Karnataka By Election | ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು: ಬೊಮ್ಮಾಯಿ
x

Karnataka By Election | ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು: ಬೊಮ್ಮಾಯಿ

ಚುನಾವಣಾಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಮಣಿದು ನಾಮಪತ್ರ ಸರಿಯಾಗಿ ಪರಿಶೀಲನೆ ನಡೆಸಿಲ್ಲ.ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ‌.


ಶಿಗ್ಗಾವಿ-ಸವಣೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್‌ ಪಠಾಣ್‌ ರೌಡಿಶೀಟರ್‌ ಆಗಿರುವ ಕುರಿತು ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯೇ ಹೇಳಿರುವ ಹಿನ್ನೆಲೆಯಲ್ಲಿ ನಾಮಪತ್ರ ಪುನರ್‌ ಪರಿಶೀಲಿಸಬೇಕು. ಇಲ್ಲವಾದಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಿಗ್ಗಾವಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್‌ ಪಠಾಣ್‌ ಅವರು ಕಳೆದ ವರ್ಷ ಆಯೋಗಕ್ಕೆ ಸಲ್ಲಿಸಿದ್ದ ಅಫಿಡೆವಿಟ್‌ನಲ್ಲಿ ತಮ್ಮ ಮೇಲೆ ಹದಿನೆಂಟು ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದರು. ಈಗ ಅಂತಹ ಯಾವುದೇ ಪ್ರಕರಣ ಇಲ್ಲ ಎನ್ನುತ್ತಿದ್ದಾರೆ. ಆದರೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ರೌಡಿಶೀಟರ್ ಸೇರಿದಂತೆ ಹಲವಾರು ಪ್ರಕರಣಗಳಿವೆ ಎಂದು ಹೇಳಿದ್ದಾರೆ. ಜೊತೆಗೆ ಅವರದ್ದೇ ಪಕ್ಷದ ಅಜ್ಜಂಪಿರ್ ಖಾದ್ರಿ ಅವರು ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ರೌಡಿ ಶೀಟರ್‌ ಅಂತ ಹೇಳಿದ್ದರು. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ಚುನಾವಣಾಧಿಕಾರಿಗಳು ಪುನರ್‌ ಪರಿಶೀಲಿಸಬೇಕು. ಈ ಹಿಂದೆ ಪಠಾಣ್‌ ವಿರುದ್ಧ ಅತ್ಯಾಚಾರ ಸೇರಿದಂತೆ 17 ಕೇಸುಗಳಿದ್ದವು.

ಚುನಾವಣಾಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಮಣಿದು ನಾಮಪತ್ರ ಸರಿಯಾಗಿ ಪರಿಶೀಲನೆ ನಡೆಸಿಲ್ಲ. ಹಾವೇರಿ ಎಸ್ಪಿಯವರು ಅವರೇ ಪ್ರಕರಣಗಳು ಇರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ‌ ಎಂದರು.

ಹಾವೇರಿ ಜಿಲ್ಲಾಧಿಕಾರಿಗಳು ಕೂಡಲೇ ಈ ವಿಷಯದ ಕುರಿತು ಕಾರ್ಯಪ್ರವೃತ್ತರಾಗಬೇಕು. ಚುನಾವಣಾಧಿಕಾರಿಯಾಧ ಉಪವಿಭಾಗಾಧಿಕಾರಿಗೆ ದೊಡ್ಡ ಜವಾಬ್ದಾರಿ ಇದೆ. ಅವರು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು. ವಾಸ್ತವ ಏನೆಂಬುದನ್ನು ಜನರಿಗೆ ತಿಳಿಸಬೇಕು. ಇಲ್ಲದಿದ್ದರೆ ಅವರಿಗೂ ಕೂಡ ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಬರಲಿದೆ. ನಾವು ಮೊದಲು ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ನಂತರ ಕಾನೂನು ಹೋರಾಟ ಮಾಡುತ್ತೇವೆ. ಸುಳ್ಳು ಅಫಿಡವಿಟ್ ಕೊಟ್ಟು ಜನರಿಗೆ ಮೋಸ ಮಾಡಿರುವ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಯಾವುದೇ ಪ್ರಕರಣ ಇಲ್ಲ: ಎಸ್ಪಿ ಸ್ಪಷ್ಟನೆ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್‌ ಪಠಾಣ್‌ ವಿರುದ್ಧ ರೌಡಿಶೀಟರ್‌ ಇದೆ ಎಂದು ತಮ್ಮ ಹೇಳಿಕೆ ಉಲ್ಲೇಖಿಸಿರುವುದಕ್ಕೆ ಹಾವೇರಿ ಎಸ್ಪಿ ಅಂಶುಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ಹಾನಗಲ್‌ ತಾಲೂಕಿನ ಬೊಮ್ಮನಹಳ್ಳಿ ನಿವಾಸಿಯಾದ ಯಾಸಿರ್‌ ಪಠಾಣ್‌ ವಿರುದ್ಧ ರೌಡಿಶೀಟರ್‌ ಇದೆ ಎಂದು ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಶಿಗ್ಗಾವಿ ಡಿವೈಎಸ್ಪಿ ಹಾಗೂ ಶಿಗ್ಗಾವಿ ಪಿಐ ಕಚೇರಿಗಳಲ್ಲಿ ಪರಿಶೀಲಿಸಲಾಗಿದ್ದು, ಯಾಸಿರ್‌ ಪಠಾಣ್‌ ವಿರುದ್ಧ ಯಾವುದೇ ರೌಡಿಶೀಟರ್‌ ಇಲ್ಲ ಎಂದು ಹೇಳಿದ್ದಾರೆ.

Read More
Next Story