Job News | Have you completed your degree? There is a golden opportunity at Union Bank!
x

ಸಾಂದರ್ಭಿಕ ಚಿತ್ರ

Job News | ಪದವಿ ಪೂರ್ಣಗೊಳಿಸಿದ್ದರೆ ಯೂನಿಯನ್ ಬ್ಯಾಂಕ್‌ನಲ್ಲಿದೆ ಉದ್ಯೋಗ ಅವಕಾಶ!

ಒಟ್ಟು 1,865 ಹುದ್ದೆಗಳಿದ್ದು, ಸಾಮಾನ್ಯವರ್ಗಕ್ಕೆ 823, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 447, ಪರಿಶಿಷ್ಟ ಜಾತಿ 289, ಆರ್ಥಿಕವಾಗಿ ದುರ್ಬಲ ವರ್ಗಕ್ಕೆ 175 ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 131 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.


Click the Play button to hear this message in audio format

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ 1,865 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. 1961ರ ಅಪ್ರೆಂಟಿಸ್ ಕಾಯ್ದೆಯಡಿ ನಡೆಯಲಿರುವ ಈ ನೇಮಕಾತಿಯು ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಯುವ ಪದವೀಧರರಿಗೆ ಉತ್ತಮ ಅವಕಾಶವಾಗಿದ್ದು, ಅರ್ಜಿ ಸಲ್ಲಿಸಲು ಮೇ 19 ಕೊನೆಯ ದಿನಾಂಕವಾಗಿದೆ.

ಈ ಅಪ್ರೆಂಟಿಸ್‌ಶಿಪ್ ಒಂದು ವರ್ಷದ ಅವಧಿಯ ತರಬೇತಿಯಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ವ್ಯವಹಾರಗಳು, ಉತ್ಪನ್ನಗಳು ಮತ್ತು ಕಾರ್ಯಾಚರಣೆಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಇದು ಕಾಯಂ ಉದ್ಯೋಗವಲ್ಲ ಎಂಬುದನ್ನು ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ದೇಶಾದ್ಯಂತ ಒಟ್ಟು 1,865 ಹುದ್ದೆಗಳಿದ್ದು, ಸಾಮಾನ್ಯ ವರ್ಗಕ್ಕೆ 823, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 447, ಪರಿಶಿಷ್ಟ ಜಾತಿ 289, ಆರ್ಥಿಕವಾಗಿ ದುರ್ಬಲ ವರ್ಗಕ್ಕೆ 175 ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 131 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.

ಯಾವುದೇ ವಿಭಾಗದಲ್ಲಿ ಏಪ್ರಿಲ್ 1, 2022 ರ ನಂತರ ಪದವಿ ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷದೊಳಗಿರಬೇಕು. ಮೀಸಲಾತಿ ನಿಯಮಾನುಸಾರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ವಿನಾಯಿತಿ ನೀಡಲಾಗಿದೆ.

ಮಾಸಿಕ ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಕೆಲಸದ ಸ್ಥಳದ ಆಧಾರದ ಮೇಲೆ ಸ್ಟೈಫಂಡ್ ನೀಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ನೇಮಕವಾದವರಿಗೆ 15,000 ರೂ. ನಗರ ಪ್ರದೇಶದಲ್ಲಿ ನೇಮಕವಾಗುವವರಿಗೆ 18,000 ರೂ. ಹಾಗೂ ಬೆಂಗಳೂರಿನಂತಹ ಮೆಟ್ರೋ ನಗರಗಳ ಬ್ಯಾಂಕಿಗೆ ಆಯ್ಕೆಯಾಗುವವರಿಗೆ 20,000 ರೂ. ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ

ಅಭ್ಯರ್ಥಿಗಳನ್ನು ಆನ್‌ಲೈನ್ ವಸ್ತುನಿಷ್ಠ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. 60 ನಿಮಿಷಗಳ ಈ ಪರೀಕ್ಷೆಯಲ್ಲಿ ಒಟ್ಟು 100 ಪ್ರಶ್ನೆಗಳಿರುತ್ತವೆ. ಮುಖ್ಯವಾಗಿ ಸಾಮಾನ್ಯ ಅಥವಾ ಹಣಕಾಸು ಅರಿವು, ಸಾಮಾನ್ಯ ಇಂಗ್ಲಿಷ್, ಪರಿಮಾಣಾತ್ಮಕ ಮತ್ತು ತಾರ್ಕಿಕ ಸಾಮರ್ಥ್ಯ, ಕಂಪ್ಯೂಟರ್ ಜ್ಞಾನ, ಮತ್ತು ಯೂನಿಯನ್ ಬ್ಯಾಂಕ್ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಪರೀಕ್ಷೆಯಲ್ಲಿ ಕೇಳಲಾಗುತ್ತದೆ. ಪರೀಕ್ಷೆಯಲ್ಲಿ ಯಾವುದೇ ನಕಾರಾತ್ಮಕ ಅಂಕಗಳು ಇರುವುದಿಲ್ಲ ಎಂದು ಬ್ಯಾಂಕ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು beep.bfsissc.com/candidate_register/mkt ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗಗಳ ಪುರುಷ ಅಭ್ಯರ್ಥಿಗಳಿಗೆ 944 ರೂ. ಇದೇ ವರ್ಗದ ಮಹಿಳೆಯರಿಗೆ 704 ರೂ. ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 236 ರೂ. ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳ ಗಮನಕ್ಕೆ

ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಳ್ಳುವ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಓದುವ, ಬರೆಯುವ ಮತ್ತು ಮಾತನಾಡುವ ಕೌಶಲ್ಯವನ್ನು ಹೊಂದಿರಬೇಕು. ಆಯ್ಕೆ ಪ್ರಕ್ರಿಯೆಯ ಭಾಗವಾಗಿ ದಾಖಲೆಗಳ ಪರಿಶೀಲನೆ ಮತ್ತು ಅಗತ್ಯವಿದ್ದಲ್ಲಿ ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್‌ಲೈನ್ ಪರೀಕ್ಷೆಯ ಪಠ್ಯಕ್ರಮಕ್ಕಾಗಿ ಅಧಿಕೃತ ಅಧಿಸೂಚನೆಯನ್ನು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಪರಿಶೀಲಿಸಲು ಸೂಚಿಸಲಾಗಿದೆ.

Read More
Next Story