
ಎಐ ಆಧಾರಿತ ಚಿತ್ರ
SSC CGL: ಬೃಹತ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ; ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ
ಈ ನೇಮಕಾತಿಯಡಿ ಆದಾಯ ತೆರಿಗೆ ನಿರೀಕ್ಷಕರು, ಸಬ್ ಇನ್ಸ್‌ಪೆಕ್ಟರ್ (CBI) ಸೇರಿದಂತೆ 34ಕ್ಕೂ ಹೆಚ್ಚು ವಿಭಿನ್ನ ಗ್ರೂಪ್ 'ಬಿ' ಮತ್ತು 'ಸಿ' ಹುದ್ದೆಗಳಿದ್ದು, 7ನೇ ವೇತನ ಆಯೋಗದ ಅನ್ವಯ ಲೆವೆಲ್-4 ರಿಂದ ಲೆವೆಲ್-8 ರವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ.
ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ದೇಶದ ಪದವೀಧರರಿಗೆ ಸಿಬ್ಬಂದಿ ಆಯ್ಕೆ ಆಯೋಗವು (ಎಸ್‌ಎಸ್‌ಸಿ) ಭರ್ಜರಿ ಸಿಹಿ ಸುದ್ದಿ ನೀಡಿದೆ. ವರ್ಷದ ಅತ್ಯಂತ ದೊಡ್ಡ ನೇಮಕಾತಿ ಪ್ರಕ್ರಿಯೆಯಾದ ಸಂಯೋಜಿತ ಪದವಿ ಮಟ್ಟದ ಪರೀಕ್ಷೆ 2026 ರ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದ್ದು, ಸುಮಾರು 12,256 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ
ಈ ನೇಮಕಾತಿಯಡಿ ಆದಾಯ ತೆರಿಗೆ ನಿರೀಕ್ಷಕರು, ಸಬ್ ಇನ್ಸ್‌ಪೆಕ್ಟರ್ (CBI) ಸೇರಿದಂತೆ 34ಕ್ಕೂ ಹೆಚ್ಚು ವಿಭಿನ್ನ ಗ್ರೂಪ್ 'ಬಿ' ಮತ್ತು 'ಸಿ' ಹುದ್ದೆಗಳಿದ್ದು, 7ನೇ ವೇತನ ಆಯೋಗದ ಅನ್ವಯ ಲೆವೆಲ್-4 ರಿಂದ ಲೆವೆಲ್-8 ರವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ. ಸಹಾಯಕ ಲೆಕ್ಕಪರಿಶೋಧಕ ಅಧಿಕಾರಿ, ಸಹಾಯಕ ಲೆಕ್ಕಪತ್ರ ಅಧಿಕಾರಿ ಹುದ್ದೆಗೆ ಆರಂಭಿಕ ವೇತನ 47,600 ರೂ. ಆದಾಯ ತೆರಿಗೆ ನಿರೀಕ್ಷಕರು, ಇನ್ಸ್‌ಪೆಕ್ಟರ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಸಹಾಯಕ ಜಾರಿ ಅಧಿಕಾರಿ ಹುದ್ದೆಗೆ 44,900 ರೂ. ನಿಗದಿಪಡಿಸಲಾಗಿದೆ.
ಜೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್ , ಸಬ್ ಇನ್ಸ್‌ಪೆಕ್ಟರ್ , ವಿಭಾಗೀಯ ಲೆಕ್ಕಪರಿಶೋಧಕ ಹುದ್ದೆಗೆ 35,400 ರೂ. ಆಡಿಟರ್ , ಅಕೌಂಟೆಂಟ್, ಜೂನಿಯರ್ ಅಕೌಂಟೆಂಟ್ ಹುದ್ದೆಗೆ 29,200 ರೂ. ಹಂತ-4ರ ತೆರಿಗೆ ಸಹಾಯಕ, ಅಂಚೆ ಸಹಾಯಕ ಹುದ್ದಗೆ 25,500 ರೂ. ಮಾಸಿಕ ಭತ್ಯೆಗಳೂ ಸೇರಿದಂತೆ ಆರಂಭಿಕ ಅಂದಾಜು ವೇತನವು ನಗರಗಳ ಆಧಾರದ ಮೇಲೆ 35 ಸಾವಿರ ರೂ. ಇರಲಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ನಿಯಮಾವಳಿಗಳನ್ವಯ ವೈದ್ಯಕೀಯ ಸೌಲಭ್ಯ, ಎನ್‌ಪಿಎಸ್ ಪಿಂಚಣಿ, ಸಕಾಲಿಕ ಬಡ್ತಿ ಸೌಲಭ್ಯಗಳು ಸಿಗಲಿವೆ.
