Bengaluru Airport Parking Fee Hike Deferred Temporarily Amid Operational Disruptions
x

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣ: ದುಬಾರಿ ಪಾರ್ಕಿಂಗ್ ಶುಲ್ಕ ಜಾರಿ ನಿರ್ಧಾರ ತಾತ್ಕಾಲಿಕವಾಗಿ ಮುಂದೂಡಿಕೆ

ದೇಶದಾದ್ಯಂತ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೂ ಈ ಆದೇಶವನ್ನು ಮುಂದೂಡಲಾಗಿದೆ ಎಂದು ಕೆಐಎಎಲ್ ವಕ್ತಾರರು ತಿಳಿಸಿದ್ದಾರೆ.


Click the Play button to hear this message in audio format

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು, ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ನಿಲ್ಲುವ ವಾಹನಗಳಿಗೆ ದುಬಾರಿ ಶುಲ್ಕ ವಿಧಿಸುವ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಸೋಮವಾರದಿಂದ (ಡಿ.8) ಜಾರಿಗೆ ಬರಬೇಕಿದ್ದ ಈ ನಿಯಮವನ್ನು ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯಲ್ಲಿನ ವ್ಯತ್ಯಯದಿಂದಾಗಿ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ವಿಮಾನ ನಿಲ್ದಾಣದ ಟರ್ಮಿನಲ್-1 ಮತ್ತು ಟರ್ಮಿನಲ್-2ರ ಪ್ರಯಾಣಿಕರ ಪಿಕ್‌ಅಪ್ ಮತ್ತು ಡ್ರಾಪ್‌ ವಲಯಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ನಿಯಮವನ್ನು ಪ್ರಸ್ತಾಪಿಸಲಾಗಿತ್ತು. ಇದರ ಅನ್ವಯ, ಖಾಸಗಿ ಕಾರುಗಳಿಗೆ ಮೊದಲ ಎಂಟು ನಿಮಿಷಗಳ ಕಾಲ ಉಚಿತ ಪ್ರವೇಶವಿರುತ್ತದೆ. ಆ ಸಮಯ ಮೀರಿದರೆ, 8 ರಿಂದ 13 ನಿಮಿಷಗಳ ನಿಲುಗಡೆಗೆ 150 ಮತ್ತು 13 ರಿಂದ 18 ನಿಮಿಷಗಳ ನಿಲುಗಡೆಗೆ 300 ರೂಪಾಯಿ ಶುಲ್ಕ ವಿಧಿಸಲಾಗುವುದು ಎಂದು ಪ್ರಕಟಿಸಲಾಗಿತ್ತು. 18 ನಿಮಿಷಗಳಿಗಿಂತ ಹೆಚ್ಚು ಕಾಲ ವಾಹನ ನಿಲ್ಲಿಸಿದರೆ, ಅದನ್ನು ಸಮೀಪದ ಪೊಲೀಸ್ ಠಾಣೆಗೆ ಟೋಯಿಂಗ್ ಮಾಡಲಾಗುವುದು ಎಂದೂ ಎಚ್ಚರಿಸಲಾಗಿತ್ತು.

ಜೋರು ವಿರೋಧ

ಈ ಹೊಸ ಶುಲ್ಕ ನೀತಿಗೆ ಟ್ಯಾಕ್ಸಿ ಚಾಲಕರಿಂದ ಮತ್ತು ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. "ಈ ನಿರ್ಧಾರವು ಚಾಲಕರಿಗೆ ಅನ್ಯಾಯ ಮಾಡಲಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು. ಈ ನಿಯಮ ಜಾರಿಗೆ ಬರಲು ಬಿಡುವುದಿಲ್ಲ" ಎಂದು ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ಜಿ. ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೆಐಎಎಲ್‌ಗೆ ಪತ್ರ ಬರೆದಿದ್ದು, "ಈ ನಿರ್ಧಾರವು ಕ್ಯಾಬ್ ಚಾಲಕರ ಮೇಲೆ ತೀವ್ರ ಆರ್ಥಿಕ ಹೊರೆ ಉಂಟುಮಾಡುತ್ತದೆ. ಆದ್ದರಿಂದ, ಈ ಶುಲ್ಕ ವಿಧಿಸುವ ನಿರ್ಧಾರವನ್ನು ಹಿಂಪಡೆಯಬೇಕು" ಎಂದು ಆಗ್ರಹಿಸಿದ್ದಾರೆ.

ದೇಶದಾದ್ಯಂತ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೂ ಈ ಆದೇಶವನ್ನು ಮುಂದೂಡಲಾಗಿದೆ ಎಂದು ಕೆಐಎಎಲ್ ವಕ್ತಾರರು ತಿಳಿಸಿದ್ದಾರೆ. ಒಂದೆರಡು ದಿನಗಳಲ್ಲಿ ಪರಿಷ್ಕೃತ ಆದೇಶ ಪ್ರಕಟವಾಗುವ ನಿರೀಕ್ಷೆಯಿದ್ದು, ಡಿಸೆಂಬರ್ 11 ಅಥವಾ 12ರಿಂದ ಈ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಸದ್ಯಕ್ಕೆ ಶುಲ್ಕ ಜಾರಿಯನ್ನು ಮುಂದೂಡಲಾಗಿದ್ದರೂ, ಚಾಲಕರ ವಿರೋಧ ಮತ್ತು ಸರ್ಕಾರದ ಒತ್ತಡದ ನಡುವೆ ಕೆಐಎಎಲ್ ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಸದ್ಯದ ಕೌತುಕ.

Read More
Next Story