
ಸಿವಿಲ್ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
ಬೆಂಗಳೂರು ಸಿವಿಲ್ ಕೋರ್ಟ್ಗೆ ಬಾಂಬ್ ಬೆದರಿಕೆ: ತಪಾಸಣೆ ಬಳಿಕ ಹುಸಿ ಇ-ಮೇಲ್ ಎಂದು ಖಚಿತ
ಕೋರ್ಟ್ ಆವರಣದಲ್ಲಿ ಸದ್ಯಕ್ಕೆ ಯಾವುದೇ ಸ್ಫೋಟಕ ವಸ್ತು ಕಂಡುಬಂದಿಲ್ಲ. ಯಾವುದೇ ಬಾಂಬ್ ಪತ್ತೆಯಾಗದ ಹಿನ್ನೆಲೆಯಲ್ಲಿ ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ಗೊತ್ತಾಗಿದೆ.
ನಗರದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಶುಕ್ರವಾರ ಇ-ಮೇಲ್ ಮೂಲಕ ಬೆದರಿಕೆ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಶ್ವಾನದಳ ತೀವ್ರ ತಪಾಸಣೆ ನಡೆಸಿದ್ದು, ಇದೊಂದು ಹುಸಿ ಬೆದರಿಕೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿವಿಲ್ ನ್ಯಾಯಾಲಯದ ಅಧಿಕೃತ ಇ-ಮೇಲ್ ಐಡಿಗೇ ಶುಕ್ರವಾರ ಈ ಬೆದರಿಕೆ ಸಂದೇಶ ಬಂದಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಹಲಸೂರು ಗೇಟ್ ಠಾಣಾ ಪೊಲೀಸರು, ಶ್ವಾನದಳದೊಂದಿಗೆ ನ್ಯಾಯಾಲಯದ ಆವರಣಕ್ಕೆ ಧಾವಿಸಿ, ಮೂಲೆ ಮೂಲೆಯನ್ನೂ ಪರಿಶೀಲಿಸಿದರು. ಗಂಟೆಗಳ ಕಾಲ ನಡೆದ ಶೋಧ ಕಾರ್ಯಾಚರಣೆಯ ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ, ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಅಧಿಕಾರಿಗಳು ಖಚಿತಪಡಿಸಿದರು.
ಸರಣಿ ಹುಸಿ ಬೆದರಿಕೆಗಳು:
ರಾಜ್ಯದಲ್ಲಿ ಇತ್ತೀಚೆಗೆ ಇಂತಹ ಹುಸಿ ಬಾಂಬ್ ಬೆದರಿಕೆಗಳ ಹಾವಳಿ ಹೆಚ್ಚಾಗಿದೆ. ಕಳೆದ ತಿಂಗಳಷ್ಟೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿ ಹಾಗೂ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಇದೇ ರೀತಿ ಇ-ಮೇಲ್ ಮೂಲಕ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು.
ಅದಕ್ಕೂ ಮುನ್ನ, ಬೆಂಗಳೂರಿನ ಆರ್.ಆರ್. ನಗರ ಮತ್ತು ಕೆಂಗೇರಿ ಸೇರಿದಂತೆ ಸುಮಾರು 40 ಖಾಸಗಿ ಶಾಲೆಗಳಿಗೆ `[email protected]` ಎಂಬ ಇ-ಮೇಲ್ ವಿಳಾಸದಿಂದ ಬೆದರಿಕೆ ಬಂದಿತ್ತು. ಈ ಎಲ್ಲಾ ಪ್ರಕರಣಗಳೂ ತಪಾಸಣೆಯ ನಂತರ ಹುಸಿ ಎಂದೇ ಸಾಬೀತಾಗಿದ್ದವು. ಈ ಸರಣಿ ಘಟನೆಗಳು ಪದೇ ಪದೇ ಆತಂಕ ಮೂಡಿಸುತ್ತಿದ್ದು, ಪೊಲೀಸರು ಇ-ಮೇಲ್ ಕಳುಹಿಸಿದವರ ಮೂಲ ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಿದ್ದಾರೆ.

