
ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ; ಬಿಜೆಪಿ ಪಾದಯಾತ್ರೆಗೆ ನೈತಿಕತೆ ಇಲ್ಲ: ಸಿಎಂ
ಇದೇ ವೇಳೆ ಬಳ್ಳಾರಿಯಿಂದ ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಪಾದಯಾತ್ರೆಯ ಕುರಿತು ಸಿಎಂ ತೀವ್ರ ವಾಗ್ದಾಳಿ ನಡೆಸಿದ್ದು, ನಾವು ಬಳ್ಳಾರಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದು ಅಕ್ರಮ ಗಣಿಗಾರಿಕೆಯ ವಿರುದ್ಧ ಎಂದು ಹೇಳಿದರು.
ರಾಜ್ಯ ಸರ್ಕಾರ ಮಂಡಿಸಿರುವ ದ್ವೇಷ ಭಾಷಣ ತಡೆ ಮಸೂದೆಯನ್ನು ರಾಜ್ಯಪಾಲರು ತಿರಸ್ಕರಿಸಿಲ್ಲ ಹಾಗೂ ವಾಪಸ್ ಕಳುಹಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಭಾನುವಾರ ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿವಾದಾತ್ಮಕ ಮಸೂದೆಯ ಕುರಿತು ಹಬ್ಬಿರುವ ವದಂತಿಗಳಿಗೆ ತೆರೆ ಎಳೆದರು. ದ್ವೇಷ ಭಾಷಣ ತಡೆ ಮಸೂದೆಯು ವಿಧಾನಮಂಡಲದಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಸದ್ಯ ರಾಜ್ಯಪಾಲರು ಇದಕ್ಕೆ ಅಂಕಿತವನ್ನೂ ಹಾಕಿಲ್ಲ ಅಥವಾ ತಿರಸ್ಕರಿಸಿ ವಾಪಸ್ಸು ಕಳಿಸಿಲ್ಲ. ಒಂದು ವೇಳೆ ರಾಜ್ಯಪಾಲರು ಈ ಬಗ್ಗೆ ವಿವರಣೆ ಕೇಳಿದರೆ, ಸರ್ಕಾರವು ಸೂಕ್ತ ಮಾಹಿತಿ ನೀಡಲು ಸಿದ್ಧವಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಬಳ್ಳಾರಿಯಿಂದ ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಪಾದಯಾತ್ರೆಯ ಕುರಿತು ಸಿಎಂ ತೀವ್ರ ವಾಗ್ದಾಳಿ ನಡೆಸಿದರು. ಹಿಂದೆ ನಾವು ಬಳ್ಳಾರಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದು ಅಕ್ರಮ ಗಣಿಗಾರಿಕೆಯ ವಿರುದ್ಧ. ಅಂದು ರೆಡ್ಡಿ ಸಹೋದರರು ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ್ದ ಸವಾಲನ್ನು ಸ್ವೀಕರಿಸಿ ನಾವು ಜನರಿಗಾಗಿ ಬೀದಿಗೆ ಇಳಿದಿದ್ದೆವು. ಆದರೆ ಈಗ ಬಿಜೆಪಿ ಪಾದಯಾತ್ರೆ ಮಾಡಲು ಹೊರಟಿರುವುದು ಏತಕ್ಕಾಗಿ? ಅವರಿಗೆ ಈ ಪಾದಯಾತ್ರೆ ಮಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬ್ಯಾನರ್ ತೆಗೆದದ್ದೇ ಬಳ್ಳಾರಿ ಘಟನೆಗೆ ಪ್ರಚೋದನೆ
ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಘಟನೆಗಳ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆಗೆ ಸಂಬಂಧಿಸಿದಂತೆ ಹಾಕಲಾಗಿದ್ದ ಬ್ಯಾನರ್‌ಗಳನ್ನು ತೆಗೆಯುವ ಅವಶ್ಯಕತೆ ಏನಿತ್ತು? ಆ ಬ್ಯಾನರ್ ತೆರವುಗೊಳಿಸಿದ್ದೇ ಇಡೀ ಘಟನೆಗೆ ಪ್ರಚೋದನೆಯಾಯಿತು. ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರು ಅಧಿಕಾರ ಮತ್ತು ಸ್ಥಾನಮಾನ ಕಳೆದುಕೊಂಡಿರುವುದರಿಂದ ಅಸೂಯೆಯಿಂದ ಇಂತಹ ವರ್ತನೆಗಳನ್ನು ತೋರುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಇನ್ನು ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ 'ಮುಖ್ಯಮಂತ್ರಿ ಕುರ್ಚಿ ಬದಲಾವಣೆ' ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುರ್ಚಿ ಬದಲಾವಣೆಯ ಪ್ರಶ್ನೆಯೇ ಇಲ್ಲ. ನಮ್ಮಲ್ಲಿ ಯಾವುದೇ ಕುರ್ಚಿ ಕಾಳಗ ನಡೆಯುತ್ತಿಲ್ಲ. ಇದೆಲ್ಲವೂ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆಯ ವದಂತಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದರು.

