಸಮಝಾಯಿಷಿ ನೀಡಿ ಷರಾ ಬರೆದು ಬಿಟ್ಟಿದ್ದಾರೆ.

ಆದರೆ; “ಸಾಹಿತಿಗಳೇ ಸಮ್ಮೇಳನಾಧ್ಯಕ್ಷರಾಗಬೇಕೇ? ಅಥವಾ ಸಾಹಿತ್ಯೇತರರನ್ನು ಅಧ್ಯಕ್ಷರನ್ನಾಗಿಸಬಹುದೋ? ಎಂಬುದನ್ನು ನಾನು ಹೇಳಿಲ್ಲ. ಸಾರ್ವಜನಿಕರಿಂದ ಬಂದ ಅಭಿಪ್ರಾಯಗಳಿವು. ಅದನ್ನು ನಾನು ಪ್ರಸ್ತಾಪಿಸಿದ್ದೇನೆ ಅಷ್ಟೇ. ಈ ಬಗ್ಗೆ ಈಗ ಸಾರ್ವತ್ರಿಕವಾಗಿ ಚರ್ಚೆಯಾಗುತ್ತಿದೆ. ಹೀಗಾಗಿ ಸ್ಪಷ್ಟನೆ ಕೊಡುವುದು ಅನಿವಾರ್ಯವಾಗಿದೆ ಅಷ್ಟೇ” ಎನ್ನುತ್ತಾರೆ ಜೋಶಿ.

ಮಠಾಧೀಶರ ಒತ್ತಾಯ

ಇತ್ತೀಚೆಗೆ ನಾಡಿನ 26 ಧಾರ್ಮಿಕ ಸಂಸ್ಥಾನಗಳ ಮಠಾಧೀಶರು ಒಂದಾಗಿ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನಕ್ಕೆ ಕನ್ನಡ ಪುಸ್ತಕ ಬರೆಯುವ, ಕನ್ನಡ ನಾಡು, ನುಡಿಗಾಗಿ ಶ್ರಮಿಸಿರುವ ಮತ್ತು ಶ್ರಮಿಸುತ್ತಿರುವ ಮಠಾಧೀಶರು, ಸಿನಿಮಾ ಸಾಹಿತಿಗಳೂ ಸೇರಿದಂತೆ ಕನ್ನಡದ ಅಭಿವೃದ್ಧಿಯಲ್ಲಿ ಕೈ ಜೋಡಿಸಿರುವ ಇತರೆ ಕ್ಷೇತ್ರಗಳ ಸಾಧಕರನ್ನು ಪರಿಗಣಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು.

ಸಾಹಿತ್ಯೇತರರೆಂದರೆ ಯಾರು?

ಇದುವರೆಗೂ ಸಾಹಿತ್ಯ ಸಾಧಕರನ್ನು ಮಾತ್ರ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಕ್ರೀಡೆ, ಸಂಗೀತ, ಮಾಧ್ಯಮ, ನೃತ್ಯ, ಯಕ್ಷಗಾನ, ಸಿನಿಮಾ ಸಾಹಿತ್ಯ ಕ್ಷೇತ್ರದ ಸಾಧಕರನ್ನೂ ಕೂಡ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಅಭಿಪ್ರಾಯ, ಸಲಹೆಗಳ ಜೊತೆಗೆ ಹಕ್ಕೊತ್ತಾಯ ಕೂಡ ಆರಂಭವಾಗಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಕೃತಿಗಳನ್ನು ಪ್ರಕಟಿಸುವ ಮೂಲಕ, ನಾಟಕಗಳ ಮೂಲಕ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ದೇಶದೆಲ್ಲೆಡೆ ಪಸರಿಸುವಂತೆ ಮಾಡಿರುವ ಸಾಣೇಹಳ್ಳಿ ಸ್ವಾಮೀಜಿ, ಭಾಲ್ಕಿ ಹಿರೇಮಠದ ಮುಖ್ಯಸ್ಥ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ನಿಡುಮಾಮಿಡಿ ಪೀಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸೇರಿದಂತೆ ಯಾರಾದರೊಬ್ಬರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕೆಂದು ಅಭಿಮಾನಿಗಳು, ಭಕ್ತಾದಿಗಳು, ಬೆಂಬಲಿಗರಿಂದ ಒತ್ತಾಯಗಳು ಕೇಳಿಬರುತ್ತಿವೆ. “26 ಮಠಾಧೀಶರು ಈ ಪ್ರಶ್ನೆಯನ್ನು ಎತ್ತುವ ಮೂಲಕ ಸಾರ್ವಜನಿಕ ಚರ್ಚೆಗೆ ನಾಂದಿ ಹಾಡಿದರು. ಆದಿಚುಂಚನಗಿರಿಶ್ರೀ, ಸುತ್ತೂರು ಶ್ರೀಗಳು, ಸಿದ್ದಗಂಗಾಶ್ರೀಗಳು, ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳೂ ಸೇರಿಂತೆ ವಿವಿಧ ಮಠಾಧೀಶರ ಪರವಾಗಿ ಮನವಿಗಳು ಬಂದಿವೆ” ಎಂದು ಜೋಶಿ ಹೇಳುತ್ತಾರೆ.

