
ಬೆಂಗಳೂರಿನ ನೀರಿನ ದಾಹಕ್ಕೆ 'ತ್ಯಾಜ್ಯ ನೀರೇ' ಮದ್ದು! ಇನ್ಮುಂದೆ ಇದು ಕಸವಲ್ಲ, ಬೆಲೆಬಾಳುವ ಸಂಪನ್ಮೂಲ
ವಿಕೇಂದ್ರೀಕೃತ ವ್ಯವಸ್ಥೆಗಳಿಂದ ಸಂಸ್ಕರಿಸಿದ ನೀರನ್ನು ಸ್ಥಳೀಯ ಬಳಕೆಗೆ ಒತ್ತು ನೀಡುವುದರಿಂದ ಅಂತರ್ಜಲ ಮಟ್ಟ ಸುಧಾರಿಸುತ್ತದೆ. ಅಲ್ಲದೇ, ನೀರನ್ನು ಪಂಪ್ ಮಾಡುವ ವೆಚ್ಚ ಮತ್ತು ಇಂಧನ ಉಳಿತಾಯವಾಗುತ್ತದೆ.
ಬೆಂಗಳೂರು ನಗರವು ಕೇವಲ ಕಾವೇರಿ ನದಿ ಅಥವಾ ಅಂತರ್ಜಲದ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿರುವ ಬೆಂಗಳೂರು ಜಲಮಂಡಳಿಯು ತ್ಯಾಜ್ಯ ನೀರನ್ನು ಕಸ ಎಂದು ನೋಡುವ ಬದಲು, ಅದನ್ನು ಆರ್ಥಿಕ ಮೌಲ್ಯವಿರುವ ಸಂಪನ್ಮೂಲವಾಗಿ ಪರಿವರ್ತಿಸುತ್ತಿದೆ. ಈ ಬದಲಾವಣೆಯ ಕೇಂದ್ರಬಿಂದುವೇ ವಿಕೇಂದ್ರೀಕೃತ ಮರುಬಳಕೆ ವ್ಯವಸ್ಥೆಯಾಗಿದೆ. 2035ರ ವೇಳೆಗೆ ನಗರದ ಒಟ್ಟು ನೀರಿನ ಬೇಡಿಕೆಯ ಶೇ. 25 ರಷ್ಟು ವಿಕೇಂದ್ರೀಕೃತ ವ್ಯವಸ್ಥೆಗಳ ಮೂಲಕ ಪೂರೈಸುವ ಗುರಿಯನ್ನು ಹೊಂದಿದೆ.
ಪ್ರಸ್ತುತ ಬೆಂಗಳೂರು ಕುಡಿಯುವ ಉದ್ದೇಶಕ್ಕಲ್ಲದ ಚಟುವಟಿಕೆಗಳಿಗೂ ಶುದ್ಧ ನೀರನ್ನೇ ಅವಲಂಬಿಸಿದೆ. ಶೇ.25ರಷ್ಟು ಬೇಡಿಕೆಯನ್ನು ಮರುಬಳಕೆಯ ನೀರಿನ ಮೂಲಕ ಪೂರೈಸಿದರೆ, ಕಾವೇರಿ ನದಿಯಿಂದ ತರುವ ನೀರಿನ ಮೇಲಿನ ಒತ್ತಡ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ 'ವಿಕೇಂದ್ರೀಕೃತ ತ್ಯಾಜ್ಯನೀರಿನ ಮರುಬಳಕೆ: ಸುಸ್ಥಿರ ಮಾರ್ಗಸೂಚಿಗಳು' ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ವಿವಿಧ ವಲಯದ ತಜ್ಞರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್ಎಸ್ಬಿ) ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ವಿಕೇಂದ್ರೀಕೃತ ವ್ಯವಸ್ಥೆಗಳಿಂದ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುವುದು ಅಥವಾ ಸ್ಥಳೀಯ ಬಳಕೆಗೆ ಒತ್ತು ನೀಡುವುದರಿಂದ ಅಂತರ್ಜಲ ಮಟ್ಟ ಸುಧಾರಿಸುತ್ತದೆ. ಪ್ರತಿ ವಾರ್ಡ್ ಅಥವಾ ಬಡಾವಣೆಗಳು ತಮ್ಮ ತ್ಯಾಜ್ಯ ನೀರನ್ನು ತಾವೇ ಸಂಸ್ಕರಿಸಿ ಮರುಬಳಕೆ ಮಾಡುವುದರಿಂದ, ದೂರದ ಮೂಲಗಳಿಂದ ನೀರನ್ನು ಪಂಪ್ ಮಾಡುವ ವೆಚ್ಚ ಮತ್ತು ಇಂಧನ ಉಳಿತಾಯವಾಗುತ್ತದೆ. ಬೆಂಗಳೂರಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕ (ಎಸ್ಟಿಪಿ)ಗಳು ಒಂದು ಅಪಾರ್ಟ್ಮೆಂಟ್ ನೀರನ್ನು ಸಂಸ್ಕರಿಸುತ್ತಿದ್ದರೂ, ಹೆಚ್ಚುವರಿ ನೀರನ್ನು ಏನು ಮಾಡಬೇಕೆಂದು ತಿಳಿಯದೆ ಚರಂಡಿಗೆ ಬಿಡುತ್ತಿತ್ತು. ಜಲಮಂಡಳಿಯು ಈಗ ಈ ಬಿಡಿ ಘಟಕಗಳನ್ನು ಒಂದಕ್ಕೊಂದು ಜೋಡಿಸುವ ಮರುಬಳಕೆ ಜಾಲವನ್ನು ನಿರ್ಮಿಸುತ್ತಿದೆ. ಹೆಚ್ಚುವರಿ ಸಂಸ್ಕರಿಸಿದ ನೀರಿರುವ ಕಡೆಯಿಂದ, ನೀರಿನ ಅಗತ್ಯವಿರುವ ಕೈಗಾರಿಕೆ ಅಥವಾ ಪಾರ್ಕ್ಗಳಿಗೆ ಪೈಪ್ಲೈನ್ ಮೂಲಕ ಸಂಪರ್ಕ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಮರುಬಳಕೆ ಕಾರಿಡಾರ್ಗಳು, ಶೇಖರಣಾ ಟ್ಯಾಂಕ್ಗಳ ಸ್ಟೇಷನ್ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಈವರೆಗೆ ಬೆಂಗಳೂರು ನಗರಕ್ಕೆ ಎಷ್ಟು ನೀರನ್ನು ಪೂರೈಸುತ್ತೇವೆ ಎಂಬ ಅಂಕಿ-ಅಂಶಗಳ ಮೇಲೆ ನಾನು ಹೆಚ್ಚಿನ ಗಮನ ಹರಿಸಿದ್ದೆವು. ಆದರೆ, ಈಗಿನ ಪರಿಸ್ಥಿತಿಯಲ್ಲಿ ನಮ್ಮ ಚಿಂತನೆಯನ್ನು ಬದಲಿಸಿಕೊಳ್ಳಬೇಕಿದೆ. ನಾವು ಎಷ್ಟು ನೀರು ಸರಬರಾಜು ಮಾಡುತ್ತೇವೆ ಎಂಬುದು ಮುಖ್ಯವಲ್ಲ, ಬದಲಾಗಿ ಅದೇ ನೀರನ್ನು ನಾವು ಎಷ್ಟು ಬಾರಿ ಮರುಬಳಕೆ ಮಾಡುತ್ತೇವೆ ಎಂಬುದು ಮುಖ್ಯ. ಇದನ್ನೇ “ಒಂದೇ ನೀರು” ವಿಧಾನ ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ ತ್ಯಾಜ್ಯ ನೀರನ್ನು ಒಂದು ತ್ಯಾಜ್ಯವೆಂದು ಪರಿಗಣಿಸದೆ, ಅದನ್ನೊಂದು ಅಮೂಲ್ಯ ಸಂಪನ್ಮೂಲವಾಗಿ ನೋಡಲಾಗುತ್ತದೆ. ತ್ಯಾಜ್ಯನೀರಿನ ಮರುಬಳಕೆ ಎಂಬುದು ಕೇವಲ ಪರಿಸರ ಕಾಳಜಿಯ ವಿಷಯವಾಗಿ ಉಳಿದಿಲ್ಲ, ಅದು ನಗರದ ಜಲ ಭದ್ರತೆಯ ಬೆನ್ನೆಲುಬಾಗಿ ಮಾರ್ಪಟ್ಟಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 1,348 ಮಿಲಿಯನ್ ಲೀಟರ್ ತ್ಯಾಜ್ಯ ನೀರನ್ನು 34 ಸಂಸ್ಕರಣಾ ಘಟಕಗಳ ಮೂಲಕ ಶುದ್ಧೀಕರಿಸಲಾಗುತ್ತಿದೆ. ಈ ನೀರನ್ನು ಕುಡಿಯುವ ಉದ್ದೇಶಕ್ಕಲ್ಲದ ಕೆಲಸಗಳಿಗೆ ಬಳಸಿದರೆ, ಕಾವೇರಿ ನದಿ ಮತ್ತು ಅಂತರ್ಜಲದ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು. 2024ರಲ್ಲಿ ಉಂಟಾದ ನೀರಿನ ಬಿಕ್ಕಟ್ಟಿನ ಸಮಯದಲ್ಲಿ ಈ ಸಂಸ್ಕರಿಸಿದ ನೀರು ನಗರಕ್ಕೆ ದೊಡ್ಡ ಮಟ್ಟದ ನೆರವು ನೀಡಿತ್ತು. ಪ್ರಸ್ತುತ ಈ ನೀರನ್ನು ಹೆಚ್ಚಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳನ್ನು ತುಂಬಿಸಲು ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಕೈಗಾರಿಕೆಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಪೂರೈಸುವ ಗುರಿ ಇದೆ ಎಂದರು.
ಮರುಬಳಕೆಯಲ್ಲಿ ಕರ್ನಾಟಕವೇ ಮೊದಲು
ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆಯ ಹಿರಿಯ ಅಧಿಕಾರಿ ದೆಪಿಂದರ್ ಕಪೂರ್ ಮಾತನಾಡಿ, ತ್ಯಾಜ್ಯನೀರಿನ ಸಂಸ್ಕರಣೆ ಮತ್ತು ಮರುಬಳಕೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂದರು. ದೇಶಾದ್ಯಂತ ನಡೆದ ಅಧ್ಯಯನದ ಪ್ರಕಾರ, ತ್ಯಾಜ್ಯನೀರು ಮರುಬಳಕೆ ಮಾಡುವಲ್ಲಿ ಕರ್ನಾಟಕ (ಶೇ.49) ಮತ್ತು ದೆಹಲಿ (ಶೇ.43) ರಾಜ್ಯಗಳು ಮೊದಲ ಎರಡು ಸ್ಥಾನಗಳಲ್ಲಿವೆ. ಬೆಂಗಳೂರು ನಗರವು ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳು ಭಾರತದ ಇತರ ನಗರಗಳಿಗೆ ಮಾತ್ರವಲ್ಲದೆ, ಜಗತ್ತಿನಾದ್ಯಂತ ಇರುವ ನಗರಗಳಿಗೆ ಮಾದರಿಯಾಗಿವೆ. ಇದೇ ವೇಳೆ 2025 ರಲ್ಲಿ ಜಾರಿಗೆ ಬರಲಿರುವ ‘ದ್ರವ ತ್ಯಾಜ್ಯ ನಿರ್ವಹಣಾ ನಿಯಮಗಳ’ ಬಗ್ಗೆಯೂ ಅವರು ಮಾಹಿತಿ ನೀಡಿದರು. ಕುಡಿಯುವ ನೀರಿನ ಮೇಲಿನ ಅವಲಂಬನೆ ಕಡಿಮೆ ಮಾಡಲು ಸಂಸ್ಕರಿಸಿದ ನೀರಿನ ಮರುಬಳಕೆಯನ್ನು ಕಡ್ಡಾಯಗೊಳಿಸಲಾಗುವುದು. ಮರುಬಳಕೆ ಮಾಡದಿದ್ದರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ದಂಡ ವಿಧಿಸುವ ನಿಬಂಧನೆಗಳನ್ನು ಈ ಹೊಸ ಕಾನೂನಿನಲ್ಲಿ ತರಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಆಯಾ ಪ್ರದೇಶಕ್ಕೆ ತಕ್ಕಂತೆ ವ್ಯವಸ್ಥೆ ಅಗತ್ಯ
ಒಂದೇ ತಂತ್ರಜ್ಞಾನ ಎಲ್ಲರಿಗೂ ಆಗದು. ಎಲ್ಲ ಕಡೆ ಒಂದೇ ರೀತಿಯ ಯಂತ್ರ ಅಥವಾ ತಂತ್ರಜ್ಞಾನ ಬಳಸಲು ಸಾಧ್ಯವಿಲ್ಲ. ಆಯಾ ಪ್ರದೇಶ ಮತ್ತು ಅಗತ್ಯಕ್ಕೆ ತಕ್ಕಂತೆ ಸುಲಭವಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಕೇವಲ ಎಸ್ಟಿಪಿ ಅಳವಡಿಸಿದರೆ ಕೆಲಸ ಮುಗಿಯುವುದಿಲ್ಲ. ಅದನ್ನು ಸರಿಯಾಗಿ ವಿನ್ಯಾಸಗೊಳಿಸುವುದು ಮತ್ತು ದಿನನಿತ್ಯ ಅದರ ನಿರ್ವಹಣೆಯನ್ನು ಜವಾಬ್ದಾರಿಯುತವಾಗಿ ಮಾಡುವುದು ಮುಖ್ಯ. ಅಲ್ಲದೇ, ಎಸ್ಟಿಪಿಗಳನ್ನು ನಡೆಸಲು ನುರಿತ ಆಪರೇಟರ್ಗಳ ಅವಶ್ಯಕತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟರು.
ಸಂಸ್ಕರಿಸಿದ ನೀರಿನ ಬಳಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಸ್ಪಷ್ಟವಾದ ಒಂದು 'ನಗರ ಜಲ ನೀತಿ' ಜಾರಿಗೆ ಬರಬೇಕು. ನೀರಿನ ವಿಷಯವಾಗಿ ಜನರು ಹತ್ತಾರು ಕಚೇರಿಗಳಿಗೆ ಅಲೆಯುವ ಬದಲು, ಎಲ್ಲವನ್ನೂ ನಿರ್ವಹಿಸಲು ಒಂದೇ ಒಂದು ನೊಡೇಲ್ ಏಜೆನ್ಸಿ ಇರಬೇಕು. ನೀರಿನ ಸಂಸ್ಕರಣೆಯಲ್ಲಿ ಯಾಂತ್ರೀಕರಣ ಮತ್ತು ಗುಣಮಟ್ಟದ ಮಾನದಂಡಗಳನ್ನು ಕಡ್ಡಾಯಗೊಳಿಸಬೇಕು. ತ್ಯಾಜ್ಯ ನೀರನ್ನು ಮರುಬಳಕೆ ಮಾಡುವುದು ಕೇವಲ ಒಂದು ಆಯ್ಕೆಯಲ್ಲ, ಅದು ಅನಿವಾರ್ಯ. ಪ್ರತಿಯೊಂದು ನೀರಿನ ಹನಿಯನ್ನೂ ಮೌಲ್ಯೀಕರಿಸುವ ಮೂಲಕ ಮಾತ್ರ ನಾವು ಮುಂದಿನ ತಲೆಮಾರಿಗೆ ಸುರಕ್ಷಿತ ಬೆಂಗಳೂರನ್ನು ಬಿಟ್ಟುಕೊಡಲು ಸಾಧ್ಯ ಎಂದು ತಿಳಿಸಿದರು.

