ದೇವರ ಹಸುಗಳಿಗಾಗಿ ಬದುಕನ್ನೇ ಮುಡಿಪಿಟ್ಟ ಬುಡಕಟ್ಟು ಬೇಡ ನಾಯಕ ಸಮುದಾಯ
ಇದು ಚಿತ್ರದುರ್ಗ ಜಿಲ್ಲೆಯ ನನ್ನಿವಾಳದ ಬೊಮ್ಮದೇವರಹಟ್ಟಿಯ ದೇವರ ಹಸು( ಎತ್ತು) ಗಳನ್ನು ತಲಾತಲಾಂತರದಿಂದ ಸಾಕುತ್ತ ಬಂದಿರುವ ಬುಡಕಟ್ಟು ಬೇಡ ನಾಯಕ ಸಮುದಾಯ ಇಂದಿಗೂ ತನ್ನ ಪರಂಪರೆಯನ್ನು ಚಾಚೂ ತಪ್ಪದೆ ಅನುಸರಿಸುತ್ತಿದೆ
ಆತನ ಹೆಸರು ಬೊಮ್ಮ ಜೋಗಿ. ಆತನದು ಕಿಲಾರಿ ಕಾಯಕ. ಬೆಳಿಗ್ಗೆ ಎದ್ದು ಹೊಟ್ಟೆ ತುಂಬ ರಾಗಿ ಮುದ್ದೆ ತಿಂದು ಹಸುಗಳನ್ನು ಮೇಯಿಸಲು ಹೋದರೆ ವಾಪಾಸು ಬರುವುದು ಸೂರ್ಯ ಮುಳುಗಿದ ನಂತರವೇ. ಬೆಳಿಗ್ಗೆ ತಿಂದ ರಾಗಿ ಮುದ್ದೆಯೇ ಗಟ್ಟಿ; ಮಧ್ಯಾಹ್ನದ ಊಟವಿಲ್ಲ. ಹೀಗೆ ಮುನ್ನೂರಕ್ಕೂ ಹೆಚ್ಚು ಹಸುಗಳನ್ನು ಮೇಯಿಸಲು ಐದಾರು ಮಂದಿ ಕಿಲಾರಿಗಳು ತಮ್ಮ ಬದುಕನ್ನೇ ಮುಡುಪಿಟ್ಟಿದ್ದಾರೆ.
ಇದು ಚಿತ್ರದುರ್ಗ ಜಿಲ್ಲೆಯ ನನ್ನಿವಾಳದ ಬೊಮ್ಮದೇವರಹಟ್ಟಿಯ ದೇವರ ಹಸು(ಎತ್ತು)ಗಳನ್ನು ತಲಾತಲಾಂತರದಿಂದ ಸಾಕುತ್ತ ಬಂದಿರುವ ಬುಡಕಟ್ಟು ಬೇಡ ನಾಯಕ ಸಮುದಾಯದ ನಿತ್ಯದ ಕಾಯಕ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು, ನೆರೆಯ ಕೂಡ್ಲಿಗಿಯ ಸುತ್ತಮುತ್ತ ದೇವರ ಹಸುಗಳನ್ನು ಸಾಕುತ್ತ ಹಾಗೂ ರಕ್ಷಣೆ ಮಾಡಿಕೊಂಡು ಬಂದಿರುವ ಬುಡಕಟ್ಟು ಬೇಡ ನಾಯಕ ಸಮುದಾಯದ ನೂರಾರು ಹಟ್ಟಿಗಳಿವೆ. ಅದರಲ್ಲಿ ನನ್ನಿವಾಳದ ಬೊಮ್ಮದೇವರ ಹಟ್ಟಿಯೂ ಒಂದು. ಈ ಸಮುದಾಯ ನೂರಾರು ವರ್ಷಗಳಿಂದ ದೇಶಿಯ ಗೋ ಸಂಪತ್ತನ್ನು ರಕ್ಷಿಸುತ್ತಾ ಬಂದಿದೆ ಮತ್ತು ಅದಕ್ಕಾಗಿಯೇ ಜೀವನವನ್ನೇ ಮುಡುಪ್ಪಾಗಿಟ್ಟಿದೆ.