ಶೈಕ್ಷಣಿಕ ಅರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಮುಗಿಸಿರಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು (ಆದರೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪದವಿ ಪ್ರಮಾಣಪತ್ರ ಹೊಂದಿರಬೇಕು). ಕೆಲವು ಹುದ್ದೆಗಳಿಗೆ ದ್ವಿತೀಯ ಪಿಯುಸಿಯ ಗಣಿತದಲ್ಲಿ ಕನಿಷ್ಠ ಶೇ. 60 ಅಂಕಗಳೊಂದಿಗೆ ಯಾವುದೇ ಪದವಿ ಅಥವಾ ಪದವಿಯಲ್ಲಿ 'ಅಂಕಿಅಂಶ' (Statistics) ಒಂದು ವಿಷಯವಾಗಿ ಅಭ್ಯಸ ಮಾಡಿರಬೇಕು.
ವಯಸ್ಸಿನ ಮಿತಿ
ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ರಿಂದ 32 ವರ್ಷಗಳ ಒಳಗಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಈ ನೇಮಕಾತಿಯು ಪ್ರಮುಖವಾಗಿ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು (CBT) ಒಳಗೊಂಡಿರುತ್ತದೆ. ಶ್ರೇಣಿ-I ಅರ್ಹತಾ ಪರೀಕ್ಷೆಯಾಗಿದ್ದು, ಒಟ್ಟು 200 ಅಂಕಗಳಿಗೆ 100 ಪ್ರಶ್ನೆಗಳಿರುತ್ತವೆ. ಇದರಲ್ಲಿ ರೀಸನಿಂಗ್, ಜನರಲ್ ಅವೇರ್ನೆಸ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಮತ್ತು ಇಂಗ್ಲಿಷ್ ವಿಷಯಗಳಿರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ 0.50 ನೆಗೆಟಿವ್ ಅಂಕಗಳಿರುತ್ತವೆ. ಶ್ರೇಣಿ-II ಮೆರಿಟ್ ಪಟ್ಟಿಗೆ ಈ ಹಂತದ ಅಂಕಗಳೇ ಮಾನದಂಡ. ಪತ್ರಿಕೆ-I ಎಲ್ಲಾ ಹುದ್ದೆಗಳಿಗೂ ಕಡ್ಡಾಯವಾಗಿದ್ದು ಗಣಿತ, ಇಂಗ್ಲಿಷ್, ರೀಸನಿಂಗ್, ಜಿಕೆ ಹಾಗೂ ಕಂಪ್ಯೂಟರ್ ಜ್ಞಾನದ ಪರೀಕ್ಷೆ ಇರುತ್ತದೆ. ಇದರೊಂದಿಗೆ ಡೇಟಾ ಎಂಟ್ರಿ ಸ್ಪೀಡ್ ಟೆಸ್ಟ್ (DEST) ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್‌ಸೈಟ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ “My SSC” ಮೊಬೈಲ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರು ಒನ್-ಟೈಮ್ ರಿಜಿಸ್ಟ್ರೇಷನ್ (OTR) ಪೂರ್ಣಗೊಳಿಸಬೇಕು. ಈ ಬಾರಿ ಅರ್ಜಿ ಸಲ್ಲಿಕೆ ವೇಳೆಯೇ ಲೈವ್ ಫೋಟೋ ಸೆರೆಹಿಡಿಯುವುದರಿಂದ, ಮೊದಲೇ ಇರುವ ಫೋಟೋಗಳನ್ನು ಅಪ್‌ಲೋಡ್ ಮಾಡಲು ಅವಕಾಶವಿರುವುದಿಲ್ಲ. ಭರ್ತಿ ಮಾಡಿದ ಫಾರಂನಲ್ಲಿ ತಿದ್ದುಪಡಿ ಮಾಡಲು ಜೂನ್ 29 ರಿಂದ ಜುಲೈ 1 ರವರೆಗೆ ಕಾಲಾವಕಾಶ ನೀಡಲಾಗುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ ವರ್ಗ, ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 100 ರೂ. ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಮಾಜಿ ಸೈನಿಕರು ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಜೂ. 22 ಕೊನೆಯ ದಿನಾಂಕವಾಗಿದ್ದು, ಜೂ. 23ರಂದು ಅರ್ಜಿ ತಿದ್ದುಪಡಿಗೆ ಅವಕಾಶ ನೀಡಲಾಗಿದ ಎಂದು ಎಸ್‌ಎಸ್‌ಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