ಇನ್ನು ನ್ಯಾಯಾಂಗ ಕ್ಷೇತ್ರದಿಂದ ಕನ್ನಡದಲ್ಲಿ ತೀರ್ಪು ನೀಡುವ ಮೂಲಕ ಮಾತೃಭಾಷೆಗೆ ಗೌರವ ತಂದುಕೊಟ್ಟ ವಿಶ್ರಾಂತ ನ್ಯಾ.ನಾಗಮೋಹನ್‌ದಾಸ್, ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾ.ಶಿವರಾಜಪಾಟೀಲ್, ಗೋಪಾಲಗೌಡ ಅವರನ್ನು ಕೂಡ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕೆಂಬ ಬೇಡಿಕೆಯಿದೆ. ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ಕಥೆ, ಚಿತ್ರಕತೆ, ಸಂಗೀತ, ಸಂಭಾಷಣೆ ಬರೆಯುತ್ತಿರುವ ಚಿತ್ರ ಸಾಹಿತಿಗಳಾದ ಹಂಸಲೇಖರನ್ನು ಸರ್ವಾಧ್ಯಕ್ಷರ ಪಟ್ಟಕ್ಕೆ ಆಯ್ಕೆ ಮಾಡಬೇಕೆಂದು ಹಲವರು ಒತ್ತಾಯಿಸಿದ್ದಾರೆ. ಕನ್ನಡ ನಾಡು ಕೇವಲ ಸಾಹಿತಿಗಳಿಂದ ಮಾತ್ರ ಅಭಿವೃದ್ಧಿಯಾಗಿಲ್ಲ.ಕನ್ನಡಪರ ಹೋರಾಟಗಾರರಿಂದಲೇ ಇಂದು ಕನ್ನಡ ನಾಡಿನಲ್ಲಿ ಹೊರರಾಜ್ಯಗಳ ವಲಸಿಗರ ದಬ್ಬಾಳಿಕೆ ಕಡಿವಾಣ ಬಿದ್ದಿದೆ. ಆದ್ದರಿಂದ ಕನ್ನಡ ನಾಡು, ನುಡಿ, ನೆಲ, ಜಲಕ್ಕಾಗಿ ಹೋರಾಡುತ್ತಲೇ ಜೀವನ ಸವೆಸಿರುವ ಹಲವು ಹೋರಾಟಗಾರರು ಕೂಡ ಸಮ್ಮೇಳನಾಧ್ಯಕ್ಷ ಸ್ಥಾನವನ್ನು ನಮಗೇಕೆ ಕೊಡಬಾರದು ಎಂದು ಅಧಿಕಾರಯುತವಾಗಿಯೇ ಕೇಳಲು ಮುಂದಾಗಿದ್ದಾರೆ ಎಂದು ಪರಿಷತ್ತಿನ ಎಂದು ಮೂಲಗಳು ಹೇಳುತ್ತಿವೆ.