ಶ್ರೀಶೈಲಂನಿಂದ ವಲಸೆ ಬಂದ ಬುಡಕಟ್ಟು
ಬೇಡ ನಾಯಕ ಸಮುದಾಯದ ದೊರೈ ನಾಗರಾಜ್ ಅವರ ಪ್ರಕಾರ "ನೂರಾರು ವರ್ಷಗಳಿಂದ ನಮ್ಮ ಸಮುದಾಯದವರು ದೇವರ ಹಸುಗಳ ಹೆಸರಿನಲ್ಲಿ ಗೋ ರಕ್ಷಣೆಯ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ನಮ್ಮ ಸಮುದಾಯದ ಮೂಲ ಆಂದ್ರಪ್ರದೇಶದ ಶ್ರೀಶೈಲಂ. ಈಗಲೂ ನಮ್ಮ ಪೂರ್ವಜರ ಸಂತತಿ ಅಲ್ಲಿ ಗೋ ರಕ್ಷಣೆ ಕಾಯಕ ಮುಂದುವರಿಸಿದೆ. ನಮ್ಮ ಹಿರಿಯರು ಊರಿಂದ ಊರಿಗೆ ವಲಸೆ ಬಂದು ಕೊನೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಸಹಿತ ಹಲವಾರು ಭಾಗಗಳಲ್ಲಿ ಬೀಡುಬಿಟ್ಟಿದ್ದಾರೆ. ದೇವರ ಹಸುಗಳ ಹೆಸರಿನಲ್ಲಿ ಗೋ ರಕ್ಷಣೆ ಮಾಡುವುದರಲ್ಲಿಯೇ ನಮ್ಮ ಸಮುದಾಯ ಜೀವನ ಸಾರ್ಥಕತೆ ಕಂಡುಕೊಂಡಿದೆ" ಎನ್ನುತ್ತಾರೆ. "ದೇವರ ಹಸುಗಳ ಹೆಸರಿನ ಗೋ ರಕ್ಷಣೆಯ ಪವಿತ್ರ ಕಾರ್ಯಕ್ಕೆ ಐನೂರು ವರ್ಷಗಳಿಗೂ ಹೆಚ್ಚು ಇತಿಹಾಸವಿದೆ" ಎಂದು ನಾಗರಾಜ್ ಹೇಳುತ್ತಾರೆ.
"ದೇವರ ಹಸುಗಳ ಕಾಯಕ ಮಾಡುವ ಬುಡಕಟ್ಟು ಸಮುದಾಯದಲ್ಲಿ ದೊರೈ ಹೆಸರಿನ ನಾಯಕ ಇರುತ್ತಾನೆ. ಅವರ ಆಣತಿಯಂತೆ ಈ ಸಮುದಾಯದ ಎಲ್ಲಾ ಸಂಪ್ರದಾಯಗಳು ನಡೆಯುತ್ತವೆ. ದೊರೈ ಹೆಸರಿನ ನಾಯಕ ಒಂದೊಂದು ಜವಾಬ್ದಾರಿಯನ್ನು ಒಬ್ಬೊಬ್ಬರಿಗೆ ವಹಿಸಿ ದಿನನಿತ್ಯದ ಕಾಯಕ ಸುಗಮವಾಗಿ ನಡೆಸಿಕೊಂಡು ಹೋಗುವಂತೆ ಮೇಲ್ವಿಚಾರಣೆ ನಡೆಸುತ್ತಾರೆ" ಎಂದು ದೊರೈ ನಾಗರಾಜ್ ಹೇಳುತ್ತಾರೆ.
