
ಆಪರೇಷನ್ ಸಿಂಧೂರ್" ಇನ್ನೂ ಮುಗಿದಿಲ್ಲ; ಸೇನಾ ಮುಖ್ಯಸ್ಥರ ಖಡಕ್ ವಾರ್ನಿಂಗ್
ಆಪರೇಷನ್ ಸಿಂಧೂರ್ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಗಣನೀಯವಾಗಿ ತಗ್ಗಿವೆ. 2025ರ ಜನವರಿಯಿಂದ ಈವರೆಗೆ 31 ಉಗ್ರರನ್ನು ಹತ್ಯೆ ಮಾಡಲಾಗಿದೆ.
ಭಾರತೀಯ ಸೇನೆಯು ಉಗ್ರರ ವಿರುದ್ಧ ಕೈಗೊಂಡಿದ್ದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯು ಇನ್ನೂ ಚಾಲ್ತಿಯಲ್ಲಿದೆ. ಗಡಿ ಭಾಗದಲ್ಲಿ ಯಾವುದೇ ರೀತಿಯ ದುಸ್ಸಾಹಸಕ್ಕೆ ಕೈಹಾಕಿದರೆ ಭಾರತ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಎಚ್ಚರಿಸಿದ್ದಾರೆ.
ಮಂಗಳವಾರ (ಜ.13) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನೀಡಿದ ಪ್ರತ್ಯುತ್ತರವು ದೇಶದ ರಕ್ಷಣಾ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಇದು ಕೇವಲ ಪ್ರತೀಕಾರವಾಗಿರದೆ, ಭಯೋತ್ಪಾದನೆಯ ವಿರುದ್ಧದ ಆಯಕಟ್ಟಿನ ಹೋರಾಟವಾಗಿದೆ ಎಂದು ಹೇಳಿದ್ದಾರೆ.
22 ನಿಮಿಷಗಳ ಮಿಂಚಿನ ದಾಳಿ
ಕಳೆದ ಮೇ 7 ರಂದು ಆರಂಭವಾದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯು ಅತ್ಯಂತ ಯೋಜಿತ ಮತ್ತು ನಿಖರವಾಗಿತ್ತು ಎಂದು ಸೇನಾ ಮುಖ್ಯಸ್ಥರು ವಿವರಿಸಿದ್ದಾರೆ. ಕಾರ್ಯಾಚರಣೆಯ ಆರಂಭದ 22 ನಿಮಿಷಗಳು ನಿರ್ಣಾಯಕವಾಗಿದ್ದವು. ಈ ಕಾರ್ಯಾಚರಣೆಯು ಮೇ 10ರವರೆಗೆ ಸುಮಾರು 88 ಗಂಟೆಗಳ ಕಾಲ ನಡೆಯಿತು. ಇದರ ಪರಿಣಾಮವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಸೇರಿದಂತೆ 9 ಪ್ರಮುಖ ಉಗ್ರರ ನೆಲೆಗಳನ್ನು ಗುರಿಯಾಗಿಸಲಾಗಿತ್ತು. ಅದರಲ್ಲಿ 7 ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ.
ಪಹಲ್ಗಾಮ್ ದಾಳಿಗೆ ತಕ್ಕ ಶಾಸ್ತಿ
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಕಾರ್ಯಾಚರಣೆ ನಡೆಯಿತು. 'ಆಪರೇಷನ್ ಮಹಾದೇವ್' ಅಡಿಯಲ್ಲಿ ದಾಳಿಯ ರೂವಾರಿಗಳಾದ ಸುಲೈಮಾನ್, ಹಮ್ಜಾ ಅಫ್ಘಾನಿ ಮತ್ತು ಜಿಬ್ರಾನ್ ಎಂಬ ಮೂವರು ಉಗ್ರರನ್ನು ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ
ಮೂರು ಪಡೆಗಳ ಅದ್ಭುತ ಸಮನ್ವಯ
ಈ ಕಾರ್ಯಾಚರಣೆಯ ಯಶಸ್ಸಿಗೆ ಸೇನೆ, ವಾಯುಪಡೆ ಮತ್ತು ಗುಪ್ತಚರ ಇಲಾಖೆಗಳ ನಡುವಿನ ಸಮನ್ವಯವೇ ಕಾರಣ ಎಂದು ಜನರಲ್ ದ್ವಿವೇದಿ ಶ್ಲಾಘಿಸಿದ್ದಾರೆ. ಅತ್ಯುನ್ನತ ರಾಜಕೀಯ ನಾಯಕತ್ವದಿಂದ ಸ್ಪಷ್ಟ ನಿರ್ದೇಶನ ಮತ್ತು ಪೂರ್ಣ ಸ್ವಾತಂತ್ರ್ಯ ಸಿಕ್ಕಿದ್ದರಿಂದ ಈ ಯಶಸ್ಸು ಸಾಧ್ಯವಾಯಿತು. ಈ ಕಾರ್ಯಾಚರಣೆಯಲ್ಲಿ ಭಾರತದ ಕಡೆಯಿಂದ ಒಬ್ಬನೇ ಒಬ್ಬ ಸೈನಿಕನ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದ್ದಾರೆ.
ಉಗ್ರರ ನೇಮಕಾತಿ ಇಳಿಕೆ
ಆಪರೇಷನ್ ಸಿಂಧೂರ್ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಗಣನೀಯವಾಗಿ ತಗ್ಗಿವೆ. 2025ರ ಜನವರಿಯಿಂದ ಈವರೆಗೆ 31 ಉಗ್ರರನ್ನು ಹತ್ಯೆ ಮಾಡಲಾಗಿದೆ. ಅದರಲ್ಲಿ ಶೇ.65ರಷ್ಟು ಪಾಕಿಸ್ತಾನ ಮೂಲದವರಾಗಿದ್ದಾರೆ. ಕಣಿವೆ ರಾಜ್ಯದಲ್ಲಿ ಸ್ಥಳೀಯ ಯುವಕರನ್ನು ಉಗ್ರ ಸಂಘಟನೆಗಳಿಗೆ ನೇಮಕಾತಿ ಮಾಡಿಕೊಳ್ಳುವುದು ಬಹುತೇಕ ಶೂನ್ಯಕ್ಕೆ ಇಳಿದಿದೆ. ಅಮರನಾಥ ಯಾತ್ರೆ ಶಾಂತಿಯುತವಾಗಿ ನಡೆದಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದು ಬದಲಾವಣೆಯ ಸಂಕೇತವಾಗಿದೆ ಎಂದು ಸೇನಾ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