ಇವರ ಜೊತೆಗೆ, ಸಿಎನ್‌ ಆರ್.‌ ರಾವ್‌, ಬಾಹ್ಯಾಕಾಶ ವಿಜ್ಞಾನಿ ಕಿರಣ್‌ ಕುಮಾರ್‌, ಸುಧಾಮೂರ್ತಿ, ವಾಟಾಳ್‌ ನಾಗರಾಜ್‌, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣಗೌಡ, ಕ್ರಿಕೇಟ್‌ ಆಟಗಾರ ಜಿ.ಆರ್.‌ ವಿಶ್ವನಾಥ್‌, ಪ್ರಕಾಶ್‌ ಪಡುಕೋಣೆ, ಅವರನ್ನೇಕೆ ಪರಿಗಣಿಸಬಾರದು ಎಂಬ ಪ್ರಶ್ನೆಯೂ ಕೇಳಿ ಬರುತ್ತಿದೆ.

ಸೋಮವಾರ ಕಾರ್ಯಕಾರಿ ಸಮಿತಿ ಸಭೆ

ಸಮ್ಮೇಳನದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್‌ ತುರ್ತಾಗಿ ಅಕ್ಟೋಬರ್‌ 28 (ಸೋಮವಾರ)ದಂದು ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆದಿದೆ. ಈ ಸಭೆಯನ್ನು ಈ ಮೊದಲು ನವೆಂಬರ್‌ 12ಕ್ಕೆ ನಡೆಸಲು ತೀರ್ಮಾನಿಸಲಾಗಿತ್ತು. ಸೋಮವಾರದಂದು ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆದು ಪೂರ್ವಭಾವಿಯಾಗಿ ಈ ಬಗ್ಗೆ ಚರ್ಚಿಸಿ, ನಂತರ ಇನ್ನೊಂದು ಸಭೆಯನ್ನು ಕರೆದು ಸರ್ವಾಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು ಎಂದು ಪರಿಷತ್ತಿನ ಮೂಲಗಳು ಖಚಿತಪಡಿಸಿವೆ.

ದೇವೇಗೌಡರು, ಸಿದ್ದರಾಮಯ್ಯನವರ ಹೆಸರೂ ಪ್ರಸ್ತಾಪ

ಅಷ್ಟೇ ಅಲ್ಲ. “ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿರುವ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ, ಎಸ್.‌ ಎಂ. ಕೃಷ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಸಮ್ಮೇಳನದ ಸರ್ವಾಧ್ಯಕ್ಷರ ಹುದ್ದೆಗೆ ಪರಿಗಣಿಸಿ ಎಂದು ಒತ್ತಾಯವಿದೆ” ಎಂದು ಜೋಶಿ ಹೇಳುತ್ತಾರೆ.

ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಈವರೆಗೆ ನಾಲ್ವರು ಮಹಿಳೆಯರಿಗೆ ಮಾತ್ರ ಸಮ್ಮೇಳನದ ಅಧ್ಯಕ್ಷತೆಯ ಭಾಗ್ಯ ಒಲಿದು ಬಂದಿದೆ. ಈ ವಿಷಯದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ಹಾಗಾಗಿ ಈ ಬಾರಿ ಮಹಿಳಾ ಸಾಹಿತಿ-ಸಾಧಕರನ್ನೇ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಪರಿಷತ್ತಿನ ಮೂಲಗಳ ಪ್ರಕಾರ ವೀಣಾ ಶಾಂತೇಶ್ವರ , ವೈದೇಹಿ, ಹಾಗೂ ಮಾಲತಿ ಪಟ್ಟಣಶೆಟ್ಟಿ ಅವರ ಹೆಸರುಗಳು ಮುಂಚೂಣಿಯಲ್ಲಿವೆ.