ವಾಣಿಜ್ಯ ಚಟುವಟಿಕೆ ಇಲ್ಲ
ನಿಮಗೆ ಆಶ್ಚರ್ಯ ಆಗಬಹುದು, ದೇವರ ಹಸುಗಳ ಹೆಸರಿನಲ್ಲಿ ಸಾವಿರಾರು ಹಸುಗಳನ್ನು ಸಾಕುತ್ತಿರುವ ಈ ಬುಡಕಟ್ಟು ಸಮುದಾಯ ಈ ಹಸುಗಳಿಂದ ಅಥವಾ ಅದರ ಉತ್ಪನ್ನಗಳಿಂದ ಯಾವುದೇ ರೀತಿಯ ವಾಣಿಜ್ಯ ಅಥವಾ ಹಣಕಾಸಿನ ಲಾಭ ಪಡೆಯುತ್ತಿಲ್ಲ. ಹಸುವಿನ ಹಾಲು ಮಾರಾಟ ಅಥವಾ ಅದರ ಉಪ ಉತ್ಪನ್ನ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಮಾಡಿ ಮಾರಿ ಹಣಗಳಿಸುವುದು ಸಹಿತ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆ ನಡೆಯುವುದಿಲ್ಲ ಹಾಲು ಸಂಪೂರ್ಣವಾಗಿ ಕರುವಿಗೆ ಮೀಸಲಿಡಲಾಗುತ್ತದೆ. ಹಸುವಿನ ಗಂಜಲು ಸಗಣಿಯನ್ನು ಮಾರಿ ಹಣಗಳಿಸುವ ಯೋಚನೆಯೂ ಇವರಿಗೆ ಇಲ್ಲ. ದೇವರ ಹೆಸರಿನಲ್ಲಿ ಬಿಟ್ಟ ಹಸುಗಳಿಂದ ಯಾವುದೇ ರೀತಿಯ ವ್ಯಾಪಾರ ಮಾಡಬಾರದು ಎಂಬುದೇ ಈ ಬುಡಕಟ್ಟು ಸಮುದಾಯದ ಮೂಲಮಂತ್ರವಾಗಿದೆ.
ನೂರಾರು ಸಂಖ್ಯೆಯ ದೇವರ ಹಸುಗಳು ಉಳಿಸಲು ಊರ ಹೊರಗಡೆ ದೊಡ್ಡ ಕೊಟ್ಟಿಗೆಯ ಸೌಲಭ್ಯವಿದೆ. ಇತ್ತೀಚೆಗೆ ಈ ಬಡಕಟ್ಟು ಸಮುದಾಯದವರು ದೇವರ ಹಸುಗಳ ಹೆಸರಿನಲ್ಲಿ ಒಂದು ಟ್ರಸ್ಟ್ ನೋಂದಾಯಿಸಿದ್ದು, ದಾನಿಗಳು ಹಾಗೂ ಸರ್ಕಾರದಿಂದ ನೆರವು ಪಡೆದು ಆ ಹಣದಿಂದ ಹಸುಗಳ ನಿರ್ವಹಣೆ ಅವುಗಳಿಗೆ ಹಿಂಡಿ, ಮೇವು ಒದಗಿಸುವುದು ಜೊತೆಗೆ ಕಾಯಿಲೆ ಬಿದ್ದ ಹಸುಗಳಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಿದ್ದಾರೆ.
ನೂರಾರು ಹಸುಗಳನ್ನು ಸಾಕಾಣಿಕೆ ಮಾಡುವ ಈ ಬುಡಕಟ್ಟು ಸಮುದಾಯ, ಹಸು ಕರುಗಳಿಗೆ ರೋಗ ರುಜಿನಗಳು ಬಂದರೆ ನಾಟಿ ಔಷಧಿ ಮೂಲಕ ಗುಣ ಪಡಿಸುತ್ತಿದ್ದರು. ಈಗ ಆಧುನಿಕ ಪದ್ಧತಿಯ ಚಿಕಿತ್ಸೆ ಲಭ್ಯವಿರುವುದರಿಂದ ಅದರ ಸದುಪಯೋಗ ಪಡೆಯುತ್ತಿದ್ದಾರೆ.
ಕಿಲಾರಿಗಳು ಯಾರು?
