ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ | ರೇವಣ್ಣ-ಭವಾನಿ ಮಧ್ಯೆ ಬಿರುಕು?
x

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ | ರೇವಣ್ಣ-ಭವಾನಿ ಮಧ್ಯೆ ಬಿರುಕು?


ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರು ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನೇರವಾಗಿ ಪದ್ಮನಾಭ ನಗರದಲ್ಲಿರುವ ತಮ್ಮ ತಂದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸಕ್ಕೆ ತೆರಳಿ ಅಲ್ಲಿಯೇ ವಾಸವಾಗಿದ್ದಾರೆ. ಮೂರು ದಿನ ಕಳೆದರೂ ಕೂಡ ರೇವಣ್ಣ ತಮ್ಮ ಪತ್ನಿ ಭವಾನಿಯನ್ನು ಭೇಟಿ ಮಾಡದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಲೈಂಗಿಕ ಹಗರಣ ಬೆಳಕಿಗೆ ಬಂದ ಬಳಿಕ ಪ್ರಜ್ವಲ್‌ ದೇಶ ಬಿಟ್ಟು ಪರಾರಿಯಾದರು. ಆ ಬಳಿಕ ರೇವಣ್ಣ ಹಾಗೂ ಪತ್ನಿ ಭವಾನಿ ಅವರು ಹೊಳೆನರಸೀಪುರದ ಮನೆಯಲ್ಲಿ ಹೋಮ ಹವನಗಳನ್ನು ಮಾಡಿಕೊಂಡು ಇದ್ದರು. ಆ ವೇಳೆ ರೇವಣ್ಣ ವಿರುದ್ಧ ಸಂತ್ರಸ್ತೆಯ ಅಪಹರಣದ ಆರೋಪದ ಮೇಲೆ ಕೆಆರ್‌ ನಗರದಲ್ಲಿ ಪ್ರಕರಣ ದಾಖಲಾಯಿತು. ಆ ಬಳಿಕ ರೇವಣ್ಣ ಬಂಧನದ ಭೀತಿಯಿಂದ ದೇವೇಗೌಡರ ಮನೆ ಸೇರಿಕೊಳ್ಳುತ್ತಾರೆ.

"ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿಸಲು ಮಗನಿಗೆ ಕುಮ್ಮಕ್ಕು ನೀಡಿದ್ದು ಸೊಸೆ ಭವಾನಿಯೇ ಎಂದು ದೊಡ್ಡಗೌಡರು ಕೂಡ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ರೇವಣ್ಣ ಕೂಡ ಇದೇ ಕಾರಣಕ್ಕೆ ತಮ್ಮ ಪತ್ನಿ ಭವಾನಿಯಿಂದ ದೂರವೇ ಉಳಿದಿದ್ದಾರೆ. ಇದೀಗ ಬಂಧನದಿಂದ ಬಿಡುಗಡೆಯಾದ ಬಳಿಕವೂ ರೇವಣ್ಣ ತಮ್ಮ ಪತ್ನಿಯನ್ನು ಭೇಟಿ ಮಾಡಿಯೇ ಇಲ್ಲ" ಎನ್ನುತ್ತವೆ ಕುಟುಂಬದ ಮೂಲಗಳು.

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು, ಪ್ರಕರಣದ ಎ 2 ಆರೋಪಿ ಸತೀಶ್‌ ಬಾಬಣ್ಣ ಅವರ ಮೊಬೈಲ್‌ ಪರಿಶೀಲಿಸಿದಾಗ ಭವಾನಿ ಅವರಿಂದ ಸಾಕಷ್ಟು ಕರೆಗಳು ಬಂದಿರುವುದು ತನಿಖೆಯಲ್ಲಿ ತಿಳಿದುಬರುತ್ತದೆ. ಅಪಹರಣ ಪ್ರಕರಣದಲ್ಲಿ ಭವಾನಿ ಅವರ ಕೈವಾಡ ಇರುವ ಅನುಮಾನದಿಂದಾಗಿ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಎರಡು ನೋಟೀಸ್‌ ನೀಡಿದ್ದಾರೆ.

ರೇವಣ್ಣ ಜೈಲು ಸೇರಿದ ಬಳಿಕ ಭವಾನಿ ಅವರು ಏಕಾಂಗಿಯಾಗಿದ್ದು, ಸಾಲಿಗ್ರಾಮ, ಅಥವಾ ಹೊಳೆನರಸೀಪುರದಲ್ಲಿ ಉಳಿದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಸನದ ಪೆನ್‌ಡ್ರೈವ್ ಪ್ರಕರಣ ಗೌಡರ ಕುಟುಂಬವನ್ನೂ ಇದೀಗ ಮನೆಯೊಂದು ಮೂರು ಬಾಗಿಲು ಎನ್ನುವಂತೆ ಮಾಡಿದೆ ಎಂಬ ಮಾತುಗಳು ಹಾಸನ ಮತ್ತು ಹೊಳೆನರಸೀಪುರದಲ್ಲಿ ಕೇಳಿಬರುತ್ತಿವೆ.

Read More
Next Story