ಸಮ್ಮೇಳನಾಧ್ಯಕ್ಷರ ಆಯ್ಕೆ ಈಗ ವಿವಾದದ ಹಂತದಿಂದ ಪ್ರತಿಭಟನೆಯ ಮಟ್ಟವನ್ನೂ ತಲುಪಿದೆ. ಮಂಡ್ಯದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಸಾಹಿತ್ಯ ಲೋಕದ ದಿಗ್ಗಜರೇ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಬೇಕು, ಸಾಹಿತ್ಯೇತರರನ್ನು ಆಯ್ಕೆ ಮಾಡಿದರೆ ಅಮರಣಾಂತ ಉಪವಾಸ ಕೈಗೊಳ್ಳಬೇಕಾಗುತ್ತದೆ. ಎಂದು ಮಂಡ್ಯ ಸಾಹಿತ್ಯಾಸಕ್ತರ ಬಳಗದವರು ಎಚ್ಚರಿಕೆ ನೀಡಿದ್ದಾರೆ. ಮೊನ್ನೆ ಮಂಗಳವಾರ ಮಂಡ್ಯದಲ್ಲಿ ಪ್ರತಿಭಟನಾ ಜಾಥಾ ನಡೆಸಿ , ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಾಹಿತ್ಯಾಸಕ್ತರ ಬಳಗದ ನಾಯಕತ್ವ ವಹಿಸಿದ್ದ ಲೇಖಕ ಜಗದೀಶ್‌ ಕೊಪ್ಪ ಅವರು “ಸಾಹಿತ್ಯೇತರರು ಸಮ್ಮೇಳನಾಧ್ಯಕ್ಷತೆ ವಹಿಸುವುದನ್ನೂ ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ” ಎಂದು ಹೇಳಿದ್ದಾರೆ.

“ಸಾಹಿತಿಗಳೇ ಸಮ್ಮೇಳನಾಧ್ಯಕ್ಷರಾಗಬೇಕೆಂಬ ನಿಬಂಧನೆಯೇನೂ ಇಲ್ಲ. ಈವರೆಗ ನಡೆದಿರುವ ಸಮ್ಮೇಳನಗಳಲ್ಲಿ ಮಹಿಳಾ ಸಾಹಿತಿಗಳಿಗೂ ಪ್ರಾಧಾನ್ಯ ನೀಡಿಲ್ಲ” ಎಂದು ಜೋಶಿ ಸಮರ್ಥಿಸಿಕೊಳ್ಳುತ್ತಾರೆ. “ಪರಿಷತ್ತಿನ ಬೈ-ಲಾದಲ್ಲಿ ಸಮ್ಮೇಳನದ ಅಧ್ಯಕ್ಷತೆಗೆ ಸಂಬಂಧಿಸಿದಂತೆ ʼಸಾಹಿತಿʼಗಳನ್ನಷ್ಟೇ ಆಯ್ಕೆ ಮಾಡಬೇಕೆಂಬ ನಿರ್ದಿಷ್ಟ ಮಾನದಂಡವಿಲ್ಲ” ಎಂದು ಅವರು ವಾದಿಸುತ್ತಾರೆ.

ಈ ವಿವಾದದ ಹಿನ್ನೆಲೆಯಲ್ಲಿ ರಾಜಕೀಯ ವಾಸನೆಯೂ ಕೇಳಿ ಬಂದಿರುವುದರಿಂದ “ಸಾಹಿತ್ಯ ಕ್ಷೇತ್ರದಲ್ಲಿ ಕೆಲವ ಮಾಡಿದ ಹಿರಿಯರು, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದವರನ್ನು ಆಯ್ಕೆ ಮಾಡಬಹುದು. ಸ್ವಾಯತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು, ರಾಜಕೀಯ ಹಸ್ತಕ್ಷೇಪದಿಂದ ದೂರವಿರಬೇಕು. ಸಾಹಿತ್ಯ ಕ್ಷೇತ್ರದಲ್ಲಿಯೇ ಹಲವಾರು ಶಾಸಕರಿದ್ದಾರೆ. ಕನ್ನಡ ನಾಡು-ನುಡಿಗೆ ಸಾಹಿತ್ಯೇತರರು ನೀಡಿರುವ ಕೊಡುಗೆಯ ಬಗ್ಗೆ ಅಭಿಮಾನವಿದ್ದಲ್ಲಿ ಅಂಥವರನ್ನು ಸಾಹಿತ್ಯ ಸಮ್ಮೇಳನಕ್ಕೆ ಕರೆದು ಗೌರವಿಸುವುದು ಉತ್ತಮ ಸಂಪ್ರದಾಯವೊಂದನ್ನು ಹಾಕಿಕೊಟ್ಟಂತಾಗುತ್ತದೆ. ಆದರೆ, ಅವರಿಗೇ ಸರ್ವಾಧ್ಯಕ್ಷತೆ ನೀಡುವುದು ಉಚಿತವಲ್ಲ” ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ ಹೇಳುತ್ತಾರೆ.