ದೇವರ ಹಸುಗಳನ್ನು ಮೇಯಿಸುವವರನ್ನು ಕಿಲಾರಿಗಳು ಎಂದು ಕರೆಯುತ್ತಾರೆ. ಹಸುಗಳನ್ನು ಊರ ಹೊರಗಿನ ಹುಲ್ಲುಗಾವಲಿಗೆ ಕರೆದುಕೊಂಡು ಹೋಗಿ ಮೇಯಿಸುವುದು ಅವುಗಳಿಗೆ ಕಾಲ ಕಾಲಕ್ಕೆ ಹಿಂಡಿ, ನೀರು ಒದಗಿಸುವುದು ಕಿಲಾರಿಗಳ ಪ್ರಥಮ ಆದ್ಯತೆಯಾಗಿದೆ.
ಈ ಕಿಲಾರಿಗಳು ಎಷ್ಟು ಬದ್ದತೆಯಿಂದ ತಮ್ಮ ಕಾಯಕ ನೆರೆವೇರಿಸುತ್ತಾರೆ ಎಂದರೆ ಬೆಳಿಗ್ಗೆ ರಾಗಿ ಮುದ್ದೆ ತಿಂದು ಹಸುವನ್ನು ಮೇಯಿಸಲು ಹೋದವರು ವಾಪಾಸ್ ಬರುವುದು ಸೂರ್ಯ ಪಡುವಣ ದಿಕ್ಕಿನಲ್ಲಿ ಮುಳುಗಲು ಆರಂಭಿಸಿದ ನಂತರ. ದೊಡ್ಡಿಗೆ ಬಂದ ಹಸುಗಳಿಗೆ ನೀರು ಹಿಂಡಿ ನೀಡಿದ ನಂತರ ತಾವು ಪ್ರಸಾದ ಸೇವಿಸುತ್ತಾರೆ. ಈ ಕಿಲಾರಿಗಳಿಗೆ ಯಾವುದೇ ರೀತಿಯ ವೇತನವಿಲ್ಲ ಬುಡಕಟ್ಟು ಸಮುದಾಯದವರು ಇವರಿಗೆ ವರ್ಷಕ್ಕೂಂದು ಕಂಬಳಿ ನೀಡುತ್ತಾರೆ. ಅಗತ್ಯಕ್ಕೆ ತಕ್ಕ ದವಸ ಧಾನ್ಯಗಳನ್ನು ನೀಡುತ್ತಾರೆ. ಕಿಲಾರಿಗಳ ಮನೆಯಲ್ಲಿ ನಾಲ್ವರು ಮಕ್ಕಳಿದ್ದರೆ ಅವರಲ್ಲಿ ಒಬ್ಬ ತಮ್ಮ ಹಿರಿಯರ ಕಿಲಾರಿ ಕಾಯಕ ಮುಂದುವರಿಸಬೇಕು, ಉಳಿದವರು ಬೇರೆ ವೃತ್ತಿ ಕೈಗೊಳ್ಳಬಹುದು ಎಂದು ಈ ಸಮುದಾಯದ ಮುಖಂಡ ದೊರೈ ಹೇಳುತ್ತಾರೆ.
ಈ ಸಮುದಾಯ ಮುಖಂಡ ದೊರೈಯಾಗಲಿ, ಕಿಲಾರಿಗಳಾಲಿ ತಮ್ಮ ಜೀವಮಾನ ಪೂರ್ತಿ ಹೋಟೆಲ್‌ಗಳ ಸಹಿತ ಹೊರಗಿನ ಆಹಾರ ಸೇವಿಸುವುದಿಲ್ಲ. ಕಾರ್ಯನಿಮಿತ ಪಟ್ಟಣಗಳಿಗೆ ಹೋದರೆ ಕೇವಲ ಹಣ್ಣುಗಳನ್ನು ಮಾತ್ರ ಸೇವಿಸುತ್ತಾರೆ. ನಂತರ ವಾಪಸ್ ಹಟ್ಟಿಗೆ ಬಂದು ಮನೆಯ ಆಹಾರವನ್ನೇ ಸೇವಿಸುತ್ತಾರೆ.
