
ಸಾಂದರ್ಭಿಕ ಚಿತ್ರ
Job News | ಎಸ್‌ಎಸ್‌ಎಲ್‌ಸಿ ಪಾಸ್ ಆಗಿದ್ದೀರಾ? ಮೈಸೂರು ಕೋರ್ಟ್‌ನಲ್ಲಿದೆ ಸುವರ್ಣಾವಕಾಶ!
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಮೈಸೂರು ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನಾಂಕವಾಗಿದೆ.
ಹುದ್ದೆಗಳ ವಿವರ
ನ್ಯಾಯಾಲಯದಲ್ಲಿ ಸೇವಕರು (Peons) 75 ಹುದ್ದೆಗಳು, ಆದೇಶ ಜಾರಿಕಾರರು (Process Server) 11 ಹುದ್ದೆಗಳು, ಬೆರಳಚ್ಚು ನಕಲುಗಾರರು (Typist-Copyist) 3 ಹುದ್ದೆಗಳು ಹಾಗೂ ಶೀಘ್ರಲಿಪಿಗಾರರು ಗ್ರೇಡ್-III 4 ಹುದ್ದೆಗಳು ಸೇರಿ ಒಟ್ಟು 93 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ ಮತ್ತು ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ 40 ವರ್ಷ ನಿಗದಿಪಡಿಸಿದ್ದು, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ 5 ವರ್ಷ ವಯೋಮಿತಿ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ
ಕರ್ನಾಟಕ ಅಧೀನ ನ್ಯಾಯಾಲಯಗಳ (ನೇಮಕಾತಿ) ನಿಯಮಗಳ ಅನ್ವಯ ಎಲ್ಲಾ ಹುದ್ದೆಗಳಿಗೂ ನೇರ ನೇಮಕಾತಿ ನಡೆಯಲಿದೆ. 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ, 1 ಹುದ್ದೆಗೆ 10 ಅಭ್ಯರ್ಥಿಗಳಂತೆ (1:10) ಮೆರಿಟ್ ಆಧಾರದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಅಂತಿಮ ಆಯ್ಕೆಯು ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಅವಲಂಬಿಸಿ, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 200 ರೂ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 100 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳು ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI Collect) ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬೇಕು. ಡಿಡಿ, ಚಲನ್ ಅಥವಾ ಮನಿ ಆರ್ಡರ್ ಮೂಲಕ ಪಾವತಿಸುವ ಶುಲ್ಕವನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತರು ಮೈಸೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ಗಳಾದ https://mysuru.dcourts.gov.in/notice-category/recruitments/ ಅಥವಾ https://mysuru.dcourts.gov.in/Judges/online-recruitment/ ಮೂಲಕ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು. ಅಪೂರ್ಣ ಮಾಹಿತಿ ಹೊಂದಿರುವ ಅಥವಾ ತಪ್ಪು ಮಾಹಿತಿ ನೀಡಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾ ರಾಣಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