“ಕನ್ನಡ ಜಗತ್ತಿಗೆ ಅಸಾಧಾರಣ ಸೇವೆ ಸಲ್ಲಿಸಿದವರು ಸಮ್ಮೇಳನಾಧ್ಯಕ್ಷತೆ ವಹಿಸುವುದಕ್ಕೆ ಅಭ್ಯಂತರವಿಲ್ಲ. ಆದರೆ, ಯಾವುದೇ ಕಾರಣಕ್ಕೂ, ರಾಜಕಾರಣಿಗಳು, ಮಠಾಧೀಶರು ಸಮ್ಮೇಳನಾಧ್ಯಕ್ಷರಾಗಬಾರದು” ಎನ್ನುತ್ತಾರೆ ಲೇಖಕಿ ಮತ್ತು ವಿಮರ್ಶಕಿ ಡಾ. ಎಂ. ಎಸ್.‌ ಆಶಾದೇವಿ.

ಆದರೆ, ಹಿಂದಿನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಡಾ. ದೊಡ್ಡರಂಗೇಗೌಡರು; “ಇದು ಕನ್ನಡ ಸಾಹಿತ್ಯ ಸಮ್ಮೇಳನವಾಗಿರುವುದರಿಂದ ನಾಡು-ನುಡಿಗೆ ಕೊಡುಗೆ ನೀಡಿದ ವಿವಿಧ ಕ್ಷೇತ್ರಗಳ ಸಾಧಕರು ಸಮ್ಮೇಳನಾಧ್ಯಕ್ಷರಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದ್ದರಿಂದ ಎಲ್ಲ ಕ್ಷೇತ್ರವನ್ನೂ ಒಳಗೊಂಡು, ಸಾಹಿತ್ಯ ಕ್ಷೇತ್ರದವರನ್ನೂ ಪರಿಗಣಿಸಿ ಹೊಸ ಪರಂಪರೆಗೆ ನಾಂದಿ ಹಾಡಲಿ” ಎಂದು ಹೇಳುತ್ತಾರೆ.

ಸಾಹಿತಿಗಳಲ್ಲಿ ಕುಸಿದಿರುವ ಸಮಾಜದ ಸಾಕ್ಷಿ ಪ್ರಜ್ಞೆ ಮನೊವೃತ್ತಿ

ಹಾಗೆ ನೋಡಿದರೆ ಸಾಹಿತ್ಯ ಮತ್ತು ಸಾಹಿತ್ಯೇತರ ಎಂಬ ಚರ್ಚೆ ಕಳೆದ ಕೆಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಸಾಹಿತಿಗಳು ಸಮಾಜದ ಸಾಕ್ಷಿ ಪ್ರಜ್ಞೆಯಾಗಿರುವ ತನಕ ಈ ಪ್ರಶ್ನೆ ಉದ್ಭವಿಸಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಧರ್ಮ ರಾಜಕಾರಣದ ಪ್ರಾಬಲ್ಯದಿಂದಾಗಿ ಸಾಹಿತಿಗಳು ಸಮಾಜದ ಸಾಕ್ಷಿ ಪ್ರಜ್ಞೆಯಾಗುವ ನೈತಿಕ ಅಧಿಕಾರವನ್ನು ಕಳೆದುಕೊಂಡಿರುವುದರಿಂದ, ಈ ಪ್ರಶ್ನೆ ಉದ್ಭವವಾಗಿದೆ.ಎಂದು ಹೆಸರು ಹೇಳಿಕೊಳ್ಳಲು ಬಯಸದ ಲೇಖಕರೊಬ್ಬರು ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