ಗೋವುಗಳ ಮಧ್ಯೆಯೇ ನಿದ್ದೆ!
ಈ ಬುಡಕಟ್ಟು ಸಂಪ್ರದಾಯದ ಇನ್ನೊಂದು ವಿಶೇಷ ಆಚರಣೆ ಎಂದರೆ ಹರಕೆ ತೀರಿಸಲು ಅಥವಾ ಯಾರಿಗಾದರೂ ಜ್ವರ ಸಹಿತ ಸಣ್ಣ ಪುಟ್ಟ ಕಾಯಿಲೆಗಳು ಬಂದು ಅದರಿಂದ ಗುಣ ಮುಖರಾಗಲು ನೂರಾರು ಗೋವುಗಳ ನಡುವೆಯೇ ಅಹೋರಾತ್ರಿ ಮಲಗುತ್ತಾರೆ. ಪ್ರತಿ ಭಾನುವಾರ ರಾತ್ರಿ ಈ ಆಚರಣೆ ನಡೆಯುತ್ತದೆ. ಭಾನುವಾರ ಸಂಜೆ ಗೋವುಗಳು ಹಟ್ಟಿಗೆ ಬಂದ ನಂತರ ಅವುಗಳಿಗೆ ʼಒಡಪುʼ ಮಾಡಲಾಗುತ್ತದೆ. ಅಂದರೆ ಗೋವುಗಳ ನಡುವೆ ಕಟ್ಟಿಗೆಗಳಿಂದ ಚಿಕ್ಕ ಬೆಂಕಿ ಮಾಡಿ ಬುಡಕಟ್ಟು ಸಂಪ್ರದಾಯದಂತೆ ಪೂಜೆ ಮಾಡಲಾಗುತ್ತದೆ. ನಂತರ ಹರಕೆ ತೀರಿಸಲು ಬಂದವರು ತಾವು ಮನೆಯಿಂದ ಕಟ್ಟಿಕೊಂಡು ಬಂದ ರೊಟ್ಟಿಗಳನ್ನು ಹಸು, ಎತ್ತುಗಳಿಗೆ ತಿನ್ನಿಸಿ ಹಸುಗಳ ಮಧ್ಯೆಯೇ ರಾತ್ರಿ ಮಲಗುತ್ತಾರೆ. ಬೆಳಿಗ್ಗೆ ಎದ್ದು ಕೊಟ್ಟಿಗೆಯನ್ನು ಸ್ವಚ್ಚಗೊಳಿಸಿ ಪೂಜೆ ಮಾಡಿದ ನಂತರ ಹಾಲು, ಮೊಸರಿನಿಂದ ತಯಾರಿಸಿದ ಪ್ರಸಾದ ಸೇವಿಸುತ್ತಾರೆ.
ಮ್ಯಾಸ ಮಂಡಳದಲ್ಲಿ ದೇವರ ಹಸುಗಳಿಗೆ ಯುಗಾದಿ, ದೀಪಾವಳಿ, ಶೂನ್ಯದ ಮಾರಿಯಮ್ಮ ಜಾತ್ರೆಯ ಸಮಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿವರ್ಷ 60-70 ಕರುಗಳ ಜನನವಾಗುತ್ತದೆ. ತಾಯಿ ಹಸುವಿನ ಹಾಲನ್ನು ಸಂಪೂರ್ಣವಾಗಿ ಕರುಗಳಿಗೆ ನೀಡಲಾಗುತ್ತದೆ.
ಒಟ್ಟಾರೆಯಾಗಿ ನೂರಾರು ವರ್ಷಗಳಿಂದ ಬುಡಕಟ್ಟು ಸಂಸ್ಕೃತಿಯ ದೇವರ ಹಸುಗಳ ದೇಶಿಯ ತಳಿಗಳನ್ನು ಸಾಕುತ್ತಾ ಅವುಗಳ ಸಂತತಿಯ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವ ಬೇಡ ನಾಯಕ ಬುಡಕಟ್ಟು ಸಮುದಾಯದ ಕಾಯಕ ಅಪರೂಪದ್ದು.