“ಈಗಿನ ಸಾಹಿತಿಗಳು ರಾಜಕೀಯ ಅಧಿಕಾರದ ಸರ್ಕಾರಗಳ ಮುಂದೆ, ವಿಧಾನ ಪರಿಷತ್ತಿನ ಸದಸ್ಯತ್ವ ಸ್ಥಾನಕ್ಕೆ, ಅಕಾಡೆಮಿ ಪಾಧಿಕಾರಗಳ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿ ಕಾದು ಕುಳಿತುಕೊಳ್ಳುವ ಹಂತ ತಲುಪಿರುವುದರಿಂದ ಅವರು, ಸಮಾಜದ ಸಾಕ್ಷಿ ಪ್ರಜ್ಞೆಯಾಗುವ ಅಧಿಕಾರವನ್ನೂ ಕಳೆದುಕೊಂಡಿದ್ದಾರೆ. ತೊಂಭತ್ತರ ದಶಕದಲ್ಲಿ ಖ್ಯಾತ ಸಂಶೋಧಕ ಆರ್.‌ ಸಿ. ಹಿರೇಮಠ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಮೊದಲ ಬಾರಿಗೆ ಸಾಹಿತ್ಯದಲ್ಲಿ ಶ್ರೇಷ್ಠತೆಯ ಪ್ರಶ್ನೆ ಮುನ್ನೆಲೆಗೆ ಬಂತು. ಆಗಲೇ ಬೆಂಗಳೂರಿನಲ್ಲಿ ಜಾಗೃತ ಸಾಹಿತ್ಯ ಸಮ್ಮೇಳನ ನಡೆದದ್ದು. ಪರಿಸ್ಥಿತಿ ಹೀಗಿರುವಾಗ, ಸದ್ಯದ ಮಟ್ಟಿಗೆ ಅಂಥಾ ಉಪದ್ಯಾಪಕ್ಕೆ ಇಳಿಯದೆ, ಇರುವ ಮೌಲ್ಯಗಳನ್ನು ಮತ್ತಷ್ಟು ಪಾತಾಳಕ್ಕೆ ಇಳಿಸದೆ, ಇದ್ದಂತೆ ನಡೆಸಿಕೊಂಡು ಹೋಗುವ ಉದಾರತೆಯನ್ನು ಪ್ರಸಕ್ತ ಸಾಹಿತ್ಯ ಪರಷತ್ತಿನ ಕಾರ್ಯಕಾರಿ ಸಮಿತಿ ಮಾಡಿದರೆ, ಅದೇ ಅವರು ಕನ್ನಡ ನಾಡು, ನುಡಿ, ನೆಲ, ಜಲ ಇತ್ಯಾದಿಗಳಿಗೆ ಸಲ್ಲಿಸುವ ನೆರವು” ಎಂದು ಅವರು ಅರೆ, ವಿಡಂಬನೆ, ಅರೆ ವಿಷಾದದಿಂದ ಹೇಳುತ್ತಾರೆ.

ರಾಜಕೀಕರಣದ ಸ್ಪಷ್ಟ ಸೂಚನೆ

ಒಟ್ಟಾರೆಯಾಗಿ, ಸಾಹಿತ್ಯವನ್ನು ಪ್ರೀತಿಯಿಂದ ನೋಡುವವರು, ಹಾಗೂ ಕಡೆಗಣ್ಣಿನಿಂದ ಕಾಣುವವರು, ತಮ್ಮ ಪ್ರೀತಿಯ ಮತ್ತು ಆಪ್ತ-ಆಸಕ್ತರ ಹೆಸರುಗಳನ್ನು ಸಮ್ಮೇಳನಾಧ್ಯಕ್ಷರ ಸ್ಥಾನದಲ್ಲಿ ಕಲ್ಪಿಸಿಕೊಂಡು ಸಂಭ್ರಮಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಮಠಾಧೀಶರನ್ನು ರಾಜಕಾರಣಿಗಳನ್ನು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಯೋಚಿಸುವುದು ಮತ್ತು ಚರ್ಚಿಸುವುದೂ, ಎರಡೂ, ಸಾಹಿತ್ಯ ಕ್ಷೇತ್ರ ರಾಜಕೀಕರಣಗೊಳ್ಳುತ್ತಿರುವ ರೀತಿಯತ್ತ ಬೆಟ್ಟು ಮಾಡುತ್ತದೆ ಎಂದು ನಿಸ್ಸಂಕೋಚದಿಂದ ಹೇಳಬಹುದು.

ಅಂತಿಮವಾಗಿ ಸೋಮವಾರ ಈ ಎಲ್ಲ ಚರ್ಚೆಗೆ ಒಂದು ತಾರ್ಕಿಕ ಅಂತ್ಯ ಕಾಣುತ್ತದೆಯೇ ಎಂದು ಕಾದು ನೋಡುವುದರ ಹೊರತಾಗಿ ಬೇರೆ ದಾರಿ ಇಲ್ಲ.

Read More
Next Story